ಅಸಾಧಾರಣ ಅನುಭೂತಿಯ ನೃತ್ಯಗಾಥಾ
ಸುರಭಿ ಬೈಂದೂರು ಪ್ರಸ್ತುತಿ
Team Udayavani, Aug 23, 2019, 5:00 AM IST
ನೂರಾರು ವರ್ಷಗಳ ಹಿಂದೆ ನಾಟ್ಯಲೋಕದ ಅನಭಿಷಕ್ತ ಸಾಮ್ರಾಜ್ಞಯರಾಗಿ ಇತಿಹಾಸದಲ್ಲಿ ಹೆಸರನ್ನು ದಾಖಲಿಸಿ ಕಾಲಚಕ್ರದಲ್ಲಿ ಲೀನರಾದರೂ ತಮ್ಮ ಕಲಾಸಾಧನೆಯಿಂದಾಗಿ ಇಂದಿಗೂ ಪ್ರಸ್ತುತರಾಗಿರುವ ಶ್ರೇಷ್ಟ ನೃತ್ಯಾಂಗನೆಯರ ಬದುಕನ್ನು ಹತ್ತಿರದಿಂದ ನೋಡಲು ಯತ್ನಿಸುವ ನೃತ್ಯಗಾಥಾ ವೀಕ್ಷಕರನ್ನು ಭೂತಕಾಲಕ್ಕೆ ಕೊಂಡೊಯ್ಯುತ್ತದೆ.
ಸುರಭಿ ಬೈಂದೂರು ಸಂಸ್ಥೆ ಸ್ವಾತಂತ್ರ್ಯೋತ್ಸವದಂದು ರೋಟರಿ ಭವನದಲ್ಲಿ ಏರ್ಪಡಿಸಿದ ಸ್ವಾತಂತ್ರ್ಯದೆಡೆಗೆ ಬಣ್ಣದ ಹೆಜ್ಜೆ ಕಾರ್ಯಕ್ರಮದಲ್ಲಿ ವಿ| ಅನಘಾಶ್ರೀ ಉಡುಪಿ ಪ್ರದರ್ಶಿಸಿದ ನಾಟ್ಯಕಲೆಯನ್ನೇ ಬದುಕಿನ ಉಸಿರಾಗಿಸಿಕೊಂಡು ಪರಿಪೂರ್ಣತೆಯ ಉತ್ತುಂಗಕ್ಕೇರ ಬಯಸುವ ಹೆಬ್ಬಯಕೆಯನ್ನು ಹೊತ್ತ ಕಲಾವಿದೆಯೋರ್ವಳ ಅನುಭವ-ಅನಿಸಿಕೆಯನ್ನು ಮನೋಜ್ಞವಾಗಿ ವ್ಯಕ್ತಪಡಿಸುವ ಏಕವ್ಯಕ್ತಿ ರಂಗನಾಟಕ ನೃತ್ಯಗಾಥಾ ಭಾರೀ ಪ್ರಶಂಸೆಗೆ ಪಾತ್ರವಾಯಿತು. ನೂರಾರು ವರ್ಷಗಳ ಹಿಂದೆ ನಾಟ್ಯಲೋಕದ ಅನಭಿಷಕ್ತ ಸಾಮ್ರಾಜ್ಞಯರಾಗಿ ಇತಿಹಾಸದಲ್ಲಿ ಹೆಸರನ್ನು ದಾಖಲಿಸಿ ಕಾಲಚಕ್ರದಲ್ಲಿ ಲೀನರಾದರೂ ತಮ್ಮ ಕಲಾಸಾಧನೆಯಿಂದಾಗಿ ಇಂದಿಗೂ ಪ್ರಸ್ತುತರಾಗಿರುವ ಶ್ರೇಷ್ಟ ನೃತ್ಯಾಂಗನೆಯರ ಬದುಕನ್ನು ಹತ್ತಿರದಿಂದ ನೋಡಲು ಯತ್ನಿಸುವ ನೃತ್ಯಗಾಥಾ ವೀಕ್ಷಕರನ್ನು ಭೂತಕಾಲಕ್ಕೆ ಕೊಂಡೊಯ್ಯುತ್ತದೆ.
ಆ ಮಹಾನ್ ನೃತ್ಯಾಂಗನೆಯರ ಶರೀರದಲ್ಲಿ ಪರಕಾಯ ಪ್ರವೇಶ ಮಾಡಿದಂತೆ ಅನುಭವದ ಪರಾಕಾಷ್ಠೆಗೆ ತಲುಪುತಾರೆ. ಗತಲೋಕದ ನೃತ್ಯಾಂಗನೆಯರ ಬದುಕಿನ ಪುಟಗಳನ್ನು ತಿರುವಿದಂತೆ ಏಕೈಕರಾಗಿ ಅನಘಾಶ್ರೀ ಸಂಪೂರ್ಣ ವೇದಿಕೆಯನ್ನು ತುಂಬಿಕೊಂಡು ಒಂದಿನಿತು ಏಕತಾನತೆಗೆ ಆಸ್ಪದ ಕೊಡದೇ ಅಸಾಧರಣ ಅನುಭೂತಿ ಕೊಟ್ಟು ಸುಮಾರು 75 ನಿಮಿಷಗಳ ಕಾಲ ಹಿಡಿದಿರಿಸಿದರು.
ಸಾವಿರಾರು ವರ್ಷಗಳ ಪೂರ್ವದಲ್ಲಿ ವೃಷಭನಾಥನ ಆಸ್ಥಾನದಲ್ಲಿದ್ದ ಪ್ರತಿಭಾನ್ವಿತ ನೃತ್ಯಾಂಗನೆ ನೀಲಾಂಜಲಿಯ ಬದುಕಿನೊಳಗೆ ಇಣುಕಿ ನೋಡುವ ಸುಂದರ ಚಿತ್ರಣದೊಂದಿಗೆ ಪ್ರಾರಂಭವಾಗುವ ನೃತ್ಯಗಾಥಾ ನರ್ತಿಸುತ್ತಿರುವಾಗಲೇ ಇಹದ ಬದುಕಿಗೆ ವಿದಾಯ ಹೇಳುವ ಆ ಮಹಾನ್ ಕಲಾವಿದೆಯ ಕಲೆಯ ಸೊಬಗನ್ನು ಇಂಚಿಂಚೂ ಸಾದ್ಯಂತವಾಗಿ ತೆರೆದಿಡುತ್ತದೆ. ನೀಲಾಂಜನೆಯಿಂದ ಮಹಾರಾಣಿ ಶಾಂತಲೆಯತ್ತ ಹೊರಳುವ ಕಲಾವಿದೆ ವೀರನಾರಾಯಣನ ಮಂದಿರದ ಶಿಲ್ಪಗಳ ನಿರ್ಮಾಣಕ್ಕಾಗಿ ಗುರು ಜಕ್ಕಣಾಚಾರ್ಯರ ಬಳಿ ಮದುವೆಯ ಪ್ರಥಮ ರಾತ್ರಿಯಂದೇ ಪತಿಯೊಂದಿಗೆ ತೆರಳುವ ಘಟನಾವಳಿಯನ್ನು ಮತ್ತು ಪತಿ-ಪತ್ನಿಯರ ಸರಸ-ಸಲ್ಲಾಪದ ಸಂಭಾಷಣೆಯನ್ನು ಕಣ್ಣಿಗೆ ಕಟ್ಟುವಂತೆ ಪ್ರಸ್ತುತ ಪಡಿಸಿದರು. ಮಹಾರಾಣಿ ಶಾಂತಲೆ ಮತ್ತು ಮಹಾರಾಜರ ಆಗಮನವನ್ನರಿಯದೇ ಮೈಮರೆತು ತನ್ಮಯತೆಯಿಂದ ಕೆತ್ತನೆಯಲ್ಲಿ ನಿರತನಾಗಿದ್ದ ಜಕ್ಕಣನಿಗೆ ಮಹಾರಾಜರು ತಾಂಬೂಲ ತಟ್ಟೆ ಹಿಡಿಯುವ ಮತ್ತು ಮಧ್ಯೆ ಮಧ್ಯೆ ತಾಂಬೂಲವನ್ನುಗುಳುವ ಗುರುವಿಗೆ ಸ್ವತಹ ಮಹಾರಾಣಿ ಪೀಕುದಾನಿ ಹಿಡಿಯುವ ದೃಶ್ಯ ಮಂತ್ರಮುಗ್ಧಗೊಳಿಸಿತು.
ನಾಟ್ಯರಾಣಿ ಶಾಂತಲೆಯ ಅನಂತರ ಕಲಾವಿದೆ, ನವಾಬರ ಶಹರ ಲಖನೌದ ಮುಜರಾ ನರ್ತಕಿ ಉಮರಾವ್ ಜಾನ್‌ಳ ನೃತ್ಯ-ಸಂಗೀತ, ಸಾಹಿತ್ಯ ಸಂಗಮದ ವ್ಯಕ್ತಿತ್ವವನ್ನು ಹಾಗೂ ಆಕೆಯ ದಾರುಣ ಬದುಕಿನ ವೃತ್ತಾಂತವನ್ನು ಪದರ ಪದರವಾಗಿ ತೆರೆದಿಡುತ್ತಾರೆ. ನವಾಬರ ಮಹಫಿಲ್‌ಗಳನ್ನು ಶೃಂಗರಿಸುವ ಉಮರಾವ್ ಜಾನ್‌ಳನ್ನು ಕೇವಲ ಬೌದ್ಧಿಕ ಹಸಿವಿಗಾಗಿಯಲ್ಲದೇ ಆಕೆಯ ನೃತ್ಯ-ಸಾಹಿತ್ಯದ ಪ್ರತಿಭೆಯನ್ನು ಹುಡುಕಿಕೊಂಡು ಬರುವವರೂ ಕಡಿಮೆಯೇನಿರಲಿಲ್ಲ ಎನ್ನುವುದರೊಂದಿಗೆ ಆಕೆಯ ಕಲಾ ಬದುಕಿನ ಇನ್ನೊಂದು ಮುಖವನ್ನು ಪ್ರೇಕ್ಷಕರಿಗೆ ಅದ್ಭುತವಾಗಿ ಪರಿಚಯಿಸುತ್ತಾರೆ. ಮುಜರಾವಷ್ಟೇ ಅಲ್ಲದೇ ಶಾಯರಿ, ಹಾಜರಿ-ಜವಾಬ…, ಕಲೆ-ಸಾಹಿತ್ಯಕ ಪಾಂಡಿತ್ಯದಿಂದಾಗಿ ಉಮರಾವ್ ಜಾನ್‌ಳ ಸಾಂಗತ್ಯಕ್ಕೆ ಕಲಾವಿದರ, ಪಂಡಿತರ, ಕಲಾ ರಸಿಕರ ತಂಡವೇ ಹಾತೊರೆಯುತ್ತಿತ್ತು. ಸಾಮಾನ್ಯ ಗಣಿಕೆಯಾಗಿರದೇ ಆಕೆ ಕಲಾಲೋಕದ ಮಿನುಗು ತಾರೆಯಾಗಿ ಬದುಕಿದ್ದಳು ಎನ್ನುವ ಪ್ರಸ್ತುತಿ ವರ್ತಮಾನದ ಸತ್ಯದಂತೆ ಪ್ರೇಕ್ಷಕರ ಮನ ತಟ್ಟಿತು.
ರಂಗದಲ್ಲಿಯೇ ಶಾಂತಲೆ-ಉಮರಾವ್ ಜಾನ್‌ರ ಪಾತ್ರಕ್ಕೆ ತಕ್ಕಂತೆ ಉಡುಪಿನ ವಿನ್ಯಾಸ ಪರಿವರ್ತನೆಯೂ ಕಲಾತ್ಮಕ ಸ್ಪರ್ಶ ಪಡೆದಿತ್ತು. ಒಂದು ಗಂಟೆಗೂ ಅಧಿಕ ಸಮಯದ ರಂಗ ಪ್ರದರ್ಶನದಲ್ಲಿ ಕಲಾವಿದೆಯ ಮೋಹಕ ಭಾವ-ಭಂಗಿ ಮನ ಸೆಳೆಯಿತು. ರಂಗದ ಮೇಲೆ ಅನಘಾರ ಚುರುಕಿನ ಹೆಜ್ಜೆಗಳು, ಅದ್ಭುತವೆನಿಸಿದ ನೃತ್ಯ- ಸಂಭಾಷಣೆ, ಸ್ಪುಟವಾದ ಶಬ್ದೋಚ್ಚಾರ ಪ್ರೇಕ್ಷಕರನ್ನು ಕದಲದಂತೆ ಮಾಡಿತು. ಮೋಹಕ ಸಂಗೀತ, ಸಂದರ್ಭಕ್ಕೆ ತಕ್ಕಂತೆ ಬೆಳಕಿನ ನಿರ್ವಹಣೆ ರಂಗಪ್ರಯೋಗದ ಯಶಸ್ಸಿಗೆ ಸಹಾಯಕವಾಯಿತು.
ಬೈಂದೂರು ಚಂದ್ರಶೇಖರ ನಾವಡ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.