ಕೊಡಗಿನ 6,603 ಮಂದಿ ಪರಿಹಾರ ಕೇಂದ್ರಕ್ಕೆ ಸ್ಥಳಾಂತರ
ಕಡಿಮೆಯಾದ ವರುಣನ ಅಬ್ಬರ
Team Udayavani, Aug 13, 2019, 5:00 AM IST
ಮಡಿಕೇರಿ: ಜಿಲ್ಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಳೆ ಅಬ್ಬರ ತಗ್ಗಿದೆ. ಇದರಿಂದಾಗಿ ಪ್ರವಾಹ ಪರಿಸ್ಥಿತಿ ಕಡಿಮೆಯಾಗುತ್ತ ಬರುತ್ತಿದೆ. ಭಾನುವಾರ ಬೆಳಗಿನಿಂದ ಕೊಂಚ ಪ್ರಮಾಣದಲ್ಲಿ ಮಳೆಯ ಅಬ್ಬರ ಕಡಿಮೆಯಾಗುತ್ತ ಬರುತ್ತಿದ್ದು, ಚಳಿ ಮತ್ತು ಬಿರುಗಾಳಿ ಇದೆ.
ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 79 ಪ್ರವಾಹ ಪೀಡಿತ ಪ್ರದೇಶಗಳೆಂದು ಗುರುತಿಸಲಾಗಿದೆ. ಮಡಿಕೇರಿ ತಾಲ್ಲೂಕಿನ 30, ವಿರಾಜಪೇಟೆ ತಾಲ್ಲೂಕಿನಲ್ಲಿ 32, ಸೋಮವಾರಪೇಟೆ ತಾಲ್ಲೂಕಿನಲ್ಲಿ 4, ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 5, ವಿರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 8 ಒಟ್ಟು 79 ಪ್ರವಾಹ ಪೀಡಿತ ಪ್ರದೇಶಗಳೆಂದು ಗರುತಿಸಲಾಗಿದೆ.
ಈವರೆಗೆ ಜಿಲ್ಲೆಯಲ್ಲಿ ಸುಮಾರು 741 ಕ್ಕೂ ಹೆಚ್ಚು ಜನರು ಹಾಗೂ 23 ಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಿಸಲಾಗಿದೆ. 8 ಜಾನುವಾರುಗಳನ್ನು ಗೋ ಶಾಲೆಗೆ ಸ್ಥಳಾಂತರಿಸಲಾಗಿದೆ. ರಕ್ಷಣೆ ಕಾರ್ಯದಲ್ಲಿ ಎನ್‌ಡಿಆರ್‌ಎಫ್, ಭಾರತೀಯ ಸೇನೆ, ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ, ಪೊಲೀಸ್ ಇಲಾಖೆ, ಕಂದಾಯ ಹಾಗೂ ರಿವರ್ ರ್ಯಾಪ್ಟಿಂಗ್ ಅಸೋಷಿಯೇಷನ್ ಸಹಕಾರ, ಗ್ರಾಮ ಪಂಚಾಯಿತಿ ಹಾಗೂ ಪಶುಪಾಲನಾ ಇಲಾಖೆ ಸಹಕಾರದಲ್ಲಿ ರಕ್ಷಣೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 48 ಪರಿಹಾರ ಕೇಂದ್ರ ತೆರೆಯಲಾಗಿದ್ದು, 1970 ಕುಟುಂಬಗಳ 6,603 ಸಂತ್ರಸ್ತರನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಬರೆ ಹಾಗೂ ಮರ ಬಿದ್ದು, ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಸರಿಪಡಿಸುವ ಕಾರ್ಯ ಜಿಲ್ಲಾಡಳಿತದಿಂದ ನಡೆದಿದೆ. ಅತೀವೃಷ್ಟಿಯಿಂದಾಗಬಹುದಾದ ತೊಂದರೆಯನ್ನು ಎದುರಿಸಲು ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದು, ಜಿಲ್ಲೆಯಾದ್ಯಂತ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ. ತುರ್ತು ಸಂದರ್ಭ ಎದುರಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ.
ಮಡಿಕೇರಿ ಮತ್ತು ವಿರಾಜಪೇಟೆ ತಾಲ್ಲೂಕಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳು ಮೊಕ್ಕಾಂ ಹೂಡಿದ್ದು, ತುರ್ತು ಸಂದರ್ಭಗಳಲ್ಲಿ ನೆರವಿಗೆ ಬರಲಿದೆ. ಅಲ್ಲದೆ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕು ಕಚೇರಿಗಳಲ್ಲಿ ದಿನದ 24 ಗಂಟೆ ಅವಧಿಯಲ್ಲಿ ನಿಯಂತ್ರಣಾ ಕೊಠಡಿಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ವಾಟ್ಸಪ್‌ನಲ್ಲಿಯೂ ಸಹ ಪ್ರಕೃತಿ ವಿಕೋಪ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಲಾಗುತ್ತಿದ್ದು, ತುರ್ತು ಕ್ರಮ ವಹಿಸಲಾಗುತ್ತದೆ. ಈ ಸಂಬಂಧ ಸಾರ್ವಜನಿಕರು ಜಿಲ್ಲಾಧಿಕಾರಿಯವರ ನಿಯಂತ್ರಣ ಕೊಠಡಿ ಸಂಖ್ಯೆ : 08272-221077, 8550001077 ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.