ಕಾಲಕಾಲದ ತತ್ವಗ್ರಾಹಿ
Team Udayavani, Aug 16, 2019, 4:55 AM IST
ಗೃಹಿಣಿ ಮನೆಯನ್ನೆಲ್ಲ ಆವರಿಸುವ ಸೂಕ್ಷ್ಮ ಗಾಳಿಯ ಮರ್ಮರದಂತೆ. ಮುದವಾಗಿ ಪ್ರೀತಿ ಮಂದಾರದ ಮಂದಾನಿಲ ಪಸರಿಸುವ ಮಂದಮಾರುತದಂತೆ. ಇಡೀ ಮನೆಯ ಸ್ಥಿತಿ, ಗತಿ, ಮಹತಿಗಳನ್ನು ಪತ್ತೆಯಿಲ್ಲದೆ ಕ್ರೋಢೀಕರಿಸಿ, ಪಕ್ವಗೊಳಿಸುವ, ಮನೆಯವರೆಲ್ಲರ ತುಡಿತ, ಮಿಡಿತ, ಕಾಮನೆಗಳೆಡೆಗೆ ಸಾಣೆ ಹಿಡಿದ ಪರಿಷ್ಕೃತ ನೋಟ ಬೀರುವ, ಮನೆಯವರೆಲ್ಲರ ಪ್ರಾಯೋಗಿಕ ಪ್ರತಿನಿಧಿ ಗೃಹಿಣಿ.
ತನ್ನ ಮನೆಯೆಂಬ ಮನೋರಾಜ್ಯದಲ್ಲೇ ಇನ್ನಿಲ್ಲದಂತೆ ಸುತ್ತಾಡಿ, ಸುಳಿದಾಡಿ, ಸಂಘರ್ಷಗಳಿಗೆ ಢಿಕ್ಕಿ ಹೊಡೆದು, ಭಾವನೆಗಳ ತಡಕಾಡಿ, ಚಿನಕುರುಳಿಯಂತೆ ನಗೆಯ ಮಂಟಪ ಕಟ್ಟಿ , ನಡುಗಿಸಿದ ತಲ್ಲಣದಲ್ಲೂ ತತ್ವಗ್ರಾಹಿಯಾಗಿ, ಚೆಲ್ಲಾಪಿಲ್ಲಿಯಾಗಿ ಹರಡಿಹೋದ ಭಾವ ತುಣುಕುಗಳನ್ನು ಒಂದೊಂದಾಗಿ ಹೆಕ್ಕುತ್ತ, ಒಟ್ಟು ಸೇರಿಸುವ ಪ್ರಯತ್ನದಲ್ಲಿ ಒಮ್ಮೊಮ್ಮೆ ವಿಫಲಳಾಗಿ ಬಿಕ್ಕುತ್ತ, ಚೆಲ್ಲುವ ಕೈಗಳನ್ನು ಹತ್ತಿಕ್ಕಿ ಹಕ್ಕು ಸ್ಥಾಪಿಸುತ್ತ, ಘಟನೆ, ವಿಘಟನೆ, ಪ್ರತಿಭಟನೆಗಳ ಮಿಶ್ರಭಾವದಾಟದ ಸೂಕ್ಷ್ಮ ಸ್ತರಗಳನ್ನೆಲ್ಲ ತನ್ನ ಒಳಗಣ್ಣಲ್ಲಿ ಸೆರೆಹಿಡಿದು, ಅಕ್ಷರಗಳಿಗೆ ರೆಕ್ಕೆ ಹಚ್ಚಿ ಬರಹದ ಬಾನಲ್ಲಿ ಹಾರಿಬಿಡುವ ಅವಳ ಹವ್ಯಾಸ ಇಂದು ನಿನ್ನೆಯದಲ್ಲ. ಆಕೆಯ ಇಂಥ ಸೃಜನಶೀಲ ಸಂವೇದನೆಗಳು ಇತಿಹಾಸದ ದಾಖಲೆಗಳಿಗೆ ಸಾಕ್ಷಿಯಾಗುತ್ತದೆ. ಗೃಹಿಣಿಯ ಬದುಕಿನೊಂದಿಗೆ ಬರಹ ಎನ್ನುವುದು ಅದೆಷ್ಟೊ ಹಿಂದಿನಿಂದಲೇ ಆಕೆಯ ಮನೋಭೂಮಿಕೆಯ ಆತ್ಮ ಸಂಗಾತವಾಗಿ ಬೆಳೆದುಬಂದಿದೆ.
ಹದಿಬದೆಯ ಧರ್ಮದ ಮೂಲಕ ಗೃಹಿಣಿಯ ಗೃಹ ಸಂವಿಧಾನವನ್ನೇ ವಿರಚಿಸಿರುವವಳು ಸಂಚಿಯ ಹೊನ್ನಮ್ಮ. ಒಂದು ಕಾಲದಲ್ಲಿ ತಾನೇ ಸ್ವತಃ ಗೃಹಿಣಿಯಾಗಿದ್ದುಕೊಂಡು, ಆದರ್ಶ ಗೃಹಿಣಿ ನಿಭಾಯಿಸಬೇಕಾದ ನಿಯಮ ನಿಬಂಧನೆಗಳನ್ನು ತಾನು ಮೊದಲು ಒಪ್ಪಿ , ಇತರ ಗೃಹಿಣಿಯರಿಗೂ ಒಪ್ಪಿಸುವ ನೀತಿಸಂಹಿತೆಯ ಸಂಪಾದಕಿಯಾಗುತ್ತಾಳೆ. ಆದರೂ ಯಾವುದೊ ಕಾಲದ ಆಕೆಯ ಈ ಸಿದ್ಧಾಂತ ಇಂದಿಗೂ ಅಪ್ರಸ್ತುತವಾಗುವುದಿಲ್ಲ ಎನ್ನುವುದೇ ಅಚ್ಚರಿಯ ವಿಷಯ. ಆ ಮೂಲಕ ಗೃಹಿಣಿಯೊಬ್ಬಳು ಸಾರ್ವಕಾಲಿಕ ಸಿದ್ಧಾಂತವೊಂದರ ನಿರೂಪಕಿ ಎಂದು ಗುರುತಿಸಿಕೊಂಡು ಸಮಾಜದ ಸಾಧಕಿಯಾಗಿ ಗೌರವಿಸಲ್ಪಡುತ್ತಾಳೆ.
ಭೂಮಿ ತನ್ನ ಕಕ್ಷೆಯ ಸುತ್ತ ಸುತ್ತುತ್ತಿರುವಂತೆ ಗೃಹಿಣಿ ತನ್ನ ಗೃಹಲೋಕವೆಂಬ ವೃತ್ತದ ಪರಿಭ್ರಮಣದಲ್ಲಿ ತೊಡಗಿಕೊಂಡಾಗ, ಈ ಸಂಚಲನದ ಅನುಭವವನ್ನು ಸಮರ್ಥವಾಗಿ ಹಿಡಿದಿಡಲು ಆಕೆ ಮೊರೆ ಹೋಗುವುದು ಬರಹವೆಂಬ ಭಾವ ಪ್ರಪಂಚವನ್ನು ಈ ಬರಹ ಸಾಹಿತ್ಯವಾಗಿ ಬೆಳೆದಾಗ ಸಮಾಜದ ಮನಸುಗಳೊಂದಿಗೆ ಬೆರೆತು ಹೋಗುತ್ತದೆ. ಅಂತಹ ಸಾಧನೆಯನ್ನು ಸಾಧ್ಯವಾಗಿಸುವ ಗೃಹಿಣಿ ನಿಜಕ್ಕೂ ಜನರ ದೃಷ್ಟಿಯಲ್ಲಿ ಶ್ರೇಷ್ಠಳಾಗುತ್ತಾಳೆ. ಇತಿಹಾಸದ ಪುಟ ತೆರೆದು ನೋಡಿದರೆ ಇಂತಹ ಅನೇಕ ಸಾಧಕಿಯರು ನಮ್ಮ ಅಂತಃಕರಣದ ಕರೆಗಳಿಗೆ ಹಸ್ತಲಾಘವ ನೀಡುತ್ತಾರೆ. ಈ ನಿಟ್ಟಿನಲ್ಲಿ ಸಂಚಿಹೊನ್ನಮ್ಮ , ಅತ್ತಿಮಬ್ಬೆಯಂತಹವರ ಸಾಧನೆ ಗಮನಾರ್ಹವಾದುದು. ಇಂತಹವರು ಯಾವ ಕಾಲದಲ್ಲೂ ಸ್ಮರಣೀಯರಾಗುತ್ತಾರೆ.
ನಮ್ಮ ದೇಶದ ಮಾಜಿ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿಯವರ ಪತ್ನಿ ಲಲಿತಾ ಶಾಸ್ತ್ರಿಯವರು ಮನೆಯಲ್ಲಿ ಪತಿಯನ್ನನುಸರಿಸಿ ನಡೆಯುವ ಅಪ್ಪಟ ಗೃಹಿಣಿ. ಅವರು ತಮ್ಮ ಬರಹದಲ್ಲಿ ಪತಿಯ ದಿನಚರಿಯ ಪುಟಗಳನ್ನು ತನ್ನದೇ ಅಕ್ಕರೆ, ವಿಶ್ವಾಸ, ಭಾವ ಪರಿಪೂರಕ ನೋಟದಿಂದ ಸೆರೆಹಿಡಿದು, ಪತಿಯ ಗ್ರಾಹ್ಯ, ಚಿರಪರಿಚಿತ ವ್ಯಕ್ತಿತ್ವದ ಜೊತೆಗೆ ಅದರ ಹಿಂದಿನ ಖಾಸಗೀ ಸಂವೇದನಾಶೀಲ ಅಪರಿಚಿತ ಆದೃì ಮುಖವನ್ನು ನಮಗೆ ಪರಿಚಯಿಸುತ್ತಾರೆ. “ನನ್ನ ಪತಿ ನನ್ನ ದೇವರು’ ಎಂಬ ಅವರ ಕೃತಿ ಮೂಲ ಹಿಂದಿಯಿಂದ ಭಾರತದ ಬೇರೆ ಬೇರೆ ಭಾಷೆಗಳಿಗೆ ಅನುವಾದಗೊಳ್ಳುವುದರ ಮೂಲಕ ಒಬ್ಬ ಗೃಹಿಣಿಯ ಮನೋತರಂಗ ಇಡೀ ಒಂದು ಜನಾಂಗದ ಹೃದಯದಲ್ಲಿ ಅಲೆಯೆಬ್ಬಿಸಿದೆ.
ಇನ್ನು ಒಂದು ಕಾಲದ ಕನ್ನಡ ಸಾಹಿತ್ಯ ಲೋಕದ ಬರಹಗಾರ್ತಿಯರಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿದವರು ತ್ರಿವೇಣಿಯವರು. ಮಾನಸಿಕ ರೋಗಿಯೆಂದು ಸಮಾಜದ ತಿರಸ್ಕಾರಕ್ಕೆ ಪಾತ್ರವಾಗುವ ಮಾನುಷಿಯ ಮಾನಸ ಲೋಕದ ಸಂಕಟ, ವಿಪ್ಲವ, ತಲ್ಲಣಗಳು ಹೇಗೆ ಆಕೆಯನ್ನು ವಿಭ್ರಮೆಗೊಳಿಸಿ ಪ್ರಪಂಚದ ಸಾಮಾನ್ಯತೆಯಿಂದ ಪ್ರತ್ಯೇಕಿಸುತ್ತದೆ ಎಂಬುದನ್ನು ತ್ರಿವೇಣಿಯವರು ತಮ್ಮ ಕಾದಂಬರಿಯ ಪಾತ್ರಗಳ ಮೂಲಕ ಕಟ್ಟಿಕೊಡುತ್ತಾರೆ. ಒಬ್ಬ ಗೃಹಿಣಿಯಾಗಿ, ಮನೋವಿಶ್ಲೇಷಕಿಯಾಗಿ ತ್ರಿವೇಣಿ ತಮ್ಮ ಬರಹದಲ್ಲಿ ಎಷ್ಟೋ ಸಾಮಾಜಿಕ ಸಮಸ್ಯೆಗಳಿಗೆ “ಮನಸು ಕಾರಣ’ ಎಂಬ ಹೊಸ ವಿಚಾರವನ್ನು ತೆರೆದಿಡುವುದರ ಮೂಲಕ ತಾತ್ವಿಕತೆಯ ಮಹತ್ವವನ್ನು ಪಡೆಯುತ್ತಾರೆ.
ಗೃಹಿಣಿಯ ಭಾವ ನವಿರು, ಸಹ್ಯ ಪ್ರವೃತ್ತಿ, ಪುಟ್ಟ ಪುಟ್ಟ ಖುಷಿಯನ್ನು ಹೆಕ್ಕಿ ಹಿಗ್ಗುವ ಚಿಕ್ಕ ಮಕ್ಕಳ ಮುಗ್ಧ ನಿರಾಳ ಭಾವಸಂಚಿಕೆಯಲ್ಲೇ ಹುಟ್ಟು-ಸಾವುಗಳ ನಡುವಿನ ಬದುಕಿನ ಅವ್ಯಾಹತಗಳು, ಅನಿರೀಕ್ಷಿತಗಳ ಚಿಂತನೆಯ ಹೊಳಹನ್ನು , ಜಟಿಕ ಕ್ಷಣಗಳನ್ನು ಕಟ್ಟಿಕೊಡುವ ವೈದೇಹಿಯವರ ಬರಹಗಳು ಅವರ ಸ್ವಾನುಭವದ, ಅವಲೋಕನ ದೃಷ್ಟಿಯ ವೈಶಾಲ್ಯತೆಯನ್ನು ಬಿಂಬಿಸುತ್ತದೆ.
ಸಾರಾ ಅಬೂಬಕರ್ ಅವರು ಮುಸ್ಲಿಂ ಮನೆಯ ಗೃಹಿಣಿಯಾಗಿ ತಮಗೆದುರಾದ ಸಮಸ್ಯೆಗಳನ್ನು , ತಾವು ನೋಡಿದ ಬದುಕನ್ನೂ ದಿಟ್ಟವಾಗಿ ತಮ್ಮ ಬರಹದಲ್ಲಿ ತೋಡಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಅವರು ಅನೇಕ ಸಾಮಾಜಿಕ ಮತೀಯ ವಿರೋಧವನ್ನು ಎದುರಿಸಿದರೂ ತಮ್ಮ ಬರವಣಿಗೆಯ ಸಿದ್ಧಾಂತವನ್ನು ಬದಲಿಸಲಿಲ್ಲ. ಇಂತಹ ಬರಹಗಳು ಕತೆಗಾರ್ತಿಯ ಒಳನೋಟದ ಸಂವೇದನೆಯಾಗಿ ತೆರೆದುಕೊಂಡು ಸಾಮಾಜಿಕ ಮನಸುಗಳನ್ನು ಮುಟ್ಟುವಲ್ಲಿ, ಎಚ್ಚರಿಸುವಲ್ಲಿ, ಮಿಡಿಯುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ.
ಇನ್ನೂ ಹಲವು ರೀತಿಯಲ್ಲಿ ಗೃಹಿಣಿ ತನ್ನ ನಿಸ್ವಾರ್ಥ ಧ್ಯೇಯದಿಂದ ಸಾಮಾಜಿಕ ಕಳಕಳಿಗೆ ಸಾಕ್ಷಿಯಾದ ಸಂಗತಿಯನ್ನು ನಾವು ಇತಿಹಾಸದಲ್ಲಿ ಧಾರಾಳವಾಗಿ ಗಮನಿಸಬಹುದು. ಮಹಾತ್ಮಾ ಗಾಂಧೀಜಿಯವರ ಪತ್ನಿ ಕಸ್ತೂರಬಾ, ಜವಾಹರಲಾಲ್ ನೆಹರೂ ಅವರ ಪತ್ನಿ ಕಮಲಾ ನೆಹರು ಅವರೆಲ್ಲ ಗೃಹಿಣಿಯರಾಗಿ ಆ ಕಾಲದಲ್ಲಿ ಎಲ್ಲರಿಗೂ ಅನಿವಾರ್ಯವಾದ ಸ್ವಾತಂತ್ರ್ಯ ಹೋರಾಟದ ಯಜ್ಞಕ್ಕೆ ತಮ್ಮದೇ ಆದ ಹವಿಸ್ಸನ್ನು ಅರ್ಪಿಸಿದ್ದಾರೆ.
ನಮ್ಮ ಈಗಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಅವರು ತಮ್ಮ ಪ್ರೀತಿಯ ಪುತ್ರ, ಇಡೀ ದೇಶದ ಉನ್ನತ ಹುದ್ದೆಯಲ್ಲಿ ಮಿಂಚುವುದನ್ನು ಕಾಣ್ತುಂಬಿಕೊಂಡು ಧನ್ಯರಾಗಿ, ತಾವು ಮಾತ್ರ ಅದೇ ತಮ್ಮ ಪುಟ್ಟ ಮನೆಯಲ್ಲಿಯೇ, ಈ ಇಳಿವಯಸ್ಸಿನಲ್ಲಿಯೂ ಸ್ವತಂತ್ರವಾಗಿ ಬದುಕುತ್ತಿರುವ ದಿಟ್ಟ ಗೃಹಿಣಿ. ಈ ನಿಟ್ಟಿನಲ್ಲಿ ಸಮಗ್ರ ಭಾರತದ ಪ್ರಧಾನಿಯಾಗಿಯೂ, ಎಲ್ಲ ಶುಭಕಾರ್ಯಗಳಿಗೆ ಮುನ್ನ ತಾಯಿಯಾದ ತನ್ನ ಕಾಲು ಹಿಡಿದು ನಮಸ್ಕರಿಸಿ ತನ್ನಿಂದ ಆಶೀರ್ವಾದ ಪಡೆಯುವ ಉದಾತ್ತ, ಸಂಸ್ಕಾರವಂತ ಮಗನನ್ನು ನೋಡಿ, ತಮ್ಮ ಬದುಕಿನ ಸಾರ್ಥಕತೆಯನ್ನು ಕಂಡುಕೊಳ್ಳುವ ಸದ್ಗ ಹಿಣಿಯಾಗಿ ಹೀರಾಬೆನ್ ನಮ್ಮೆದುರು ನಿಲ್ಲುತ್ತಾರೆ.
ಹೀಗೆ ಭಾರತೀಯ ಗೃಹಿಣೀತ್ವದ ಮಹತ್ವ ಇತಿಹಾಸದುದ್ದಕ್ಕೂ ಕಾಣಸಿಗುವಂತೆ ಇವತ್ತಿನ ವರ್ತಮಾನಕ್ಕೂ ಅದು ಪ್ರೇರಣೆಯಾಗಿದೆ.
ವಿಜಯಲಕ್ಷ್ಮಿ ಶ್ಯಾನ್‌ಭೋಗ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.