ಸರ್ಕಟನ್ ನಾಲೆ ಒತ್ತುವರಿ; ಅಭಿವೃದ್ಧಿಗೆ ಗ್ರಹಣ
Team Udayavani, Aug 4, 2019, 3:00 AM IST
ಕೊಳ್ಳೇಗಾಲ: ಕಾವೇರಿ ಮತ್ತು ಕಬಿನಿ ನಾಲಾ ವಿಭಾಗದ ಇಲಾಖೆಗೆ ಸೇರಿದ ಪಟ್ಟಣದ ಹೃದಯ ಭಾಗದ ಸರ್ಕಟನ್ ನಾಲೆ ಅಭಿವೃದ್ಧಿ ಕಾಮಗಾರಿ ಆರಂಭವಾಗಿದೆ. ಆದರೆ, ನಾಲೆಯ ಅಕ್ಕಪಕ್ಕದಲ್ಲಿರುವ ಅಕ್ರಮ ಒತ್ತುವರಿ ತೆರವು ಮಾಡಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸ್ಥಳೀಯರು ಒತ್ತಾಯಿಸಿದ್ದಾರೆ.
ಗಬ್ಬು ನಾರುತ್ತಿದೆ: ಸರ್ಕಟನ್ ನಾಲೆ ಪಟ್ಟಣದ ಮಧ್ಯಭಾಗದ ಕ್ರೈಸ್ತ್ರರ ಬಡಾವಣೆಯಿಂದ ಕೊನೇ ದೇವಾಂಗ ಬಡಾವಣೆವರೆಗೂ ಹಾದು ಹೋಗಿದೆ. ನೂರಾರು ವರ್ಷಗಳಿಂದ ನಾಲೆ ಅಭಿವೃದ್ಧಿಪಡಿಸದೆ ಬಿಟ್ಟ ಹಿನ್ನೆಲೆಯಲ್ಲಿ ನಾಲೆ ಸಂಪೂರ್ಣ ಮಣ್ಣಿನಿಂದ ಆವೃತಗೊಂಡು, ಗಿಡಗಂಟೆಗಳು ಬೆಳೆದು ಕೊಳಚೆ ನೀರು ಶೇಖರಣೆಯಿಂದ ಗಬ್ಬು ನಾರುತ್ತಿದೆ. ಹೀಗಾಗಿ ಮುಖ್ಯ ರಸ್ತೆಗಳಲ್ಲಿ ಓಡಾಡುವ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ.
ಘನತ್ಯಾಜ್ಯ: ಪಟ್ಟಣದ ಹೃದಯ ಭಾಗದ ಸುಮಾರು ಒಂದು ಕಿ.ಮೀ.ಗೂ ಹೆಚ್ಚು ಉದ್ದ ಇರುವ ಕಬಿನಿ ನಾಲೆಗೆ ಸಾರ್ವಜನಿಕರು, ಅಂಗಡಿ ಮಾಲಿಕರು, ಹೋಟೆಲ್ ಮಾಲಿಕರು, ಸಾರ್ವಜನಿಕರು ಘನ ತ್ಯಾಜ್ಯವನ್ನು ನಾಲೆಗೆ ಎಸೆಯದಂತೆ ಪ್ರಕಟಣೆ ಹೊರಡಿಸಿದ್ದರೂ ಬಾರ್‌ನವರು, ಕೋಳಿ ಮತ್ತು ಮಾಂಸದ ಮಾರಾಟಗಾರರು, ಮೀನು ಮಾರಾಟಗಾರರು ಘನ ತ್ಯಾಜ್ಯವನ್ನು ನಾಲೆಗೆ ಎಸೆಯುತ್ತಿದ್ದಾರೆ. ಇದರಿಂದಾಗಿ ನಿತ್ಯ ಗಬ್ಬು ವಾಸನೆ ಬೀರುತ್ತಿದ್ದು ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ನಿವೇಶನ: ನಾಲೆಯ ಎರಡು ಬದಿಯಲ್ಲಿ 28 ಜನರು ಈಗಾಗಲೇ ಅಕ್ರಮ ಒತ್ತುವರಿ ಮಾಡಿಕೊಂಡಿದ್ದು ಅವರನ್ನು ಬೇರೆಡೆಗೆ ಸ್ಥಳಾಂತರ ಮಾಡಲು ಸುಮಾರು 20 ಜನರಿಗೆ ನಿವೇಶನದ ಪಟ್ಟಗಳನ್ನು ವಿತರಣೆ ಮಾಡಲಾಗಿದೆ. ಉಳಿದ 8 ಜನರಿಗೆ ಈ ನಿವೇಶನ ನೀಡದ ಪರಿಣಾಮ, ಪಟ್ಟ ನೀಡುವವರೆಗೂ ನಾವು ಸ್ಥಳ ಬಿಟ್ಟು ಕದಡುವುದಿಲ್ಲ ಎಂದು ಠಿಕಾಣಿ ಹೂಡಿದ್ದಾರೆ.
ಕ್ರಮಬದ್ಧವಾಗಿ ನಾಲೆ ನಿರ್ಮಿಸಿ: ಸರ್ಕಾರದ ಆದೇಶದಂತೆ ನಾಲೆಯ ಉದ್ದ ಅಗಲ ಮತ್ತು ಎರಡು ಬದಿಯಲ್ಲಿ ರಸ್ತೆ ನಿರ್ಮಾಣ ಮಾಡುವ ನಕ್ಷೆಯಂತೆ ಕಾಮಗಾರಿ ನಡೆಯಬೇಕು. ನಾಲೆ ಎರಡು ಬದಿಯಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವವರನ್ನು ಉಳಿಸುವ ಸಲುವಾಗಿ ನಕ್ಷೆಯಂತೆ ಮಾಡದೆ ಸಡಿಲೀಕರಣ ಮಾಡಿದ ಪಕ್ಷದಲ್ಲಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಬಡಾವಣೆ ನಿವಾಸಿಗಳ ಎಚ್ಚರಿಸಿದ್ದಾರೆ.
ನಗರಸಭೆ ವಿಶೇಷ ಸಭೆ: ಕಳೆದ ವರ್ಷ ನಗರಸಭೆಯ ವಿಶೇಷ ಸಭೆಯಲ್ಲಿ ನಾಲೆಯ ಎರಡು ಬದಿಯಲ್ಲಿ ವಾಸವಿರುವವರಿಗೆ ಅನ್ಯಾಯ ಮಾಡದೆ ಅವರಿಗೆ ಪರ್ಯಾಯ ನಿವೇಶನ ಕಲ್ಪಿಸಿಕೊಟ್ಟು, ಮನೆ ಕಟ್ಟಲು ಸಾಲ ಸೌಲಭ್ಯ ನೀಡುವ ನಿರ್ಣಯ ಕೈಗೊಳ್ಳಲಾಗಿದೆ. ಅದೇ ರೀತಿ ಈಗಾಗಲೇ 20 ಜನರಿಗೆ ನಿವೇಶನ ನೀಡಿದ್ದು, ಉಳಿದ 8 ಜನರಿಗೆ ನಿವೇಶನ ಮತ್ತು ಮನೆ ಕಟ್ಟಲು ಸಾಲ ಸೌಲಭ್ಯ ನೀಡಿ, ಉತ್ತಮ ಜೀವನ ಮಾಡಲು ಅವಕಾಶ ಕಲ್ಪಿಸಬೇಕೆಂದು ಸ್ಥಳದಲ್ಲಿ ವಾಸವಿರುವ ಇರ್ಷಾದ್‌ಬಾನು ಮನವಿ ಮಾಡಿದ್ದಾರೆ.
ತೆರವಿಗೆ ನಗರಸಭೆ ನಿರ್ಣಯ: ಈಗಾಗಲೇ ನಗರಸಭೆ ಅಧಿಕಾರಿಗಳು ನಾಲೆಯ ಎರಡೂ ಬದಿಯಲ್ಲಿ ಒತ್ತುವರಿ ತೆರವು ಮಾಡಿಕೊಡುವುದಾಗಿ ನಿರ್ಣಯ ಕೈಗೊಂಡಿದ್ದಾರೆ. ಅದರಂತೆ ಈಗಾಗಲೇ 600 ಮೀಟರ್ ತೆರವು ಮಾಡಿದ್ದು, ಅಲ್ಲಿ ನಾಲೆ ಕಾಮಗಾರಿ ಆರಂಭವಾಗಿದೆ. ಉಳಿದ ಕಡೆ ತೆರವು ಮಾಡಿದ ಕೂಡಲೇ ಕಾಮಗಾರಿ ಆರಂಭಿಸಿ ದುರ್ವಾಸನೆಯಿಂದ ನಾಗರಿಕರಿಗೆ ಮುಕ್ತಿ ಕಲ್ಪಿಸಲಾಗುವುದು ಎಂದು ಕಾವೇರಿ ಮತ್ತು ಕಬಿನಿ ನಾಲಾ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ರಘು ಪ್ರತಿಕ್ರಿಯಿಸಿದ್ದಾರೆ.
ನಾಲೆ ಕಾಮಗಾರಿ ಆರಂಭ: ಕಳೆದ ಬಾರಿಯ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಶಾಸಕರಾಗಿದ್ದ ಎಸ್.ಜಯಣ್ಣ ಅವರು ನಾಲೆಯನ್ನು ಕಾಂಕ್ರೀಟ್‌ನಿಂದ ಬ್ಲಾಕ್ಸ್ ಮಾದರಿ ನಾಲೆಯನ್ನು ನಿರ್ಮಾಣ ಮಾಡಲು ಸರ್ಕಾರದ ವತಿಯಿಂದ 20.30 ಅನುದಾನವನ್ನು ಮಂಜೂರು ಮಾಡಿಸಿ, ಕಾಮಗಾರಿಗೆ ಚಾಲನೆ ನೀಡಿದ್ದರು. ನಾಲೆ ಕಾಮಗಾರಿ ತುದಿ ಭಾಗದಿಂದ ಆರಂಭಿಸಲಾಗಿದೆ. ಪಟ್ಟಣದ ಭಾಗದಲ್ಲಿ ನಾಲೆ ಎರಡು ಬದಿಯಲ್ಲಿ 28 ಜನರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಹೀಗಾಗಿ ಕಾಮಗಾರಿಗೆ ಗ್ರಹಣ ಹಿಡಿದಂತೆ ಆಗಿದೆ.
ಈಗಾಗಲೇ ನಾಲೆಯ ಎರಡೂ ಬದಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ವಾಸಿಸುತ್ತಿರುವ ನಿವಾಸಿಗಳಿಗೆ ಪಟ್ಟಾಗಳನ್ನು ನೀಡಲಾಗಿದೆ. ಉಳಿದವರಿಗೂ ನಿವೇಶನ ನೀಡುವುದರ ಜೊತೆಗೆ ಮನೆ ನಿರ್ಮಾಣಕ್ಕೆ ಸಾಲ ಸೌಲಭ್ಯ ಕಲ್ಪಿಸಿಕೊಟ್ಟು ಒತ್ತುವರಿಯನ್ನು ಸಂಪೂರ್ಣವಾಗಿ ತೆರವು ಮಾಡಲಾಗುವುದು.
-ನಾಗಶೆಟ್ಟಿ, ನಗರಸಭೆ ಪೌರಾಯುಕ್ತ
* ಡಿ.ನಟರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.