ಕೆನಡಾ ದೇಶದ ಕತೆ: ಮೊಲದ ಜಾಣತನ
Team Udayavani, Aug 18, 2019, 5:00 AM IST
ಒಂದು ಕಳ್ಳ ನರಿಗೆ ಆ ದಿನ ಎಷ್ಟು ಹುಡುಕಿದರೂ ಬೇಟೆ ಸಿಕ್ಕಿರಲಿಲ್ಲ. ಹಸಿವಿನಿಂದ ಬಳಲುತ್ತಿರುವಾಗ ಒಂದು ಮೊಲ ಕಾಣಿಸಿತು. ಅದನ್ನು ಬೆನ್ನಟ್ಟಿತು. ಪ್ರಾಣಭಯದಿಂದ ಓಡುತ್ತಿರುವ ಮೊಲಕ್ಕೆ ಒಂದು ತರಕಾರಿ ತೋಟ ಕಾಣಿಸಿತು. ಬಗೆಬಗೆಯ ಸೊಪ್ಪುಗಳು, ಗೆಣಸುಗಳು, ಕೋಸುಗಳು ಬೆಳೆದುನಿಂತ ತೋಟ ಕಂಡು ಮೊಲಕ್ಕೆ ಬಾಯಲ್ಲಿ ನೀರೂರಿತು. ಹಿಂದಿನಿಂದ ನರಿ ಬರುತ್ತಿದೆಯೆಂಬ ವಿಷಯ ಮರೆತು ಹೋಯಿತು. ನೆಟ್ಟಗೆ ತೋಟದೊಳಗೆ ನೆಗೆಯಿತು. ಮನಬಂದಂತೆ ತರಕಾರಿಗಳನ್ನು ತಿಂದು ಹೊಟ್ಟೆ ತುಂಬಿಸಿಕೊಂಡಿತು. ಆದರೆ, ತೋಟದ ಒಡತಿಯಾದ ಒಬ್ಬ ಮುದುಕಿಯು ಕಳ್ಳರು ಒಳಗೆ ಬಂದರೆ ಸಿಕ್ಕಿ ಬೀಳಲಿ ಎಂದು ಒಂದು ಬಲೆಯನ್ನು ಒಡ್ಡಿದ್ದಳು. ಅದರ ಅರಿವಿಲ್ಲದೆ ಮೊಲ ಬಲೆಯೊಳಗೆ ಸಿಲುಕಿಕೊಂಡು ಹೊರಗೆ ಬರಲು ದಾರಿಯಿಲ್ಲದೆ ಕಂಗಾಲಾಯಿತು.
ಆಗ ನರಿ ಹತ್ತಿರ ಬಂದಿರು ವುದು ಮೊಲಕ್ಕೆ ಕಾಣಿಸಿತು. ಅದು, “ನನ್ನ ಬಿಟಿºಡಿ. ನನಗೆ ಅವಳು ಬೇಡ. ನನ್ನ ಕೈಯಲ್ಲಿ ಆಗೋದಿಲ್ಲ” ಎಂದು ಜೋರಾಗಿ ಕೂಗತೊಡಗಿತು. ಮೊಲ ತರಕಾರಿ ತೋಟದೊಳಗೆ ಇರುವುದು ನರಿಗೆ ಗೊತ್ತಾಯಿತು. ನೆಟ್ಟಗೆ ಅಲ್ಲಿಗೆ ಬಂದಿತು. “ಯಾಕೋ ಕಿರುಚಿಕೊಳ್ಳುತ್ತ ಇದ್ದೀ? ಏನಾಯಿತು?” ಎಂದು ಕೇಳಿತು.
“ಅಯ್ಯೋ ಅಣ್ಣ, ಕಿರುಚದೆ ಇನ್ನೇನು ಮಾಡಲಿ? ಈ ತೋಟದ ಒಡತಿ ಒಬ್ಬ ಮುದುಕಿ. ಅವಳಿಗೆ ಉಪ್ಪಿನ ಮೂಟೆಯಂತಹ ಒಬ್ಬಳು ಮಗಳಿದ್ದಾಳೆ. ಅವಳನ್ನು ನೀನೇ ಮದುವೆಯಾಗಬೇಕು ಅಂತ ಒತ್ತಾಯಿಸಿ ಈ ಬಲೆಯೊಳಗೆ ಕೂಡಿ ಹಾಕಿದ್ದಾಳೆ. ಮದುವೆಯಾದರೆ ವರದಕ್ಷಿಣೆಯಾಗಿ ಈ ತೋಟವನ್ನು ಕೊಡುತ್ತಾಳಂತೆ. ನನಗವಳು ಬೇಡ, ದಪ್ಪವಿದ್ದಾಳೆ, ಚಂದವಿಲ್ಲ ಅಂತ ಕೈಮುಗಿದರೂ ಬಿಡದೆ ಮಂಗಲಸೂತ್ರ ಸಹಿತ ಮಗಳನ್ನು ಕರೆತರಲು ಮನೆಗೆ ಹೋಗಿದ್ದಾಳೆ, ಇನ್ನೇನು ಬಂದುಬಿಡುತ್ತಾಳೆ” ಎಂದಿತು ಮೊಲ.
ನರಿಗೆ ನಾಲಿಗೆಯಲ್ಲಿ ನೀರೂರಿತು. “ಏನೆಂದೆ, ಮಗಳನ್ನು ಮದುವೆಯಾದರೆ ಈ ತೋಟವನ್ನು ಕೊಡುತ್ತಾಳೆಂದು ಹೇಳಿದ್ದಾಳೆಯೆ? ಅವಳನ್ನು ಮದುವೆಯಾಗುವ ಯೋಗ್ಯತೆ ಹುಂಬನಾದ ನಿನಗೆ ಎಲ್ಲಿದೆ? ಏನಿದ್ದರೂ ಅದಕ್ಕೆ ತಕ್ಕ ಅರ್ಹತೆ ಹೊಂದಿದವನು ನಾನೇ. ನಾನು ನಿನ್ನನ್ನು ಬಲೆಯಿಂದ ಹೊರಗೆ ತಂದು ಅದರೊಳಗೆ ನಾನಿರುತ್ತೇನೆ. ಮದುವೆಯಾಗಿ ಒಂದೆರಡು ದಿನ ಇಲ್ಲಿರುವ ತರಕಾರಿಗಳ ಔತಣ ಸವಿದು ಕಾಡಿಗೆ ಬರುತ್ತೇನೆ. ವಧುವಿನೊಂದಿಗೆ ಬರುವಾಗ ಇಡೀ ಕಾಡನ್ನು ಅಲಂಕರಿಸಿಡಬೇಕು. ಇದರ ಹೊಣೆ ನಿನ್ನದು” ಎಂದು ಹೇಳಿತು. ಮೊಲ ಅದರ ಮಾತಿಗೆ ಒಪ್ಪಿಕೊಂಡಿತು. ನರಿ ಮೊಲವನ್ನು ಬಲೆಯಿಂದ ಹೊರಗೆ ತಂದು ಅದರೊಳಗೆ ತಾನೇ ಕುಳಿತುಕೊಂಡಿತು.
ಸ್ವಲ್ಪ ಹೊತ್ತಿನಲ್ಲಿ ಮುದುಕಿ ಒಂದು ಬಡಿಗೆ ಹಿಡಿದುಕೊಂಡು ಬಂದಳು. ಬಲೆಯೊಳಗೆ ಕುಳಿತಿರುವ ನರಿಯನ್ನು ನೋಡಿದಳು. “”ಕಳ್ಳ ಕೊರಮಾ, ಇಷ್ಟು ದಿನವೂ ಬಂದು ತರಕಾರಿ ಕದಿಯುತ್ತಿದ್ದುದು ನೀನೇ ತಾನೆ? ನಿನ್ನನ್ನು ಸುಮ್ಮನೆ ಬಿಡಬಾರದು” ಎಂದು ಹೇಳಿ ಬಡಿಗೆಯಿಂದ ಚೆನ್ನಾಗಿ ಹೊಡೆದು ಹಣ್ಣುಗಾಯಿ ನೀರುಗಾಯಿ ಮಾಡಿ ಓಡಿಸಿದಳು. ಪುಟ್ಟ ಮೊಲ ತನಗೆ ಮೋಸ ಮಾಡಿತು ಎಂಬುದು ನರಿಗೆ ಅರ್ಥವಾಯಿತು. ಏನು ಮಾಡಿದರೂ ಅದನ್ನು ಬಿಡಬಾರದು ಎಂದು ನಿರ್ಧರಿಸಿ ಹುಡುಕಿಕೊಂಡು ಹೋಯಿತು.
ರಾತ್ರೆ ಚಂದ್ರನು ನೆತ್ತಿಗೆ ಬರುವಾಗ ಮೊಲ ಹುಲ್ಲು ಮೇಯಲು ಒಂದು ಕೊಳದ ದಡಕ್ಕೆ ಬರುವ ಸಂಗತಿ ನರಿಗೆ ಗೊತ್ತಿತ್ತು. ಅಲ್ಲಿಗೆ ತಲುಪುವಾಗ ಮೊಲ ನೀರಿನ ಬಳಿ ನಿಂತುಕೊಂಡಿತ್ತು. ನರಿ ಕೋಪದಿಂದ ಕಟಕಟನೆ ಹಲ್ಲು ಕಡಿಯುತ್ತ,
“ಮೋಸಗಾರನೇ, ನಿನ್ನ ಆಟ ಮುಗಿಯಿತು ಎಂದುಕೋ. ಈ ನರಿರಾಯ ತನಗೆ ಯಾರಾದರೂ ದ್ರೋಹ ಎಸಗಿದರೆ ಸುಮ್ಮನಿರುತ್ತಾನೆಂದುಕೊಂಡೆಯಾ? ಸುಮ್ಮನೆ ನನಗೆ ಹೊಡೆಸಿ ಮೈಯ ಮೂಳೆಗಳೆಲ್ಲ ಮುರಿಯುವಂತೆ ಮಾಡಿದೆಯಲ್ಲ, ಪ್ರತಿಯಾಗಿ ಮರಣದಂಡನೆ ಸ್ವೀಕರಿಸಲು ಸಿದ್ಧನಾಗು” ಎಂದು ಅದರ ಬಳಿಗೆ ನೆಗೆಯಿತು.
ಮೊಲ ಕೈಗಳೆರಡನ್ನೂ ಜೋಡಿಸಿತು. “ನಿಜ, ನಾನು ನಿನಗೆ ಮೋಸ ಮಾಡಿರುವುದು ಸತ್ಯವೇ. ನನ್ನಂತಹ ಪಾಪಿಗೆ ಮರಣದಂಡನೆಗಿಂತ ಬೇರೆ ಶಿಕ್ಷೆಯಾದರೂ ಇನ್ನೇನಿದೆ? ಸಾಯುವ ಭೀತಿ ನನಗಿಲ್ಲ. ಆದರೆ ದಯಾಳುವಾದ ನೀನು ಸಾಯುತ್ತಿರುವ ವ್ಯಕ್ತಿಗೆ ಕೊನೆಯ ಒಂದು ಬಯಕೆಯನ್ನು ನೆರವೇರಿಸಿ ಕೊಡಬೇಕು. ಇದು ಕಾಡಿನ ಧರ್ಮ” ಎಂದು ವಿನಯದಿಂದ ಬೇಡಿಕೊಂಡಿತು. “ಅಷ್ಟೇ ತಾನೆ, ನಿನ್ನ ಕಡೆಯ ಅಪೇಕ್ಷೆ ಏನೆಂಬುದನ್ನು ಹೇಳು. ಅದನ್ನು ಈಡೇರಿಸಿ ಕೊಡುತ್ತೇನೆ” ಎಂದು ಹೇಳಿತು ನರಿ.
ಮೊಲ ನರಿಯನ್ನು ಕೊಳದ ಬಳಿಗೆ ಕರೆಯಿತು. ಕೊಳದ ನಡುವಿಗೆ ಕೈ ತೋರಿಸಿತು. ಪೌರ್ಣಮಿಯ ಚಂದ್ರನ ಪ್ರತಿಬಿಂಬ ಅಲ್ಲಿ ಕಾಣಿಸಿತು. “”ಅಣ್ಣಾ, ಸಾಯುವ ಮೊದಲು ಅಲ್ಲಿರುವ ಮುದ್ದೆ ಬೆಣ್ಣೆಯನ್ನು ಮೆಲ್ಲಬೇಕೆಂಬ ಬಯಕೆ ನನಗಿದೆ. ನೀನು ಕೊಳಕ್ಕಿಳಿದು ಅದನ್ನು ತಂದುಕೊಟ್ಟರೆ ಹೊಟ್ಟೆತುಂಬ ತಿಂದು ಬಳಿಕ ಸಂತೋಷದಿಂದ ನಿನಗೆ ಆಹಾರವಾಗುವ ಮೂಲಕ ಪುಣ್ಯ ಸಂಪಾದನೆ ಮಾಡಿ ಸ್ವರ್ಗಲೋಕ ಸೇರುತ್ತೇನೆ” ಎಂದು ಕೋರಿತು.
“ಅಷ್ಟೇ ತಾನೆ? ನಾನು ತಂದುಕೊಡುತ್ತೇನೆ” ಎಂದು ಹೇಳಿ ನರಿ ಕೊಳಕ್ಕಿಳಿಯಿತು. ನೀರಿನಲ್ಲಿ ಮುಂದೆ ಹೋಯಿತು. ಆದರೆ ಅದರೊಳಗೆ ತುಂಬಿದ್ದ ಕೆಸರಿನಲ್ಲಿ ಅದರ ಕಾಲುಗಳು ಸಿಲುಕಿಕೊಂಡು ಮುಂದೆ ಹೋಗಲಾಗದೆ, ಹಿಂದೆ ಬರಲಾಗದೆ ಸ್ತಬ್ಧವಾಯಿತು. ಮೇಲಿದ್ದ ಮೊಲ ಜೋರಾಗಿ ಚಪ್ಪಾಳೆ ಬಡಿಯಿತು. “ಬೆಣ್ಣೆ ಮುದ್ದೆ ಕೈಗೆ ಸಿಕ್ಕಿದರೆ ನೀನೇ ತಿನ್ನು. ನಾನು ಮನೆಗೆ ಹೋಗ್ತೀನೆ” ಎಂದು ಹೇಳುತ್ತ ಹೊರಟುಹೋಯಿತು. ಬೆಳಗಿನ ಜಾವ ರೈತನೊಬ್ಬ ಕೃಷಿಗೆ ನೀರು ಹಾಯಿಸಲು ಕೊಳದ ಬಳಿಗೆ ಬಂದ. ಕೆಸರಿನಲ್ಲಿ ಸಿಲುಕಿದ ನರಿಯನ್ನು ಕಂಡು ಕೋಲು ತಂದು ಚೆನ್ನಾಗಿ ಹೊಡೆದ. ನೀರಿನಿಂದ ಮೇಲೆ ತಂದು ಹಾಕಿ ಹೊರಟುಹೋದ.
ಸಾವಿನಿಂದ ಪಾರಾದ ನರಿಗೆ ಮೊಲದ ಮೇಲೆ ಇನ್ನೂ ದ್ವೇಷ ಉಕ್ಕಿತು. ಎರಡು ಸಲ ತನಗೆ ಚಳ್ಳೆಹಣ್ಣು ತಿನ್ನಿಸಿದ ಮೊಲವನ್ನು ಹೀಗೆಯೇ ಬಿಡಬಾರದೆಂದು ನಿರ್ಧರಿಸಿ ಮರುದಿನ ರಾತ್ರೆ ಮತ್ತೆ ಮೊಲವನ್ನು ಅರಸುತ್ತ ಹೋಯಿತು. ಒಂದೆಡೆ ಕಮ್ಮಾರನೊಬ್ಬನ ಕುಲುಮೆ ಕಾಣಿಸಿತು ಅದರಲ್ಲಿ ಅವನು ಕಬ್ಬಿಣದ ಉಂಡೆಗಳನ್ನು ಕಾಯಲು ಹಾಕಿ ಹೊರಗೆ ಹೋಗಿದ್ದ. ಉಂಡೆಗಳು ನಿಗಿ ನಿಗಿ ಕಾದು ಕೆಂಪಗೆ ಹೊಳೆಯುತ್ತಿದ್ದವು. ಕುಲುಮೆಯ ಬಳಿ ಚಳಿ ಕಾಯಿಸುತ್ತ ಕುಳಿತಿರುವ ಮೊಲ ನರಿಯ ದೃಷ್ಟಿಗೆ ಗೋಚರಿಸಿತು. “ಬಾರೋ ಮೋಸಗಾರ, ಬುದ್ಧಿವಂತನೆಂದು ಪ್ರಶಸ್ತಿಗಳನ್ನು ಪಡೆದಿರುವ ನನಗೇ ಮೋಸ ಮಾಡಬೇಕಿದ್ದರೆ ನಿನಗೆ ಎಷ್ಟು ಸೊಕ್ಕಿರಬೇಡ! ಇನ್ನು ಅರೆಗಳಿಗೆಯೂ ನಿನಗೆ ಬಿಡುವು ಕೊಡುವುದಿಲ್ಲ, ಕೊಂದೇ ಬಿಡುತ್ತೇನೆ” ಎಂದು ಮುಂದೆ ನುಗ್ಗಿತು.
“ಅಣ್ಣ, ನನ್ನನ್ನು ಕೊಲ್ಲಬೇಡ ಎಂದು ನಾನು ಯಾವ ಬಾಯಿಯಿಂದ ಹೇಳಲಿ? ನಿನಗೆ ಮೋಸ ಮಾಡಿದ್ದು ನಿಜ. ಆದರೆ ಇಲ್ಲಿ ಕುಳಿತು ಯಾರದೋ ತೋಟದಿಂದ ತಂದ ಕಲ್ಲಂಗಡಿ ಹಣ್ಣನ್ನು ಕತ್ತರಿಸಿ ತಿನ್ನಲು ಮುಂದಾಗಿದ್ದೆ. ಸಾಯುವವನಿಗೆ ಇನ್ನು ಅದರ ಬಯಕೆ ಯಾಕೆ? ನಾನು ಕತ್ತರಿಸಿದ ಹಣ್ಣಿನ ಹೋಳುಗಳನ್ನು ನನ್ನ ಮುಂದೆಯೇ ನೀನು ತಿಂದರೆ ನನಗೆ ಪಾಪವೆಲ್ಲ ತೊಳೆದುಹೋಗಿ ಪುಣ್ಯ ಸಂಪಾದಿಸಿ ಸ್ವರ್ಗ ತಲುಪಲು ಸುಲಭವಾಗುತ್ತದೆ” ಎಂದು ಮೊಲ ನಯ, ವಿನಯದಿಂದ ಕೇಳಿಕೊಂಡು, ಕೆಂಪಗಿರುವ ಕಬ್ಬಿಣದ ಉಂಡೆಗಳನ್ನು ತೋರಿಸಿತು.
ನರಿ, “ಕಲ್ಲಂಗಡಿ ಅಂದರೆ ನನಗೂ ಪ್ರೀತಿಯಿದೆ. ನೀನು ಇಷ್ಟೊಂದು ದೈನ್ಯದಿಂದ ಕೇಳಿಕೊಳ್ಳುವಾಗ ಇಲ್ಲವೆನ್ನಲು ನನಗೆ ಆಗುವುದಿಲ್ಲ. ಮೊದಲು ಒಂದು ಹೋಳು ತಿಂದು ಬಳಿಕ ನಿನಗೆ ತಕ್ಕ ದಂಡನೆ ವಿಧಿಸುತ್ತೇನೆ” ಎಂದು ಹೇಳಿ ಬೇರೇನೂ ಯೋಚಿಸದೆ ಕಬ್ಬಿಣದ ಉಂಡೆಗೆ ಬಾಯಿ ಹಾಕಿತು. ಆಗ ಅದರ ಬಾಯಿ ಸುಟ್ಟುಹೋಗಿ ನಾಲಿಗೆಯ ತುಂಬ ಗುಳ್ಳೆಗಳೆದ್ದವು. ಮೊಲವನ್ನು ಮರೆತು ನೋವಿನಿಂದ ಕೂಗಿಕೊಂಡು ಕಾಡಿನತ್ತ ಓಡಿತು.
ಮರುದಿನ ಮರಳಿ ನರಿ ತನ್ನನ್ನು ಹುಡುಕಿಕೊಂಡು ಬರುತ್ತದೆಂದು ಮೊಲಕ್ಕೆ ಗೊತ್ತಿತ್ತು. ಒಂದು ಕೊಳಲು ಹಿಡಿದುಕೊಂಡು ಊದುತ್ತ ದಾರಿಯ ಪಕ್ಕ ಕುಳಿತುಕೊಂಡಿತು. ನರಿ ರೋಷಾವೇಶದಿಂದಲೇ ಬಂದಿತು. ಮೊಲ ನಗುತ್ತಲೇ ಮಾತನಾಡಿಸಿತು. “ನಿನ್ನ ಕೋಪ ನನಗೆ ಅರ್ಥವಾಗುತ್ತದೆ. ನಾನು ಎಲ್ಲಿಗೂ ಹೋಗುವುದಿಲ್ಲ. ಅರ್ಧ ಗಂಟೆಯ ಹೊತ್ತು ನನಗೆ ಜೀವದಾನ ಮಾಡು. ಊರನ್ನಾಳುವ ದೊರೆಯ ಮಗಳಿಗೆ ಮದುವೆ. ಪರದೇಶದ ರಾಜಕುಮಾರನ ದಿಬ್ಬಣ ಇದೇ ಹಾದಿಯಾಗಿ ಹೋಗುತ್ತದೆ. ಆಗ ಅವನ ಸ್ವಾಗತಕ್ಕೆ ಇಲ್ಲಿ ಕುಳಿತು ಕೊಳಲೂದುವ ಕೆಲಸವನ್ನು ದೊರೆ ಕೊಟ್ಟಿದ್ದಾನೆ. ಇದಕ್ಕಾಗಿ ಹತ್ತು ಹುಂಜ ಕೊಡುತ್ತಾನಂತೆ. ಒಂದು ಮೂಟೆ ಸೌತೆಕಾಯಿಯೂ ಇರುತ್ತದಂತೆ. ಇದನ್ನೆಲ್ಲ ನನಗೆ ತಿನ್ನಲು ಆಗುವುದಿಲ್ಲ. ಯಾರಿಗಾದರೂ ದಾನ ಕೊಟ್ಟು ನಿನ್ನ ಕೈಯಲ್ಲಿ ಸತ್ತುಹೋಗುತ್ತೇನೆ” ಎಂದು ಮೊಲ ಹೇಳಿತು.
“”ಹತ್ತು ಹುಂಜ ಕೊಡುತ್ತಾನೆಯೆ? ಬೇರೆಯವರಿಗೆ ಯಾಕೆ ಕೊಡಬೇಕು? ಅದೆಲ್ಲ ನನಗೇ ಇರಲಿ. ರಾಜಕುಮಾರ ಬರುವ ತನಕ ನಾನೇ ಕೊಳಲು ಊದುತ್ತೇನೆ. ಹುಂಜ ದೊರಕಿದ ಮೇಲೆ ನಿನ್ನ ಕತೆ ಮುಗಿಸುತ್ತೇನೆ” ಎಂದು ನರಿ ಮೊಲದ ಕೈಯಿಂದ ಕೊಳಲು ತೆಗೆದುಕೊಂಡು ಜೋರಾಗಿ ಊದತೊಡಗಿತು. ಮೊಲ ಮೆಲ್ಲಗೆ ಅಲ್ಲಿಂದ ಜಾರಿಕೊಂಡು ನರಿಯ ಹಿಂಭಾಗದಲ್ಲಿದ್ದ ಒಣಗಿದ ಹುಲ್ಲಿನ ರಾಶಿಗೆ ಬೆಂಕಿ ಹಚ್ಚಿತು. ಕೊಳಲಿನ ದನಿಯಿಂದಾಗಿ ಬೆಂಕಿ ಹರಡುತ್ತಿರುವುದು ನರಿಗೆ ಗೊತ್ತಾಗಲಿಲ್ಲ. ನರಿಯ ಮೈಗೆ ಬೆಂಕಿ ಹಿಡಿಯಿತು. ಆಗ ಕೊಳಲನ್ನು ದೂರ ಎಸೆದು ಕಾಲಿಗೆ ಬುದ್ಧಿ ಹೇಳಿ ದೂರದ ಕಾಡಿಗೆ ಓಡಿತು. ಬೆಂಕಿಯಿಂದ ಅರೆಸುಟ್ಟ ಮೈಯಲ್ಲಿ ಬಿಳಿಯ ಕಲೆಗಳಾದವು, ಕೂದಲುಗಳು ಕೆಂಪಗಾದವು. ಬಳಿಕ ಅದು ಮೊಲದ ತಂಟೆಗೆ ಬರಲಿಲ್ಲ.
ಪ. ರಾಮಕೃಷ್ಣ ಶಾಸ್ತ್ರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.