ರಾಜುಗೌಡಗೆ ಸಿಗದ ಸಚಿವ ಸ್ಥಾನ; ಅಭಿಮಾನಿಗಳಲ್ಲಿ ನಿರಾಸೆ-ಬೇಸರ
ಕೊನೆ ಗಳಿಗೆಯಲ್ಲಿ 'ನರಸಿಂಹ'ರಿಗೆ ಕೈಕೊಟ್ಟ ಬಿಜೆಪಿ 'ನಾಯಕರು'
Team Udayavani, Aug 22, 2019, 11:13 AM IST
ಸುರಪುರ: ಶಾಸಕ ನರಸಿಂಹ ನಾಯಕ (ರಾಜುಗೌಡ) ಅವರಿಗೆ ಸಚಿವ ಸ್ಥಾನ ಕೈತಪ್ಪಿರುವುದು ತಾಲೂಕಿನ ಬಿಜೆಪಿ ಕಾರ್ಯಕರ್ತರು, ಹಿತೈಷಿಗಳು, ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.
ಬಿಜೆಪಿ ಸರಕಾರದಲ್ಲಿ ಸುರಪುರ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡುವ ನಿರೀಕ್ಷೆ ಇತ್ತು. ಸರಕಾರ ರಚನೆಯಾದಾಗಿನಿಂದಲು ರಾಜುಗೌಡ ಅವರಿಗೆ ಸಚಿವ ಸ್ಥಾನ ಕಾಯಂ ಅನ್ನುವ ವಾತಾವರಣ ನಿರ್ಮಾಣವಾಗಿತ್ತು. ಇದೇ ದೃಢ ವಿಶ್ವಾಸದಿಂದ ಶಾಸಕರನ್ನು ಅಭಿನಂದಿಸಲು ಕೆಲ ಕಾರ್ಯಕರ್ತರು ಬೆಂಗಳೂರಿಗೂ ತೆರಳಿದ್ದರು. ಆದರೆ ಕೊನೆ ಘಳಿಗೆಯಲ್ಲಿ ಹೈ ಕಮಾಂಡ್ ಕಳುಹಿಸಿದ್ದ ಪಟ್ಟಿಯಲ್ಲಿ ರಾಜುಗೌಡ ಅವರ ಹೆಸರು ಇಲ್ಲದಿರುವುದು ಕಾರ್ಯಕರ್ತರಿಗೆ ನಿರಾಶೆ ಮೂಡಿಸಿದೆ.
ಸರಕಾರ ರಚಿಸುವಲ್ಲಿ ಶಾಸಕ ರಾಜುಗೌಡರು ತೆರೆಮರೆಯಲ್ಲಿ ಸಾಕಷ್ಟು ಕಸರತ್ತು ನಡೆಸಿದ್ದರು. ಬಿ.ಎಸ್. ಯಡಿಯೂರಪ್ಪ ಆಪ್ತ ವಲಯದಲ್ಲಿ ಮೊದಲಿನಿಂದಲೂ ಗುರುತಿಸಿಕೊಂಡಿದ್ದರು. ಈ ಹಿಂದೆ ಬಿಜೆಪಿ ಸರಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದ ಅನುಭವವಿತ್ತು. ನಾಯಕ ಸಮುದಾಯದ ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಲೋಕಸಭೆ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರಾಗಿ, ಪಕ್ಷ ಸಂಘಟನೆಗೂ ಒತ್ತು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಸಿಕ್ಕೇ ಸಿಗುತ್ತೇ ಎಂಬ ಉಮೇದಿನಲ್ಲಿದ್ದ ಕಾರ್ಯಕರ್ತರಿಗೆ ಸಚಿವ ಸ್ಥಾನ ದೊರೆಯದಿರುವುದು ನಿರಾಸೆಗೆ ಕಾರಣವಾಗಿದೆ.
ಶಾಸಕ ನರಸಿಂಹ ನಾಯಕ (ರಾಜೂಗೌಡ) ಬುಧವಾರ ಪತ್ರಿಕೆಯೊಂದಿಗೆ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಹಬ್ಬುತ್ತಿರುವ ವದಂತಿಗಳಿಗೆ ಜಿಪಂ, ತಾಪಂ, ಗ್ರಾಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ಯೊರೊಬ್ಬರೂ ಕಿವಿಗೊಡಬಾರದು. ತಮ್ಮ ಸದಸ್ಯ ಸ್ಥಾನಕೆ ರಾಜಿನಾಮೆ ನೀಡುವುದಾಗಲಿ, ಪತ್ರಿಕೆಗಳಿಗೆ ಅಸಮಾಧಾನದ ಹೇಳಿಕೆ, ಅಥವಾ ಪ್ರತಿಭಟನೆ ಮಾಡುವುದಾಗಲಿ ಯಾರೊಬ್ಬರೂ ಮಾಡಬಾರದೆಂದು ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.