ಬದುಕಿ ಬಂತು ಜೋಡಿ ಹಕ್ಕಿ
•60 ಗಂಟೆ ನರಕಯಾತನೆ ಎನ್‌ಡಿಆರ್‌ಎಫ್ ಯಶಸ್ವಿ ಕಾರ್ಯಾಚರಣೆ
Team Udayavani, Aug 9, 2019, 11:52 AM IST
ಬೆಳಗಾವಿ: ಈ ಜೋಡಿ ಹಕ್ಕಿ 60 ಗಂಟೆಗಳಿಂದ ಮರದಲ್ಲಿ ನೆರವಿನ ಹಸ್ತಕ್ಕಾಗಿ ಕಾಯ್ದು ಕುಳಿತಿತ್ತು. ಆರಡಿ ಕೆಳಗೇ ರುದ್ರ ಭಯಂಕರ ಜಲರಾಶಿ. ತಲೆ ಮೇಲೆ ನಿರಂತರ ವರ್ಷಧಾರೆ. ಬದುಕಿ ದಡ ಸೇರುತ್ತೇವೆಂಬ ಆತ್ಮಬಲವೇ ಇಂದು ಅವರನ್ನು ಕಾಪಾಡಿದೆ.
ಡ್ರೋನ್, ಕ್ರೇನ್, ಎನ್‌ಡಿಆರ್‌ಎಫ್, ಸೈನಿಕರು, ಸ್ಥಳೀಯರ ಸಹಾಯ ಹಸ್ತ ಯಾವ ಪ್ರಯತ್ನವೂ ಫಲ ನೀಡದೇ 60 ತಾಸು ಅನ್ನ ನೀರಿಲ್ಲದೇ ಈ ದಂಪತಿ ಚಳಿಗೆ ನಡುಗುತ್ತ, ಸಾವಿನ ಭಯಕ್ಕೆ ಬೆದರುತ್ತ ಕಾಲ ಕಳೆದಿದೆ.
ಮಂಗಳವಾರ ಎಂದಿನಂತೆ ಬಳ್ಳಾರಿ ನಾಲಾ ಬಳಿಯ ಹೊಲದ ಕೆಲಸಕ್ಕೆ ತೆರಳಿದ ಕಬಲಾಪುರ ಗ್ರಾಮದ ನಿವಾಸಿ ಕಾಡಪ್ಪ ಹಾಗೂ ಪತ್ನಿ ರತ್ನವ್ವ ಮಳೆ ಹೆಚ್ಚಾಗಿದ್ದರಿಂದ ಮನೆ ಸೇರಿದ್ದಾರೆ. ಆದರೆ ಬೆಳಗಾವಿ ನಗರದ ನೀರೆಲ್ಲ ಹರಿದು ಹೋಗುವ ಬಳ್ಳಾರಿ ನಾಲಾ ನೀರು ನೋಡ ನೋಡುತ್ತಿದ್ದಂತೆ ಮನೆ ಸುತ್ತ ಆವರಿಸುತ್ತ ಮನೆಯಿದ್ದ ಪ್ರದೇಶವೇ ಜಲಾವೃತವಾಗಿದೆ. ಇದರಿಂದ ಆತಂಕಿತ ದಂಪತಿ ಸಹಾಯಕ್ಕಾಗಿ ಮನೆಯಿಂದಲೇ ಮೊರೆಯಿಟ್ಟಿದ್ದಾರೆ. ಮನೆಯಿಂದ 200 ಮೀಟರ್ ಅಂತರದಲ್ಲಿರುವ ರಸ್ತೆಯಲ್ಲಿ ಕೂಗು ಕೇಳಿದ ಗ್ರಾಮಸ್ಥರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ನಂತರ ನಡೆದಿದ್ದು, ದಂಪತಿ ರಕ್ಷಣೆಯ ಸಾಹಸ ಕಾರ್ಯಾಚರಣೆ. ಪೊಲೀಸರು, ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್, ಸೈನಿಕರು ಬೋಟ್ ಸಮೇತ 80 ಜನ ಕಾರ್ಯಾಚರಣೆಗಿಳಿದರು. ಈ ಮಧ್ಯೆ ನೀರಿನ ಮಟ್ಟ ಹೆಚ್ಚುತ್ತಲೇ ನಡೆದಿತ್ತು. ಮನೆಯಲ್ಲಿ ಬೆಚ್ಚಗಿದ್ದ ಜೋಡಿ ಮನೆಗೆ ನೀರು ನುಗ್ಗಿದಾಗ ಮಾಳಿಗೆಯೇರಿತು. ಅಷ್ಟಕ್ಕೂ ಅವರ ಕಷ್ಟಗಳ ಸರಮಾಲೆ ಮುಗಿಯಲಿಲ್ಲ. 24 ಗಂಟೆಗಳ ಕಾಲ ನೆನೆದ ಮಣ್ಣಿನ ಮನೆ ಸೊಂಟ ಮುರಿದುಕೊಂಡು ಕುಸಿಯಿತು. ಪುಣ್ಯಕ್ಕೆ ಮನೆ ಮೇಲಿದ್ದ ಮಾವಿನ ಮರ ದಂಪತಿ ಕೈ ಹಿಡಿಯಿತು. ಅಲ್ಲೇ ಆಶ್ರಯ ಕಂಡುಕೊಂಡ ಗಂಡ ಹೆಂಡತಿ ನೆರವಿಗಾಗಿ ಕಾಯ್ದರು.
ಇತ್ತ ಮೊದಲನೇ ದಿನ ಅವರನ್ನು ರಕ್ಷಿಸಲು ಅತ್ಯುತ್ಸಾಹದಿಂದ ನೀರಿಗಿಳಿದ ಯುವಕನೊಬ್ಬ ಕೊಚ್ಚಿ ಹೋಗಿ ಆತನೂ ಗಿಡವೊಂದನ್ನು ಆಶ್ರಯಿಸಿ ವಾಪಸಾಗಿದ್ದನು. ಮನೆಯ ನಾಲ್ಕೂ ಭಾಗದಲ್ಲಿ ರಭಸದಿಂದ ಹರಿಯುವ ನೀರು ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ನೀರಿನ ಭೋರ್ಗರೆತಕ್ಕೆ ಯಾರ ದನಿಯೂ ಕೇಳದಂತ ಸ್ಥಿತಿ ಇತ್ತು. ಸ್ಥಳೀಯ ಇಬ್ಬರು ಯುವಕರು ಬೋಟ್ ಮೂಲಕ ಅವರನ್ನು ತಲುಪುವ ಯತ್ನವೂ ವಿಫಲವಾಗಿ ಬೋಟ್ ಮುಗುಚಿ ಗಿಡ ಕಂಟಿಗಳಲ್ಲಿ ಅವರು ಸಿಲುಕಿಕೊಂಡಿದ್ದರು.
ಪೊಲೀಸ್ ಆಯುಕ್ತರು, ತಹಶೀಲ್ದಾರರು, ತಾಪಂ ಇಒ, ಶಾಸಕಿ ಲಕ್ಷ್ಮೀ ಹೆಬ್ಟಾಳಕರ, ಶಾಸಕ ಸತೀಶ ಜಾರಕಿಹೊಳಿ ಬುಧವಾರ ದಿನವಿಡೀ ಅಲ್ಲಿಯೇ ಬೀಡು ಬಿಟ್ಟು ರಕ್ಷಣಾ ಕಾರ್ಯಾಚರಣೆಗೆ ಬಲ ತುಂಬುವ ಪ್ರಯತ್ನ ಮಾಡಿದರು. ಸ್ಥಳೀಯರು ತ್ವರಿತ ಕಾರ್ಯಾಚರಣೆಗೆ ಮನವಿ ಮಾಡಿದರು. ಹೆಲಿಕಾಪ್ಟರ್ ಬಳಸುವಂತೆ ಸಲಹೆ ಮಾಡಿದರು. ಹೇಗಾದರೂ ಮಾಡಿ ದಂಪತಿ ರಕ್ಷಣೆ ಮಾಡಿ ಎಂದು ಆಕ್ರೋಶಗೊಂಡರು.
ಆದರೆ ಕಾರ್ಯಾಚರಣೆ ಮಾತ್ರ ವೈಫಲ್ಯಕ್ಕೆ ನಿರಾಶೆಗೊಳ್ಳದೇ ಬಿಟ್ಟೂ ಬಿಡದೇ ನಡೆಯುತ್ತಲೇ ಇತ್ತು. ಬುಧವಾರ ಸಂಜೆ ಬೆಳಗಾವಿಗೆ ಬಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೆ ವಿಷಯ ತರಲಾಗಿತ್ತು. ಕೇಂದ್ರದಿಂದ ಹೆಲಿಕಾಪ್ಟರ್ ನೆರವಿಗಾಗಿ ಸಿಎಂ ಮನವಿ ಕೂಡ ಮಾಡಿದ್ದರು. ಗುರುವಾರ ಸಂಜೆಯೊಳಗಾಗಿ ಹೆಲಿಕಾಪ್ಟರ್ ಇಲ್ಲಿಗೆ ಬರುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದರು.
ಗುರುವಾರ ಬೆಳಗ್ಗೆಯಿಂದ ಮಳೆಯ ಪ್ರಮಾಣ ಕೊಂಚ ತಗ್ಗಿದ್ದು ಕಾರ್ಯಾಚರಣೆ ತಂಡದಲ್ಲಿ ಸ್ವಲ್ಪ ಆಶಾವಾದ ಮೂಡಿಸಿತು. ಬಳ್ಳಾರಿ ನಾಲಾ ಹರಿವು ಇಳಿಮುಖವಾಗಿತ್ತು. ಆಗ ಎನ್‌ಡಿಆರ್‌ಎಫ್ ತಂಡ ಧೈರ್ಯ ಮಾಡಿ ಹಗ್ಗ ತೆಗೆದುಕೊಂಡು ಬೋಟ್ ಅನ್ನು ದಂಪತಿ ಇರುವ ಜಾಗಕ್ಕೆ ತಲುಪಿತು.
ಮರದ ಮೇಲಿದ್ದ ದಂಪತಿಯನ್ನು ಕೆಳಗಿಳಿಸಿ ಬೋಟ್ ನಿಂದ ದಡ ಸೇರಿಸಲಾಯಿತು. ಸಾಹಸ ಮೆರೆದ ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳ ಮತ್ತು ಫೋಲೀಸ್ ಇಲಾಖೆಯವರು ಬೋಟ್ ಮೂಲಕ ಕಾರ್ಯಾಚರಣೆ ನಡೆಸಿ ದಂಪತಿಯ ಪ್ರಾಣ ಉಳಿಸಿದರು. ಮೂರು ದಿನದಿಂದ ಊಟ, ತಿಂಡಿ ಇಲ್ಲದೇ ಮರದಲ್ಲಿ ಕುಳಿತಿದ್ದ ದಂಪತಿ ನಿತ್ರಾಣಗೊಂಡಿದ್ದರು. ಧಾರಾಕಾರ ಮಳೆ ಹಾಗೂ ಚಳಿಯಲ್ಲಿಯೇ ಮೂರು ದಿನ ಕಾಲ ಕಳೆದಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ
Belagavi: ಯುವಕನ ಮೇಲೆ ಗುಂಡಿನ ದಾಳಿ… ಸ್ಥಳದಲ್ಲಿ ಬಿಗುವಿನ ವಾತಾವರಣ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.