![Arrest](https://www.udayavani.com/wp-content/uploads/2025/02/Arrest-6-415x249.jpg)
![Arrest](https://www.udayavani.com/wp-content/uploads/2025/02/Arrest-6-415x249.jpg)
Team Udayavani, Aug 19, 2019, 3:09 AM IST
ಬೆಂಗಳೂರು: ಟೆಲಿಫೋನ್ ಕದ್ದಾಲಿಕೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಿರುವುದು ರಾಜಕೀಯ ಮುಖಂಡರು ಮಾತ್ರವಲ್ಲದೆ, ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದೆ. ಫೋನ್ ಕದ್ದಾಲಿಕೆ ಕ್ರಿಮಿನಲ್ ಅಪರಾಧ ಆಗಿರುವುದರಿಂದ ಸಿಬಿಐ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡ ಬಳಿಕ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಯಾರೆಲ್ಲ ಅಧಿಕಾರಿಗಳ ಹೆಸರು ಕೇಳಿಬಂದಿದೆ? ಯಾರ ಪೋನ್ ಕದ್ದಾಲಿಕೆಯಾಗಿದೆ?
ಹೇಗೆ ಸೋರಿಕೆಯಾಗಿದೆ? ಎಂಬೆಲ್ಲ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ವಿಚಾರಣೆ ಆರಂಭಿಸಲಿದ್ದಾರೆ. ಆಗ ತನಿಖಾ ದೃಷ್ಟಿಯಿಂದ ಫೋನ್ ಕದ್ದಾಲಿಕೆಗೆ ಸೂಚನೆ ನೀಡಿದ್ದರು ಎಂದು ಹೇಳಲಾದ ಈ ಹಿಂದಿನ ಪೊಲೀಸ್ ಆಯುಕ್ತ, ಎಡಿಜಿಪಿ ಅಲೋಕ್ ಕುಮಾರ್ ಹಾಗೂ ಫೋನ್ ಕದ್ದಾಲಿಕೆಗೆ ಒಳಗಾಗಿದ್ದರು ಎನ್ನಲಾದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರನ್ನು ವಿಚಾರಣೆಗೆ ಕರೆಸುವ ಸಾಧ್ಯತೆಯಿದೆ.
ಪೊಲೀಸ್ ಮೂಲಗಳ ಪ್ರಕಾರ ಸಿಸಿಬಿ, ಕೇಂದ್ರ ವಿಭಾಗ ಸೇರಿ ಮೂರು ಕಡೆಗಳಲ್ಲಿ ಫೋನ್ ಕದ್ದಾಲಿಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ಹೀಗಾಗಿ ಹಿಂದಿದ್ದ ಕೆಲ ಡಿಸಿಪಿಗಳು, ಫೋನ್ ಕದ್ದಾಲಿಕೆ ವಿಭಾಗದ ಇನ್‌ಸ್ಪೆಕ್ಟರ್‌ಗಳ ವಿಚಾರಣೆ ನಡೆಸಬೇಕಾಗುತ್ತದೆ. ಅಷ್ಟೇ ಅಲ್ಲದೆ, ಫೋನ್ ಕದ್ದಾಲಿಕೆ ಆಡಿಯೋ ಸೋರಿಕೆ ಪ್ರಕರಣ ಬೆಳಕಿಗೆ ಬಂದ ವೇಳೆಯಲ್ಲಿ ಕೇಳಿ ಬಂದ ಎಡಿಜಿಪಿ ದರ್ಜೆಯ ಹಿರಿಯ ಪೊಲೀಸ್ ಅಧಿಕಾರಿಗಳನ್ನು ವಿಚಾರಣೆಗೊಳಬೇಕಾಗಬಹುದು ಎಂದು ಹೇಳಲಾಗಿದೆ.
ಮಹತ್ವ ಪಡೆದುಕೊಳ್ಳಲಿದೆ ಇನ್‌ಸ್ಪೆಕ್ಟರ್ ಹೇಳಿಕೆ: ಎಡಿಜಿಪಿ ದರ್ಜೆಯ ಅಧಿಕಾರಿಯೊಬ್ಬರ ಸೂಚನೆ ಮೇರೆಗೆ ಕೆಲ ಹಿರಿಯ ಪೊಲೀಸ್ ಅಧಿಕಾರಿಗಳ ಫೋನ್ ಕದ್ದಾಲಿಕೆ ಮಾಡಲಾಗಿತ್ತು. ಅಲ್ಲದೆ, ತಾವೇ ಸಂಭಾಷಣೆಯ ಆಡಿಯೋವನ್ನು ಪೆನ್‌ಡ್ರೈವ್‌ನಲ್ಲಿ ಹಾಕಿಕೊಂಡು ಭಾಸ್ಕರ್‌ರಾವ್ ಅವರು ಅಧಿಕಾರ ವಹಿಸಿಕೊಳ್ಳುವ ಕೆಲವೇ ಗಂಟೆಗಳ ಮೊದಲು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಗೆ ಕೊಟ್ಟಿದ್ದಾಗಿ ಪ್ರಕರಣದ ವಿಚಾರಣೆ ವೇಳೆ ಸಿಸಿಬಿಯ ತಾಂತ್ರಿಕ ವಿಭಾಗದ ಇನ್‌ಸ್ಪೆಕ್ಟರ್‌ರೊಬ್ಬರು ವಿಚಾರಣೆ ಸಂದರ್ಭದಲ್ಲಿ ಹೇಳಿಕೆ ನೀಡಿದ್ದರು ಎನ್ನಲಾಗಿದೆ.
ಇಲಾಖೆಗೆ ಮುಜುಗರ: ಫೋನ್ ಕದ್ದಾಲಿಕೆ ಪ್ರಕರಣ ಸಿಬಿಐಗೆ ವರ್ಗಾವಣೆಯಾಗಿರುವುದು ರಾಜ್ಯ ಪೊಲೀಸ್ ಇಲಾಖೆಗೆ ತೀವ್ರ ಮುಜುಗರ ಉಂಟು ಮಾಡಿದೆ. ಫೋನ್ ಕದ್ದಾಲಿಕೆ ವಿಚಾರವನ್ನು ಇಷ್ಟೊಂದು ದೊಡ್ಡದಾಗಿ ಮಾಡಿಕೊಂಡು ತಮ್ಮ ವೈಯಕ್ತಿಕ ವರ್ಚಸ್ಸಿಗೆ ಧಕ್ಕೆ ತಂದುಕೊಂಡಿದಲ್ಲದೆ, ರಾಜ್ಯ ಪೊಲೀಸ್ ಇಲಾಖೆಗೆ ಮುಜುಗರ ಉಂಟು ಮಾಡಿರುವುದು ಬೇಸರದ ಸಂಗತಿ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.
* ಮೋಹನ್ ಭದ್ರಾವತಿ
You seem to have an Ad Blocker on.
To continue reading, please turn it off or whitelist Udayavani.