ಬೆಳ್ತಂಗಡಿ: ನಲುಗಿದ ಪಶ್ಚಿಮಘಟ್ಟ ಶ್ರೇಣಿ
ಜಲನರ್ತನಕ್ಕೆ ಜನಜೀವನ ಸ್ತಬ್ಧ ; 250 ಕೋಟಿ ರೂ. ಅಂದಾಜು ನಷ್ಟ
Team Udayavani, Aug 11, 2019, 5:44 AM IST
ನೆರೆ ನೀರಿನಿಂದ ಹಾನಿಗೊಳಗಾಗಿರುವ ಸೇತುವೆಯನ್ನು ಶಾಸಕರು ಪರಿಶೀಲಿಸಿದರು.
ಬೆಳ್ತಂಗಡಿ: ಕಂಡುಕೇಳರಿಯದ ವರುಣನ ಅರ್ಭಟಕ್ಕೆ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಬೆಳ್ತಂಗಡಿ ತಾಲೂಕಿನ ಜನಜೀವನ ಅಕ್ಷರಶಃ ಸ್ತಬ್ಧವಾಗಿದೆ.
ಸಾಲು ಸಾಲು ಬೆಟ್ಟಗಳು ಬಿರುಕು; ನದಿ- ಹಳ್ಳಗಳು ಉಕ್ಕಿ ಹರಿಯುವ ರಭಸಕ್ಕೆ ಗದ್ದೆ, ತೋಟ ಮನೆ ಸಹಿತ ಎಲ್ಲವೂ ನೆಲಸಮ; ಸೇತುವೆ ಸಂಪರ್ಕ ಕಡಿತ; ಸಾಲು ಸಾಲು ವಿದ್ಯುತ್ ಕಂಬ ಧರಾಶಾಯಿ; ಧರೆಗುರುಳಿದ ಸಾವಿರಾರು ಮರಗಳು… ಇದು ಪ್ರಸಕ್ತ ಬೆಳ್ತಂಗಡಿ ಚಿತ್ರಣ.
ದಿಡುಪೆ, ಮಲವಂತಿಗೆ ಗ್ರಾಮಗಳ 100ಕ್ಕೂ ಹೆಚ್ಚು ಮನೆಗಳು ಜೀವಭಯದಿಂದ ವಾಸಿಸುತ್ತಿದ್ದು, ಗುಡ್ಡದ ಸಾಲು ಅಲ್ಲಲ್ಲಿ ಬಿರುಕು ಬಿಡುತ್ತಿವೆ. ಸ್ಥಳೀಯರು ಊರು ಬಿಟ್ಟು ಸಂಬಂಧಿಕರ ಮನೆಗೆ ತೆರಳುತ್ತಿದ್ದಾರೆ. ದಿಡುಪೆ, ಆನಡ್ಕ, ಎರ್ಮಾಯಿ, ಬಡಾಜೆಗಳಲ್ಲಿ ನೆರೆ ನೀರು ರೌದ್ರನರ್ತನವಾಡುತ್ತಿದ್ದು, ಪಶ್ಚಿಮ ಘಟ್ಟದ ಬೆಟ್ಟಗಳ ಸಾಲಿಂದ ಹರಿದು ಬರುತ್ತಿರುವ ಮಣ್ಣು ಸಾವಿರಾರು ಮರಗಳನ್ನು ಆಪೋಷನ ತೆಗೆದುಕೊಳ್ಳತ್ತಾ ನದಿ ಅಂಚನ್ನು ಬಯಲಾಗಿಸಿದೆ.
ಬಾಂಜಾರುಮಲೆ ಸೇತುವೆ ಕುಸಿತ
47 ಆದಿವಾಸಿ ಕುಟುಂಬಗಳಿಗೆ ಏಕೈಕ ಸಂಪರ್ಕವಾಗಿರುವ ಬಾಂಜಾರುಮಲೆ ಸೇತುವೆ ಸಂಪರ್ಕ ಸೇತುವೆ ಕೊಚ್ಚಿಹೋಗಿದೆ. ಆಹಾರ ಸಾಮಗ್ರಿ ಒದಗಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೂಂದೆಡೆ ಸುಮಾರು 40 ಆದಿವಾಸಿ ಸೇರಿದಂತೆ 50ಕ್ಕೂ ಅಧಿಕ ಕುಟುಂಬಗಳಿರುವ ಪ್ರದೇಶವನ್ನು ಸಂಪರ್ಕಿಸುವ ಅನಾರು ಸೇತುವೆ ಸಂಪೂರ್ಣ ಕುಸಿದಿದೆ.
ಮೈದಾನವಾಗಿ ಬದಲಾದ ಚಾರ್ಮಾಡಿ-ಅಂತರಬೈಲು
ಅಂತರಬೈಲು ಪ್ರದೇಶದಲ್ಲಿ ಘಾಟಿ ಪ್ರದೇಶದಿಂದ ಮಣ್ಣು, ಕಲ್ಲು ಮಿಶ್ರಿತ ನೆರೆ ನೀರಿನೊಂದಿಗೆ ಬೃಹತ್ ಮರಗಳು ಕೆಳ ಪ್ರದೇಶಗಳಿಗೆ ನುಗ್ಗಿದೆ. ಚಾರ್ಮಾಡಿ ಹೊಸಮಠ ಸೇತುವೆ ಕುಸಿದು ನೂರಾರು ಮನೆಗಳಿರುವ ಪ್ರದೇಶ ಸಂಪರ್ಕ ಕಡಿತಗೊಂಡು ದ್ವೀಪದಂತಾಗಿದೆ. ಸುತ್ತಮುತ್ತ 100 ಎಕರೆಗೂ ಅಧಿಕ ಕೃಷಿ ಪ್ರದೇಶಗಳು ನೀರಿನಲ್ಲಿ ಕೊಚ್ಚಿ ಹೋಗಿ ಮೈದಾನವಾಗಿದೆ. 50ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗುತ್ತಿದೆ.
ಚಾರ್ಮಾಡಿ ಘಾಟಿ ಕುಸಿತ
ಕುಸಿಯುತ್ತಿರುವ ಚಾರ್ಮಾಡಿ ಪ್ರದೇಶದಿಂದ ಘಾಟಿ ರಸ್ತೆ ಸಂಪರ್ಕ ಕಡಿತಗೊಂಡು ಒಂಬತ್ತನೇ ತಿರುವಿನಿಂದ 8 ಕಿ.ಮೀ. ಕಾಡು ಸುತ್ತಿ ಏನಪೋಯ ಎಸ್ಟೇಟ್ ಒಳರಸ್ತೆಯಿಂದ ಪೇಟೆ ತಲುಪಬೇಕಿದೆ. ಇಲ್ಲಿರುವ ಸೇತುವೆಗಳೆಲ್ಲ ಬ್ರಿಟಿಷರ ಕಾಲದವು.
ಚಾರ್ಮಾಡಿಯಲ್ಲಿ ಸುಮಾರು ಹತ್ತು ಮನೆಗಳು ಸಂಪೂರ್ಣ ನೆಲಸಮವಾಗಿವೆ. ಕೆಲವು ಪ್ರದೇಶಗಳಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
-25 ಸಾವಿರ ಅಡಿಕೆ, 5 ಸಾವಿರ ತೆಂಗು, 10 ಸಾವಿರ ರಬ್ಬರ್ ಗಿಡ ನಾಶ
-500 ಮನೆ, 20 ಸೇತುವೆ, 50 ರಸ್ತೆ ಸಂಪೂರ್ಣ ಹಾನಿ
-ಕುಕ್ಕಾವು, ಹೊಸಮಠ, ಬಾಂಜಾರುಮಲೆ, ಅನಾರು ಸೇತುವೆ ಸಂಪರ್ಕ ಕಡಿತ
-ಕಿಲ್ಲೂರು, ಕಾಜೂರು, ದಿಡುಪೆ ಭಾಗದ 3 ಸೇತುವೆಗಳಿಗೆ ಹಾನಿ
-ಅಂದಾಜು 250 ಕೋಟಿ ರೂ. ನಷ್ಟ
-ಪ್ರಕೃತಿ ವಿಕೋಪ ಪರಿಹಾರ ನಿಧಿ ಅಲ್ಲದೆ ಬೇಕಿದೆ ವಿಶೇಷ ಪರಿಹಾರ ಪ್ಯಾಕೇಜ್
-ಕೊಡಗು, ಚಾಮರಾಜ ನಗರದ ಬಳಿಕ ದೊಡ್ಡ ಪ್ರದೇಶ ಬೆಳ್ತಂಗಡಿಗೆ ಹಾನಿ
ಕಂಡರಿಯದ ಭೀಕರ ಪ್ರವಾಹ
ತಾಲೂಕಿನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಜನ ಕಂಡರಿಯದಂತಹ ಪ್ರವಾಹ ಆಗಿದೆ. ಇದರಿಂದಾಗಿ ತಾಲೂಕಿನಲ್ಲಿ ಮುನ್ನೂರಕ್ಕೂ ಹೆಚ್ಚು ಮನೆಗಳು ನೆಲಸಮಗೊಂಡರೆ ಸಾವಿರಾರು ಮನೆಗಳು ಭಾಗಶಃ ಕುಸಿತಗೊಂಡಿದೆ. ಹತ್ತಾರು ಸೇತುವೆಗಳು, ಕಿಂಡಿ ಅಣೆಕಟ್ಟು, ರಸ್ತೆಗಳು ಹಾನಿಗೊಳಗಾಗಿವೆ
– ಹರೀಶ್ ಪೂಂಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.