ಔರಾದ ರೈತರ ಶೋಷಣೆಗೆ ಮುಕ್ತಿ: ಭರವಸೆ
•ತರಕಾರಿ ವ್ಯಾಪಾರಿಗಳ ಸಭೆ ಆಯೋಜನೆ •ಶೋಷಣೆ ತಪ್ಪಿಸುವುದಾಗಿ ಶಾಸಕರ ಅಭಯ
Team Udayavani, Aug 4, 2019, 1:21 PM IST
ಔರಾದ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿ.
ಔರಾದ: ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿನ ಸಮಸ್ಯೆ ಬಗೆಹರಿಸಿ, ಅಲ್ಲಿ ನಡೆಯುತ್ತಿರುವ ರೈತರ ಶೋಷಣೆಗೆ ಮುಕ್ತಿ ನೀಡುವುದಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು, ರೈತ ಸಂಘದ ಸದಸ್ಯರು ಹಾಗೂ ಜನ ಪ್ರತಿನಿಧಿಗಳು ಭರವಸೆ ನೀಡಿದ್ದಾರೆ.
ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿ ದಶಕಗಳಿಂದ ರೈತರಿಗೆ ಆಗುತ್ತಿರುವ ಅನ್ಯಾಯ ಮತ್ತು ನಗದು ಹಣ ನೀಡುವುದು ಸೇರಿದಂತೆ ಇನ್ನಿತರ ಸಮಸ್ಯೆ ನಿವಾರಣೆ ಮಾಡಬೇಕೆಂದು ಒತ್ತಾಯಿಸಿ ಅಧಿಕಾರಿಗೆ ಲಿಖೀತ ಪತ್ರ ನೀಡುವುದಾಗಿ ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀಮಂತ ಬಿರಾದರ ತಿಳಿಸಿದ್ದಾರೆ.
ಕೃಷಿ ಉತ್ಪನ್ನ ಮಾರುಕಟ್ಟೆಯ ಅಧಿಕಾರಿಗಳು ಮಾರುಕಟ್ಟೆಯಲ್ಲಿ ತಾಲೂಕಿನ ರೈತರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ವಾರದಲ್ಲಿ ತಾಲೂಕಿಗೆ ಬಂದು, ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಮ್ಮ ರೈತರಿಗೆ ಸಮಸ್ಯೆಯಾದಗದಂತೆ ಹಾಗೂ ನಕಲಿ ಬಿಲ್ಗೆ ಮುಕ್ತಿ ನೀಡಿ ರೈತರ ಬೆಳೆಗೆ ಉತ್ತಮ ಬೆಲೆ ಸಿಗುವಂತೆ ಮಾಡುವುದಾಗಿ ಶಾಸಕ ಪ್ರಭು ಚವ್ಹಾಣ ಭರವಸೆ ನೀಡಿದ್ದಾರೆ.
ತಾಲೂಕು ಸೇರಿದಂತೆ ರಾಜ್ಯದ ರೈತರು ಭೀಕರ ಬರದಿಂದ ಕಂಗೆಟ್ಟು ಸಾಲದ ಸುಳಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ರೈತರು ಅನ್ನದಾತರಾಗಿದ್ದು, ಅವರಿಗೆ ದ್ರೋಹ ಮಾಡುವುದು ಸರಿಯಲ್ಲ. ಅವರ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡಲು ಮುಂದಾಗುತ್ತೇನೆ ಎಂದು ತಿಳಿಸಿದ್ದಾರೆ.
ವ್ಯಾಪಾರಿಗಳ ಸಭೆ ನಿಗದಿ: ಉದಯವಾಣಿಯಲ್ಲಿ ಪ್ರಕಟವಾದ ‘ತರಕಾರಿ ಬೆಳೆದ ರೈತನಿಗಿಲ್ಲ ಮಾರುಕಟ್ಟೆ ಮೌಲ್ಯ’ ಎನ್ನುವ ವಿಶೇಷ ವರದಿಯಿಂದ ಜಾಗೃತರಾದ ಕೃಷಿ ಉತ್ಪನ್ನ ಮಾರುಕಟ್ಟೆಯ ಕಾರ್ಯದರ್ಶಿ ಅಮಜತಖಾನ್ ಸೋಮವಾರ ಪಟ್ಟಣದ ತರಕಾರಿ ವ್ಯಾಪಾರಿಗಳ ಸಭೆ ಹಮ್ಮಿಕೊಂಡಿದ್ದಾರೆ. ಪ್ರತಿಯೊಂದು ಅಂಗಡಿಯ ಮಾಲೀಕರು ಹಾಗೂ ದಲ್ಲಾಳಿಗಳು ಕಡ್ಡಾಯವಾಗಿ ಸಭೆಯಲ್ಲಿ ಭಾಗವಹಿಸುವಂತೆ ಸೂಚನೆ ನೀಡಲಾಗಿದೆ ಎಂದ ಅವರು ತಿಳಿಸಿದ್ದಾರೆ. ತಾಲೂಕಿನ ತರಕಾರಿ ಬೆಳೆದ ರೈತರಿಗೆ ಶೋಷಣೆ ಮಾಡುವ ಹಾಗೂ ವಾರಗಟ್ಟಲೆ ಮಳಿಗೆಗೆ ಬರುವಂತೆ ಮಾಡುತ್ತಿರುವ ವ್ಯಾಪಾರಿಗಳಿಗೆ ನೋಟಿಸ್ ನೀಡಿ, ಅವರ ಪರವಾನಗಿ ರದ್ದುಗೊಳಿಸಲಾಗುತ್ತದೆ ಎಂದು ಸೂಚನೆ ನೀಡಿದ್ದಾರೆ.
ಕಾಟಾಚಾರದ ಸಭೆ ಬೇಡ: ಪಟ್ಟಣದ ತರಕಾರಿ ಮಾರುಕಟ್ಟೆಗೆ ನಿತ್ಯ ತರಕಾರಿ ತರುವ ತಾಲೂಕಿನ ಯನಗುಂದಾ, ತೇಗಂಪೂರ, ಮರಪಳ್ಳಿ, ಸುಂಧಾಳ, ಖಾಂಶೆಪೂರ ಗ್ರಾಮದ ರೈತರು, ಅಧಿಕಾರಿಗಳು ಸೋಮವಾರ ಸಭೆ ಹಮ್ಮಿಕೊಂಡಿರುವುದು ಸಂತೋಷದ ವಿಷಯ. ಆದರೆ ಸಭೆ ಹಾಗೂ ಅಧಿಕಾರಿಗಳು ನೀಡುವ ಭರವಸೆಗಳು ಕೇವಲ ಒಂದು ದಿನಕ್ಕೆ ಸಿಮೀತವಾಗದೆ ನಿರಂತರವಾಗಿ ಅವು ಕಾರ್ಯರೂಪಕ್ಕೆ ಬರಬೇಕು. ನಾವು ಬೆಳೆಸಿ ಮಾರುಕಟ್ಟೆಗೆ ತಂದ ತರಕಾರಿಗೆ ಅಂದೇ ನಮ್ಮ ಹಣ ನೀಡುವಂತೆ ಮಾಡಿ ನಮ್ಮ ಆರ್ಥಿಕ ಸಂಕಟ ದೂರ ಮಾಡಬೇಕು. ಇಲ್ಲವಾದಲ್ಲಿ ನಮ್ಮ ರೈತರು, ವ್ಯಾಪಾರಿಗಳು ಹೇಳಿದಂತೆ ಕೇಳಿಕೊಂಡು ವಾರಪೂರ್ತಿ ಅವರ ಅಂಗಡಿಗೆ ಅಲೆಯಬೇಕಾಗುತ್ತದೆ ಎನ್ನುವುದು ರೈತರ ಮಾತು.
ನಾವು ಬೆಳೆದ ತರಕಾರಿಗೆ ನಮ್ಮ ತಾಲೂಕಿನಲ್ಲೇ ಉತ್ತಮ ಬೆಲೆ ಸಿಗುತ್ತಿಲ್ಲ. ನೆರೆ ರಾಜ್ಯದಲ್ಲಿ ಉತ್ತಮ ಬೆಲೆ ಸಿಗುತ್ತಿದೆ. ಆದರೆ ಹೋಗಿ ಬರುವುದರಲ್ಲಿ ಸಾಕಾಗುತ್ತಿದೆ. ಇನ್ನೂ ಸಣ್ಣ ರೈತರು ತಮ್ಮಲ್ಲಿರುವ ತರಕಾರಿಗಳನ್ನು ತೆಗೆದುಕೊಂಡು ನೆರೆ ರಾಜ್ಯಕ್ಕೆ ಹೋದರೂ ಹಾನಿಯಾಗುತ್ತಿದೆ. ವರ್ಷಪೂರ್ತಿ ಹೊಲದಲ್ಲಿ ಕಷ್ಟಪಟ್ಟು ಬೆಳೆಸಿದ ತರಕಾರಿಯನ್ನು ಮಾರುಕಟ್ಟೆಗೆ ತಂದು ದಲ್ಲಾಳಿಗಳು ಹೇಳಿದ ಬೆಲೆಗೆ ನೀಡಿ ವಾರಪೂರ್ತಿ ಅಲೆದು, ನಕಲಿ ಬಿಲ್ ಪಡೆದುಕೊಂಡು ಹೋಗುವ ಸ್ಥಿತಿ ಗಡಿ ನಮ್ಮದಾಗಿದೆ ಎಂಬುದು ರೈತರ ಅಳಲು.
ಲಿಂಗಾಯತ ಸಮಾಜದಿಂದ ಹೋರಾಟ: ಪಟ್ಟಣದ ತರಕಾರಿ ವ್ಯಾಪಾರಿಗಳು ಹಲವು ದಶಕಗಳಿಂದ ರೈತರ ಶೋಷಣೆ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಬೀಳುವ ತನಕ ಹಾಗೂ ತಪ್ಪಿತಸ್ಥರನ್ನು ಅಧಿಕಾರಿಗಳು ದಂಡಿಸುವ ತನಕ ರೈತರ ಪರವಾಗಿ ಲಿಂಗಾಯತ ಸಮಾಜದಿಂದ ಹೋರಾಟ ಮಾಡಲಾಗುತ್ತದೆ. ಅಧಿಕಾರಿಗಳು ಕೂಡಲೆ ಜಾಗೃತರಾಗಬೇಕು. ಇಲ್ಲವಾದಲ್ಲಿ ತಮ್ಮ ಕುರ್ಚಿ ಬಿಟ್ಟು ಹೋಗಲಿ ಎಂದು ಲಿಂಗಾಯತ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.
•ರವೀಂದ್ರ ಮುಕ್ತೇದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.