ಸಂತ್ರಸ್ತರ ಸಂಕಷ್ಟ ಆಲಿಸಿದ ಸಚಿವರು
Team Udayavani, Aug 23, 2019, 5:27 AM IST
ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೂತನ ಸಚಿವರ ಭೇಟಿ ಗುರುವಾರವೂ ಮುಂದುವರಿದಿದೆ. ಸಚಿವ ಕೆ.ಎಸ್. ಈಶ್ವರಪ್ಪ ವಿಜಯಪುರ ಜಿಲ್ಲೆಯಲ್ಲಿ, ಲಕ್ಷ್ಮಣ ಸವದಿ ಬೆಳಗಾವಿಯಲ್ಲಿ, ಸುರೇಶ್ ಕುಮಾರ್ ಕೊಡಗಿನಲ್ಲಿ, ಸಿ.ಸಿ.ಪಾಟೀಲ್ ಕೊಪ್ಪಳ ಜಿಲ್ಲೆಯಲ್ಲಿ, ಜಗದೀಶ ಶೆಟ್ಟರ್ ಉತ್ತರ ಕನ್ನಡ ಜಿಲ್ಲೆಯಲ್ಲಿ, ಶ್ರೀರಾಮುಲು ಹಾಗೂ ಪ್ರಭು ಚೌಹಾಣ್ ಯಾದಗಿರಿ ಜಿಲ್ಲೆಯಲ್ಲಿ, ಬಸವರಾಜ ಬೊಮ್ಮಾಯಿ ಹಾವೇರಿ ಜಿಲ್ಲೆಯಲ್ಲಿ, ಆರ್. ಅಶೋಕ್ ಮೈಸೂರು ಜಿಲ್ಲೆಯಲ್ಲಿ, ಸೋಮಣ್ಣ ಚಾಮರಾಜನಗರ ಜಿಲ್ಲೆಯಲ್ಲಿ, ಮಾಧುಸ್ವಾಮಿ ಹಾಗೂ ಸಿ.ಟಿ.ರವಿ.ಹಾಸನ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಸಂತ್ರಸ್ತರ ಅಹವಾಲು ಆಲಿಸಿದರು.
3 ದಿನದಲ್ಲಿ ಸರ್ಕಾರಕ್ಕೆ ನೆರೆ ಹಾನಿ ವರದಿ: ಸಿ.ಸಿ.ಪಾಟೀಲ್
ಕೊಪ್ಪಳ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಚಿವ ಸಂಪುಟ ರಚನೆ ಮಾಡಿದ ಬಳಿಕ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಲು ಸಚಿವರ ತಂಡ ರಚನೆ ಮಾಡಿದ್ದಾರೆ. ನೆರೆ ಪೀಡಿತ ಪ್ರದೇಶಕ್ಕೆ ತೆರಳಿ ವರದಿ ನೀಡುವಂತೆ ಸೂಚಿಸಿದ್ದು, 2-3 ದಿನದಲ್ಲಿ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದರು.
ಮುನಿರಾಬಾದ್‌ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಕಂಡರಿಯದಂತಹ ಪ್ರವಾಹ ಬಂದು ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಸಚಿವ ಸಂಪುಟ ರಚನೆ ಮುನ್ನ ಸಿಎಂ ಏಕಾಂಗಿಯಾಗಿ ಅಧಿಕಾರಿಗಳ ಜೊತೆ ನೆರೆ ಪೀಡಿತ ಜಿಲ್ಲೆಗಳಿಗೆ ತೆರಳಿ ಸಂತ್ರಸ್ತರಿಗೆ ಸಾಂತ್ವನ ಹೇಳಿ ಪರಿಹಾರದ ಭರವಸೆ ನೀಡಿದ್ದಾರೆ. ಸಚಿವ ಸಂಪುಟ ರಚನೆ ಬಳಿಕ ಮೊದಲ ಸಂಪುಟದಲ್ಲೇ ಸುದೀರ್ಘ ಚರ್ಚೆ ನಡೆಸಿ ಸಚಿವರನ್ನು ನೆರೆ ಪೀಡಿತ ಪ್ರದೇಶಕ್ಕೆ ತೆರಳಿ ವರದಿ ನೀಡುವಂತೆ ಸೂಚನೆ ನೀಡಿದ್ದು, ನನಗೆ ಗದಗ ಹಾಗೂ ಕೊಪ್ಪಳ ಜಿಲ್ಲೆಗಳ ಹೊಣೆ ನೀಡಿದ್ದಾರೆ. ಇಲ್ಲಿನ ಪರಿಸ್ಥಿತಿ ಅಧ್ಯಯನ ಮಾಡಿ ಮೂರು ದಿನಗಳಲ್ಲಿ ಸರ್ಕಾರಕ್ಕೆ ವರದಿ ಕೊಡಲಿದ್ದೇನೆ ಎಂದರು.
ಕೇಂದ್ರದಿಂದ ನೆರವು ಬರುತ್ತೆ: ಕೇಂದ್ರ ಸರ್ಕಾರದಿಂದ ರಾಜ್ಯದ ಪ್ರವಾಹ ಹಾನಿಗೆ ಈ ಬಾರಿ ಹೆಚ್ಚಿನ ಪರಿಹಾರ ಬರಲಿದೆ. ಕೇಂದ್ರ ಸರ್ಕಾರ ಪ್ರವಾಹ ಬಂದ ಮರುದಿನವೇ ಪರಿಹಾರ ಕೊಡಲ್ಲ. ಅವರು ಅಧಿಕಾರಿಗಳ ತಂಡ ಕಳಿಸಿ ಅಧ್ಯಯನ ನಡೆಸಿ, ರಾಜ್ಯ ಸರ್ಕಾರದ ವರದಿ ಎರಡನ್ನೂ ತಾಳೆ ಹಾಕಿ ಪರಿಹಾರ ಬಿಡುಗಡೆ ಮಾಡುತ್ತಾರೆ. ನಾನು ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿಯಾದ ಪ್ರದೇಶದ ವೀಕ್ಷಣೆಗೆ ಬಂದಿದ್ದೇನೆ ಎಂದರು.
ಒಂದೇ ಕಂತಿನಲ್ಲಿ ಕಿಸಾನ್ ಸಮ್ಮಾನ್ ನೆರವು
ಹಾಸನ: ಜಿಲ್ಲೆಯಲ್ಲಿ ಸಂಭವಿಸಿರುವ ಅತಿವೃಷ್ಟಿ, ಪ್ರವಾಹದ ಹಾನಿಯ ಬಗ್ಗೆ ಮಾಹಿತಿ ಪಡೆಯಲು ಜಿಲ್ಲಾಡಳಿತ ಏಕಗವಾಕ್ಷಿ ವ್ಯವಸ್ಥೆ ಮಾಡಬೇಕು. ಎನ್‌ಡಿಆರ್‌ಎಫ್ ಪ್ರಕಾರ ಹಾಗೂ ವಾಸ್ತವಿಕ ಹಾನಿಯ ಅಂದಾಜಿನ ಬಗ್ಗೆ ಪರಿಹಾರದ ಪ್ರಸ್ತಾವನೆಯನ್ನು ಪ್ರತ್ಯೇಕವಾಗಿ ಸಲ್ಲಿಸಬೇಕೆಂದು ಸಚಿವರಾದ ಜೆ.ಸಿ.ಮಾಧುಸ್ವಾಮಿ ಮತ್ತು ಸಿ.ಟಿ.ರವಿ ಅವರು ಜಿಲ್ಲಾಡಳಿತಕ್ಕೆ ಸೂಚಿಸಿದರು.
ಜಿಲ್ಲೆಯ ಅತಿವೃಷ್ಟಿ ಹಾನಿ ಅಧ್ಯಯನಕ್ಕೆ ಆಗಮಿಸಿರುವ ಸಚಿವರು, ನಗರದಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಸಿದರು. ಅತಿವೃಷ್ಟಿ ಹಾಗೂ ಪ್ರವಾಹದ ಹಾನಿಯ ಮಾಹಿತಿ ಪಡೆದುಕೊಂಡರು. ಬಳಿಕ, ಸುದ್ದಿಗಾರರ ಜತೆ ಮಾತನಾಡಿದ ಸಚಿವ ಜೆ.ಸಿ.ಮಾಧುಸ್ವಾಮಿ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯ ಸರ್ಕಾರ ವರ್ಷಕ್ಕೆ ಎರಡು ಕಂತುಗಳಲ್ಲಿ ನೀಡಲು ಉದ್ಧೇಶಿಸಿರುವ 4,000 ರೂ.ಗಳನ್ನು ಅತಿವೃಷ್ಟಿ ಹಾಗೂ ಪ್ರವಾಹ ಸಂತ್ರಸ್ತ ಜಿಲ್ಲೆಗಳಲ್ಲಿ ಒಂದೇ ಕಂತಿನಲ್ಲಿ ಪಾವತಿಸಲು ಚಿಂತನೆ ನಡೆಸಲಾಗಿದೆ. ಸರ್ಕಾರಕ್ಕೆ ಈಗ ಅತಿವೃಷ್ಟಿ, ಪ್ರವಾಹದ ಪರಿಹಾರ ಕಾರ್ಯವೇ ಆದ್ಯತೆ. ಸದ್ಯಕ್ಕೆ ಸಚಿವ ಸಂಪುಟದಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗಳ ವಿಷಯಗಳನ್ನೂ ಕೈಗೆತ್ತಿಕೊಳ್ಳುವುದಿಲ್ಲ ಎಂದು ಹೇಳಿದರು.
ಧರೆ ಕುಸಿತ; ಅಧ್ಯಯನ ಆರಂಭಿಸಿದ ವಿಜ್ಞಾನಿಗಳು
ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡಿನ ಜನರನ್ನು ತಲ್ಲಣಗೊಳಿಸಿದ ಮಹಾ ಮಳೆ ಸಂದರ್ಭದಲ್ಲಿ ಆಗಿರುವ ಧರೆ ಕುಸಿತ ಬಗ್ಗೆ ಭಾರತೀಯ ಸರ್ವೇಕ್ಷಣಾ ಇಲಾಖೆ ಭೂ ವಿಜ್ಞಾನಿಗಳಾದ ಕಪಿಲ್ ಸಿಂಗ್, ಕಮಲ್ಕುಮಾರ್ ಹಾಗೂ ಚಿಕ್ಕಮಗಳೂರಿನ ಭೂ ವಿಜ್ಞಾನಿ ದಯಾನಂದ್, ಇಂಜಿನಿಯರ್ ರಾಘವನ್ ಅಧ್ಯಯನ ಆರಂಭಿಸಿದ್ದಾರೆ.
ವಿಜ್ಞಾನಿಗಳ ತಂಡ ಚಾರ್ಮಾಡಿ ಘಾಟ್ನಿಂದ 4 ಕಿ.ಮೀ. ದೂರದಲ್ಲಿರುವ ಅಲೇಖಾನ್ ಹೊರಟ್ಟಿ, ನಂತರ ಬಾಳೂರು, ಚನ್ನಹಡ್ಲು ಗ್ರಾಮಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದು, ಈ ಪ್ರಕ್ರಿಯೆ ಇನ್ನೂ ಕೆಲ ದಿನ ಮುಂದುವರಿಯಲಿದೆ.
ತಂಡದ ಭೂ ವಿಜ್ಞಾನಿಯೊಬ್ಬರು ಮಾತನಾಡಿ, ಮೊದಲ ದಿನ ಅಧ್ಯಯನ ನಡೆಸಿದಾಗ ಎಲ್ಲೆಲ್ಲಿ ಸಣ್ಣ ಝರಿಗಳು ಹರಿಯುತ್ತಿದ್ದವೋ ಅಂತಹ ಕಡೆಗಳಲ್ಲಿ ಭಾರೀ ಮಳೆ ಸುರಿದು ನೀರು ಹರಿದು ಹೋಗಿ ಅನಾಹುತಗಳು ಸಂಭವಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದರ ಬಗ್ಗೆ ಇನ್ನೂ ಹೆಚ್ಚು ಅಧ್ಯಯನ ನಡೆಸಬೇಕಿದೆ ಎಂದರು.
ಆ. 2ರಿಂದ 12ರವರೆಗೆ ಮಲೆನಾಡಿನಲ್ಲಿ ಭಾರೀ ಮಳೆ ಸುರಿದ ಪರಿಣಾಮ ಧರೆ ಕುಸಿತವಾಗಿತ್ತು. ಮೂಡಿಗೆರೆ ತಾಲೂ ಕಿನ ಬಾಳೂರು, ಬಣಕಲ್, ಕಳಸ ಹೋಬಳಿಗಳು ಸೇರಿದಂತೆ ಹಲವೆಡೆ ಒಂದೇ ದಿನ ಬೆಟ್ಟಗಳಲ್ಲಿ ಭೂ ಕುಸಿತವಾಗಿತ್ತು. ಇದರ ಬಗ್ಗೆ ಜನರು ಹಲವು ಸಂದೇಹ ವ್ಯಕ್ತಪಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.