“ಗೋಲ್’ಕೀಪರ್ ಆಗಲ್ಲ…
Team Udayavani, Aug 13, 2019, 5:00 AM IST
ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ಅಭಿನಯ, ನಾಟಕ ನಿರ್ದೇಶನ, ಫ್ಯೂಷನ್- ಹೀಗೆ ನಾನಾ ಕ್ಷೇತ್ರಗಳಲ್ಲಿ ಗೆದ್ದು ಬಂದಿರುವ ಪಲ್ಲವಿ ಅರುಣ್ ಅವರಿಗೆ ಇತ್ತೀಚೆಗಷ್ಟೇ ಬಿಸ್ಮಿಲ್ಲಾಖಾನ್ ಯುವ ಪ್ರಶಸ್ತಿ ದೊರೆತಿದೆ. ಅವರ ಕೈ ಹಾಕಿದ ಎಲ್ಲ ಕ್ಷೇತ್ರಗಳಲ್ಲೂ ಯಶಸ್ಸು ಕಂಡಿದ್ದು ಹೇಗೆ ಎಂಬುದನ್ನು ಅವರಿಲ್ಲಿ ಹೇಳಿಕೊಂಡಿದ್ದಾರೆ. ಕೇಳಿಸಿಕೊಳ್ಳಿ.
ಹಿಂದಿನ ಸಾಲಿನ ಹುಡುಗರು ಎಂದರೆ ನಮಗೇನೇನೂ ಭಯವಿಲ್ಲ
ನಮ್ಮಿಂದಾಗದು ಶಾಲೆಗೆ ತೊಂದರೆ ನಮಗೆಂದೆಂದೂ ಜಯವಿಲ್ಲ
“ರಿಜಕ್ಷನ್ ಆಫ್ ಸಕ್ಸಸ್ ಅಂದಾಗೆಲ್ಲ ನನಗೆ ಕೆಎಸ್‌ನ ಅವರ ಈ ಪದ್ಯ ನೆನಪಿಗೆ ಬಂದು ಬಿಡುತ್ತದೆ. ಸಕ್ಸಸ್ ಅನ್ನು ಪಡೆಯಲು ಏನೇನೆಲ್ಲಾ ತ್ಯಾಗ ಮಾಡುತ್ತಾರೆ; ಬಾಪ್‌ರೇ, ನನಗೆ ಈ ರೀತಿ ಆಗೋಲ್ಲಪ್ಪ. ಬದುಕು ನದಿ ಥರ ಹರೀತಾ ಇರಬೇಕು. ಅದಕ್ಕೆ ಮಹತ್ವಾಕಾಂಕ್ಷೆ ಅನ್ನೋ ಸೇತುವೆ ಕಟ್ಟಿ, ಎಲ್ಲೆಂದರಲ್ಲಿ ತಿರುಗಿಸಿಕೊಳ್ಳಬಾರದು ಅನ್ನೋಳು ನಾನು.
ಏನಪ್ಪ ಹೀಗೇಳ್ತಾಳೆ?
ಅರೆ, ಏನಪ್ಪ ಹೀಗೆ ಹೇಳ್ತಾಳೆ ಅಂದ್ಕೋಬೇಡಿ. ಬೇರೆಯವರ ಜೀವನ ಹೇಗೋ ಗೊತ್ತಿಲ್ಲ. ನನ್ನದಂತೂ ಹೀಗೆ. ಬದುಕಿನ ನಿರೀಕ್ಷೆಗಳ ಭಾರ ಹೊರಬಹುದು. ಆದರೆ, ಹೀಗೇ ಬದುಕಬೇಕು, ಜೀವನದಲ್ಲಿ ಹೀಗೇ ಆಗಬೇಕು ಅನ್ನೋ ಭರಪೂರ ಮಹತ್ವಾಕಾಂಕ್ಷೆ ಸೃಷ್ಟಿಸೋ ಒತ್ತಡವನ್ನು ನಿಭಾಯಿಸೋದು ಬಹಳ ಕಷ್ಟ, ಇಂಥ ಒತ್ತಡದ ಬದುಕು ನನಗಾಗಲ್ಲ.
ಇವತ್ತಿನ ಯುವಜ ನಾಂಗವನ್ನು ಗಮನಿಸಿ, ದೊಡ್ಡವರಾದ ಮೇಲೆ ಹೀಗೇ ಆಗಬೇಕು, ಅದಕ್ಕೆ ಈಗಲಿಂದಲೇ ಇವೆಲ್ಲ ಮಾಡಬೇಕು ಅಂತೆಲ್ಲ ಕಣ್ಣ ಮುಂದೆ ಗುರಿಗಳನ್ನು ನೆಟ್ಟುಕೊಂಡು, ಸಂಗೀತ, ಕರಾಟೆ, ಭರತನಾಟ್ಯ, ಚಿತ್ರಕಲೆ ಜೊತೆಗೆ ಕಾಲೇಜು, ಟ್ಯೂಷನ್ ಅಂತೆಲ್ಲ ನಾಲ್ಕಾರು ದೋಣಿಯಲ್ಲಿ ಕಾಲಿಟ್ಟುಕೊಂಡು ಸಮರಾಭ್ಯಾಸ ಮಾಡುತ್ತಿರುತ್ತಾರೆ. ಈ ಒತ್ತಡದಲ್ಲಿ, ತಮ್ಮೊಳಗಿನ ನಿಜವಾದ ಸಾಮರ್ಥ್ಯ ಅರಿಯುವುದಕ್ಕೆ ಆಗುವುದಿಲ್ಲ. ಇದನ್ನೇ ಮಹತ್ವಾಕಾಂಕ್ಷೆಗಳು ಹೇರುವ ಒತ್ತಡ ಅನ್ನೋದು.
“ರಂಗಭೂಮಿಯಲ್ಲಿ ನಟನೆ, ಸ್ಕ್ರಿಪ್ಟ್ ರೈಟಿಂಗ್, ನಾಟಕ ನಿರ್ದೇಶನ, ಹಾಡೋದು, ಸಂಗೀತ ಸಂಯೋಜನೆ, ಅಲ್ಲೆಲ್ಲೋ ಜಾಸ್ ಮ್ಯೂಸಿಕ್ ತಂಡದ ಜೊತೆ ಸೇರೋದು. ಪಲ್ಲವಿ, ನಿಮಗೆ ಇವೆಲ್ಲ ಹೇಗೆ ಒಲೀತು. ಮಲ್ಟಿಟಾಸ್ಕ್ ಹೇಗೆ ಮಾಡ್ತೀರಿ?’- ಹೀಗಂತ ಬಹಳ ಜನ ಪ್ರಶ್ನೆ ಕೇಳಿದ್ದಿದ್ದೆ. ಆಗ ನನ್ನೊಳಗೆ ನಾನು ಇಣುಕಿಕೊಂಡಾಗ ಅಂಥದ್ದೇನು ಇಲ್ಲ ಅನಿಸಿಬಿಡುತ್ತದೆ.
ಏಕೆಂದರೆ, ನಾನು ಬದುಕನ್ನು ಬಹಳ ಸರಳವಾಗಿ ಸ್ವೀಕರಿಸಿದ್ದೇನೆ ಅಷ್ಟೇ. ನನಗೆ ದೊಡ್ಡ ಮಹತ್ವಾಕಾಂಕ್ಷೆಗಳೇನೂ ಇಲ್ಲ. ಹೀಗೆ ಬದುಕುವುದರಲ್ಲಿ ಇರೋ ಸುಖ ಮತ್ಯಾವುದರಲ್ಲೂ ಸಿಗೋಲ್ಲ. ಇದನ್ನು ನೀವು ಪ್ಲಸ್ ಅಂತಲಾದ್ರೂ ತಿಳ್ಕೊಳಿ; ಮೈನಸ್ ಅಂತಲಾದರು ಲೆಕ್ಕ ಮಾಡ್ಕೊಳಿ. ಇದರಿಂದ ನನಗಂತೂ ಪ್ಲಸ್‌ಗಳೇ ಜಾಸ್ತಿ. ಅದು ಹೇಗೆ ಅಂತ ನೀವು ಕೇಳಬಹುದು…
ನಮ್ಮ ಮನೆ ಒಂಥರಾ ಸರ್ವ ಕಲೆಗಳ ತವರು ಮನೆ ಇದ್ದಂತಿತ್ತು. ಅಲ್ಲಿ ಸಂಗೀತ ಕೇಳ್ಳೋದು, ಅಭಿನಯ ಕಾಣೋದು, ಚಿತ್ರಕಲೆ ಕಣ್ಮುಂದೆಯೇ ಇರೋದು, ಸಿನಿಮಾದವರು ಬಂದು ಹೋಗೋರು. ಹೀಗಾಗಿ, ನನಗೆ ಅಭಿನಯ, ಸಂಗೀತ, ಚಿತ್ರಕಲೆ ಎಲ್ಲವೂ ಕಲೆ ಆಗಿತ್ತೇ ವಿನಃ, ಎಲ್ಲವನ್ನೂ ಬೇರ್ಪಡಿಸಿ, ಇದರಲ್ಲಿ ಯಾವುದಾದರೂ ಒಂದು ಹಾದಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಅನ್ನೋ ಗುರಿ ಯಾವತ್ತೂ ಹುಟ್ಟಲಿಲ್ಲ. ಈ ಎಲ್ಲವೂ ಕಲೆಯ ಅಭಿವ್ಯಕ್ತಿಯ ಮಾಧ್ಯಮ ಅನ್ನೋದು ಮಾತ್ರ ನನ್ನ ತಲೆಯೊಳಗಿದ್ದದ್ದು.
ಒಂದು ಪಕ್ಷ ನಾನು ಸಂಗೀತದಲ್ಲಿ ಬಹಳ ಮುಂದೆ ಬರಬೇಕು, ಅದರಲ್ಲೇ ಏನಾದರೂ ದೊಡ್ಡದಾಗಿ ಮಾಡಬೇಕು ಅಂತೆಲ್ಲ ಗೋಲ್ ಇಟ್ಟುಕೊಂಡಿದ್ದಿದ್ದರೆ, ಅಭಿನಯವನ್ನು ಒಗ್ಗಿಸಿಕೊಳ್ಳಲು ಆಗುತ್ತಲೇ ಇರಲಿಲ್ಲ. ಹಾಗೇನೇ, ನಾನು ಒಳ್ಳೆ ನಟಿಯಾಗಬೇಕು, ಅದರಿಂದ ಆಸ್ಕರ್ ಪ್ರಶಸ್ತಿ ಪಡೆಯಬೇಕು ಅನ್ನೋ ಮಹತ್ವಾಕಾಂಕ್ಷೆ ನುಗ್ಗಿದಿದ್ದರೆ ಸಂಗೀತವನ್ನು ತ್ಯಾಗ ಮಾಡಬೇಕಾಗ್ತಿತ್ತೋ ಏನೋ… ನನಗೆ ಇಂಥ ಯಾವ ಗೋಲು ಆಗಲೂ ಇರಲಿಲ್ಲ, ಈಗಲೂ ಇಲ್ಲ. ಹಾಗಾಗಿ, ಈ ಮಲ್ಟಿ ಟಾಸ್ಕ್ ಸುಲಭವಾಯ್ತು.
ಕನಸುಗಳ ಯಾತ್ರೆ
ನಾನು “ಮಾಯಾಮೃಗ’ ಧಾರಾವಾಹಿಯಲ್ಲಿ ವಿದ್ಯಾ ಪಾತ್ರ ಮಾಡಿದ ನಂತರವೇ, ಪಲ್ಲವಿ ಹಾಡ್ತಾಳೆ ಅಂತ ಜಗತ್ತಿಗೆ ಸ್ಪಷ್ಟವಾಗಿ ಗೊತ್ತಾಗಿದ್ದು. ಆ ಮೊದಲು ನಾನು ಅನೇಕ ಸಂಗೀತ ಕಾರ್ಯಕ್ರಮ ಕೊಟ್ಟಿದ್ದೆ. ಆದರೆ, ಈ ಪಾತ್ರದಿಂದ ಸಿಕ್ಕ ಎಕ್ಸ್‌ಪೋಷರ್ ಇದೆಯಲ್ಲ, ಅದು ನನ್ನ ಮೇಲೆ ಬಹಳ ಪರಿಣಾಮ ಬೀರಿತು.
ಆಗ, ಒಂದಷ್ಟು ಜನ, “ನೋಡೂ, ನೀನು ಬಾಂಬೆ ಹೋಗಿ ಸೆಟ್ಲ ಆಗಿಬಿಡು. ಅಲ್ಲಿ ಸರೆಗಮಪಾ ಅನ್ನೋ ರಿಯಾಲಿಟಿ ಶೋ ಇದೆ. ಒಳ್ಳೆ ಅವಕಾಶ ಸಿಗುತ್ತೆ. ನಿನಗೆ ಒಳ್ಳೆ ಟ್ಯಾಲೆಂಟ್ ಇದೆ. ಹಾಳು ಮಾಡ್ಕೊಬೇಡ’ ಅನ್ನೋರು. ಇನ್ನೊಂದಷ್ಟು ಜನ, “ನಿನ್ನ ಕಂಠ, ಅಭಿನಯ ಎಲ್ಲಾ ಚೆನ್ನಾಗಿದೆ. ನೀನು ನೇರ ಮದ್ರಾಸ್‌ಗೆ ಹೊರಟುಬಿಡು. ಅದ್ಬುತವಾದ ಓಪನಿಂಗ್ ಸಿಗುತ್ತೆ. ಇಲ್ಲಿ ಇದ್ದರೆ ಏನೂ ಸಾಧಿಸೋಕೆ ಆಗೋಲ್ಲ ‘ ಅಂತೆಲ್ಲ ಹೇಳಿದ್ದಿದೆ. ಆದರೆ, ನನ್ನೊಳಗೆ ಅಂಥ ಗುರಿಗಳಾವುವೂ ಗೂಡು ಕಟ್ಟಿರಲಿಲ್ಲ,
ನನ್ನಲ್ಲಿ ಇದ್ದದ್ದು ಎರಡೇ ಪ್ರಶ್ನೆ. ಇಲ್ಲಿ ಮಾಡಲಾಗದ್ದನ್ನು ಅಲ್ಲಿ ಹೋಗಿ ಏನು ಮಾಡಿಯೇನು? ಅಲ್ಲಿ ಮಾಡುವುದನ್ನು ಇಲ್ಲೇ ಏಕೆ ಮಾಡಲಾಗದು ಅನ್ನೋದು. ಹಾಗಾಗಿ, ನಾನು ಎಲ್ಲಿಗೂ ಹೋಗಲಿಲ್ಲ.
ಹಾಡಬೇಕು ಅಂದರೆ, ಬಹಳ ಅಚ್ಚುಕಟ್ಟಾಗಿ, ಶಾಸ್ತ್ರಕ್ಕೆ ಧಕ್ಕೆ ಬರದಂತೆ ಹಾಡಬೇಕು ಅಷ್ಟೇ; ಇದು ನನ್ನ ಆಸೆ. ಅದ್ಬುತವಾದ ಪ್ರೊಫೆಷನಲ್ ಸಿಂಗರ್ ಆಗಲೇಬೇಕು, ಇನ್ನೇನೋ ಮಾಡಬೇಕು ಅನ್ನೋದೆಲ್ಲ ನನಗಿಲ್ಲ; ಇದು ಗೋಲ್. ಅದೇ ರೀತಿ ಅಭಿನಯಿಸಬೇಕು ಅನ್ನೋ ಆಸೆ ಪೂರೈಸಿಕೊಳ್ಳಲು, ಪಾತ್ರಕ್ಕೆ ಬೇಕಾದ ಓದು, ಬರವಣಿಗೆ, ತಿರುಗಾಟ, ತಯಾರಿ, ಹೀಗೆ ಎಲ್ಲವನ್ನೂ ಶ್ರದ್ದೆಯಿಂದ ಮಾಡ್ತೇನೆ. ಅದು ಪೂರೈಸಿದ ಮೇಲೆ, ಆಕ್ಟಿಂಗ್ ಮಾಡಿ, ಅದರಿಂದ ದೊಡ್ಡ ಪ್ರಶಸ್ತಿ ತಗೋಬೇಕು ಅನ್ನೋದೆಲ್ಲಾ ಮಹತ್ವಾಕಾಂಕ್ಷೆ . ಇದು ನನಗೆ ಇಲ್ವೇ ಇಲ್ಲ. ಇಂಥ ಯಾವ ಒತ್ತಡಗಳೂ ನನ್ನ ಮೇಲೆ ಇಲ್ಲದೇ ಇರುವುದರಿಂದಲೇ ನಾನಾ ಕಲೆಗಳಲ್ಲಿ ತೊಡಗಿಸಿಕೊಳ್ಳಲು ಆದದ್ದು.
ಸೋಂಭೇರಿಗಳಲ್ಲ
ಹಾಗಂತ, ಮಹತ್ವಾಕಾಂಕ್ಷೆ ಇಲ್ಲದೇ ಇರೋದು ಸೋಂಭೇರಿತನ ಅಂತೆಲ್ಲ ತಿಳಿದುಕೊಳ್ಳಬೇಡಿ. ಸಾಮಾನ್ಯವಾಗಿ ನಮ್ಮೊಳಗೆ ಏನಿದೆ ಅಂತ ನಮಗೆ ಗೊತ್ತಾಗೋಲ್ಲ. ನೀನು ಹೀಗೆ ಮಾಡು, ಹಾಗೆ ಮಾಡು ಅಂತ ಬೇರೆಯವರು ಹೇಳಿದಂತೆ ಮಾಡುತ್ತಾ ಹೋಗ್ತಿವಿ. ಅದು ನಮಗೆ ಬೇಕೋ ಬೇಡವೋ ಗೊತ್ತಿಲ್ಲ. ಅಂದರೆ, ನಮ್ಮ ಬದುಕು ಬೇರೆಯವರ ನಿರ್ದೇಶನದಂತೆ ನಡೆಯುತ್ತಿರುತ್ತದೆ. ನನ್ನದು ಹೀಗಾಗಲಿಲ್ಲ. ನನ್ನಲ್ಲಿ ಏನಿದೆ, ನನಗೆ ಏನು ಬೇಕು ಅನ್ನೋ ವಿಚಾರದಲ್ಲಿ ನಾನು ಬಹಳ ಸ್ಪಷ್ಟವಾಗಿದ್ದೆ.
ಒಳ್ಳೆ ನಿರ್ದೇಶಕರು, ಕಲಾವಿದರ ಜೊತೆ ಕೆಲಸ ಮಾಡಬೇಕು ಅನ್ನೋದು ದಿನ ನಿತ್ಯದ ಅಪೇಕ್ಷೆ. ಹೀಗಾಗಿ, ನನ್ನ ಸಂವೇದನೆ, ಮನೋಭಾವ, ಯೋಚನೆಗಳನ್ನು ಬೇರೆ ಯಾರಲ್ಲಿ ಕಾಣ್ತಿನೋ ಅವರ ಜೊತೆ ಕೆಲಸ ಮಾಡೋಕೆ ಇಷ್ಟ. ಇದನ್ನು ಮಹತ್ವಾಕಾಂಕ್ಷೆ ಅಂತ ಹೇಳಕ್ಕಾಗಲ್ಲ; ಆಸೆ ಅನ್ನಬಹುದು. ಇದಕ್ಕಾಗಿ ಬೇರೆ ಬೇರೆ ದೇಶ, ರಾಜ್ಯಗಳಿಗೆಲ್ಲಾ ಹೋಗಿ ಕೆಲಸ ಮಾಡಿದ್ದೀನಿ.
ಮನಸ್ಸು ಹೇಳಿದಂತೆ ಬದುಕುತ್ತಿರುವುದರಿಂದ ಫೇಲ್ಯೂರ್‌ಗಳು, ಸಕ್ಸಸ್‌ಗಳು ಕೈಕಟ್ಟಿ ನಿಂತಾಗ ನನಗೇನೂ ಅನಿಸೋದಿಲ್ಲ.’
ಡಿಮ್ಯಾಂಡ್ ಬೇರೆ
ಸಿನಿಮಾ ಸಂಗೀತ, ಭಾವಗೀತೆ, ಫ್ಯೂಷನ್ನು, ಶಾಸ್ತ್ರೀಯ ಸಂಗೀತ , ನಟನೆ, ನಿರ್ದೇಶನ… ಹೀಗೆ ಆರಿಸಿಕೊಂಡ ಪ್ರತೀ ಕ್ಷೇತ್ರವೂ ನನ್ನಿಂದ ವೈವಿದ್ಯಮಯ ಡಿಮ್ಯಾಂಡ್ ಇಡುತ್ತದೆ. ಭಾವಗೀತೆಯ ಡಿಸಿಪ್ಲೇನ್ ಬೇರೆ, ಸಿನಿಮಾ ಸಂಗೀತ, ಶಾಸ್ತ್ರೀಯ ಸಂಗೀತದ ಡಿಸಿಪ್ಲೇನ್ ಬೇರೆ. ಭಾವಗೀತೆ ಹಾಡುವಾಗ ತಾನ್, ಆಲಾಪಗಳನ್ನು ಮಂಡಿಸುವ ನೈಪುಣ್ಯತೆ ಬೇಕಿಲ್ಲ, ಬದಲಿಗೆ, ಕಾವ್ಯದ ಭಾವವನ್ನು ಕೇಳುಗರಿಗೆ ದಾಟಿಸೋದು ಇಲ್ಲಿ ಮುಖ್ಯ. ಅದಕ್ಕೆ ಬೇಕಾದ ದನಿ ಕೊಡಬೇಕಾಗುತ್ತದೆ.
ಸಿನಿಮಾದಲ್ಲಿ ಪಾತ್ರಕ್ಕೆ ದನಿ ಶೂಟ್ ಆಗುತ್ತಾ ಅನ್ನೋದಷ್ಟೇ ಮುಖ್ಯ. ಪಾತ್ರ/ವಿಷಯದ ಆಳಕ್ಕೆ ಇಳಿದು ತಿಳಿದು ಹಾಡೋ ಅಗತ್ಯ ಅಲ್ಲಿರೊಲ್ಲ. ಇವೆಲ್ಲಕ್ಕಿಂತ ಭಿನ್ನವಾದದ್ದು ಶಾಸ್ತ್ರೀಯ ಸಂಗೀತ. ಇದೊಂಥರಾ ರೋಜರ್ ಫೆಡರರ್ ಮತ್ತು ನಡಾಲ್ ಮ್ಯಾಚ್ ಇದ್ದಾಗೆ. ಕೆಪಾಸಿಟಿ ಇದ್ದರೆ, ಟಿ ಬ್ರೇಕ್ ನಂತರವೂ ಎಷ್ಟು ಹೊತ್ತು ಬೇಕಾದರೂ ಮ್ಯಾಚ್ ಮುಂದವರಿಯಬಹುದು. ಶಾಸ್ತ್ರೀಯ ಸಂಗೀತದ ಜರ್ನಿ ಬಹಳ ದೊಡ್ಡದು. ಇದಕ್ಕೆ ಬೇಕಾದ ಇಂಧನವನ್ನು ರಿಯಾಜ್ ಮೂಲಕ ಗಳಿಸಿರಬೇಕು; ಅಕೌಂಟ್‌ನಲ್ಲಿ ದುಡ್ಡಿದ್ದಂತೆ. ಇಲ್ಲದೇ ಇದ್ದರೆ ಆ ರೀತಿ ಹಾಡೋಕೂ/ಆಡೋಕೂ ಆಗೋಲ್ಲ. ಎಲ್ಲವನ್ನೂ ತಿಳಿದಿದ್ದರಷ್ಟೇ ಮಲ್ಟಿ ಟಾಸ್ಕ್ ಮಾಡಬಹುದು.
ಕಟ್ಟೆ ಗುರುರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್ ರಗಳೆ
German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್ ಶೆಫರ್ಡ್ ನಾಯಿ ಕೊಂದ!
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.