ಕೇರಳಕ್ಕೆ ಮರುಕಳಿಸಿದ ಮಹಾ ಪ್ರವಾಹ
Team Udayavani, Aug 10, 2019, 5:45 AM IST
ದೇಶದ ಹೆಚ್ಚಿನ ಭಾಗಗಳಲ್ಲಿ ಈಗ ಮಳೆಯೋ ಮಳೆ. ಜುಲೈ ಕೊನೆಯ ವಾರದವರೆಗೆ ಹೆಚ್ಚಿನ ಪ್ರದೇಶಗಳಲ್ಲಿ ಮಳೆಯಾಗಿದ್ದರೂ, ನಿರೀಕ್ಷಿತ ಪ್ರಮಾಣದಲ್ಲಿ ಇರಲಿಲ್ಲ. ಈಗ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಕೇರಳದಲ್ಲಿ ಕಳೆದ ವರ್ಷದ ಸ್ಥಿತಿಯನ್ನು ನೆನಪಿಸುವಂಥ ಪ್ರವಾಹ ಪರಿಸ್ಥಿತಿ ಮತ್ತೆ ಎದುರಾಗಿದೆ. ತಮಿಳುನಾಡು, ಒಡಿಶಾ, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಹೀಗಾಗಿ, ಹಾಲಿ ಮುಂಗಾರು ಹಂಗಾಮಿನಲ್ಲಿ ಉತ್ತಮ ರೀತಿಯಲ್ಲಿ ಮಳೆ ಆಗಲಿಲ್ಲ ಎಂಬ ಕೊರತೆ ನೀಗಿದೆ.
ತಮಿಳುನಾಡಿನಲ್ಲಿ ಮಳೆಗೆ ಐವರು ಬಲಿ
ತಮಿಳುನಾಡಿನಲ್ಲಿ ಮಳೆ ಸಂಬಂಧಿ ದುರಂತಗಳಲ್ಲಿ ಐವರು ಸಾವನ್ನಪ್ಪಿದ್ದಾರೆ. ನೀಲಗಿರಿ ಜಿಲ್ಲೆಯಲ್ಲಿ ಜೀವ ನಷ್ಟದ ಪ್ರಮಾಣ ಹೆಚ್ಚಾಗಿದೆ. ಅವಲಾಂಚೆ ಎಂಬ ಪ್ರಸಿದ್ಧ ಪ್ರವಾಸಿ ಸ್ಥಳದಲ್ಲಿ ಗುರುವಾರ ಬೆಳಗ್ಗಿನವರೆಗೆ 820 ಮಿ.ಮೀ. ಮತ್ತು ಶುಕ್ರವಾರ ಸಂಜೆಯವರೆಗೆ 2,136 ಮಿ.ಮೀ. ಮಳೆಯಾಗಿದೆ. ಇದು ದಕ್ಷಿಣ ಭಾರತದಲ್ಲಿಯೇ ಅಧಿಕ ಮಳೆ.
ಇದು ಕಂಡು ಕೇಳರಿಯದ ದುರಂತ
ಕೇರಳದ ವಯನಾಡ್‌ನ ಪುತ್ತುಮಲ ಎಂಬಲ್ಲಿ ಭಾರೀ ಭೂಕುಸಿತ ಉಂಟಾಗಿದ್ದು, ಇದನ್ನು ಭೀಕರ ಭೂಕುಸಿತ ಎಂದು ಬಣ್ಣಿಸಲಾಗುತ್ತಿದೆ. ಅಲ್ಲಿ 40 ಮಂದಿ ಮಣ್ಣಿನಡಿ ಹೂತು ಹೋಗಿದ್ದಾರೆ ಎಂದು ನಂಬಲಾಗಿದ್ದು, ಇದುವರೆಗೆ ಯಾರೂ ಜೀವಂತವಾಗಿ ಪತ್ತೆಯಾಗಿಲ್ಲ. ಶುಕ್ರವಾರ ಸಂಜೆವರೆಗೆ ರಕ್ಷಣಾ ತಂಡಗಳು 5 ಮೃತದೇಹಗಳನ್ನು ಹೊರ ತೆಗೆದಿವೆ. 300ಕ್ಕೂ ಅಧಿಕ ಮಂದಿಯನ್ನು ಸುತ್ತಮುತ್ತಲಿನ ಪ್ರದೇಶದಿಂದ ಸ್ಥಳಾಂತರಿಸಲಾಗಿದೆ.
ಚಹಾ ತೋಟಗಳಿಂದ ಕಂಗೊಳಿಸುತ್ತಿದ್ದ ಪುತ್ತುಮಲ ಈಗ ಕೆಸರಿನಿಂದ ತುಂಬಿದೆ. ಅದರ ಎಡೆಗಳಲ್ಲಿ ಮಳೆ, ಗಾಳಿಗೆ ಬೋರಲಾಗಿ ಬಿದ್ದ ಆಳೆತ್ತರದ ಮರಗಳು ಕಾಣಿಸುತ್ತಿವೆ. ಎರಡು ಗುಡ್ಡಗಳ ನಡುವಿನ ಪ್ರದೇಶ ಸಂಪೂರ್ಣವಾಗಿ ಕುಸಿದು ಹೋಗಿದೆ. ಹೀಗಾಗಿ, ಭಾರೀ ಪ್ರಮಾಣದ ಜಮೀನು ಹುದುಗಿ ಹೋಗಿರುವ ಸಾಧ್ಯತೆ ಇದೆ. ಈ ಪ್ರದೇಶಕ್ಕೆ ಎಲ್ಲಾ ರೀತಿಯ ಸಂಪರ್ಕ ವ್ಯವಸ್ಥೆ ಕಡಿದುಹೋಗಿದೆ.ಹೀಗಾಗಿ ಎನ್‌ಡಿಆರ್‌ಎಫ್, ಸೇನೆಯ ತಂಡಗಳೂ ನಡೆದೇ ಸಾಗಬೇಕಾಗಿದೆ.
ಮತ್ತೂಂದು ಭೂಕುಸಿತ: ಮಲಪ್ಪುರಂ ಜಿಲ್ಲೆಯ ನಿಲಂಬೂರ್ ಸಮೀಪದ ಪೊತ್ತುಕಲ್ಲು ಗ್ರಾಮದಲ್ಲಿ ಭೂಕುಸಿತ ಉಂಟಾಗಿದ್ದು ಸುಮಾರು 18 ಕುಟುಂಬಗಳ 80ಕ್ಕೂ ಅಧಿಕ ಮಂದಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ರಕ್ಷಣಾ ಕಾರ್ಯಾಚರಣೆ ಶುರುವಾಗಿದ್ದು, 3 ದೇಹಗಳನ್ನು ಪತ್ತೆ ಮಾಡಲಾಗಿದೆ.
30 ಮಂದಿ ಸಾವು: ದೇವರ ಸ್ವಂತ ನಾಡಿನಲ್ಲಿ ಮಳೆ ಸಂಬಂಧಿ ದುರಂತ ದಲ್ಲಿ ಮೃತರ ಸಂಖ್ಯೆ 30ಕ್ಕೇರಿದೆ. 43 ಸಾವಿರ ಮಂದಿ ಪರಿಹಾರ ಶಿಬಿರ ಗಳಲ್ಲಿ ಆಶ್ರಯ ಪಡೆದಿದ್ದಾರೆ. ಎರ್ನಾಕುಳಂ, ಇಡುಕ್ಕಿ, ತ್ರಿಶ್ಶೂರ್, ಪಾಲ ಕ್ಕಾಡ್, ಮಲಪ್ಪುರಂ, ಕಲ್ಲಿಕೋಟೆ, ವಯನಾಡ್, ಕಣ್ಣೂರು, ಕಾಸರ ಗೋಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳ ಅತ್ಯಂತ ದುರ್ಗಮ ಪ್ರದೇಶಗಳೂ ಸೇರಿ ಹೆಚ್ಚಿನ ಸ್ಥಳಗಳಲ್ಲಿ ಭಾರಿ ಮಳೆಯಾಗಿದೆ.
ತಗ್ಗಿದ ಮಳೆ ಕೊರತೆ
ದೇಶಾದ್ಯಂತ ಮುಂಗಾರು ಮಳೆ ಧಾರಾಕಾರ ವಾಗಿ ಸುರಿಯತ್ತಿದೆ. ಹೀಗಾಗಿ ಮಳೆಯ ಕೊರತೆ ಪ್ರಮಾಣ ತಗ್ಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. ಆ.8ರ ವರೆಗೆ ಮುಂಗಾರು ಮಳೆಯ ಪ್ರಮಾಣ ವಾಡಿಕೆಗಿಂತ ಶೇ.5ರಷ್ಟು ಕಡಿಮೆಯಿತ್ತು. ಈ ವರ್ಷದ ಜೂನ್-ಜುಲೈ ಅವಧಿಯಲ್ಲಿ ಮಳೆ ವಿಳಂಬವಾಗಿ ಶುರುವಾದರೂ, ಅನಂತರದ ದಿನಗಳಲ್ಲಿ ಅದು ಬಿರುಸಾಯಿತು ಎಂದಿದ್ದಾರೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧೆಡೆ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಮೇಲೆ ಕೇಂದ್ರ ನಿಗಾ ಇರಿಸಿದೆ ಎಂದೂ ಹೇಳಿದ್ದಾರೆ.
ನೀರಿನಲ್ಲಿ ಕೊಚ್ಚಿಕೊಂಡು ಹೋದ ಟ್ರಕ್
ಮಧ್ಯಪ್ರದೇಶದ ಅಶೋಕನಗರ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿ ವ್ಯಕ್ತಿ ಕೊಚ್ಚಿಕೊಂಡು ಹೋಗಿದ್ದಾನೆ. ಬರ್ವಾನಿ ಮತ್ತು ಧಾರ್ ಜಿಲ್ಲೆಗಳಲ್ಲಿ ನದಿಗಳ ಪ್ರವಾಹ ಹೆಚ್ಚಾಗಿದೆ. ಧಾರ್ ಜಿಲ್ಲೆ ಧರ್ಮಪುರಿಯಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟ್ರಕ್ ಖುಜ್ ನದಿ ನೀರಿನ ಪ್ರವಾಹದಲ್ಲಿ ಕೊಚ್ಚಿ ಕೊಂಡು ಹೋಗಿದೆ. ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಮತ್ತು ಇತರರು ಕ್ರೇನ್ ಸಹಾಯದಿಂದ ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿ ದ್ದಾರೆ. ನರ್ಮದಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. 1 ಸಾವಿರ ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.
ಉತ್ತರಾಖಂಡದಲ್ಲಿ ಇಬ್ಬರು ಸಾವು
ಉತ್ತರಾಖಂಡದ ತೆಹ್ರಿ ಜಿಲ್ಲೆಯಲ್ಲಿ ಮೇಘ ಸ್ಫೋಟ ಉಂಟಾಗಿದೆ. ಅದರಿಂದಾಗಿ ಉಂಟಾದ ಪ್ರವಾಹದಿಂದ ಇಬ್ಬರು ಮೃತಪಟ್ಟಿದ್ದು, ಇಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ. ಧಾರಾಕಾರ ಮಳೆಯಿಂದಾಗಿ ಮನೆಗಳು, ಬೆಳೆದು ನಿಂತ ಪೈರು, ಜಾನುವಾರುಗಳು, ಸೇತುವೆಗಳು ಕೊಚ್ಚಿ ಹೋಗಿವೆ. ಋಷಿಕೇಶ-ಬದರಿನಾಥ ನಡುವಿನ ಹೆದ್ದಾರಿಯ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ನರ್ಮದಾ: 26 ಗೇಟ್ ಓಪನ್
ಗುಜರಾತ್‌ನಲ್ಲಿ ನರ್ಮದಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸರ್ದಾರ್ ಸರೋವರ್ ಡ್ಯಾಮ್‌ನ 26 ಗೇಟ್‌ಗಳನ್ನು ತೆರೆಯಲಾಗಿದೆ. ಗೇಟ್‌ಗಳನ್ನು ಅಳವಡಿಸಿ 2 ವರ್ಷ ಕಳೆದ ಬಳಿಕ ಅದನ್ನು ತೆರೆಯಲಾಗುತ್ತಿದೆ. ಇದೇ ಮೊದಲ ಬಾರಿಗೆ ನೀರಿನ ಪ್ರಮಾಣ 131 ಮೀಟರ್‌ಗೆ ತಲುಪಿದೆ. ಗೇಟ್ ಅಳವಡಿಸುವುದಕ್ಕೆ ಮುನ್ನ 121.92 ಮೀಟರ್, 2017ರಲ್ಲಿ ಅದನ್ನು ಅಳವಡಿಸಿದ ಬಳಿಕ ಎತ್ತರ 138.72 ಮೀಟರ್ ಆಗಿದೆ.
ಒಡಿಶಾದಲ್ಲಿಯೂ ಬಿರುಸು
ಒಡಿಶಾದ ದಕ್ಷಿಣ ಮತ್ತು ಪಶ್ಚಿಮ ಭಾಗಗಳಲ್ಲಿಯೂ ಮಳೆ ಬಿರುಸು ಗೊಂಡಿದೆ. ಮಳೆ ಸಂಬಂಧಿ ದುರಂತಗಳಲ್ಲಿ 3 ಮಂದಿ ಪ್ರಾಣ ಕಳೆದು ಕೊಂಡಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ. 9 ಜಿಲ್ಲೆಗಳ 1.3 ಲಕ್ಷ ಮಂದಿಗೆ ತೊಂದರೆಯಾಗಿದೆ. ಇಲ್ಲಿ ಇನ್ನೂ 3 ದಿನಗಳ ಕಾಲ ಮಳೆಯಾಗಲಿದೆ.
ಕಾಪ್ಟರ್ ಮೂಲಕ ಆಹಾರ ನೀಡಿಕೆ
ಮಹಾರಾಷ್ಟ್ರದ ಮಳೆ ಪೀಡಿತ ಜಿಲ್ಲೆಗಳಲ್ಲಿ ರಕ್ಷಣಾ ಕಾರ್ಯ ಬಿರುಸಾಗಿದೆ. ಸಾಂಗ್ಲಿ ಜಿಲ್ಲೆಯಲ್ಲಿ ಹೆಲಿಕಾಪ್ಟರ್ ಮೂಲಕ ಆಹಾರದ ಪೊಟ್ಟಣಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ. ಗ್ರಾಮೀಣ, ನಗರ ಪ್ರದೇಶಗಳಲ್ಲಿ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವ ಕೆಲಸ ಮುಂದುವರಿದಿದೆ. 2 ಲಕ್ಷಕ್ಕಿಂತಲೂ ಅಧಿಕ ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.