ತುರ್ತು ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗೆ ಸೂಚನೆ: ಶೋಭಾ
ಭದ್ರಾ ನದಿ ಪ್ರವಾಹ ಪರಿಶೀಲನೆ ನಂತರ ಸಂಸದೆ ಶೋಭಾ ಕರಂದ್ಲಾಜೆ ಮಾಹಿತಿ
Team Udayavani, Aug 9, 2019, 4:34 PM IST
ಬಾಳೆಹೊನ್ನೂರು: ಕಳಸ ರಸ್ತೆಯ ಬೈರೇಗುಡ್ಡ ಬಳಿಯ ರಸ್ತೆ ಮೇಲೆ ಹರಿದ ಭದ್ರಾ ನದಿ ಪ್ರವಾಹವನ್ನು ಸಂಸದೆ ಶೋಭಾ ಕರಂದ್ಲಾಜೆ ಪರಿಶೀಲಿಸಿದರು.
ಬಾಳೆಹೊನ್ನೂರು: ಜಿಲ್ಲಾದ್ಯಂತ ಭಾರೀ ಮಳೆಯಿಂದಾಗಿ ಅಪಾರ ನಷ್ಟ ಸಂಭವಿಸಿರುವ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ತುರ್ತು ಪರಿಹಾರಕ್ಕೆ ಸೂಚನೆ ನೀಡಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.
ಗುರುವಾರ ಬಾಳೆಹೊನ್ನೂರಿನ ಕಳಸ ರಸ್ತೆಯ ಬೈರೇಗುಡ್ಡ ಸಮೀಪದ ರಸ್ತೆ ಹರಿದ ಮೇಲೆ ಭದ್ರಾ ನದಿ ಪ್ರವಾಹವನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಳಸ-ಹೊರನಾಡು ಯಾತ್ರಾಕ್ಷೇತ್ರ ವಾಗಿದ್ದು, ಸಾವಿರಾರು ಭಕ್ತರು ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಹಾಗಾಗಿ, ಪ್ರವಾಹದಿಂದ ಸಮಸ್ಯೆಯುಂಟಾಗುವುದನ್ನು ತಪ್ಪಿಸಲು ಮುಂದಿನ ದಿನಗಳಲ್ಲಿ ಬೈರೇಗುಡ್ಡ, ತೆಪ್ಪದಗಂಡಿ ಹಾಗೂ ಮಹಾಲ್ಗೋಡು ಬಳಿ ರಸ್ತೆಯನ್ನು ಎತ್ತರಿಸಿ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಅಲ್ಲದೇ, ಈ ಬಗ್ಗೆ ಸ್ಥಳದಲ್ಲಿದ್ದ ಕಾರ್ಯಪಾಲಕ ಅಭಿಯಂತರರಿಗೆ ಅಂದಾಜು ಪಟ್ಟಿ ತಯಾರಿಸುವಂತೆ ಸೂಚಿಸಿದರು.
ಬಳಿಕ ಸಂತೆ ಮಾರ್ಕೆಟ್ ಬಳಿ ಎಪಿಎಂಸಿ ವತಿಯಿಂದ ನಿರ್ಮಿಸಿರುವ ಸಂತೆ ಮಾರುಕಟ್ಟೆಯ ಹರಾಜು ಕಟ್ಟೆ ಅವೈಜ್ಞಾನಿಕವಾಗಿದೆ ಎಂಬ ಗ್ರಾಮಸ್ಥರ ದೂರಿಗೆ ಸ್ಪಂದಿಸಿದ ಸಂಸದೆ, ಸಂತೆ ಮಾರುಕಟ್ಟೆ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವುದರ ಬಗ್ಗೆ ಸಮಗ್ರ ಮಾಹಿತಿ ಪಡೆಯುತ್ತೇನೆ. ಸುಮಾರು 79ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿದ ಕಟ್ಟಡ ಉಪಯೋಗಕ್ಕೆ ಬಾರದಿರುವುದು ನಮ್ಮ ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಸಂಪುಟ ರಚನೆಯಾದ ಬಳಿದ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರೊಂದಿಗೆ ಮಾತನಾಡಿ ಇದರ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ವಿದ್ಯುತ್ ಅವಘಡದಿಂದ ಮೃತಪಟ್ಟ ವ್ಯಕ್ತಿಗೆ ಪರಿಹಾರ ಕೊಡಿಸುವುದಾಗಿ ತಿಳಿಸಿದರು. ಚಿಕ್ಕಮಗಳೂರಿನಲ್ಲಿ ಪ್ರಾಣ ಕಳೆದುಕೊಂಡ ದಂಪತಿ ಕುಟುಂಬಕ್ಕೆ 10ಲಕ್ಷ ರೂ.ಪರಿಹಾರ ನೀಡುವುದಾಗಿ ತಿಳಿಸಿದರು.
ಬೆಳೆ ಹಾನಿಯ ಬಗ್ಗೆ ಸಮಗ್ರವಾಗಿ ವರದಿ ತಯಾರಿಸುವಂತೆ ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್‌ರಿಗೆ ಸೂಚಿಸಲಾಗಿದೆ. ಕಳೆದ ಬಾರಿ ಕೆಲವು ರೈತರಿಗೆ ಬೆಳೆ ಪರಿಹಾರ ಬಾರದೇ ಇರುವ ಬಗ್ಗೆ ಗಮನಕ್ಕೆ ಬಂದಿದ್ದು, ಎಲ್ಲಾ ರೈತರು ಆಧಾರ್ ಲಿಂಕ್ ಮಾಡಿಸಬೇಕಾಗಿದೆ. ತಾಂತ್ರಿಕ ಸಮಸ್ಯೆಯುಂಟಾಗಿದ್ದು, ಕೃಷಿ ಮತ್ತು ತೋಟಗಾರಿಕೆ ಇಲಾಖೆಯವರಿಗೆ ಸರಿಪಡಿಸುವಂತೆ ತಿಳಿಸಲಾಗಿದೆ ಎಂದರು.
ಶೃಂಗೇರಿ ಕ್ಷೇತ್ರದಲ್ಲಿ ಹಲವಾರು ಕಡೆ ಭೂ ಕುಸಿತ ಉಂಟಾಗಿ ರಸ್ತೆಗಳು ಹಾಳಾಗಿವೆ. ಈ ಬಗ್ಗೆ ಸ್ಥಳ ಪರಿಶೀಲನೆ ಮಾಡಿ ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು. ಮುಂದಿನ ದಿನಗಳಲ್ಲಿ ಜಿಲ್ಲೆಗೆ ಹೈಟೆಕ್ ಆಸ್ಪತ್ರೆ, ನೀರಾವರಿ ಯೋಜನೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಎಲ್ಲಾ ಬೆಳೆಗಾರರು ಫಸಲ ಬಿಮಾ ಯೋಜನೆ ಮಾಡಿಸಿಕೊಳ್ಳಬೇಕು. ಪ್ರವಾಹ ವೀಕ್ಷಣೆಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು 5ತಂಡಗಳನ್ನು ರಚಿಸಿದ್ದು, ಉಡುಪಿ, ಚಿಕ್ಕಮಗಳೂರು ಕ್ಷೇತ್ರಕ್ಕೆ ನವೀನ್ ಕುಮಾರ್ ಕಟೀಲ್, ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಜೀವರಾಜ್ ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಮಳೆಗಾಲದಲ್ಲಿ ಜಖಂಗೊಂಡ ರಸ್ತೆಗಳ ಅಭಿವೃದ್ಧಿ ಹೊರತುಪಡಿಸಿ ಬೇರೆ ಯಾವುದೇ ಕಾಮಗಾರಿ ನಡೆಸಲು ಅನುಮತಿ ನೀಡಬಾರದೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಳೆಗಾಲದಲ್ಲಿ ಕಾಮಗಾರಿ ನಡೆಸಿದಲ್ಲಿ ಗುಣಮಟ್ಟವಿರುವುದಿಲ್ಲ. ಅಧಿಕಾರಿಗಳು ಯಾರ ಒತ್ತಡಕ್ಕೂ ಮಣಿಯದೆ ಸೂಚನೆ ಪಾಲಿಸಬೇಕು. ಕಳಪೆ ಕಾಮಗಾರಿ ನಡೆದಲ್ಲಿ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಅರಣ್ಯ ಇಲಾಖೆಯವರು ಗೋಮಾಳ ಹಾಗೂ ಕಂದಾಯ ಭೂಮಿಗಳಲ್ಲಿ ಟ್ರಂಚ್ ಹೊಡೆದು ಅಭಿವೃದ್ಧಿಪಡಿಸುತ್ತಿರುವ ಬಗ್ಗೆ ಗ್ರಾಮಸ್ಥರು ದೂರು ನೀಡಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡುವುದಾಗಿ ತಿಳಿಸಿದರು.
ಮಾಜಿ ಶಾಸಕ ಡಿ.ಎನ್.ಜೀವರಾಜ್ ಮಾತ ನಾಡಿ, ಎಪಿಎಂಸಿ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಈ ಕಟ್ಟಡ ಅವೈಜ್ಞಾನಿಕವಾಗಿದೆ. ಇದರಲ್ಲಿ ಸಂತೆ ನಡೆಸುವುದು ಅನುಮಾನ ಎಂದು ಅಂದೇ ತಿಳಿಸಿದ್ದು ಈಗ ನಿಜವಾಗಿದೆ. ಅನವಶ್ಯಕವಾಗಿ ಭದ್ರಾನದಿ ಹಿನ್ನೀರಿನಲ್ಲಿ ಕಟ್ಟಡ ಕಟ್ಟಿರುವುದು ಸರಿಯಲ್ಲ. ಈ ಬಗ್ಗೆ ಅಂದಿನ ಇಂಜಿನಿಯರ್ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುವುದು ಎಂದು ಹೇಳಿದರು. ತಾಪಂ ಉಪಾಧ್ಯಕ್ಷ ಮಂಜು ಹೊಳೆಬಾಗಿಲು, ಬಿಜೆಪಿ ತಾಲೂಕು ಅಧ್ಯಕ್ಷ ವೆನಿಲ್ಲಾ ಭಾಸ್ಕರ್, ಮುಖಂಡರಾದ ಕೋಕಿಲಮ್ಮ, ಕೆ.ಕೆ.ವೆಂಕಟೇಶ್, ಖಾಂಡ್ಯ ಹೋಬಳಿ ಬಿಜೆಪಿ ಮಾಜಿ ಅಧ್ಯಕ್ಷ ಚಂದ್ರಶೇಖರ್, ಕೆ.ಟಿ.ವೆಂಕಟೇಶ್, ಉರುಗುಡಿಗೆ ರಾಜಪ್ಪಗೌಡ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.