ನಿಲ್ಲದ ನೀರಿನೊಂದಿಗಿನ ಬದುಕು!
Team Udayavani, Aug 5, 2019, 8:58 AM IST
ಜಮಖಂಡಿ: ಮುತ್ತೂರಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಹೊರಟಿರುವ ಜಿಲ್ಲಾ ಮತ್ತು ತಾಲೂಕು ಆಡಳಿತದ ಅಧಿಕಾರಿಗಳು.
ಬಾಗಲಕೋಟೆ/ಜಮಖಂಡಿ: ಬೇಸಿಗೆಯಲ್ಲಿ ನೀರಿಗಾಗಿ ಪರಿತಪಿಸಿದರೆ, ಮಳೆಗಾಲದಲ್ಲಿ ನೀರಿನೊಂದಿಗೇ ಬದುಕು ಸಾಗಿಸುವ ಪರಿಸ್ಥಿತಿಯಿಂದ ಜಿಲ್ಲೆಯ ಕೆಲ ಹಳ್ಳಿಗಳಿಗೆ ಮುಕ್ತಿ ಸಿಕ್ಕಿಲ್ಲ.
ಜಮಖಂಡಿ ತಾಲೂಕಿನ ಮುತ್ತೂರ, ಶೂರ್ಪಾಲಿ, ಕಂಕಣವಾಡಿ, ಆಲಗೂರ (ನದಿ ದಡದ ಮನೆಗಳು), ಜಂಬಗಿ ಬಿಕೆ, ತುಬಚಿ ಹಾಗೂ ಶಿರಗುಪ್ಪಿ ಗ್ರಾಮಗಳಿಗೆ ಕೃಷ್ಣಾ ನದಿಯ ನೀರು ಸುತ್ತುವರೆದಿದೆ. ಕಳೆದ 2009ರ ಬಳಿಕ ಇದೇ ಮೊದಲ ಬಾರಿಗೆ ನದಿಯ ನೀರು, ಗ್ರಾಮಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿದೆ.
ಈ ಎಲ್ಲ ಗ್ರಾಮಗಳು, ಆಲಮಟ್ಟಿ ಜಲಾಶಯದ ಹಿನ್ನೀರು ಪ್ರದೇಶ ಹಾಗೂ ನದಿ ದಡದಲ್ಲಿದ್ದು, ಪ್ರತಿವರ್ಷವೂ ಮಳೆಗಾಲದಲ್ಲಿ ಸಮಸ್ಯೆ ಅನುಭವಿಸುವುದು ತಪ್ಪಿಲ್ಲ. ಕೃಷ್ಣಾ ನದಿಗೆ 2.50 ಲಕ್ಷದಿಂದ 3 ಲಕ್ಷ ಕ್ಯೂಸೆಕ್ ವರೆಗೆ ನೀರು ಹರಿದು ಬಂದರೆ, ಈ ಗ್ರಾಮಗಳ ಜನರು ನಿತ್ಯವೂ ಆತಂಕದಲ್ಲಿ ಜೀವಿಸಬೇಕಾಗುತ್ತದೆ. ಕೃಷ್ಣಾ ನದಿಗೆ ಹರಿದು ಬರುವ ನೀರಿನ ಪ್ರಮಾಣ ಹೆಚ್ಚಾದಂತೆ, ಜಮಖಂಡಿ ತಾಲೂಕಿನಲ್ಲಿ ನಡುಗಡ್ಡೆಯಾಗುವ ಹಳ್ಳಿಗಳ ಸಂಖ್ಯೆ ಹೆಚ್ಚುತ್ತದೆ. ಹೀಗಾಗಿ ಶಾಶ್ವತ ಪರಿಹಾರ ಕೈಗೊಳ್ಳಲು ನಡುಗಡ್ಡೆ ಗ್ರಾಮಗಳ ಶಾಶ್ವತ ಸ್ಥಳಾಂತರ ಮಾಡಬೇಕು ಎಂಬ ಹಲವು ವರ್ಷಗಳ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ.
ನದಿ ತೀರದ ಗ್ರಾಮಗಳಲ್ಲಿ ಕಟ್ಟೆಚ್ಚರ: ಜಿಲ್ಲೆಯ ಘಟಪ್ರಭಾ ಮತ್ತು ಕೃಷ್ಣಾ ನದಿ ಪಾತ್ರದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ರವಿವಾರ ಸಂಜೆ ಇಡೀ ಜಿಲ್ಲಾಡಳಿತ ಜಮಖಂಡಿ ತಾಲೂಕಿನ ಮುತ್ತೂರ ಗ್ರಾಮಕ್ಕೆ ಭೇಟಿ ನೀಡಿ, ಪ್ರವಾಹ ಭೀತಿ ಹಾಗೂ ಈಗಾಗಲೇ ನಡುಗಡೆಯಾಗಿರುವ ಗ್ರಾಮಗಳ ಪರಿಸ್ಥಿತಿ ಅವಲೋಕನ ಮಾಡಿತು.
ಮುತ್ತೂರ ಗ್ರಾಮ, ನದಿ ಪಕ್ಕದಲ್ಲಿದ್ದು, ಇಲ್ಲಿ 31 ಕುಟುಂಬಗಳು ವಾಸವಾಗಿವೆ. ಈಗಾಗಲೇ ಈ ಗ್ರಾಮ ಮುಳುಗಡೆಯಾಗಿದ್ದು, ಇಲ್ಲಿನ ಜನರ ಭೂಮಿ ಮುಳುಗಡೆಯಾಗಿಲ್ಲ. ಹೀಗಾಗಿ ಭೂಮಿಯಲ್ಲಿ ವ್ಯವಸಾಯ ಮಾಡಲು, ರೈತರು ಅದೇ ಮುಳುಗಡೆ ಗ್ರಾಮದಲ್ಲಿ ವಾಸಿಸುವುದು ಅನಿವಾರ್ಯವಾಗಿದೆ.
ಮುತ್ತೂರಿನ 31 ಕುಟುಂಬಗಳ ಪೈಕಿ, ರವಿವಾರದವರೆಗೆ 25 ಕುಟುಂಬಗಳನ್ನು ಎತ್ತರದ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಅವರೊಂದಿಗೆ ಜಾನುವಾರುಗಳನ್ನೂ ಸಾಗಿಸಲಾಗಿದೆ. ಇನ್ನೂ 6 ಕುಟುಂಬಗಳು, 129 ಜಾನುವಾರುಗಳು ಇಲ್ಲಿದ್ದು, ಅವುಗಳನ್ನೂ ನಾಳೆ ಸಂಜೆಯ ಹೊತ್ತಿಗೆ ಕಡ್ಡಾಯವಾಗಿ ಸ್ಥಳಾಂತರವಾಗಲು ಜಿಲ್ಲಾಧಿಕಾರಿ ರಾಮಚಂದ್ರನ್ ಸೂಚಿಸಿದ್ದಾರೆ.
ಮನೆ ಹೊಸ್ತಿಲಕ್ಕೆ ಬಂತು ನೀರು: ಜಮಖಂಡಿ ತಾಲೂಕಿನ ಮುತ್ತೂರ, ಶೂರ್ಪಾಲಿ ಹಾಗೂ ಕಂಕಣವಾಡಿ ಗ್ರಾಮಗಳಲ್ಲಿ ಬಹುತೇಕ ಶೆಡ್‌ಗಳಿದ್ದರೆ, ಇನ್ನೂ ಕೆಲವರು ಮನೆಯಲ್ಲಿ ವಾಸವಾಗಿದ್ದಾರೆ. ಇಲ್ಲಿನ ಮನೆಯ ಹೊಸ್ತಿಲ ವರೆಗೆ ಕೃಷ್ಣಾ ನದಿ ನೀರು ಬಂದಿದ್ದು, ನೀರಿನೊಂದಿಗೇ ಬದುಕು ಸಾಗಿಸುತ್ತಿದ್ದಾರೆ. ಇದು ಪ್ರತಿವರ್ಷ ಅವರಿಗೆ ಸಾಮಾನ್ಯವಾಗಿದ್ದು, ಅತಿಹೆಚ್ಚು ನೀರು ಬಂದರೆ, ಅಧಿಕಾರಿಗಳ ಒತ್ತಾಯಕ್ಕೆ ವಾರದ ಮಟ್ಟಿಗೆ ಬೇರೆಡೆ ಸ್ಥಳಾಂತರವಾಗುವುದು ಇಲ್ಲಿನ ಜನರ ವಾಡಿಕೆಯಾಗಿದೆ.
ನಮ್ಮ ಇಡೀ ಗ್ರಾಮ, ನಮ್ಮ ಭೂಮಿ ಮುಳುಗಡೆ ಎಂದು ಘೋಷಿಸಿ, ಪರಿಹಾರ ಕೊಡಿ. ಆಗ ನಾವು ಪೂರ್ಣ ಸ್ಥಳಾಂತರಗೊಳ್ಳುತ್ತೇವೆ. ನಮ್ಮ ಭೂಮಿ ಇಲ್ಲೇ ಬಿಟ್ಟು, ಪುನರ್‌ವಸತಿ ಕೇಂದ್ರಗಳಲ್ಲಿ ಹೋಗಿ ಹೇಗೆ ಬದುಕುವುದು. ಪುನರ್‌ವಸತಿ ಕೇಂದ್ರಗಳಲ್ಲಿ ಯಾವುದೇ ಕನಿಷ್ಠ ಮೂಲಭೂತ ಸೌಲಭ್ಯಗಳಿಲ್ಲ ಎಂಬುದು ಮುತ್ತೂರ ಗ್ರಾಮಸ್ಥರ ಆರೋಪ.
ನೀರು ಬಂದಾಗ ಎಚ್ಚೆತ್ತುಕೊಳ್ಳುವ ಜಿಲ್ಲಾಡಳಿತ: ಪ್ರತಿವರ್ಷ ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ 1.80 ಲಕ್ಷ ಕ್ಯೂಸೆಕ್‌ನಿಂದ 2 ಲಕ್ಷ ವರೆಗೆ ನೀರು ಹರಿದು ಬಂದರೆ, ಜಮಖಂಡಿ ತಾಲೂಕಿನ ಯಾವ ಹಳ್ಳಿಗೂ ಸಮಸ್ಯೆ ಆಗಲ್ಲ. 2 ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಹರಿದು ಬಂದರೆ, ಮೊದಲು ಸಮಸ್ಯೆ ಎದುರಿಸುವುದೇ ಮುತ್ತೂರ, ಶೂರ್ಪಾಲಿ, ತುಬಚಿ, ಜಂಬಗಿ ಬಿಕೆ ಮತ್ತು ಕಂಕಣವಾಡಿ ಗ್ರಾಮಗಳು. ಈ ಗ್ರಾಮಗಳ ಸುತ್ತ ನೀರು ಬಂದಾಗ ಮಾತ್ರ, ಪ್ರತಿ ಬಾರಿ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳುತ್ತದೆ.
ಕಳೆದ 2009ರ ಬಳಿಕ ಬಾರಿಯಂತೆ ಭಾರಿ ಪ್ರಮಾಣದ ನೀರು ಬಂದಿರಲಿಲ್ಲ. ಹೀಗಾಗಿ ಜಿಲ್ಲಾಡಳಿತವೂ 10 ವರ್ಷದಿಂದ ಪ್ರವಾಹ ಕುರಿತು ಗಂಭೀರತೆ ಪಡೆದಿರಲಿಲ್ಲ. ಈಗ ಜಿಲ್ಲೆಯಲ್ಲಿ ಮಳೆ ಇಲ್ಲದಿದ್ದರೂ, ಮಹಾರಾಷ್ಟ್ರ, ಬೆಳಗಾವಿಯಲ್ಲಿ ಸುರಿಯುತ್ತಿರುವ ಮಳೆಯಿಂದ ನದಿಗಳು ಉಕ್ಕಿ ಹರಿಯುತ್ತಿವೆ. 2.50 ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಬಿಡುವುದಾದರೆ, ನಮಗೆ 24 ಗಂಟೆ ಮುಂಚಿತವಾಗಿ ತಿಳಿಸಿ ಎಂದು ಹಿಪ್ಪರಗಿ ಮತ್ತು ಆಲಮಟ್ಟಿ ಜಲಾಶಯದ ಅಧಿಕಾರಿಗಳು, ಮಹಾರಾಷ್ಟ್ರದ ಕೊಯ್ನಾ ಜಲಾಶಯದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಹೆದ್ದಾರಿ ಬಂದ್‌ಗೆ ಒಂದಡಿ ಬಾಕಿ: ವಿಜಯಪುರ-ಧಾರವಾಡ ರಾಜ್ಯ ಹೆದ್ದಾರಿ ಚಿಕ್ಕಪಡಸಲಗಿ ಮೂಲಕ ಹಾದು ಹೋಗುತ್ತಿದ್ದು, ಚಿಕ್ಕಪಡಸಲಗಿ ಬಳಿ ಇರುವ ರೈತರೇ ನಿರ್ಮಿಸಿದ ಶ್ರಮಬಿಂದು ಸಾಗರ ನೀರಿನಲ್ಲಿ ಮುಳುಗಿದೆ. ಹೆದ್ದಾರಿ ಮೇಲೆ ನೀರು ಕೃಷ್ಣಾ ನದಿ ನೀರು ಹರಿಯಲು ಈಗ ಕೇವಲ ಒಂದಡಿ ಮಾತ್ರ ಬಾಕಿ ಇದೆ. ಸಂಜೆ ಕೊಯ್ನಾ ಜಲಾಶಯದಿಂದ ಮತ್ತೆ 10 ಸಾವಿರ ಕ್ಯೂಸೆಕ್ ಹೆಚ್ಚುವರಿ ನೀರು ಬಿಡಲಾಗಿದೆ. ವಿಜಯಪುರ-ಧಾರವಾಡ ರಾಜ್ಯ ಹೆದ್ದಾರಿ, ರಾತ್ರಿ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಹೆಚ್ಚಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.