ಅನರ್ಹರ ವಿರುದ್ಧ ಸೋತ ಬಿಜೆಪಿ ಅಭ್ಯರ್ಥಿಗಳ ಬಂಡಾಯ
Team Udayavani, Aug 4, 2019, 3:07 AM IST
ಬೆಂಗಳೂರು: ಮೈತ್ರಿ ಸರ್ಕಾರದ ವಿರುದ್ಧ ಬಂಡಾಯವೆದ್ದು ಸರ್ಕಾರ ಪತನಗೊಳಿಸುವಲ್ಲಿ ಯಶಸ್ವಿಯಾಗಿದ್ದರೂ, ಅನರ್ಹಗೊಂಡಿರುವ ಬಂಡಾಯ ಶಾಸಕರ ಕ್ಷೇತ್ರಗಳಲ್ಲಿ ಬಿಜೆಪಿಯಿಂದಲೇ ಬಂಡಾಯ ಎದುರಾಗುವಂತೆ ಮಾಡುವ ತಂತ್ರವನ್ನು ಕಾಂಗ್ರೆಸ್ ರಚಿಸಿದೆ.
ಅನರ್ಹಗೊಂಡಿರುವ ಶಾಸಕರು ಪ್ರತಿನಿಧಿಸುವ 17 ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಕಳೆದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಗಳು ಈಗ ಬಯಸದೇ ಬಂದಿರುವ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಕಸರತ್ತು ಆರಂಭಿಸಿದ್ದಾರೆ. ಅತೃಪ್ತ ಶಾಸಕರಿಗೆ ಮಂತ್ರಿ ಮಾಡಿ ಅವರ ಕ್ಷೇತ್ರಗಳಲ್ಲಿ ಟಿಕೆಟ್ ನೀಡುವುದಾಗಿ ಭರವಸೆ ನೀಡಿ ಯಡಿಯೂರಪ್ಪನವರು ಅವರ ರಾಜೀನಾಮೆ ಕೊಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅದೇ ಕಾರಣಕ್ಕೆ ಅತೃಪ್ತ ಶಾಸಕರು ಧೈರ್ಯದಿಂದಲೇ ರಾಜೀನಾಮೆ ನೀಡಿ ಮೈತ್ರಿ ಸರ್ಕಾರ ಪತನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈಗ ಶಾಸಕತ್ವ ಅನರ್ಹಗೊಂಡಿರುವುದರಿಂದ ಮುಂದಿನ ಕಾನೂನು ಹೋರಾಟದ ಕಡೆಗೆ ಹೆಚ್ಚಿನ ಗಮನ ಹರಿಸಿದ್ದರೂ, ಅನರ್ಹ ಶಾಸಕರು ರಾಜಕೀಯ ಭವಿಷ್ಯದ ಬಗ್ಗೆಯೇ ಸಾಕಷ್ಟು ತಲೆ ಕೆಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ ಅನರ್ಹರು ಸ್ಪರ್ಧಿಸಿ ಜಯಗಳಿಸಿರುವ ಕ್ಷೇತ್ರಗಳಲ್ಲಿ 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆದು ಸ್ಪರ್ಧೆ ಮಾಡಿದ್ದ ಬಿಜೆಪಿ ಅಭ್ಯರ್ಥಿಗಳು ಈ ಬಾರಿಯೂ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ. ಒಂದು ವೇಳೆ, ಬಿಜೆಪಿ ಟಿಕೆಟ್ ನೀಡದಿದ್ದರೆ, ಪಕ್ಷದ ಅಭ್ಯರ್ಥಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಬೆಳವಣಿಗೆಯನ್ನು ನೀರೆರೆದು ಪೋಷಿಸಲು ಕಾಂಗ್ರೆಸ್ ಕಾರ್ಯತಂತ್ರ ರೂಪಿಸಿದೆ ಎನ್ನಲಾಗಿದೆ.
ಪ್ರಮುಖವಾಗಿ ಬೆಂಗಳೂರಿನಲ್ಲಿ ಕೆ.ಆರ್.ಪುರಂ ಕ್ಷೇತ್ರದಲ್ಲಿ ಮಾಜಿ ಶಾಸಕ ನಂದೀಶ್ ರೆಡ್ಡಿ ಈಗಾಗಲೇ ಬಂಡಾಯ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದಾರೆಂದು ತಿಳಿದು ಬಂದಿದ್ದು, ಸ್ಪರ್ಧೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬೆಂಬಲವನ್ನೂ ಕೋರಿದ್ದಾರೆ ಎಂದು ತಿಳಿದು ಬಂದಿದೆ. ಕೆ.ಆರ್.ಪುರಂ ಕ್ಷೇತ್ರದಲ್ಲಿ ಕುರುಬ ಸಮುದಾಯದ ಜನಸಂಖ್ಯೆ ಪ್ರಮುಖ ಪಾತ್ರ ವಹಿಸುವುದರಿಂದ ಈ ಚುನಾವಣೆಯಲ್ಲಿ ಬೈರತಿ ಬಸವರಾಜ್ ಅವರನ್ನು ಸೋಲಿಸಲು ಪರೋಕ್ಷ ಸಹಕಾರ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ.
ಹೊಸಕೋಟೆಯಲ್ಲಿಯೂ ಸಂಸದ ಬಿ.ಎನ್.ಬಚ್ಚೇಗೌಡ ಅವರ ಪುತ್ರ ಶರತ್ ಬಚ್ಚೇಗೌಡ ಪಕ್ಷದ ಟಿಕೆಟ್ ಸಿಗದಿದ್ದರೆ, ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬಗ್ಗೆ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಕ್ಷೇತ್ರದ ಕಾರ್ಯಕರ್ತರೂ ಕೂಡ ಎಂ.ಟಿ.ಬಿ ನಾಗರಾಜ್ ಅವರನ್ನು ಯಾವುದೇ ಕಾರಣಕ್ಕೂ ಬಿಜೆಪಿಗೆ ಸೇರಿಸಿಕೊಳ್ಳಬಾರದು ಎಂಬ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ. ಮಹಾಲಕ್ಷ್ಮೀ ಲೇಔಟ್, ಯಶವಂತಪುರ ಹಾಗೂ ಆರ್.ಆರ್.ನಗರ ಕ್ಷೇತ್ರಗಳ ಅನರ್ಹ ಶಾಸಕರನ್ನು ಯಾವುದೇ ಕಾರಣಕ್ಕೂ ಬಿಜೆಪಿಗೆ ಸೇರಿಸಿಕೊಳ್ಳದಂತೆ ಸ್ಥಳೀಯ ಕಾರ್ಯಕರ್ತರು ಪಕ್ಷದ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ.
ಒಂದು ವೇಳೆ, ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರೆ, ಚುನಾವಣೆಯಲ್ಲಿ ಅವರ ವಿರುದ್ಧ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡಬೇಕಾಗುತ್ತದೆ ಎಂಬ ಪರೋಕ್ಷ ಎಚ್ಚರಿಕೆಯನ್ನೂ ಕೆಲವು ಸ್ಥಳೀಯ ಮುಖಂಡರು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಹೀರೆಕೆರೂರು ಕ್ಷೇತ್ರದ ಮಾಜಿ ಶಾಸಕ ಯು.ಬಿ.ಬಣಕಾರ್ ಕೂಡ ಉಪ ಚುನಾವಣೆಯಲ್ಲಿ ತಮಗೆ ಟಿಕೆಟ್ ನೀಡದಿದ್ದರೆ ಬಂಡಾಯ ಅಭ್ಯರ್ಥಿಯಾಗುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನೇರವಾಗಿಯೇ ಹೇಳಿದ್ದಾರೆ ಎಂದು ಹೇಳಲಾಗುತ್ತಿದ್ದು, ಅಲ್ಲಿಯೂ ಬಿ.ಸಿ.ಪಾಟೀಲ್‌ಗೆ ಬಂಡಾಯ ಎದುರಾಗುವ ಸಾಧ್ಯತೆ ಇದೆ.
ಶಂಕರ್‌ಗೆ ಟಿಕೆಟ್ ಡೌಟ್: ಮೈತ್ರಿ ಸರ್ಕಾರದಲ್ಲಿ ಸಚಿವರಾಗಿಯೂ ಏಕಾಏಕಿ ರಾಜೀನಾಮೆ ಸಲ್ಲಿಸಿ ಬಿಜೆಪಿ ಸೇರುವುದಾಗಿ ಘೋಷಿಸಿದ್ದ ರಾಣೆಬೆನ್ನೂರು ಅನರ್ಹ ಶಾಸಕ ಆರ್.ಶಂಕರ್‌ಗೆ ರಾಣೆಬೆನ್ನೂರು ಕ್ಷೇತ್ರದಿಂದ ಟಿಕೆಟ್ ಸಿಗುವುದು ಅನುಮಾನ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ. ಆ ಕ್ಷೇತ್ರದಲ್ಲಿ ಸ್ವತ: ಮುಖ್ಯಮಂತ್ರಿ ಪುತ್ರ ಬಿ.ವೈ. ವಿಜಯೇಂದ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಗೋಕಾಕ್, ಅಥಣಿ, ಕಾಗವಾಡ, ಮಸ್ಕಿ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಬಿಜೆಪಿ ಅನರ್ಹ ಶಾಸಕರಿಗೆ ಟಿಕೆಟ್ ನೀಡಿದರೆ, ಪಕ್ಷದ ಕಾರ್ಯಕರ್ತರು ಅವರ ವಿರುದ್ಧ ತಿರುಗಿ ಬೀಳುವ ಲಕ್ಷಣಗಳು ಕಾಣಿಸುತ್ತಿವೆ. ಬಂಡಾಯ ಶಾಸಕರ ವಿರುದ್ಧ ಬಂಡಾಯವೇಳಲು ಬಿಜೆಪಿಯ ಒಂದು ಬಣದ ನಾಯಕರ ಪರೋಕ್ಷ ಬೆಂಬಲವೂ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
* ಶಂಕರ ಪಾಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Illegal immigrants; ಬಂಧಿತ ಪಾಕ್ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?
Extraodinary; 3.5 ವರ್ಷಕ್ಕೇ ಎಂಜಿನಿಯರಿಂಗ್ ಪದವಿ ಕೊಡಲಿದೆ ವಿಟಿಯು!
Channapatna by-election; ನಿಖಿಲ್ ಗೆ ನಿರೀಕ್ಷೆಗೂ ಮೀರಿ ಗೆಲುವು: ಭವಿಷ್ಯ
CM ಆಗುವ ಅರ್ಹತೆ ಇದ್ದರೂ ಬೇಡದ ಖಾತೆ: ಗುಡುಗಿದ ಮಾದಾರ ಶ್ರೀ
Congress Government 11 ಲಕ್ಷ ಕುಟುಂಬಗಳ ಅನ್ನವನ್ನು ಕಿತ್ತುಕೊಳ್ಳುತ್ತಿದೆ: ಎಚ್‌ಡಿಕೆ
MUST WATCH
ಹೊಸ ಸೇರ್ಪಡೆ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.