ಜಾಜಿಮನೆಯಲ್ಲಿ 25 ಅಡಿ ಭೂ ಕುಸಿತ
ಕೊಡಗಿನ ಅನಾಹುತ ಸಾಗರದಲ್ಲಿ ಮರುಕಳಿಸುವ ಸಂಭವ! •ನಿಲ್ಲದ ಮಳೆ- ಮನೆ ಗುಡ್ಡದಿಂದ ಜಾರುವ ಸಾಧ್ಯತೆ
Team Udayavani, Aug 9, 2019, 12:18 PM IST
ಸಾಗರ: ಜಾಜಿ ಸುರೇಶ್ ವಾಸಿಸುವ ಮನೆ ಆಚೆ ಈಚಿನ ಧರೆಗಳು ಕುಸಿತಕ್ಕೊಳಗಾಗಿದ್ದು ಆತಂಕ ತೀವ್ರವಾಗಿದೆ.
ಮಾ.ವೆಂ.ಸ. ಪ್ರಸಾದ್
ಸಾಗರ: ತಾಲೂಕಿನ ವರದಹಳ್ಳಿಯ ದುರ್ಗಾಂಬಾ ದೇಗುಲದ ಸಮೀಪದಲ್ಲಿರುವ ಕಲ್ಮನೆ ಗ್ರಾಪಂ ವ್ಯಾಪ್ತಿಗೆ ಬರುವ ಜಾಜಿಮನೆಯ ವಿ.ಜಿ. ಸುರೇಶ್ ಅವರ ಮನೆಯ ಮುಂದಿನ ಸುಮಾರು 15 ಗುಂಟೆಗಳಷ್ಟು ಜಾಗ ನಿಧಾನವಾಗಿ 25 ಅಡಿಗಳಷ್ಟು ಕುಸಿದಿದ್ದು ಕಳೆದ ವರ್ಷದ ಕೊಡಗಿನ ದುರಂತ ನೆನಪಿಸುವಂತೆ ಮಾಡಿದೆ. ಇದೇ ಕಾಲದಲ್ಲಿ ಮನೆ ಎದುರಿನ ತೋಟದ ಅಡಕೆ ತೋಟ ಭೂಮಿ ಸಮೇತ ಸುಮಾರು ಎರಡು ಮೂರು ಅಡಿಗಳನ್ನು ಮೇಲೆದ್ದಿದ್ದು ಅಡಕೆ ಮರಗಳು ಸಂಪೂರ್ಣ ಬಾಗಿ, ಬಿದ್ದು ನಾಶದ ಹಂತ ತಲುಪಿದೆ.
ಮನೆಯೂ ಜಾರಿ ಹೋದೀತು!
ಈ ಜಾಗದಲ್ಲಿ ಸುಮಾರು 20 ವರ್ಷಗಳಿಂದ ಮನೆ ಕಟ್ಟಿಕೊಂಡು ಬದುಕು ನಡೆಸುತ್ತಿರುವ ಜಾಜಿ ಸುರೇಶ್ ಬುಧವಾರ ಬೆಳಗ್ಗೆ ಎದ್ದು ಮನೆಯ ಹೊರಗೆ ಬಂದಾಗಲಷ್ಟೇ ಭೂಮಿ ಐದು ಅಡಿಗಳನ್ನು ಕುಸಿದಿರುವುದು ಕಂಡುಬಂದಿದೆ. ಯಾವುದೇ ಸದ್ದುಗದ್ದಲವಿಲ್ಲದೆ ಜಾಗ ಕುಸಿದಿದೆ. ಮನೆ ಪಕ್ಕದಲ್ಲಿದ್ದ ಬಾಳೆ ಗಿಡಗಳು, ಸಸಿ ಕಣದಲ್ಲಿರುವ ಅಡಕೆ ಸಸಿಗಳು ಮೊದಲ ಹಂತದಲ್ಲಿ ಐದು ಅಡಿ, ನಂತರ ನಿಧಾನವಾಗಿ 25 ಅಡಿಗಳ ತನಕ ನೇರವಾಗಿಯೇ ಕುಸಿದಿದೆ. ಪ್ರತಿ ದಿನ ತೋಟದ ಪಕ್ಕದಲ್ಲಿ ಓಡಾಡುತ್ತಿದ್ದ ಕಾಲುದಾರಿ ಇದ್ದಕ್ಕಿದ್ದಂತೆ ಕತ್ತರಿಸಿದಂತೆ ಹತ್ತು ಅಡಿಗೂ ಹೆಚ್ಚು ತಗ್ಗಿ ಒಮ್ಮೆಗೇ ಅಚ್ಚರಿ- ಆತಂಕ ಸೃಷ್ಟಿಯಾಗುವಂತೆ ಮಾಡಿದೆ.
ಪ್ರಗತಿಪರ ಕೃಷಿಕ ಸುರೇಶ್ ಹೈನುಗಾರಿಕೆ ಹಾಗೂ ನರ್ಸರಿ ಮೂಲಕ ತಮ್ಮ ಬದುಕನ್ನು ಕಟ್ಟಿಕೊಂಡವರು. ಒಂದು ಕಾಲದಲ್ಲಿ ಅವರು ವಿಶೇಷ ರೀತಿಯಲ್ಲಿ ತಯಾರಿಸುತ್ತಿದ್ದ ರೆಡಿ ಜಾಜಿ ತಂಬಾಕು ಪ್ಯಾಕ್ ಸಾಗರದ ಮಾರುಕಟ್ಟೆ ಮೀರಿ ಬೆಳೆದಿತ್ತು. ಬೆವರು ಸುರಿಸಿ ಕಟ್ಟಿದ ಮನೆ, ತೋಟಗಳು ಕಣ್ಣೆದುರಿನಲ್ಲಿಯೇ ಅಪಾಯದ ಅಂಚಿನಲ್ಲಿರುವಾಗ ಭವಿಷ್ಯ ನೆನೆಯುವ ಸುರೇಶ್ ಕಣ್ಣಂಚಿನಲ್ಲೂ ನೀರು ಕಾಣಿಸುತ್ತದೆ.
ಮಲೆನಾಡಿನಲ್ಲಿ ಧರೆ ಕುಸಿತ ಸಾಮಾನ್ಯ. ಆದರೆ ನೆಲ ಈ ರೀತಿಯಲ್ಲಿ ಒಳಮುಖನಾಗಿ ದೊಡ್ಡ ಪ್ರಮಾಣದಲ್ಲಿ ಕುಸಿಯುವುದು ಈವರೆಗೆ ಕಂಡುಬಂದಿರಲಿಲ್ಲ. ಗುರುವಾರ ಕೂಡ ಮಳೆ ಬಿಟ್ಟೂ ಬಿಡದೆ ಕುಂಭದ್ರೋಣ ಸ್ಥಿತಿಯಲ್ಲಿ ಬರುತ್ತಿರುವ ಹಿನ್ನೆಲೆಯಲ್ಲಿ ಸುರೇಶ್ ಅವರ ಮನೆ ಕೂಡ ಆತಂಕದಲ್ಲಿದೆ. ಅದು ಕೂಡ ಮಡಿಕೇರಿಯಲ್ಲಾದಂತೆ ಜಾರಿ ತೋಟದತ್ತ ಹೋಗಿಬಿಡುವ ಅಪಾಯದ ಸಾಧ್ಯತೆಯೂ ಇದೆ. ಇದೇ ವೇಳೆ ತೋಟದಲ್ಲಿ ಭೂಮಿ ಸುಮಾರು ಅಡಿಗಳಷ್ಟು ಮೇಲೆದ್ದಿದ್ದು ಹಲವಾರು ಅಡಕೆ ಮರಗಳು ನೆಲಕಚ್ಚಿವೆ. ನೂರಕ್ಕೂ ಹೆಚ್ಚು ಮರಗಳು ಯಾವುದೇ ಕ್ಷಣದಲ್ಲಿ ಉರುಳುವ ಆತಂಕದಲ್ಲಿವೆ.
ಮತ್ತದೇ ಅಸೀಮ ನಿರ್ಲಕ್ಷ್ಯ: ಮಳೆ ಅಬ್ಬರ ಹೆಚ್ಚುತ್ತಿರುವ ಸಂದರ್ಭದಲ್ಲಿ ಅಪಾಯವನ್ನು ಗ್ರಹಿಸಿರುವ ಸುರೇಶ್ ಈಗಾಗಲೇ ತಮ್ಮ ಮನೆಯ ಕೊಟ್ಟಿಗೆಯಲ್ಲಿರುವ ಅಷ್ಟೂ ಜಾನುವಾರುಗಳನ್ನು ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ಪ್ರಸ್ತುತ ರಾತ್ರಿ ಮನೆಯಲ್ಲಿ ತಂಗದೆ ಗ್ರಾಮದ ಮತ್ತೋರ್ವರ ಮನೆಗೆ ತೆರಳುತ್ತಿದ್ದಾರೆ. ಇವರ ಮನೆಗೆ ತೆರಳುವ ರಸ್ತೆಯ ಮೇಲೂ ಧರೆ ಕುಸಿದಿದೆ. ರಸ್ತೆಯ ಮೇಲೆ ಎರಡು ಅಡಿಯಷ್ಟು ನೀರು ಹರಿಯುತ್ತಿದೆ. ಈ ಪರಿಸ್ಥಿತಿಯಲ್ಲಿ ಮನೆಯ ವಸ್ತುಗಳನ್ನು ಬೇರೆಡೆಗೆ ಸಾಗಿಸುವುದಾದರೂ ಹೇಗೆ ಎಂದು ಸುರೇಶ್ ಪ್ರಶ್ನಿಸುವಂತಾಗಿದೆ.
ಕೊಡಗಿನ ದುರಂತದಲ್ಲೂ ಕಾಣುವುದು ಆರಂಭಿಕ ಹಂತದಲ್ಲಿ ಆಡಳಿತ ಮಾಡಿದ ನಿರ್ಲಕ್ಷ್ಯ. ವರದಹಳ್ಳಿಯ ಜಾಜಿಮನೆಯಲ್ಲಿ ಸಂಭವಿಸಿರುವ ಭೂ ಕುಸಿತ ಕೊಡಗಿನ ಮಾದರಿಯ ಅಪಾಯಗಳನ್ನು ತೋರಿಸುತ್ತಿದೆ. ಭೂ ಕುಸಿತದ ಘಟನೆ ನಡೆದ 24 ಗಂಟೆಗಳ ನಂತರವೂ ತಾಲೂಕು ಆಡಳಿತದ ಪ್ರಮುಖರಾರೂ ಸ್ಥಳಕ್ಕೆ ಭೇಟಿ ನೀಡಿಲ್ಲ. ಭೂಮಿ ಜರಿಯುವ ಬದಲು ಒಳಮುಖನಾಗಿ ಕುಸಿದಿರುವ ಹಿನ್ನೆಲೆಯಲ್ಲಿ ಭೂಗರ್ಭ ಶಾಸ್ತ್ರಜ್ಞರು ಸ್ಥಳ ಪರಿಶೀಲನೆ ನಡೆಸಬೇಕಿತ್ತು. ಕೊನೆ ಪಕ್ಷ ಈ ಕುಸಿತ ಮುಂದುವರಿಯದಂತೆ ಸಲಹೆ ಸೂಚನೆ ಕೊಟ್ಟು ಅಗತ್ಯ ಕಾರ್ಯಕ್ರಮವನ್ನು ತಾಲೂಕು ಆಡಳಿತ ಹಮ್ಮಿಕೊಳ್ಳುವಂತೆ ಮಾಡಬೇಕಿತ್ತು. ಆದರೆ ಶಾಸಕರ ಹಿಂದಷ್ಟೇ ಸುತ್ತುವರಿಯುವ ತಹಶೀಲ್ದಾರ್ ಮತ್ತು ರೆವಿನ್ಯೂ ಅಧಿಕಾರಿಗಳು ಇಲ್ಲಿಗೆ ಬಂದಿಲ್ಲ ಎಂದು ಸ್ಥಳೀಯರಾದ ಶಶಿಕಾಂತ್ ಮಾಳೆದಿಂಬ ಆಕ್ರೋಶ ವ್ಯಕ್ತಪಡಿಸಿದರು. ಕಂದಾಯ ಇಲಾಖೆ ಅಧಿಕಾರಿಗಳು ಪ್ರಾಥಮಿಕ ಮಾಹಿತಿ ಪಡೆದು ತೆರಳಿರುವುದಷ್ಟೇ ಈವರೆಗೆ ಆಗಿರುವ ಪ್ರಗತಿ.
ಜಾಜಿಮನೆಯ ಭಾಗದಲ್ಲಿ ಒಟ್ಟು ಮೂರು ಮನೆಗಳಿವೆ. ಈಗ ಆಗಿರುವ ಮೊದಲ ಹಂತದ ಭೂ ಕುಸಿತದ ಹಿಂದೆ ಇನ್ನೊಂದು ದೊಡ್ಡ ಮಟ್ಟದ ಭೂಕುಸಿತವೇನಾದರೂ ಆದರೆ ಮೂರು ಮನೆಗಳು ಆತಂಕಕ್ಕೆ ಒಳಗಾಗುತ್ತವೆ. ಗುಡ್ಡಗಳ ಮಧ್ಯದಲ್ಲಿರುವ ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಮಳೆ ಅಂತಹ ಆತಂಕವನ್ನಂತೂ ತಂದಿದೆ. ಕಲ್ಮನೆ ಗ್ರಾಪಂ ಅಧ್ಯಕ್ಷ ಕುರಿ ಮಂಜಪ್ಪ, ಕಾರ್ಯದರ್ಶಿ ದತ್ತಾತ್ರೇಯ ಮಾವಿನಸರ, ಎಡಜಿಗಳೇಮನೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಧರ್ಮಪ್ಪ ಬಿ.ಎಸ್., ಸುಧಾಕರ್ ಮತ್ತಿತರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ವೀಕ್ಷಿಸಿದರು.
ಮಳೆಗೆ ಬೆದರಿದ ಹಾಲಪ್ಪ!
ಸಾಗರ ವಿಧಾಸಭಾ ಕ್ಷೇತ್ರದ ಶಾಸಕ ಎಚ್.ಹಾಲಪ್ಪ ಗುರುವಾರ ತಾಲೂಕಿನ ವಿವಿಧೆಡೆ ಆದ ನೆರೆ ಹಾನಿಗಳ ಸಮೀಕ್ಷೆ ನಡೆಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆ ಪಟ್ಟಿಯಲ್ಲಿ ವರದಹಳ್ಳಿಯ ಜಾಜಿ ಸುರೇಶ್ ಮನೆಯ ಪರಿಸ್ಥಿತಿಯ ವೀಕ್ಷಣೆಯೂ ಪಟ್ಟಿಯಲ್ಲಿತ್ತು. ಅವರು ತೋಟದ ಎದುರು ದಂಡೆಗೆ ಬರುವ ಸಂದರ್ಭದಲ್ಲಿ ಮಳೆ ಸುರಿಯುತ್ತಿತ್ತು. ಈ ಹಂತದಲ್ಲಿ ಸ್ಥಳಕ್ಕೆ ಭೇಟಿ ನೀಡದೆ ಹಾಲಪ್ಪ ತಮ್ಮ ಮುಂದಿನ ನೆರೆ ವೀಕ್ಷಣೆಗೆ ತೆರಳಿಬಿಟ್ಟರು.ಆ ಸಂದರ್ಭದಲ್ಲಿ ಸ್ಥಳೀಯ ಗ್ರಾಮಸ್ಥರು ಅವರಿಗೆ ಅನಾಹುತದ ಅಗಾಧತೆಯನ್ನು ಮನವರಿಕೆ ಮಾಡಿ ಸ್ಥಳಕ್ಕೆ ಭೇಟಿ ಕೊಡುವಂತಾಗಲು ಒತ್ತಾಯಿಸಿದರು. ಇಲ್ಲಿಂದಲೇ ಕಾಣಿಸುತ್ತದೆಯಲ್ಲ ಎಂದು ಹಾಲಪ್ಪ ಕಾರು ಚಾಲಕನಿಗೆ ರೈಟ್ ರೈಟ್ ಹೇಳಿದರು. ಶಾಸಕರು ಬಂದಿದ್ದರೆ ಅವರ ಮೂಲಕ ಭೂ ಗರ್ಭ ಶಾಸ್ತ್ರಜ್ಞರನ್ನು ಸ್ಥಳಕ್ಕೆ ಭೇಟಿ ಕೊಡುವಂತೆ ಮಾಡಬಹುದಿತ್ತು. ಕೊಡಗಿನಂತೆ ಮನೆಗಳೇ ತೇಲಿ ಹೋಗದಂತೆ ಅವರಾದರೂ ಸಲಹೆ ನೀಡುತ್ತಿದ್ದರೇನೋ ಎಂಬ ನಿರೀಕ್ಷೆ ಹೊಂದಿದ್ದ ಸುರೇಶ್ ಹಾಗೂ ಸುಜಾತಾ ದಂಪತಿ ಶಾಸಕರು ಬರುವುದಿಲ್ಲ ಎಂಬುದನ್ನು ಅರಿತು ತೀವ್ರ ನಿರಾಶರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
MUST WATCH
ಹೊಸ ಸೇರ್ಪಡೆ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.