ವಾಟರ್ ಫೋಟೋಗ್ರಾಫರ್
ಪಾತಾಳದಲ್ಲಿ ಫೋಟೋ ಕ್ಲಿಕ್ಕಿಸೋದು ಹೇಗೆ ಗೊತ್ತಾ?
Team Udayavani, Aug 6, 2019, 5:00 AM IST
ಭೂರಮೆಯ ಚಿತ್ರಕಾವ್ಯ ಬರೆಯುವ ಫೋಟೋಗ್ರಾಫರ್‌ಗಳು ನಮ್ಮಲ್ಲಿ ಇದ್ದಾರೆ. ಆದರೆ, ನೀರೊಳಗಿನ ಜಲಕಾವ್ಯ ಬರೆಯುವವರು ಅತೀ ಕಡಿಮೆ. ಅಂಥವರಲ್ಲಿ ಈ ಯುವ “ಮುಳುಗು’ ಫೋಟೋಗ್ರಾಫರ್ ಜಯಂತ್‌ಶರ್ಮ ಒಬ್ಬರು. ಸುಮಾರು 20 ವರ್ಷದಿಂದ ಕ್ಯಾಮರಾ ಹಿಡಿದು ನೀರೊಳಗೆ ಧ್ಯಾನ ಮಾಡುತ್ತಿರುವ ಇವರು , ಅಂಡರ್‌ವಾಟರ್ ಫೋಟೋಗ್ರಫಿ ಮಾಡುವುದು ಹೇಗೆ ಎನ್ನುವುದರ ಬಗ್ಗೆ ಇಲ್ಲಿ ಹೇಳಿ ಕೊಂಡಿದ್ದಾರೆ.
“ಅಂಡಮಾನ್‌ನಲ್ಲಿ ಹ್ಯಾಮಲಾಕ್ ಐಲ್ಯಾಂಡ್ ಅಂತ ಇದೆ. ಇಲ್ಲಿಂದ ಕೆಲ ದೂರದಲ್ಲಿ ಬ್ಯಾರನ್ ಐಲ್ಯಾಂಡ್ ಅನ್ನೋದು ಇನ್ನೊಂದು ದ್ವೀಪ. ಒಂದು ಸಲ ಇಲ್ಲಿಗೆ ಹೋಗಿ ನೀರಲ್ಲಿ ಧುಮುಕಿದರೆ ಒಳಗೆ ಕಪ್ಪು ಬೂದಿ ಹರಡಿತ್ತು. ಅದರ ಮೇಲೆಯೇ ಮೀನು, ಹಾವು, ಏಡಿಗಳೆಲ್ಲವೂ ಓಡಾಡುತ್ತಿದ್ದವು. ಹೆಗಲ ಮೇಲೆ ಉಸಿರು ತುಂಬುವ ಸಿಲಿಂಡರ್, ಕೈಯಲ್ಲಿ ಕ್ಯಾಮರ, ಎರಡು ಫ್ಲ್ಯಾಶ್ ಲೈಟುಗಳನ್ನು ನೋಡ ನೋಡುತ್ತಿದ್ದಂತೆ ಒಂದು ಥಿಲಾ (ಗೋಪುರ) ಮೇಲೆ ರಕ್ಕಸ ಹಲ್ಲುಗಳ “ಈಲ್’ ಎದುರಾಯಿತು. ನೋಡೋಕೆ ಇದು ದೊಡ್ಡ ಮುಖದ ಹಾವಿನ ಥರ; ಆದರೆ ಹಾವಲ್ಲ. ಯಾರಿಗೂ ತೊಂದರೆ ಮಾಡೋಲ್ಲ. ಹುಡುಕಿ ಬಂದು ಕಚ್ಚುವುದಿಲ್ಲ. ಮೆಲ್ಲಗೆ ಅದರ ಬಳಿ ಹೋಗಿ ಪಟ ಪಟ ಅಂಥ ಫೋಟೋ ತೆಗೆದೆ. ಹಾಗೇ, ಇನ್ನೊಂದು ಬದಿಗೆ ಬಂದಾಗ ಅದರ ಹಲ್ಲುಗಳ ದರ್ಶನವಾಯಿತು. ಆಗ ಮತ್ತೂಂದಷ್ಟು ಕ್ಲಿಕ್‌ಗಳು. ಹೀಗೆ ಅರ್ಧಗಂಟೆ ಫೋಟೋ ತೆಗೆದು ಮೇಲೆ ಬಂದರೆ, ಆಕಾಶದಲ್ಲಿ ಕಡುಗಪ್ಪು ಮೋಡ, ಸುಯ್ಯಂತ ಬೀಸುವ ಗಾಳಿಯಲ್ಲಿ ಬೂದಿ, ಇದ್ದಕ್ಕಿದ್ದಂತೆ, ದೂರದ ಆಕಾಶದಲ್ಲಿ ಬೆಂಕಿಯುಂಡೆಗಳು… ಆಮೇಲೆ ತಿಳಿಯಿತು: ಪಕ್ಕದ ಬೆಟ್ಟ ಬೆಂಕಿ ಉಗುಳುತಿದೆ (ಜ್ವಾಲಾಮುಖೀ) ಅಂತ. ಈಗ ನೆನಪಿಸಿಕೊಂಡರೂ ಅಬ್ಟಾ, ಮೈ ಜುಮ್ ಅನ್ನುತ್ತದೆ’ ಬೆಂಗಳೂರಿನ ಯುವ ಅಂಡರ್‌ವಾಟರ್ ಫೋಟೋಗ್ರಾಫರ್ ಜಯಂತ್ ಶರ್ಮ ಹೀಗೆ ಕಥೆ ಹೇಳುತ್ತಿದ್ದರೆ ನಮ್ಮ ಮೈ ಜುಂ ಅನಿಸಿಬಿಡುತ್ತದೆ.
ಅವರು ಹೇಳಿದ ಇನ್ನೊಂದು ಕಥೆ ಮಗದಷ್ಟು ಆಸಕ್ತಿ ದಾಯಕ-“ಇದೇ ಅಂಡಮಾನ್‌ನ ಹ್ಯಾಮ್‌ಲಾಕ್‌ನಲ್ಲಿ ಒಂದು ನಡು ಮಧ್ಯಾಹ್ನ ನೀರಿಗಿಳಿದು, ಹಾಗೇ ಮೆಲ್ಲಗೆ ಉಸಿರು ಎಳೆದು ಸುಮಾರು 30 ಮೀಟರ್ ಆಳಕ್ಕೆ ಇಳಿದೆ. ಅಲ್ಲೊಂದು ಕಾರಲ್‌ರೀಪ್( ನೀರೊಳಗಿನ ಹಳ್ಳಿ ) ಇತ್ತು. ಅಲ್ಲಿ ಪುಟ್ಟ ಗುಡ್ಡ, ಅದರ ಸುತ್ತ ಸಿಕ್ಕಾಪಟ್ಟೆ ಪುಟ್ಟ ಮೀನುಗಳು. ಅಲ್ಲಿಂದ 300 ಅಡಿ ದೂರದಲ್ಲಿ ಇದೇ ಥರದ ಇನ್ನೊಂದು ಹಳ್ಳಿ. ಈ ಎರಡರ ಮಧ್ಯೆ ತಿಮಿಂಗಿಲ, ಆಮೆ, ಸ್ಟಿಂಗ್‌ರೇ ಮೀನುಗಳು ಓಡಾಡುತ್ತಾ ಇದ್ದವು. ಕಾರಲ್‌ರೀಪ್‌ನ ಗುಡ್ಡದ ಮೇಲೆ ಬಿಳೀಗೀಟುಗಳ ಆಮೆ ಇತ್ತು. ಹೋಗಿ ಅದರ ಮುಂದೆ ನಿಂತರೂ ಕದಲಲಿಲ್ಲ. ನನ್ನ ಕ್ಯಾಮರಾ ಗ್ಲಾಸನ್ನು ಡ್ರೆಸ್ಸಿಂಗ್ ಟೇಬಲ್ ಅಂದೊRàತೋ ಏನೋ, ಹತ್ತಿರ ಬಂದಾಗ ತನ್ನ ಮುಖ ಕಂಡಿದ್ದೇ ಗ್ಲಾಸಿಗೆ ಮುತ್ತಿ ಸಂಭ್ರಮಿಸಿತು. ಇದನ್ನು ಕಂಡ ಇನ್ನಷ್ಟು ಆಮೆಗಳು ಬಂದು ಸುತ್ತುವರಿದವು. ನಾನು ಸುಮ್ಮನೆ ಬಿಡ್ತೀನಾ? ಪಟ ಪಟ ಅಂತ ಕ್ಲಿಕ್ಕಿಸಿದೆ. ಸುಮಾರು ಅರ್ಧಗಂಟೆ ಆ ಆಮೆ ಜೊತೆಗೆ ಇತ್ತು.
***
ಜಯಂತರನ್ನು ಕೆದಕಿದರೆ ಅವರಿಂದ ಇಂಥ ಅನೇಕ ಕಥೆಗಳು ಹರಿಯುತ್ತವೆ. ಸುಮಾರು 20 ವರ್ಷಗಳಿಂದ ದುರ್ಯೋಧನನಂತೆ ನೀರೊಳಗೆ ಫೋಟೋ ಧ್ಯಾನ ಮಾಡುತ್ತಿರುವ ಅಪರೂಪದ ವ್ಯಕ್ತಿ ಈತ. ಈಜಿಪ್ಟ್, ಬಾಲ್ಸಿ, ಫಿಜಿ, ಅಂಡಮಾನ್, ಲಕ್ಷದ್ವೀಪ, ಮಾಲ್ಡೀವ್ಸ್, ಯೂರೋಪ್, ಅಮೆರಿಕಾ, ಪಾಂಡಿಚೆರಿ… ಹೀಗೆ ಆಸ್ಟ್ರೇಲಿಯ ಹೊರತಾಗಿ, ಪ್ರಪಂಚದ ಅಷ್ಟೂ ದೇಶಗಳ ನೀರಲ್ಲಿ ಮುಳುಗಿ, ಸಾವಿರಾರು ಫೋಟೋ ತೆಗೆದಿದ್ದಾರೆ. ಜಯಂತರ ಮೂಲ ಮೈಸೂರು. ಆರಂಭದಲ್ಲಿ ಎಲ್ಲರಂತೆ, ಬಂಡೀಪುರ, ನಾಗರಹೊಳೆಯ ಪ್ರಾಣಿಗಳಿಗೆ ಕ್ಯಾಮರ ಇಡುತ್ತಿದ್ದರು. ನಾವು ಬರೀ ಭೂಮಿಯ ಮೇಲಿನ ಪ್ರಾಣಿಗಳ ಫೋಟೋಗಳನ್ನು ತೆಗೆಯೊಕ್ಕಿಂತ ನೀರ ಒಳಗಿನ ಪ್ರಪಂಚವನ್ನು ತೋರಿಸಬಾರದೇಕೆ ಅಂತ ಯೋಚನೆ ಶುರುವಾಯಿತು. ಆಗ ಪ್ರಾರಂಭವಾದದ್ದೇ ಈ ಡೈವಿಂಗ್ ಫೋಟೋಗ್ರಫಿ. ಫೋಟೋ ಕೊಳ್ಳೋರಿಗಿಂತ ತೆಗೆಯೋರ ಸಂಖ್ಯೆ ಜಾಸ್ತಿ. ಇವರ ಮಧ್ಯೆ ಡಿಫರೆಂಟಾಗಿ ಏನಾದರೂ ಮಾಡಬೇಕು ಅಂತ ಶುರುಮಾಡಿದೆ ಅಂತಾರೆ ಜಯಂತ್. ಅವರು ತಮ್ಮ ಅಷ್ಟೂ ವರ್ಷಗಳ ಅನುಭವವನ್ನು ಹೀಗೆ ಹಂಚುತ್ತಾ ಹೋದರು..
ಅಂತರ ವಿರಲಿ…
“ಕಾಡು, ಮೇಡು ಅಲೆದು ಫೋಟೋಗ್ರಫಿ ಮಾಡಬೇಕಾದರೆ, ಸ್ಥಳ, ಲೈಟಿಂಗ್, ಸಮಯ ಎಲ್ಲವನ್ನೂ ನಿಗಧಿ ಮಾಡಬೇಕು. ನೀರೊಳಗೆ ಹಾಗಿಲ್ಲ. ದಿನದಲ್ಲಿ ಯಾವಾಗ ಬೇಕಾದರೂ ಫೋಟೋಗ್ರಫಿ ಮಾಡಬಹುದು. ಬಹುತೇಕ ಎರಡು ಫ್ಲ್ಯಾಶ್ ಬಳಸಿಯೇ ಫೋಟೋಗಳನ್ನು ತೆಗೆಯುವುದು. 30 ಮೀಟರ್ ಆಳಕ್ಕೆ ಹೋದ ಮೇಲೆ ಮೇಲ್ಭಾಗದಲ್ಲಿ ಇದ್ದಷ್ಟು ಲೈಟಿಂಗ್ ಇಲ್ಲದೇ ಇದ್ದರೂ, ಒಂದಷ್ಟು ಬೆಳಕಂತೂ ಇದ್ದೇ ಇರುತ್ತದೆ. ಹೀಗಾಗಿ, ಸಾಮಾನ್ಯವಾಗಿ ಬೆಳಗ್ಗೆ 7, 11, ಮಧ್ಯಾಹ್ನ 2 ಗಂಟೆ, ಸಂಜೆ 5 ಗಂಟೆಗೆ ಫೋಟೋಗ್ರಫಿಗೆ ತೊಡಗುತ್ತಾರೆ. ಕೆಲವರು ಸೂರ್ಯಾಸ್ಥದಲ್ಲೂ, ನಡುರಾತ್ರಿಗಳಲ್ಲೂ ನೀರಲ್ಲಿ ಧುಮುಕುವುದು ಉಂಟು. ಇಲ್ಲಿ ಒಂದು ವಿಚಾರ ಗಮನದಲ್ಲಿಟ್ಟುಕೊಳ್ಳಬೇಕು. ಒಂದು ಡೈವ್ ಇನ್ನೊಂದು ಡೈವ್ ನಡುವಿನ ಅಂತರ ಕನಿಷ್ಠ ನಾಲ್ಕು ಗಂಟೆ ಆದರೂ ಇರಬೇಕು. ಇದಕ್ಕೆ ಕಾರಣ ಇಷ್ಟೇ. ನೀರಲ್ಲಿ ಇಳಿದಾಗ ದೇಹದಲ್ಲಿ ನೈಟ್ರೋಜನ್ ಹೊಕ್ಕಿರುತ್ತದೆ. ಅದು ಬೇಗ ದೇಹದಿಂದ ಹೊರಬರಬೇಕು. ನೀರಿಂದ ಹೊರ ಬಂದ ಮೇಲೆ ನೈಟ್ರೋಜನ್ ಒಂದಷ್ಟು ಗಂಟೆಗಳ ಕಾಲ ದೇಹದಿಂದ ಹೋರ ಹೋಗುತ್ತಿರುತ್ತದೆ. ಇಲ್ಲವಾದರೆ, ಮೈ ತುಂಬ ಬೊಬ್ಬೆಗಳಾಗುವ ಅವಕಾಶ ಇರುತ್ತದೆ. ‘
ಫೋಟೋ ಸಾಮಗ್ರಿಗಳು
“ಕ್ಯಾಮರವನ್ನು ಕ್ಯಾಮರ ಹೌಸಿಂಗ್( ಕವಚ)ಒಳಗೆ ತೂರಿಸಿ ಇಟ್ಟಿರುತ್ತೇವೆ. ಬೆನ್ನಿಗೆ ಸಿಲಿಂಡರ್, ಮುಖಕ್ಕೆ ಮಾಸ್ಕ್, ಮಾಸ್ಕ್ ಮೂಗನ್ನು ಮುಚ್ಚಿಬಿಡುವುದರಿಂದ ನೀರೊಳಗೆ ಇಳಿದಾಗ ಬಾಯಿಂದಲೇ ಉಸಿರಾಡಬೇಕು. ಇದಕ್ಕೆ ಪ್ರಾಕ್ಟೀಸ್ ಬೇಕೇಬೇಕು. ಬಿಸಿಡಿ (ಬೋಯನ್ಸ್ ಕಂಟ್ರೋಲ್ ಡಿವೈಸ್) ಮಿಷನ್ ಇರುತ್ತದೆ. ಗಾಳಿಯನ್ನು ನಿಯಂತ್ರಣ ಮಾಡುತ್ತಿರುತ್ತದೆ. ಗೊತ್ತಿರಬೇಕಾದ ಸತ್ಯವೊಂದಿದೆ. ನಾವು ನೀರ ಆಳಕ್ಕೆ ಇಳಿಯುತ್ತಾ ಹೋದಂತೆ, ನಮ್ಮ ಲಂಗ್ಸ್‌ನಲ್ಲಿ ಆಕ್ಸಿಜನ್‌ನ ಶೇಖರಣಾ ಸಾಮರ್ಥ್ಯ ಹೆಚ್ಚುತ್ತಾ ಹೋಗುತ್ತದೆ. ನಿಮಗೆ ಇನ್ನೂ ಸರಿಯಾಗಿ ಹೇಳಬೇಕೆಂದರೆ, ನೀರಲ್ಲಿ ಫೋಟೋಗ್ರಫಿ ಮಾಡೋಕೂ ಮೊದಲು ಡೈವಿಂಗ್ ಗೊತ್ತಿರಬೇಕು. ಒಳ್ಳೆ “ಡೈವರ್’ ಒಳ್ಳೇ ಫೋಟೋಗ್ರಫರ್ ಆಗಬಹುದು.
ಟೆಕ್ನಿಕ್ ಇದೆ
ಶ್ವಾಸಕೋಶದಲ್ಲಿ ಬರೀ ಗಾಳಿ ತುಂಬಿಕೊಂಡರೆ ಸಾಲದು. ಅದನ್ನು ಬಳಸುವ ರೀತಿ ಗೊತ್ತಿರಬೇಕು. ನೀರ ತಳದಲ್ಲಿ ಒಂದು ಭಾರಿ ಉಸಿರು ಎಳೆದುಕೊಂಡರೆ, ದೇಹ ಎರಡು ಅಡಿ ಮೇಲೆ ಬರುತ್ತದೆ. ಅದೇ ರೀತಿ, ಉಸಿರು ಬಿಟ್ಟರೆ ಕೆಳಗೆ ಬರುತ್ತದೆ. ಇದೊಂಥರಾ ಸ್ಕಿಲ್. ಒಳ್ಳೇ ಫೋಟೋ ಸಿಗು¤ ಅಂತ ಅದರ ಜೊತೆಗೆ ಧ್ಯಾನಸ್ಥರಾದರೆ ಬಹಳ ಕಷ್ಟ. ಆಗ ಏನು ಮಾಡೋದು? ಚಿಂತೆ ಇಲ್ಲ, ಅದಕ್ಕಾಗಿಯೇ ಕಂಪ್ಯೂಟರ್ ಡಿವೈಸ್ ವಾಚ್ ಇದೆ. ಅದನ್ನು ಕೈಯಲ್ಲಿ ಕಟ್ಟಿಕೊಂಡಿದ್ದರೆ ನಮ್ಮ ದೇಹದ ನೈಟ್ರೋಜನ್, ಆಕ್ಸಿಜನ್‌ನ ಪ್ರಮಾಣ ತಿಳಿಸುತ್ತದೆೆ. ಇನ್ನು ಎಷ್ಟು ನಿಮಿಷದಲ್ಲಿ ನೀರಿನಿಂದ ಮೇಲೆ ಹೋಗಬೇಕು ಅನ್ನೋದೆಲ್ಲ ಎಚ್ಚರಿಸುತ್ತಾ ಇರುತ್ತದೆ. ಫೋಟೋಗ್ರಫಿಯಲ್ಲಿ ಮಗ್ನರಾಗಿದ್ದರೆ ಜೋರಾಗಿ ಅಲಾರಾಂ ಹೊಡೆದುಕೊಳ್ಳುವ ಮೂಲಕ ಅಪಾಯದ ಸಂಕೇತವನ್ನು ತಿಳಿಸುತ್ತದೆ.
ಒಂದು ಪಕ್ಷ ನಾವು 30 ಅಡಿಗಳ ಆಳದಲ್ಲಿ ಫೋಟೋಗ್ರಫಿ ಮಾಡುತ್ತಾ, ಇದ್ದಕ್ಕಿದ್ದಂತೆ 10 ಅಡಿ ಮೇಲ್ಪಾಗಕ್ಕೆ ಬಂದಾಗ ಶ್ವಾಸಕೋಶ ತಲ್ಲಣಗೊಳ್ಳುತ್ತದೆ. 30 ಅಡಿಯಲ್ಲಿ ಇದ್ದಾಗ ಶ್ವಾಸಕೋಶದಲ್ಲಿ ಆಕ್ಸಿಜನ್ ಅಂಶ ಹೆಚ್ಚಿದ್ದು, 10 ಅಡಿಗೆ ಮೇಲ್ಭಾಗಕ್ಕೆ ಬಂದಾಗ ಅದನ್ನು ಹಿಡಿದಿಡುವ ಸಾಮರ್ಥ್ಯ ಶ್ವಾಸಕೋಶಕ್ಕೆ ಇರುವುದಿಲ್ಲ. ಉಳಿದದ್ದನ್ನು ಸಡನ್ನಾಗಿ ಹೊರ ಹಾಕಲು ಆಗದೇ ಶಾಸಕೋಶ ಸಿಡಿಯುವ ಅವಕಾಶ ಉಂಟು. ಹಾಗಾಗಿ, ನಿಧಾನಕ್ಕೆ ಶ್ವಾಸನಿಯಂತ್ರಣ ಮಾಡಿಕೊಂಡು ಮೇಲೆ ಬರಬೇಕಾಗುತ್ತದೆ.
ಡೈವ್ ಮ್ಯಾಪ್ ಇರುತ್ತದೆ
ಬೆಂಗಳೂರಿನಿಂದ ಮಂಗಳೂರಿಗೆ ಹೋಗಿ, ನೀರು ಕಂಡಿತು ಅಂದಾಕ್ಷಣ ಡೈವ್ ಹೊಡೆಯೋಕ್ಕೆ ಆಗೋಲ್ಲ. ಪ್ರತಿ ದೇಶದಲ್ಲೂ ಡೈವಿಂಗ್‌ಗೆ ಅಂತಲೇ ಕೆಲ ಸ್ಥಳಗಳು ಇರುತ್ತವೆ. ಅಲ್ಲಿ ಡೈವಿಂಗ್ ಕಂಪನಿಗಳು ಇರುತ್ತವೆ. ಅವು ಡೈವ್ ಪರಿಣತರ ತಂಡ ಕಟ್ಟಿಕೊಂಡು, ನೀರಿನ ಆಳದಲ್ಲಿ ಏನೇನು ಇದೆ, ಏನು ಇಲ್ಲ ಎಲ್ಲವನ್ನೂ ಲೆಕ್ಕ ಹಾಕಿ, ಬೇರೆಡೆಯಿಂದ ಬಂದು ನೀರಿನಾಳದಲ್ಲಿ ಫೋಟೋಗ್ರಫಿ ಮಾಡುವವರಿಗೆ ನೆರವಾಗುತ್ತಾರೆ. ನೀರಿಗೆ ಧುಮುಕುವ ಮೊದಲು ಮ್ಯಾಪ್ ಮಾಡುತ್ತಾರೆ. ನಾವು ನಿಂತ ಜಾಗದಿಂದ ಡೈವ್ ಮಾಡಿದರೆ ಎಲ್ಲಿಗೆ ತಲುಪುತ್ತೇವೆ, ಅಲ್ಲಿಂದ ಯಾವ ಕಡೆ ಹೋದರೆ ಏನು ಸಿಗುತ್ತದೆ, ಯಾವ್ಯಾವ ಪ್ರಾಣಿಗಳು ಇರುತ್ತವೆ ಅಂತೆಲ್ಲ ನಕ್ಷೆಯಲ್ಲಿ ತಿಳಿಸಿ, ಕೊನೆಗೆ ಇಷ್ಟು ನಿಮಿಷದ ನಂತರ ಈ ಕಡೆಯಿಂದ ಹೀಗೆ ಬಂದರೆ ನೀರ ಮೇಲೆ ನಮ್ಮ ದೋಣಿ ಇರುತ್ತದೆ. ಅಲ್ಲಿಂದ ಕರೆದು ಕೊಂಡು ಬರುತ್ತೇವೆ ಅನ್ನೋದನ್ನೂ ನೀಲ ನಕ್ಷೆಯಲ್ಲಿ ತೋರಿಸುತ್ತಾರೆ. ಹೀಗಾಗಿ, ಪಾತಾಳಕ್ಕೆ ಹೋದರೂ ತಪ್ಪಿಸಿಕೊಳ್ಳುವ ಪ್ರಮೇಯ ಇಲ್ಲಿ ಎದುರಾಗುವುದಿಲ್ಲ’… ಹೀಗೆ, ಜಯಂತರು ಪಾತಾಳ ಫೋಟೋಗ್ರಫಿ ರಸಹಸ್ಯವನ್ನು ನಮ್ಮ ಮುಂದೆ ತೆರೆದಿಟ್ಟರು.
ಉಸಿರೇ, ಉಸಿರೇ
“ಸಾಮಾನ್ಯವಾಗಿ ನಾವು ನೀರ ಹೊರಗೆ ಒಂದು ಸಲ ಉಸಿರು ತೆಗೆದು ಕೊಂಡರೆ 6 ಲೀಟರ್ ಗಾಳಿ ಶ್ವಾಸಕೋಶದಲ್ಲಿ ತುಂಬಿ ಕೊಳ್ಳುತ್ತದೆ. ಅದೇ ನೀವು ನೀರಲ್ಲಿ 10 ಮೀಟರ್ ಒಳಗೆ ಹೋದರೆ ವಾಟರ್ ಪ್ರಷರ್ ಇರೋದರಿಂದ ಒಂದು ಸಲ ಉಸಿರು ಎಳೆದರೆ 12 ಲೀಟರ್ ಗಾಳಿ ಶ್ವಾಸಕೋಶ ತುಂಬುತ್ತೆ. ಅದೇ 20 ಮೀಟರ್‌ಗೆ ಹೋದರೆ 18 ಲೀಟರ್, 30 ಮೀಟರ್ ಕೆಳಗೆ ಹೋದರೆ 40 ಲೀಟರ್ ಗಾಳಿ ಒಳಗೆ ಇಟ್ಟುಕೊಳ್ಳುವಷ್ಟು ದೊಡ್ಡದಾಗ್ತದೆ. ಇದನ್ನು ಹೇಗೆ ಬಳಕೆ ಮಾಡಬೇಕು ಅನ್ನೋದು ಆ ವ್ಯಕ್ತಿಯ ಗಾತ್ರ, ಸಾಮರ್ಥ್ಯದ ಮೇಲೆ ನಿಗದಿಯಾಗುತ್ತದೆ. ನನ್ನ ಪ್ರಕಾರ ಹೆಚ್ಚು ಕಮ್ಮಿ 12 ಲೀಟರ್ ಗಾಳಿಯಲ್ಲಿ ಒಂದು ಅರ್ಧಗಂಟೆ ನೀರೊಳಗೆ ಇರಬಹುದು’.
ಕಟ್ಟೆ ಗುರುರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.