ನಿರಂತರ ಮಳೆಗೆ ನಲುಗಿದ ಜನ!
ಮೂವರ ಸಾವು•ಹಲವು ಗ್ರಾಮಗಳು ಜಲಾವೃತ •ದೇವಾಲಯ-ಚರ್ಚ್- ಮಸೀದಿ- ಮನೆಗಳಿಗೆ ನುಗ್ಗಿದ ನೀರು
Team Udayavani, Aug 11, 2019, 11:38 AM IST
ಚಿಕ್ಕಮಗಳೂರು: ಭದ್ರಾ ನದಿ ನೀರು ಖಾಂಡ್ಯದ ಮಾರ್ಕಂಡೇಶ್ವರ ದೇವಾಲಯಕ್ಕೆ ನುಗ್ಗಿದೆ.
ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಹಾನಿಯ ಪ್ರಮಾಣವೂ ದಿನದಿಂದ ದಿನಕ್ಕೆ ಏರುತ್ತಿದೆ. ಮಳೆಯಿಂದಾಗಿ ಶನಿವಾರ ಜಿಲ್ಲೆಯಲ್ಲಿ ಮೂವರು ಮೃತಪಟ್ಟಿದ್ದಾರೆ. ಹೇಮಾವತಿ ನದಿ ಉಕ್ಕಿ ಹರಿಯುತ್ತಿದ್ದು, ಹಲವು ಗ್ರಾಮಗಳು ಜಲಾವೃತವಾಗಿದೆ.
ಮೂಡಿಗೆರೆ ತಾಲೂಕಿನಾದ್ಯಂತ 120ಕ್ಕೂ ಹೆಚ್ಚು ಜನರು ನಡುಗುಡ್ಡೆಯಲ್ಲಿ ಶುಕ್ರವಾರ ಸಂಜೆಯಿಂದ ಸಿಲುಕಿದ್ದಾರೆ. ಚಿಕ್ಕಮಗಳೂರು ತಾಲೂಕಿನ ವಿವಿಧೆಡೆಗಳಲ್ಲಿ ಹಲವು ಮನೆಗಳು ಕುಸಿದು ಬಿದ್ದಿವೆ. ಖಾಂಡ್ಯದಲ್ಲಿ ಭದ್ರಾ ನದಿ ದೇವಾಲಯ, ಚರ್ಚ್, ಮಸೀದಿ ಹಾಗೂ ಮನೆಗಳಿಗೆ ನುಗ್ಗಿದೆ.
ಮೂಡಿಗೆರೆ ತಾಲೂಕಿನ ಹೇಮಾವತಿ ನದಿಯಲ್ಲಿ ವಿಪರೀತ ಪ್ರವಾಹ ಉಂಟಾಗಿ ಹಲವು ಗ್ರಾಮಗಳು ಜಲಾವೃತಗೊಂಡಿವೆ. ಬಾಳೂರು ಹೋಬಳಿಯ ಚನ್ನಗಡ್ಲು ಗ್ರಾಮದಲ್ಲಿ 20, ದುರ್ಗದಹಳ್ಳಿಯಲ್ಲಿ 25, ಬಲಿಗೆಯಲ್ಲಿ 20, ಸುಂಕಸಾಲೆಯಲ್ಲಿ 25 ಹಾಗೂ ಹಿರೇಬೈಲು- ಮಲ್ಲೇಶನಗುಡ್ಡದಲ್ಲಿ ಸುಮಾರು 30 ಹಾಗೂ ಮಲೆಮನೆಯಲ್ಲಿ 9 ಜನ ಸಿಲುಕಿದ್ದಾರೆ. ಈ ಪ್ರದೇಶಗಳಿಗೆ ಬೋಟಿನಲ್ಲಿ ಹೋಗುವುದೂ ಕಷ್ಟಕರವಾಗಿದೆ. ಶುಕ್ರವಾರ ಸಂಜೆಯಿಂದಲೂ ಎಲ್ಲರೂ ನಡುಗುಡ್ಡೆಯಲ್ಲಿಯೇ ಸಿಲುಕಿದ್ದಾರೆ.
ಕತ್ತಲಲ್ಲಿ ಕಾಲ ಕಳೆದ ಜನತೆ: ಹೇಮಾವತಿ ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕ ಶ್ರೀವತ್ಸನಿಗಾಗಿ ಹುಡುಕಾಟ ಮುಂದುವರಿದಿದ್ದು, ಪತ್ತೆಯಾಗಿಲ್ಲ. ಮೂಡಿಗೆರೆ ತಾಲೂಕಿನಾದ್ಯಂತ ಮಳೆಯೊಂದಿಗೆ ಬೀಸಿದ ಭಾರೀ ಗಾಳಿಯಿಂದ ಸಾಕಷ್ಟು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು,ಹಲವು ಗ್ರಾಮಗಳು ವಿದ್ಯುತ್ ಸಂಪರ್ಕವಿಲ್ಲದೆ ಜನತೆ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ.
ಗುಡ್ಡ ಕುಸಿತ: ಬಾಳೂರು-ಕಳಸ ಮಾರ್ಗ ಮಧ್ಯೆ ಹಲವೆಡೆ ಗುಡ್ಡ ಕುಸಿದಿದ್ದು, ನೂರಾರು ಎಕರೆ ಕಾಫಿ, ಅಡಕೆ ತೋಟಗಳು ಹಾಳಾಗಿವೆ.ತೀವ್ರ ಮಳೆಯಿಂದ ಕಳಸ-ಹೊರನಾಡು ರಸ್ತೆ ಕೊಚ್ಚಿ ಹೋಗಿದೆ. ಕಳಸದಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಟಾಳೆ ಸೇತುವೆ ಮೇಲೆ 4 ದಿನಗಳಿಂದ ಭದ್ರಾ ನದಿ ಹರಿಯುತ್ತಿದ್ದು ಮುಳುಗಿದೆ.
ಮನೆಗಳು ಕುಸಿತ: ಚಿಕ್ಕಮಗಳೂರು ತಾಲೂಕಿನಲ್ಲಿ ಮಳೆಯ ಅಬ್ಬರ ಶನಿವಾರ ಸ್ವಲ್ಪ ಕಡಿಮೆಯಾಗಿತ್ತಾದರೂ ಹಿರೇಮಗಳೂರು ಭಾಗದಲ್ಲಿ 2 ಮನೆಗಳು ಬಿದ್ದು ಹೋಗಿವೆ. ಕಳಸ, ಬಾಳೂರು ಭಾಗದಲ್ಲೂ ಹತ್ತಾರು ಮನೆಗಳು ಕುಸಿದು ಬಿದ್ದಿವೆ.
100ಕ್ಕೂ ಹೆಚ್ಚು ಜನರ ರಕ್ಷಣೆ: ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವ ಜಿಲ್ಲಾಡಳಿತ ಖಾಂಡ್ಯದ 100ಕ್ಕೂ ಹೆಚ್ಚು ಜನರನ್ನು ರಕ್ಷಿಸಿ ಸಂಗಮೇಶ್ವರಪೇಟೆಯ ವಿದ್ಯಾರ್ಥಿ ನಿಲಯಕ್ಕೆ ಕಳುಹಿಸಿದೆ. ಖಾಂಡ್ಯ ಗ್ರಾಮದೊಳಗೆ ಭದ್ರಾ ನದಿ ಹರಿದಿದ್ದು, ಖಾಂಡ್ಯ ದೇವಾಲಯ, ಮಸೀದಿ, ಚರ್ಚ್‌ಗಳು ಸೇರಿದಂತೆ ಹಲವು ಮನೆಗಳಿಗೆ ನೀರು ನುಗ್ಗಿದೆ.
ಸಂಪರ್ಕ ಕಡಿತ: ನರಸಿಂಹರಾಜಪುರ ತಾಲೂಕಿನಲ್ಲೂ ನಿರಂತರ ಮಳೆಯಾಗುತ್ತಿದ್ದು, ಹೊನ್ನೆಕುಡಿಗೆ ಗ್ರಾಪಂ ವ್ಯಾಪ್ತಿಯ ಕೂಸಗಲ್ ಸಾಯದ ಗುರುಮೂರ್ತಿ ಎಂಬುವರ ಮನೆಗೆ ನೀರು ನುಗ್ಗಿದೆ. ತಾಲೂಕಿನ ಬಾಳೆಹೊನ್ನೂರಿನ ಬಳಿ ಭದ್ರಾ ನದಿಯಲ್ಲಿ ಪ್ರವಾಹ ಉಂಟಾಗಿದೆ. ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾಗಿದ್ದು, ಕಳಸ-ಬಾಳೆಹೊನ್ನೂರು ರಸ್ತೆ ಜಲಾವೃತವಾಗಿದೆ. ತಾಲೂಕಿನ ಕಡಹಿನಬೈಲು ಗ್ರಾಪಂ ವ್ಯಾಪ್ತಿಯ ಶೆಟ್ಟಿಕೊಪ್ಪ ಗಾಂಧಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಜಲಾವೃತವಾಗಿದ್ದು, ಸಂಪರ್ಕ ಕಡಿತಗೊಂಡಿದೆ.
ಊಟದ ಹಾಲ್ಗೂ ನುಗ್ಗಿದ ನೀರು: ಶೃಂಗೇರಿ ತಾಲೂಕಿನಲ್ಲೂ ಮಳೆಯ ಆರ್ಭಟ ಮುಂದುವರಿದಿದ್ದು, ತುಂಗಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಶೃಂಗೇರಿ ಶಂಕರ ಮಠದ ಗುರುಭವನ ಹಾಗೂ ಗಾಂಧಿ ಭವನಕ್ಕೆ ನದಿ ನೀರು ನುಗ್ಗಿದೆ. ಮಠದ ಊಟದ ಹಾಲ್ಗೂ ನೀರು ನುಗ್ಗಿದೆ. ಯಾತ್ರಿ ನಿವಾಸಕ್ಕೂ ನದಿ ನೀರು ನುಗ್ಗಿದ್ದು, ನರಸಿಂಹ ವನಕ್ಕೆ ತೆರಳುವ ಮಾರ್ಗ ನೀರಿನಲ್ಲಿ ಮುಳುಗಿದೆ. ತಾಲೂಕಿನ ವಿವಿಧೆಡೆಗಳಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿವೆ. ಕಡೂರು ತಾಲೂಕಿನಲ್ಲಿ ಮಳೆ ಕಡಿಮೆಯಾಗಿದೆ. ಆದರೆ, ಕಳೆದ ಕೆಲದಿನಗಳಿಂದ ಸುರಿದ ಮಳೆಯಿಂದ ಇಂದು ಬೀರೂರು ಹಾಗೂ ಕಡೂರಿನಲ್ಲಿ ಹಲವು ಮನೆಗಳು ಕುಸಿದು ಬಿದ್ದಿವೆ. ತರೀಕೆರೆ ತಾಲೂಕಿನಲ್ಲೂ ಸಾಧಾರಣ ಮಳೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.