ಛಾವಣಿ ಕುಸಿವ ಭೀತಿಯಲ್ಲಿ ಶಾಲೆ
ಭಯದಲ್ಲಿಯೇ ಮಕ್ಕಳು ಪಾಠ ಕೇಳುವ ಪರಿಸ್ಥಿತಿ • ಕಾಟಚಾರಕ್ಕಾಗಿ ಶಾಲಾ ಕಟ್ಟಡ ದುರಸ್ತಿ
Team Udayavani, Aug 2, 2019, 12:49 PM IST
ಸರ್ಕಾರಿ ಶಾಲಾ ಮಕ್ಕಳು ಶಾಲಾ ಛಾವಣೆ ದುರಸ್ತಿಪಡಿಸುವಂತೆ ಒತ್ತಾಯಿಸಿದರು.
ಮಾಗಡಿ: ಇದೇ ನೋಡಿ ಒಳಗೆ ಹುಳುಕು, ಮೇಲೆ ತಳಕು ಅನ್ನುವುದು. ಕಲ್ಯಾಣ ಒಡೆಯರ ತಾಂಡದ ಸರ್ಕಾರಿ ಶಾಲೆಯ ಛಾವಣಿ ಕುಸಿಯುವ ಸ್ಥಿತಿಯಲ್ಲಿದೆ. ಶಾಲಾ ಮಕ್ಕಳು, ಶಿಕ್ಷಕರು, ಅಡುಗೆಯವರು ಛಾವಣೆ ಯಾವಾಗ ಕುಸಿಯುತ್ತದೆಯೋ ಎಂದು ಜೀವ ಕೈಯಲ್ಲಿಟ್ಟುಕೊಂಡು ಭಯದಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆ. ಮಕ್ಕಳು ಸಹ ಭಯದಲ್ಲಿಯೇ ಪಾಠ ಕೇಳುವಂತಾಗಿದೆ.
ಮಾಗಡಿ ತಾಲೂಕಿನ ಕೆವಿ ತಾಂಡ್ಯದ ಸರ್ಕಾರಿ ಶಾಲೆಯಲ್ಲಿ ಬಡ ಮಕ್ಕಳು ಶಿಕ್ಷಣ ಪಡೆಯಲು ಬರುತ್ತಾರೆ. ಬಡ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಸರ್ಕಾರ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತದೆ ಎಂದು ಹೇಳುವ ಜನಪ್ರತಿನಿಧಿಗಳ ಕಣ್ಣಿಗೆ ಈ ಶಾಲೆಯ ಛಾವಣೆ ಪರಿಸ್ಥಿತಿ ಕಾಣಿಸುತ್ತಿಲ್ಲ ಎಂಬ ಆರೋಪ ನಿವಾಸಿಗಳಲ್ಲಿ ಕೇಳಿ ಬರುತ್ತಿದೆ.
ಛಾವಣೆ ದುರಸ್ತಿಗೂ ಅನುದಾನ: ಈ ಶಾಲೆಯ ಛಾವಣೆ ದುರಸ್ತಿಗೆ ಜಿಪಂ ಅನುದಾನ ಬಳಕೆಯಾಗಿದೆ. ಕೇವಲ ಸುಣ್ಣ- ಬಣ್ಣ ಬಳಿಯಲು ಅನುದಾನ ನೀಡಿಲ್ಲ. ಅನುದಾನ ಛಾವಣೆ ದುರಸ್ತಿಗೂ ನೀಡಿದೆ. ಗುತ್ತಿಗೆದಾರ ಮಾತ್ರ ಕಾಟಚಾರಕ್ಕೆ ಶಾಲಾ ಕಟ್ಟಡ ದುರಸ್ತಿಪಡಿಸಿ, ಸುಣ್ಣ- ಬಣ್ಣ ಬಳಿದು ಕೈಚಲ್ಲಿದೆ. ಬಹುತೇಕ ಇಲ್ಲಿ ಲಂಬಾಣಿ ಸಮುದಾಯದ ಬಡ ಕುಟುಂಬಗಳೇ ಹೆಚ್ಚು ವಾಸಿಸುತ್ತಿದ್ದಾರೆ. ಈ ಬಡಕುಟುಂಬಗಳು ಕೂಲಿ ಮಾಡಿದರೆ ಊಟ ಇಲ್ಲದಿದ್ದರೆ ಉಪವಾಸ. ಇಂಥ ಬಡಮಕ್ಕಳಿಗೆ ಗುಣಮಟ್ಟ ಶಿಕ್ಷಣ ಕೊಡಲು ಶಿಕ್ಷಕರು ಮಾತ್ರ ಉತ್ತಮ ಬೋಧನೆ ಮಾಡುತ್ತಿದ್ದಾರೆ. ಅಲ್ಲಿನ ಅಡುಗೆ ಸಿಬ್ಬಂದಿ ಸಹ ಗುಣಮಟ್ಟ ಪೌಷ್ಟಿಕ ಆಹಾರ ತಯಾರಿಸಿ ನೀಡಲಾಗುತ್ತಿದೆ.
ಕಟ್ಟಡವೇ ಶಿಥಿಲ: ಇವೆಲ್ಲವೂ ಸರಿ. ಆದರೆ, ಕಟ್ಟಡವೇ ಶಿಥಿಲಗೊಂಡಿದ್ದು, ಅದರಲ್ಲೂ ಮಳೆಗಾಲವಾಗಿರುವುದರಿಂದ ಛಾವಣೆ ದಿನೇದಿನೆ ಕಳಚಿ ಬೀಳುತ್ತಿದೆ. ಇದನ್ನು ದುರಸ್ತಿಪಡಿಸಬೇಕಾದ ಗುತ್ತಿಗೆದಾರ ಕಾಟಾಚಾರಕ್ಕೆ ದುರಸ್ತಿಪಡಿಸಿದ್ದಾರೆ. ಛಾವಣೆಯನ್ನು ಮಾತ್ರ ದುರಸ್ತಿಪಡಿಸಿಲ್ಲ. ದುರಸ್ತಿ ಕಾಮಗಾರಿ ಪೂರ್ಣಗೊಂಡಿದೆ ಎಂದು ಶಾಲೆಯ ಮುಂಭಾಗ ಸುಣ್ಣ- ಬಣ್ಣ ಬಳಿದು ಅಂದಗೊಳಿಸಲಾಗಿದೆ.
ಕುಡಿಯುವ ನೀರಿಗಾಗಿ ಪರದಾಟ: ಒಂದೆಡೆ ಛಾವಣಿ ಕುಸಿವ ಭೀತಿಯಲ್ಲಿ ಸರ್ಕಾರಿ ಶಾಲೆ ಇದ್ದರೆ, ಮತ್ತೂಂದೆಡೆ ಶಾಲಾ ಮಕ್ಕಳಿಗಾಗಿ ನೀರಿನ ಟ್ಯಾಂಕ್ ನಿರ್ಮಿಸಿದ್ದರೂ, ಕುಡಿಯುವ ನೀರಿಗಾಗಿ ಪರದಾಡುವುದು ತಪ್ಪಿಲ್ಲ. ಕೊಳವೆ ಬಾವಿ ಸಹ ಕೊರೆಸಲಾಗಿದೆ. ಆದರೂ ಇಲ್ಲಿವರೆವಿಗೂ ಮೋಟರ್ ಅಳವಡಿಸಿ, ನೀರು ಪೂರೈಕೆ ಮಾಡಿಲ್ಲ, ನೀರಿಗಾಗಿ ಪರದಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಜನಪ್ರತಿನಿಧಿಗಳೇ ಇತ್ತ ಗಮನಹರಿಸಿ: ಇದೇ ನೋಡಿ ಒಳಗೆ ಹುಳುಕು, ಮೇಲೆ ತಳಕು ಅನ್ನುವುದು. ಸಂಬಂಧಪಟ್ಟ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕು. ಶಿಥಿಲ ಛಾವಣೆ ಕೂಡಲೇ ದುರಸ್ತಿಪಡಿಸಿ, ಮಕ್ಕಳನ್ನು ರಕ್ಷಿಸಬೇಕಿದೆ. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಸ್ಥಳೀಯರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ ನಾಯಕ್ ಅವರೊಂದಿಗೆ ಶಾಲೆಯ ಸ್ಥಿತಿಗತಿ ಕುರಿತು ಖುದ್ದು ಪರಿಶೀಲಿಸುವಂತೆ ಮಕ್ಕಳು, ಪೋಷಕರು ಶಾಲೆ ಮುಂದೆ ಪ್ರತಿಭಟನೆ ನಡೆಸಿದರು. ನ್ಯಾಯ ದೊರಕಿಸುವಂತೆ ಅಧ್ಯಕ್ಷರಲ್ಲಿ ಒತ್ತಾಯಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.