ಸಬ್‌ಕೋ “ಸಹಮತಿ’ ದೇ ಭಗವಾನ್!
Team Udayavani, Aug 12, 2019, 6:53 AM IST
ಕೇಂದ್ರ ಸರ್ಕಾರ, “ಸಹಮತಿ’ ಎಂಬ ಹೊಸ ಸವಲತ್ತೂಂದನ್ನು ಪರಿಚಯಿಸುತ್ತಿದೆ. ಸಾಲ ಪಡೆಯುವುದು, ಮ್ಯೂಚುವಲ್ ಫಂಡ್ ಖರೀದಿಸುವುದು ಸೇರಿದಂತೆ, ಯಾವುದೇ ಹಣಕಾಸು ವಹಿವಾಟುಗಳನ್ನು ಸುಲಭವಾಗಿಸುವುದು ಇದರ ಉದ್ದೇಶ.
ಒಂದು ಸಾಲ ತೆಗೆದುಕೊಳ್ಳಲು ಹೋಗಬೇಕು ಎಂದರೆ, ಕನಿಷ್ಠ 100 ಪುಟದ ಕಾಗದ ಪತ್ರಗಳಾದರೂ ವರ್ಗಾವಣೆಯಾಗುತ್ತವೆ. ಸಾಲಗಾರರು ತಮ್ಮ ದಾಖಲೆಗಳನ್ನೆಲ್ಲ ಫೋಟೋ ಕಾಪಿ ತೆಗೆದು ಬ್ಯಾಂಕಿಗೆ ಕೊಡಬೇಕು. ಬ್ಯಾಂಕ್ ಕಡಿಮೆಯೆಂದರೂ 40-50 ಪುಟಗಳ ದಾಖಲೆಗಳಿಗೆ ಸಹಿ ಮಾಡಿಸಿಕೊಳ್ಳುತ್ತದೆ. ಬ್ಯಾಂಕ್‌ನಿಂದ ಸಾಲ ಪಡೆಯುವುದು ನಿಜಕ್ಕೂ ದೀರ್ಘಾವಧಿಯ ಕಾರ್ಯಕ್ರಮ. ನಮ್ಮ ಕೆಲಸವನ್ನೆಲ್ಲ ಬಿಟ್ಟು ಬ್ಯಾಂಕ್‌ಗೆ ಹೋಗಬೇಕು. ಅಲ್ಲಿ ಗಂಟೆಗಟ್ಟಲೆ ಕಾದು, ಅಲ್ಲಿನ ಎಕ್ಸಿಕ್ಯುಟಿವ್‌ಗಳಿಗೆ ದಾಖಲೆ ನೀಡಬೇಕು. ಪ್ರತಿ ಬ್ಯಾಂಕ್‌ಗಳು, ಪ್ರತಿ ಸಾಲಗಾರನೂ ಇಷ್ಟೂ ಕೆಲಸವನ್ನು ಮಾಡಲೇಬೇಕು. ಈಗ ಡಿಜಿಟಲ್ ವ್ಯವಸ್ಥೆ ಬಂದಿದೆ. ಆದರೂ ನಾವು ಯಾಕೆ ಈ ಅಪ್ಪ ನೆಟ್ಟ ಆಲದ ಮರಕ್ಕೇ ಜೋತು ಬೀಳುತ್ತೇವೆ ಎಂಬ ಪ್ರಶ್ನೆ ಬಂದಾಗಲೇ ಸರ್ಕಾರ ಹೊಸದೊಂದು ವ್ಯವಸ್ಥೆಯನ್ನು ರೂಪಿಸಲು ಹೆಜ್ಜೆ ಇಟ್ಟಿದೆ.
“ಸಹಮತಿ’ ಎಂಬ ಹೊಸ ವ್ಯವಸ್ಥೆಯೊಂದನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ. ಇದರಲ್ಲಿ, ಹಣಕಾಸು ಡೇಟಾವನ್ನು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯೊಂದಿಗೆ ಹಂಚಿಕೊಳ್ಳಬಹುದು. ಮೊದಲು ಇದನ್ನು ಹಣಕಾಸು ವ್ಯವಸ್ಥೆಯಲ್ಲಿ ಮಾತ್ರ ಬಳಸಲಾಗುತ್ತದೆ. ಅಂದರೆ ಸಾಲ ಪಡೆಯುವುದು, ಮ್ಯೂಚುವಲ್ ಫಂಡ್ ಖರೀದಿಸುವುದು ಸೇರಿದಂತೆ, ಯಾವುದೇ ಹಣಕಾಸು ವಹಿವಾಟಿಗೆ ಇದನ್ನು ಬಳಸಬಹುದು. ನಂತರದ ಹಂತದಲ್ಲಿ ಟೆಲಿಕಾಂ, ಆರೋಗ್ಯ ಸೇವೆ ಹಾಗೂ ಇತರ ವಲಯಗಳಲ್ಲೂ ಬಳಸಲಾಗುತ್ತದೆ. ಆರ್‌ಬಿಐ, ಸೆಬಿ, ಐಆರ್‌ಡಿಎ ಮತ್ತು ಪಿಎಫ್ ಆರ್‌ಡಿಎ ಮೂರೂ ಸಂಸ್ಥೆಗಳು ಈ ಯೋಜನೆಯಲ್ಲಿ ಕೈಜೋಡಿಸಿವೆ.
ಹೇಗೆ ಕೆಲಸ ಮಾಡುತ್ತದೆ?
ಸಹಮತಿ ಎಂಬುದು ಒಂದು ಅಕೌಂಟ್ ಅಗ್ರಿಗೇಟರ್ ರೀತಿ ಕೆಲಸ ಮಾಡುತ್ತದೆ. ಅಂದರೆ, ನಾವು ಒಂದು ಬ್ಯಾಂಕ್‌ನಿಂದ ಸಾಲ ತೆಗೆದುಕೊಳ್ಳಬೇಕಿದೆ ಅಂದುಕೊಳ್ಳೋಣ. ಆ ಸಾಲಕ್ಕೆ ನಾವು ಎಷ್ಟು ಅರ್ಹ, ನಮಗೆ ಮರುಪಾವತಿಯ ಸಾಮರ್ಥ್ಯ ಇದೆಯಾ ಎಂಬುದನ್ನೆಲ್ಲಾ ಸಾಬೀತು ಮಾಡಲು ನಾವು ಒಂದಷ್ಟು ದಾಖಲೆಯನ್ನು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗೆ ನೀಡಬೇಕಾಗುತ್ತದೆ. ಅದೇ ರೀತಿ, ಸಾಲವನ್ನು ಮಂಜೂರು ಮಾಡುವುದಕ್ಕೂ ಮೊದಲು ಬ್ಯಾಂಕ್ ನಮ್ಮ ಹಣಕಾಸು ಮಾಹಿತಿಯನ್ನೂ ಪರಿಶೀಲಿಸುತ್ತದೆ. ಬ್ಯಾಂಕ್ ಖಾತೆ ಡೇಟಾ, ಸಂಬಳ ಮಾಹಿತಿ, ಈ ಹಿಂದೆ ಯಾವುದೇ ಸಾಲವನ್ನು ಪಡೆದಿದ್ದರೆ ಅದನ್ನು ಸರಿಯಾಗಿ ಪಾವತಿ ಮಾಡಲಾಗಿದೆಯೇ ಎಂಬುದನ್ನೆಲ್ಲ ಬ್ಯಾಂಕ್‌ಗಳು ವಿವಿಧ ಮೂಲಗಳಿಂದ ಸಂಗ್ರಹಿಸಿ ಪರಿಶೀಲಿಸುತ್ತವೆ. ಈ ಪ್ರಕ್ರಿಯೆ ಕನಿಷ್ಠ ಒಂದೆರಡು ವಾರಗಳಾದರೂ ತೆಗೆದುಕೊಳ್ಳುತ್ತದೆ.
ಆದರೆ ಸಹಮತಿಯಲ್ಲಿ ಈ ಎಲ್ಲ ಮಾಹಿತಿಯೂ ಒಂದೇ ಕಡೆ ಲಭ್ಯವಿರುತ್ತವೆ. ಇದರಲ್ಲಿ ನಮ್ಮ ಬ್ಯಾಂಕ್ ಖಾತೆಯ ಮಾಹಿತಿ, ವಿಮೆ, ಮ್ಯೂಚುವಲ್ ಫಂಡ್‌ಗಳು ಮತ್ತು ಆದಾಯ ತೆರಿಗೆ ಮಾಹಿತಿ ಇರುತ್ತದೆ. ನಾವು ಈ ಪೈಕಿ ಯಾವುದೇ ಒಂದು ಕ್ಷೇತ್ರದ ಕಂಪನಿಯಲ್ಲಿ ಖಾತೆ ತೆರೆಯಲು ಬಯಸಿದರೆ ಅಥವಾ ಒಂದು ವಿಮೆ ಖರೀದಿಸಬೇಕು ಎಂದಾದಲ್ಲಿ ಆ ಕಂಪನಿಯು ನಮಗೆ ರಿಕ್ವೆಸ್ಟ್ ಕಳಿಸುತ್ತದೆ. ಅದಕ್ಕೆ ನಾವು ಅನುಮತಿ ನೀಡಿದರೆ ಸಾಕು. ನಮ್ಮ ಎಲ್ಲ ಹಣಕಾಸು ಮಾಹಿತಿಯನ್ನೂ ಅದು ಪರಿಶೀಲಿಸಿಕೊಂಡು ನಾವು ಅದಕ್ಕೆ ಅರ್ಹರೋ ಅಥವಾ ಅಲ್ಲವೋ ಎಂಬುದನ್ನು ನಿರ್ಧರಿಸುತ್ತದೆ.
ಯುಪಿಐ ನಂತರದ ಮಹತ್ವದ ಯೋಜನೆ
ಇದು ಯುಪಿಐ ಎಂಬ ಕ್ರಾಂತಿಕಾರಿ ವ್ಯವಸ್ಥೆಯನ್ನು ಹಣಕಾಸು ಕ್ಷೇತ್ರದಲ್ಲಿ ಜಾರಿಗೆ ತಂದ ನಂತರ ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಅತ್ಯಂತ ಮಹತ್ವದ ಕ್ರಮ. ಯುಪಿಐ ಈಗಾಗಲೇ ದಿನನಿತ್ಯ ಜನರ ಹಣಕಾಸು ವಹಿವಾಟುಗಳಿಗೆ ಆಸರೆಯಾಗಿದೆ. ಸಣ್ಣ ಸಣ್ಣ ಹಣಕಾಸು ವಹಿವಾಟನ್ನು ತ್ವರಿತವಾಗಿ ಮಾಡಲು ಯುಪಿಐ ಜನಸಾಮಾನ್ಯರಿಗೆ ನೆರವು ಮಾಡಿಕೊಟ್ಟಿದೆ. ಇದೇ ರೀತಿ, ಸಹಮತಿ ಕೂಡ ಮುಂದಿನ ಕೆಲವು ವರ್ಷಗಳಲ್ಲಿ ಅತ್ಯಂತ ಮಹತ್ವದ ವ್ಯವಸ್ಥೆಯಾಗಿ ರೂಪುಗೊಳ್ಳಲಿದೆ ಎಂದು ವಿತ್ತತಜ್ಞರು ಅಭಿಪ್ರಾಯಪಟ್ಟಿ¨ªಾರೆ.
ನಮ್ಮ ಮಾಹಿತಿ ನಮ್ಮ ಕೈಯÇÉೇ!
ಸಹಮತಿ ವ್ಯವಸ್ಥೆಯ ಕುರಿತು ಇರುವ ಮೊದಲ ಆಕ್ಷೇಪವೆಂದರೆ ನಮ್ಮ ಬ್ಯಾಂಕ್ ಖಾತೆ ವಿವರಗಳೆಲ್ಲ ಮೂರನೆಯವರಿಗೆ ಗೊತ್ತಾದರೆ ನಮ್ಮ ಗೌಪ್ಯತೆಯ ಕಥೆ ಏನಾದೀತು ಎಂಬುದು. ಅಲ್ಲದೆ, ಬ್ಯಾಂಕ್ ಖಾತೆ ವಿವರಗಳನ್ನೆಲ್ಲ ಮತ್ಯಾರೋ ತೆಗೆದುಕೊಂಡು ಸಾಲ ಕೊಡುವ ನೆಪದಲ್ಲಿ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನೂ ತೆಗೆದುಕೊಂಡು ಬಿಟ್ಟರೆ ಎಂಬ ಆತಂಕವನ್ನು ಹಲವರು ವ್ಯಕ್ತಪಡಿಸುತ್ತಾರೆ.
ಆದರೆ, ಇದರಲ್ಲಿ ಬ್ಯಾಂಕ್ ಖಾತೆಯ ವಿವರಗಳು ಅಂದರೆ ನಮ್ಮಬ್ಯಾಂಕ್ ಖಾತೆಯ ಆನ್‌ಲೈನ್ ಪಾಸ್‌ವರ್ಡ್‌ಗಳಾಗಲಿ ಅಥವಾ ನಮ್ಮ ಖಾತೆಯಿಂದ ಇನ್ನೊಬ್ಬರ ಖಾತೆಗೆ ಹಣ ವರ್ಗಾವಣೆಯ ಅವಕಾಶವನ್ನಾಗಲಿ ನೀಡುವುದಿಲ್ಲ. ಬದಲಿಗೆ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ಮಾತ್ರ ಸಿಗುತ್ತವೆ. ಅದೇ ರೀತಿ, ವಿಮೆ ಹಾಗೂ ಮ್ಯೂಚುವಲ್ ಫಂಡ್‌ಗಳ ವಿಚಾರದಲ್ಲೂ ಕೂಡ. ಎಷ್ಟು ಮೊತ್ತದ ಯಾವ ವಿಮೆಯನ್ನು ನಾವು ಹೊಂದಿದ್ದೇವೆ ಮತ್ತು ಯಾವ ಕಂಪನಿಯ ಎಷ್ಟು ಮೊತ್ತದ ಮ್ಯೂಚುವಲ್ ಫಂಡ್‌ಗಳನ್ನು ನಾವು ಹೊಂದಿದ್ದೇವೆ ಎಂಬ ವಿವರ ಮಾತ್ರ ಇದರಲ್ಲಿರುತ್ತದೆ. ಆ ಮ್ಯೂಚುವಲ್ ಫಂಡ್ ಖಾತೆಗೆ ಪ್ರವೇಶ ಅವಕಾಶವನ್ನು ನಾವು ಸಾಲ ಪಡೆಯುತ್ತಿರುವ ಬ್ಯಾಂಕ್‌ಗಳಾಗಲೀ ಅಥವಾ ಹಣಕಾಸು ಸಂಸ್ಥೆಗಳಾಗಲೀ ಪಡೆಯುವುದಿಲ್ಲ.
ಇದೇ ರೀತಿ, ಯಾವ ಮಾಹಿತಿಯನ್ನು ನಾವು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳೊಂದಿಗೆ ಹಂಚಿಕೊಳ್ಳಬೇಕು ಎಂಬುದನ್ನೂ ನಾವೇ ನಿರ್ಧರಿಸಬಹುದು. ಬ್ಯಾಂಕ್ ಖಾತೆ ಮಾಹಿತಿ ಮಾತ್ರ ಸಾಕು ಎಂದಾದರೆ ಅದಷ್ಟನ್ನೇ ನಾವು ಅವರೊಂದಿಗೆ ಹಂಚಿಕೊಳ್ಳಬಹುದು.
ಅಷ್ಟೇ ಅಲ್ಲ, ಎಷ್ಟು ದಿನಗಳವರೆಗೆ ನಮ್ಮ ಮಾಹಿತಿಯನ್ನು ಹಂಚಿಕೊಳ್ಳಬಹುದು ಎಂಬುದನ್ನೂ ನಿರ್ಧರಿಸಬಹುದು. ಅದರ ನಂತರ ಅವರು ನಮ್ಮ ಮಾಹಿತಿಯನ್ನು ನೋಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇದರಲ್ಲಿ ಗೌಪ್ಯತೆಯನ್ನು ನಿರ್ಧರಿಸುವ ಅವಕಾಶವನ್ನೂ ನಮಗೇ ನೀಡಲಾಗಿದೆ.
ಜನಸಾಮಾನ್ಯರಿಗೆ ಏನು ಅನುಕೂಲ?
ಸಹಮತಿ ಎಂಬ ವ್ಯವಸ್ಥೆ, ನಮ್ಮ ಹಣಕಾಸು ಮಾಹಿತಿಯನ್ನು ಒಂದೇ ಕಡೆ ಸಂಗ್ರಹಿಸಲು ಅನುಕೂಲ ಮಾಡುತ್ತದೆ. ಬೇರೆ ಬೇರೆ ವೆಬ್‌ಸೈಟುಗಳಿಂದ ಡೇಟಾ ಸಂಗ್ರಹಿಸಿಕೊಡುವ ಅಗತ್ಯವಿಲ್ಲ. ಈ ಅಗ್ರಿಗೇಟರ್ ವ್ಯವಸ್ಥೆಯಿಂದ ಕೆಲವೇ ನಿಮಿಷಗಳಲ್ಲಿ ಸಾಲ ಪಡೆದುಬಿಡಬಹುದು. ವಿಮೆ ಪಾಲಿಸಿ ಅಥವಾ ಮ್ಯೂಚುವಲ್ ಫಂಡ್ ಖರೀದಿಯಂತೂ ಕೆಲವೇ ನಿಮಿಷಗಳಲ್ಲಿ ನಡೆದುಹೋಗುತ್ತದೆ. ಯಾಕೆಂದರೆ ಇಲ್ಲಿ ಕಾಗದಪತ್ರಗಳ ವರ್ಗಾವಣೆ ಇರುವುದಿಲ್ಲ.
ಆದರೆ ಈ ಸೇವೆಯಲ್ಲಿ ಎಲ್ಲ ಕಂಪನಿಗಳೂ ತೊಡಗಿಸಿಕೊಳ್ಳುವುದು ಕಡ್ಡಾಯವಲ್ಲ. ಅಂದರೆ, ಎಲ್ಲ ವಿಮೆ ಕಂಪನಿಗಳು ಅಥವಾ ಬ್ಯಾಂಕ್‌ಗಳೂ ಇದರಲ್ಲಿ ಲಭ್ಯವಿಲ್ಲದಿರಬಹುದು. ಉದಾಹರಣೆಗೆ, ಯಾವುದಾದರೂ ಕೋ- ಆಪರೇಟಿವ್ ಬ್ಯಾಂಕಿನಲ್ಲಿ ನಮ್ಮ ಖಾತೆ ಇರುತ್ತದೆ ಅಂದುಕೊಳ್ಳೋಣ. ಆ ಕೋ- ಆಪರೇಟಿವ್ ಬ್ಯಾಂಕ್, ಈ ವ್ಯವಸ್ಥೆಗೆ ನೋಂದಣಿ ಮಾಡಿಕೊಳ್ಳದೇ ಇದ್ದರೆ, ಅದರಲ್ಲಿರುವ ನಮ್ಮ ಖಾತೆ ವಿವರಗಳು ಅಗ್ರಿಗೇಟರ್‌ನಲ್ಲಿ ಸಿಗುವುದಿಲ್ಲ.
ಯುಪಿಐ ವ್ಯವಸ್ಥೆ ಆರಂಭವಾದಾಗಲೂ ಕೇವಲ 24 ಬ್ಯಾಂಕುಗಳಷ್ಟೇ “ಸಹಮತಿ’ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದವು. ಕಾಲಕ್ರಮೇಣ ಆ ವ್ಯವಸ್ಥೆ ಜನಪ್ರಿಯವಾಗುತ್ತಿದ್ದಂತೆ, ಎಲ್ಲ ಬ್ಯಾಂಕುಗಳೂ ಈಗ ಯುಪಿಐಗೆ ನೋಂದಣಿ ಮಾಡಿಕೊಂಡಿವೆ. ಎಲ್ಲ ಬ್ಯಾಂಕ್‌ಗಳಿಂದಲೂ ಯುಪಿಐ ಪ್ಲಾಟ್‌ಫಾರಂ ಮೂಲಕ ಹಣಕಾಸು ವಹಿವಾಟು ಮಾಡಬಹುದು.
“ಸಹಮತಿ’ ಯೋಜನೆಯಿಂದ ಜನಸಾಮಾನ್ಯರಿಗಷ್ಟೇ ಅಲ್ಲ, ಸಣ್ಣ ಉದ್ದಿಮೆಗಳಿಗೂ ಅನುಕೂಲ. ಸಾಮಾನ್ಯವಾಗಿ, ಸಣ್ಣ ಉದ್ದಿಮೆಗಳಿಗೆ ತಕ್ಷಣದ ಸಾಲದ ಅಗತ್ಯವಿರುತ್ತದೆ. ಯಾವುದೋ ಟೆಂಡರ್‌ನಲ್ಲಿ ಭಾಗವಹಿಸಲು ಅಥವಾ ಯಾವುದೋ ಸಾಮಗ್ರಿಯನ್ನು ತುರ್ತಾಗಿ ಖರೀದಿಸಲು ಒಂದೆರಡು ದಿನದಲ್ಲಿ ಹಣ ಹೊಂದಿಸುವ ಅಗತ್ಯವಿರುತ್ತದೆ. ಆದರೆ ಸದ್ಯದ ವ್ಯವಸ್ಥೆಯಲ್ಲಿ ಎರಡು ವಾರಕ್ಕೂ ಮೊದಲು ಯಾವ ಹಣಕಾಸು ಸಂಸ್ಥೆಗಳಾಗಲೀ ಅಥವಾ ಬ್ಯಾಂಕ್‌ಗಳಾಗಲೀ ಸಾಲ ನೀಡುವುದಿಲ್ಲ. ಹೀಗಾಗಿ ಜನರು ಲೇವಾದೇವಿದಾರರ ಮೊರೆ ಹೋಗುತ್ತಾರೆ. ಆದರೆ ಸಹಮತಿಯಲ್ಲಿ ಈ ಸಮಸ್ಯೆ ನಿವಾರಣೆಯಾಗುತ್ತದೆ.
ಆರು ಕಂಪನಿಗಳಿಗೆ ಅನುಮತಿ
ಈ ವ್ಯವಸ್ಥೆ ಅಡಿಯಲ್ಲಿ ಅಕೌಂಟ್ ಅಗ್ರಿಗೇಟರ್ ಆಗಿ ಕೆಲಸ ಮಾಡಲು ಆರು ಸಂಸ್ಥೆಗಳಿಗೆ ತಾತ್ವಿಕ ಒಪ್ಪಿಗೆಯನ್ನು ಆರ್‌ಬಿಐ ನೀಡಿದೆ. ಸಿಎಎಂಎಸ್ ಫಿನ್‌ಸರ್ವ್, ಕುಕೀ ಜಾರ್ ಟೆಕ್ನಾಲಜೀಸ್, ಫಿನ್ಸೆಕ್ ಎಎಸೊಲ್ಯುಶನ್ಸ್ ಪ್ರೈವೇಟ್, ಜಿಯೋ ಇನ್ಫೋರ್ಮೇಶನ್ ಸೊಲ್ಯುಶ®Õ…, ನ್ಯಾಷನಲ್ ಇ-ಗವರ್ನೆನ್ಸ್$ ಸರ್ವೀಸಸ್ ಅಸೆಟ್ ಡೇಟಾ ಹಾಗೂ ಯೋಡ್ಲಿà ಫಿನ್‌ಸಾಫ್ಟ್ಗೆ ಆರ್‌ಬಿಐ ಅನುಮತಿ ನೀಡಿದೆ.
ಆರ್‌ಬಿಐ ಸಂಪೂರ್ಣ ಅನುಮತಿ ನೀಡುತ್ತಿದ್ದಂತೆಯೇ ಇವು ಕಾರ್ಯಾಚರಣೆಗೆ ಇಳಿಯುತ್ತವೆ. ಎಲ್ಲ ಬ್ಯಾಂಕ್‌ಗಳ ಜೊತೆಗೂ ಒಪ್ಪಂದ ಮಾಡಿಕೊಂಡು ಅವುಗಳ ಮೂಲಕ ನಮ್ಮ ಮಾಹಿತಿ ಹಂಚಿಕೊಳ್ಳಲು ಅನುಕೂಲ ಒದಗಿಸುತ್ತವೆ.
ಇದು ನಂದನ್ ನಿಲೇಕಣಿಯವರ ಯೋಜನೆ
ಈ ಯೋಜನೆಯನ್ನು ರೂಪಿಸಿದ್ದು ಇನ್ಫೋಸಿಸ್‌ನ ಸಹಸಂಸ್ಥಾಪಕ ನಂದನ್ ನಿಲೇಕಣಿ. ಆಧಾರ್‌ಅನ್ನು ರೂಪಿಸಿದ ನಂತರ ಅವರ ಮಹತ್ವದ ಯೋಜನೆ ಇದು. 2016ರÇÉೇ ಅವರು ಇದನ್ನು ಪ್ರಸ್ತಾಪಿಸಿದ್ದರು. 2016ರÇÉೇ ಆರ್‌ಬಿಐ ಇದಕ್ಕೆ ತಾತ್ವಿಕ ಸಮ್ಮತಿ ನೀಡಿತ್ತು.ಸಾಲ ಹಾಗೂ ಇತರ ಹಣಕಾಸು ಸೇವೆಗಳನ್ನು ಪಡೆಯಲು ಭಾರತೀಯರಿಗೆ ಸುಲಭವಾಗಿ ಸಾಧ್ಯವಾದರೆ ನಿಜವಾದ ಡೇಟಾ ಸಬಲೀಕರಣಕ್ಕೆ ನಾವು ಮಹತ್ವದ ಹೆಜ್ಜೆ ಇಟ್ಟಂತಾಗುತ್ತದೆ. ಈ ನಿಟ್ಟಿನಲ್ಲಿ ಅಕೌಂಟ್ ಅಗ್ರಿಗೇಟರ್ ಮಹತ್ವ ಪಾತ್ರ ವಹಿಸುತ್ತದೆ ಎಂಬುದು ನಂದನ್ ನಿಲೇಕಣಿ ಅವರ ಮಾತು.
“ಒನ್ ಇಂಡಿಯಾ’ ಎಂಬ ಜಾಲತಾಣವನ್ನು ಕಟ್ಟಿ ಬೆಳೆಸಿದ ಬಿ.ಜಿ. ಮಹೇಶ್, ಈ ಸಹಮತಿ ಎಂಬ ಲಾಭರಹಿತ ಪ್ಲಾಟ್‌ಫಾರಂಗೆ ಮುಖ್ಯಸ್ಥರು. ಇದಕ್ಕೆ ತಂತ್ರಜ್ಞಾನ ಅನುಕೂಲವನ್ನು ಐಸ್ಪಿರಿಟ್ ಎಂಬ ಸಂಸ್ಥೆ ಒದಗಿಸಿದೆ. ಇದರ ಅಡಿಯಲ್ಲಿ ಖಾಸಗಿ ಕಂಪನಿಗಳು ಅಕೌಂಟ್ ಅಗ್ರಿಗೇಟರ್‌ಗಳಾಗಿ ಕೆಲಸ ಮಾಡುತ್ತವೆ.
- ಕೃಷ್ಣ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.