“ಗುರು’ಗೆ ತಿರುಮಂತ್ರ
Team Udayavani, Aug 24, 2019, 5:04 AM IST
ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಜಗಳ ವಿಕೋಪಕ್ಕೆ ತಿರುಗಿದ್ದು, ಗುರು ದೇವೇಗೌಡರ ವಿರುದ್ಧ ಶಿಷ್ಯ ಸಿದ್ದರಾಮಯ್ಯ ಪಾಯಿಂಟ್ ಟು ಪಾಯಿಂಟ್ ವಾಗ್ಧಾಳಿ ನಡೆಸಿದ್ದಾರೆ. ಗುರುವಾರವಷ್ಟೇ ದೇವೇಗೌಡರು ಮಾಡಿದ್ದ ಎಲ್ಲಾ ಆರೋಪಗಳಿಗೂ ಸವಿಸ್ತಾರವಾಗಿ ಉತ್ತರ ನೀಡಿದ್ದಾರೆ. ಹದಿನಾಲ್ಕು ತಿಂಗಳ ಮೈತ್ರಿ ಸರ್ಕಾರದಲ್ಲಿ ತಾವು ಯಾವುದೇ ರೀತಿಯಲ್ಲೂ ಹಸ್ತಕ್ಷೇಪ ಮಾಡಿಲ್ಲ ಎಂದು ಹೇಳಿದ ಸಿದ್ದರಾಮಯ್ಯ, ಸಮ್ಮಿಶ್ರ ಸರ್ಕಾರ ಪತನಕ್ಕೆ ದೇವೇಗೌಡರು, ಕುಮಾರಸ್ವಾಮಿ ಮತ್ತು ರೇವಣ್ಣ ಕಾರಣ ಎಂದು ಜನರೇ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ದೇವೇಗೌಡರು ಮಾಧ್ಯಮಗಳ ಮೂಲಕ ತಮ್ಮ ವಿರುದ್ಧ ಗಂಭೀರ ಸ್ವರೂಪದ ಆರೋಪ ಮಾಡುತ್ತಿರುವುದ ರಿಂದಲೇ ಪತ್ರಿಕಾಗೋಷ್ಠಿ ಕರೆದು ಪ್ರತಿಕ್ರಿಯೆ ನೀಡುತ್ತಿದ್ದೇನೆ ಎಂದು ಸಿದ್ದರಾಮಯ್ಯ ಸ್ಪಷ್ಟನೆಯನ್ನೂ ನೀಡಿದ್ದಾರೆ. ಗೌಡರು ಮತ್ತು ಸಿದ್ದರಾಮಯ್ಯ ನಡುವಿನ ಈ ವಾಕ್ಸಮರದಿಂದಾಗಿ ಹೆಚ್ಚು ಕಡಿಮೆ ದೋಸ್ತಿಗಳ ಸ್ನೇಹ ಮುರಿದುಬಿದ್ದಂತಾಗಿದೆ. ಆದರೂ, ಮೈತ್ರಿ ಬಗ್ಗೆ ಹೈಕ ಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ಸರ್ಕಾರ ಪತನಕ್ಕೆ ಕಾರಣ ನಾನಲ್ಲ: ಹದಿನಾಲ್ಕು ತಿಂಗಳ ಮೈತ್ರಿ ಸರ್ಕಾರದಲ್ಲಿ ನಾನು ಯಾವುದೇ ರೀತಿಯ ಹಸ್ತಕ್ಷೇಪ ಮಾಡಿಲ್ಲ. ಆ ರೀತಿಯ ಯಾವುದೇ ಹಸ್ತಕ್ಷೇಪದ ಬಗ್ಗೆ ದಾಖಲೆ ಇದ್ದರೆ ತೋರಿಸಲಿ. ಮೈತ್ರಿ ಸರ್ಕಾರ ಪತನಕ್ಕೆ ಕುಮಾರಸ್ವಾಮಿ, ರೇವಣ್ಣ ಹಾಗೂ ದೇವೇಗೌಡರು ಕಾರಣ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ. ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಶಾಸಕರ ಕೆಲಸಗಳನ್ನು ಮಾಡಿಕೊಟ್ಟಿದ್ದರೆ ಯಾರೂ ಅಸಮಾಧಾನಗೊಳ್ಳುತ್ತಿರಲಿಲ್ಲ. ಏಕಪಕ್ಷೀಯ ನಿರ್ಧಾರ, ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಸರ್ಕಾರ ಪತನಕ್ಕೆ ಕಾರಣ. ನಾನು ಐದು ವರ್ಷ ಮುಖ್ಯಮಂತ್ರಿ ಆಗಿದ್ದೆ. ಯಾವುದೇ ಒಬ್ಬ ಶಾಸಕರೂ ನನ್ನ ವಿರುದ್ಧ ಬಂಡಾಯ ಸಾರಿರಲಿಲ್ಲ. ದೇವೇಗೌಡರು ತಮ್ಮ ತಪ್ಪು ಮುಚ್ಚಿಕೊಳ್ಳಲು ಆರೋಪ ಮಾಡುತ್ತಿದ್ದಾರೆ. ಇದರಲ್ಲಿ ರಾಜಕೀಯ ಉದ್ದೇಶ ಇದೆ.
ಸಮನ್ವಯ ಸಮಿತಿಗೆ ಕ್ಯಾರೆ ಅನ್ನಲಿಲ್ಲ: ಕಾಂಗ್ರೆಸ್ ಹೈ ಕಮಾಂಡ್ ನನ್ನನ್ನು ಸಮನ್ವಯ ಸಮಿತಿ ಅಧ್ಯಕ್ಷರನ್ನಾಗಿ ಮಾಡಿತ್ತು. ಸಮನ್ವಯ ಸಮಿತಿಯಲ್ಲಿ ತೆಗೆದುಕೊಂಡಿದ್ದ ತೀರ್ಮಾನಗಳನ್ನು ಕುಮಾರಸ್ವಾಮಿ ಅನುಷ್ಠಾನಗೊಳಿಸಲೇ ಇಲ್ಲ. ನಾವು ಅದನ್ನೂ ಕೇಳಲಿಲ್ಲ. ಐದು ವರ್ಷ ಸರ್ಕಾರ ನಡೆಯಬೇಕು ಎಂದು ಸುಮ್ಮನೆ ಇದ್ದೆವು. ಅವರ ನಡವಳಿಕೆಯಿಂದ ಸರ್ಕಾರ ಪತನವಾಗಿದೆ. ಗೌಡರು ಯಾವ ಉದ್ದೇಶಕ್ಕೆ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೋ ಗೊತ್ತಿಲ್ಲ. ಯಾರನ್ನು ಖುಷಿಪಡಿಸಲು ಈ ರೀತಿ ಮಾಡುತ್ತಿದ್ದಾರೋ ಗೊತ್ತಿಲ್ಲ. ನನ್ನನ್ನು ರಾಜಕೀಯವಾಗಿ ಮುಗಿಸಲು ಈ ರೀತಿಯ ಕುತಂತ್ರ ಮಾಡುತ್ತಿದ್ದಾರೆ.
ಧರಂ, ಬೊಮ್ಮಾಯಿ ಸರ್ಕಾರ ಉರುಳಿಸಿದವರು ಯಾರು?: ಧರಂಸಿಂಗ್ ಸರ್ಕಾರ, ಎಸ್.ಆರ್. ಬೊಮ್ಮಾಯಿ ಸರ್ಕಾರವನ್ನು ಉರುಳಿಸಿದವರು ಯಾರು ? ಇವತ್ತೇನಾದರೂ ಬಿಜೆಪಿ ಅಧಿಕಾರಕ್ಕೆ ಬಂದಿದ್ದರೆ ಅದಕ್ಕೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಕಾರಣ. ಧರಂಸಿಂಗ್ ಸರ್ಕಾರಕ್ಕೆ ನೀಡಿದ ಬೆಂಬಲ ವಾಪಸ್ ಪಡೆದು ರಾತ್ರೋ ರಾತ್ರಿ ಬಿಜೆಪಿ ಜೊತೆ ಸರ್ಕಾರ ಮಾಡಿದ್ದು ಯಾರು? ಕುಮಾರಸ್ವಾಮಿ ಬಿಜೆಪಿ ಜೊತೆ ಸರ್ಕಾರ ರಚಿಸಿದರೆ ನನ್ನ ಹೆಣ ಅಡ್ಡ ಮಲಗುತ್ತದೆ ಎಂದಿದ್ದರು. 2006 ರಲ್ಲಿ ದೇವೇಗೌಡರ ಒಪ್ಪಿಗೆ ಇಲ್ಲದೇ ಕುಮಾರಸ್ವಾಮಿ ಬಿಜೆಪಿ ಜೊತೆ ಹೋಗಿರಲು ಸಾಧ್ಯವಿಲ್ಲ. ಬಿಜೆಪಿ ಜೊತೆ ಇಪ್ಪತ್ತು ತಿಂಗಳು ಅಧಿಕಾರ ನಡೆಸಿ ಅಧಿಕಾರ ಹಸ್ತಾಂತರ ಮಾಡದೇ ವಚನ ಭ್ರಷ್ಟರಾಗಿದ್ದರು. ಅವರು ಮಾತಿನಂತೆ ನಡೆದುಕೊಂಡಿದ್ದರೆ ಯಡಿಯೂರಪ್ಪ ಇಪ್ಪತ್ತು ತಿಂಗಳು ಅಧಿಕಾರ ನಡೆಸಿ ಹೋಗುತ್ತಿದ್ದರು. ಅವರು ವಚನ ಭ್ರಷ್ಟರಾಗಿದ್ದಕ್ಕೆ ಬಿಜೆಪಿ 2008 ರಲ್ಲಿ 110 ಸ್ಥಾನ ಪಡೆದು ಅಧಿಕಾರಕ್ಕೆ ಬರುವಂತಾಯಿತು.
ಸಿಎಂ ಸ್ಥಾನ ಬೇಡ ಅಂದಿದ್ದೇ ದೇವೇಗೌಡರು: 2004ರಲ್ಲಿ ಶರದ್ ಪವಾರ್ ಮನೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರ ಸಭೆ ನಡೆದಿತ್ತು. ಆಗ ಜೆಡಿಎಸ್‌ನಿಂದ ನೀವೇ ಮುಖ್ಯಮಂತ್ರಿಯಾಗಿ, ಸೋನಿಯಾ ಗಾಂಧಿ ಒಪ್ಪಿಕೊಂಡಿದ್ದಾರೆ ಎಂದು ಸ್ವತಃ ಶರದ್ ಪವಾರ್ ನನಗೆ ಹೇಳಿದರು. ಆಗ ಪಿ.ಜಿ.ಆರ್. ಸಿಂಧ್ಯಾ, ಎಂ.ಪಿ.ಪ್ರಕಾಶ್ ಜೊತೆಯಲ್ಲಿದರು. ಆದರೆ ದೇವೇಗೌಡರು ನಮಗೆ ಸಿಎಂ ಸ್ಥಾನ ಬೇಡ, ಉಪ ಮುಖ್ಯಮಂತ್ರಿ ಸ್ಥಾನ ಕೊಟ್ಟರೆ ಸಾಕು ಅಂತ ಹೇಳಿದರು. ಕಾರಣ ಕೇಳಿದರೆ, ಎಸ್. ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಅವರ ವಿರುದ್ಧ “ಚಾರ್ಜ್‌ಶೀಟ್’ ಮಾಡಿದ್ದರಿಂದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ಕೃಷ್ಣ ಅವರನ್ನು ಸಮರ್ಥನೆ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಸಿಎಂ ಸ್ಥಾನ ಬೇಡ ಅಂತ ಹೇಳಿದರು. ನನಗೆ ದೇವೇಗೌಡರು ಸಿಎಂ ಸ್ಥಾನ ತಪ್ಪಿಸಿದರು ಅಂತ ನಾನು ಎಲ್ಲಿಯೂ ಹೇಳಿಲ್ಲ.
ನಾನು ಜಾತಿ ವಿರೋಧಿ ಅಲ್ಲ: ನಾನು ಲಿಂಗಾಯತ, ಒಕ್ಕಗಲಿಗರ ವಿರೋಧಿ ಅಂತ ಹೇಳಿದ್ದಾರೆ. ನಾನು ಯಾವ ಜಾತಿಯ ವಿರೋಧಿಯೂ ಅಲ್ಲ. ನನ್ನ ಯೋಜನೆಗಳು ಯಾವುದೇ ಜಾತಿಗೆ ಸೀಮಿತವಾಗಿಲ್ಲ. ಎಲ್ಲ ಸಮುದಾಯ ಗಳಿಗೆ ನಾನು ಯೋಜನೆಗಳನ್ನು ನೀಡಿದ್ದೇನೆ. ಎಲ್ಲ ಸಮು ದಾಯದವರೊಂದಿಗೆ ನನಗೆ ಉತ್ತಮ ಸಂಬಂಧವಿದೆ.
ಜೆಡಿಎಸ್‌ನವರು ನಮ್ಮನ್ನು ಹೊಗಳಿದ್ದರಾ?: ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ತ್ರಿಕೋನ ಸ್ಪರ್ಧೆ ಇತ್ತು. ಆಗ ಜೆಡಿಎಸ್ ವಿರುದ್ದ ನಾನು ವಾಗ್ಧಾಳಿ ಮಾಡಿದ್ದೇನೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ನವರೇ ನಮಗೆ ಸ್ಪರ್ಧಿಗಳು. ಹೀಗಾಗಿ ಚುನಾವಣೆಯಲ್ಲಿ ವಿರೋಧ ಮಾಡಿದ್ದೆ. ಆಗ ಅವರೂ ನಮ್ಮನ್ನು ಹೊಗಳಿದ್ಧರಾ? ಹಳೆ ಮೈಸೂರಿನಲ್ಲಿ ನಮ್ಮ ಪಕ್ಷ ಮುಗಿಸಲು ಪ್ರಯತ್ನ ಮಾಡಿದರು.
ಹೈಕಮಾಂಡ್ ನಿರ್ಧಾರ ಒಪ್ಪಿದ್ದೇನೆ: ಕುಮಾರಸ್ವಾಮಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ. ಕುಮಾರಸ್ವಾಮಿ ಸಿಎಂ ಆಗಿರುವುದು ಅವರಿಗೆ ಸಹಿಸಿಕೊಳ್ಳಲು ಆಗಲಿಲ್ಲ. ರಾಜಕೀಯ ವೈರತ್ವದಿಂದ ಸರ್ಕಾರ ಉರುಳಿಸಿದರು. ಕಾಂಗ್ರೆಸ್ ಹೈಕಮಾಂಡ್, ಸಿದ್ದರಾಮಯ್ಯ ಒಪ್ಪಿಗೆ ಪಡೆಯದೇ ಜೆಡಿಎಸ್‌ಗೆ ಬೆಂಬಲ ಕೊಡುವ ತೀರ್ಮಾನ ಮಾಡಿದ್ದರು ಅಂತ ಗೌಡರು ಹೇಳಿ¨ªಾರೆ. ಬಿಜೆಪಿ ಅಧಿಕಾರಕ್ಕೆ ಬರಬಾರದು ಎನ್ನುವ ಹೈಕಮಾಂಡ್ ನಿರ್ಧಾರಕ್ಕೆ ಮರು ಮಾತಾಡದೆ ಒಪ್ಪಿಕೊಂಡಿದ್ದೇನೆ.
ಮೈತ್ರಿ ಹೈಕಮಾಂಡ್ ನಿರ್ಧಾರಕ್ಕೆ: ಜೆಡಿಎಸ್ ಜೊತೆಗೆ ಮೈತ್ರಿ ಮುಂದುವರೆಸುವ ಬಗ್ಗೆ ಪಕ್ಷದ ಹೈ ಕಮಾಂಡ್ ನಿರ್ಧಾರ ಮಾಡುತ್ತದೆ. ಇಲ್ಲಿ ನಮ್ಮ ವೈಯಕ್ತಿಕ ಅಭಿಪ್ರಾಯ ಮುಖ್ಯ ಆಗುವುದಿಲ್ಲ. ನಮ್ಮ ಹೈ ಕಮಾಂಡ್ ಅಭಿಪ್ರಾಯ ಕೇಳಿದರೆ ಹೇಳುತ್ತೇನೆ. ಪ್ರತಿಪಕ್ಷದ ನಾಯಕನ ಸ್ಥಾನವನ್ನು ದೇವೇಗೌಡರನ್ನು ಕೇಳಿ ಕಾಂಗ್ರೆಸ್ ಹೈ ಕಮಾಂಡ್ ನಿರ್ಧಾರ ಮಾಡುವುದಿಲ್ಲ. ಜೆಡಿಎಸ್-ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಇಲ್ಲ.
ಪತ್ರಿಕಾಗೋಷ್ಠಿ ನಡೆಸದಂತೆ ಹೈ ಕಮಾಂಡ್ ಸೂಚನೆ: ದೇವೇಗೌಡರು ತಮ್ಮ ವಿರುದ್ಧ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಲು ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ಕರೆದಿದ್ದರಿಂದ ಅದನ್ನು ರದ್ದುಗೊಳಿಸುವಂತೆ ಹೈ ಕಮಾಂಡ್ ನಾಯಕರು ದೂರವಾಣಿ ಮೂಲಕ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿದ್ದಾರೆ. ಆದರೆ, ಸಿದ್ದರಾಮಯ್ಯ ದೇವೇಗೌಡರು ನನ್ನ ವಿರುದ್ಧ ನೇರವಾಗಿಯೇ ಆರೋಪ ಮಾಡಿದ್ದಾರೆ. ಅದಕ್ಕೆ ನಾನು ಪ್ರತಿಕ್ರಿಯೆ ನೀಡದೆ ಹೋದರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಹೇಳಿದ ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ನಡೆಸಿ, ದೇವೇಗೌಡರ ವಿರುದ್ಧ ವಾಗ್ಧಾಳಿ ನಡೆಸಿದರು.
ನನಗೆ ಅಳುವುದು ಗೊತ್ತಿಲ್ಲ: “ಟೆಲಿಫೋನ್ ಕದ್ದಾಲಿಕೆಯನ್ನು ಸಿಬಿಐಗೆ ವಹಿಸಿದ್ದರ ಹಿಂದೆ ಮೋದಿ, ಅಮಿತ್ ಶಾ ಇಲ್ಲ. ಅವರು ರಾಷ್ಟ್ರ ರಾಜಕಾರಣದಲ್ಲಿ ಬಿಜಿಯಾಗಿದ್ದಾರೆ,’ ಅಂತ ದೇವೇಗೌರು ಹೇಳುತ್ತಾರೆ. ನಾನು ಸಿಬಿಐ ವಹಿಸುವಂತೆ ಎಲ್ಲಿಯೂ ಹೇಳಿಲ್ಲ. ಯಡಿಯೂರಪ್ಪ ಹೇಳಿದ್ದೂ ನೂರಕ್ಕೆ ನೂರು ಸುಳ್ಳು. ನನಗೆ ಯಾರ ಬಗ್ಗೆಯೂ ವೈಯಕ್ತಿಕ ದ್ವೇಷ ವಿಲ್ಲ. ರಾಜಕೀಯ ಭಿನ್ನಾಭಿಪ್ರಾಯ ಇದೆ. ನನಗೆ ರಾಜಕೀಯವಾಗಿ ಅಳುವುದು ಗೊತ್ತಿಲ್ಲ. ನಾವು ಸಮಾಜ ಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದೇವೆ. ಸೋತಾಗ ಒಪ್ಪಿಕೊಂಡು, ಗೆದ್ದಾಗ ಕೆಲಸ ಮಾಡಿದ್ದೇವೆ. ಅಧಿಕಾರಕ್ಕಾಗಿ ನಾನು ಅಳುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಕತ್ತಿನೇ ಫೋನ್ ಮಾಡಿದ್ರು : ಉಮೇಶ್ ಕತ್ತಿಗೆ ನಾನಾಗಿಯೇ ಫೋನ್ ಮಾಡಿಲ್ಲ. ಅವರೇ ಫೋನ್ ಮಾಡಿ ಕಣ್ಣಿಗೆ ಆಪರೇಷನ್ ಆಗಿರುವ ಬಗ್ಗೆ ಕೇಳಿದರು. ಅರಾಮ್ ಇದೀನಿ ಅಂತ ಹೇಳಿದೆ. ನೀ ಹೇಗಿಯಾ ಅಂತ ಕೇಳಿದೆ. ಅರಾಮ್ ಇದೀನಿ ಅಂತ ಹೇಳಿದಾ. ಒಂದು ಸಾರಿ ಸಿಗ್ತಿನಿ ಅಂತ ಹೇಳಿದಾ. ಆಯ್ತು ಅಂತ ಹೇಳಿದೆ. ಅವರೊಂದಿಗೆ ಯಾವುದೇ ರಾಜಕೀಯ ವಿಷಯ ಮಾತನಾಡಿಲ್ಲ. ನಾನು ಅವರನ್ನು ಪಕ್ಷಕ್ಕೆ ಬರುವಂತೆ ಆಹ್ವಾನ ಕೊಟ್ಟಿಲ್ಲ. ಯಾರಿಗೂ ಕಾಂಗ್ರೆಸ್‌ನಿಂದ ಹೋಗು ವಂತೆಯೂ ಹೇಳಿಲ್ಲ ಎಂದು ಸಿದ್ದು ಸ್ಪಷ್ಟಪಡಿಸಿದರು.
ಸಮನ್ವಯ ಸಮಿತಿ ಬಗ್ಗೆ ನಮ್ಮನ್ನು ಕೇಳಲಿಲ್ಲ – ಗೌಡ: ಸಿದ್ದರಾಮಯ್ಯ ಆರೋಪಕ್ಕೆ “ಉದಯವಾಣಿʼಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಮಾಜಿ ಪ್ರಧಾನಿ ದೇವೇಗೌಡರು, ಸರ್ಕಾರ ಬೀಳಲು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಸಿದ್ದರಾಮಯ್ಯ ನವರೇ ಕಾರಣ ಎಂದು ಮತ್ತೆ ಹೇಳಿದ್ದಾರೆ. ಜತೆಗೆ ಸಿದ್ದರಾಮಯ್ಯ ಅವರನ್ನು ಸಮನ್ವಯ ಸಮಿತಿ ಅಧ್ಯಕ್ಷರನ್ನಾಗಿ ಮಾಡುವ ಮುನ್ನ ಕಾಂಗ್ರೆಸ್ ನಮ್ಮ ಜತೆ ಚರ್ಚಿಸಲೇ ಇಲ್ಲ. ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಆ ಸಮಿತಿಗೆ ಸೇರಲು ಸಿದ್ದರಾಮಯ್ಯ ಅವಕಾಶ ಕೊಡಲಿಲ್ಲ ಎಂದೂ ತಿರುಗೇಟು ನೀಡಿದ್ದಾರೆ.
ತಮ್ಮ ಮಕ್ಕಳನ್ನು ಮಾತ್ರ ಬೆಳೆಸುತ್ತಾರೆ: ದೇವೇಗೌಡರು ಯಾರನ್ನೂ ಬೆಳೆಸುವುದಿಲ್ಲ. ತಮ್ಮ ಮಕ್ಕಳನ್ನು ಮಾತ್ರ ಬೆಳೆಸುತ್ತಾರೆ. ನಾಗೇಗೌಡ, ಡಿ.ಬಿ. ಚಂದ್ರೇಗೌಡ, ಗೋವಿಂದೇಗೌಡ ಎಲ್ಲರೂ ಸ್ವಜಾತಿಯವರು! ಅವರ ಕಥೆ ಏನಾಯಿತು? ಬಚ್ಚೇಗೌಡರನ್ನು ಕೇಳಿದರೆ ಎಲ್ಲ ಹೇಳುತ್ತಾರೆ. ಬೇರೆಯವರ ಮೇಲೆ ಗೂಬೆ ಕೂರಿಸಿ ಕಣ್ಣೀರು ಹಾಕುವುದು ದೇವೇಗೌಡರ ಹಳೆಯ ತಂತ್ರ. ಅವರ ಆರೋಪ ಎಲ್ಲವೂ ಆಧಾರ ರಹಿತ. ಇದ ರಿಂದ ರಾಜಕೀಯ ಲಾಭ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯದ ಜನರು ಬುದ್ಧಿವಂತರಿ ದ್ದಾರೆ. ನಮ್ಮಿಬ್ಬರ ನಡವಳಿಕೆ, ರಾಜಕೀಯ ಇತಿಹಾಸವನ್ನು ಜನ ನೋಡಿದ್ದಾರೆ.
ಬೆಂಬಲ ನೀಡಿದವರಿಗೆ ಗೌಡರಿಂದಲೇ ತೊಂದರೆ: ದೇವೇಗೌಡರು ತಮಗೆ ಯಾರು ಬೆಂಬಲ ಕೊಡುತ್ತಾರೋ ಅವರಿಗೆ ತೊಂದರೆ ಕೊಡುತ್ತಾರೆ. ಪ್ರಧಾನಿಯಾಗಲು ಕಾಂಗ್ರೆಸ್ ಬೆಂಬಲ ಕೊಟ್ಟಿದ್ದರೂ, ಸೀತಾರಾಮ್ ಕೇಸರಿಗೆ ತೊಂದರೆ ಕೊಟ್ಟರು. ಅದಕ್ಕೆ ಅವರು ದೇವೇಗೌಡರಿಗೆ ನೀಡಿದ್ದ ಬೆಂಬಲ ವಾಪಸ್ ಪಡೆದರು. 1996ರಲ್ಲಿ ತಾವು ಪ್ರಧಾನಿಯಾದಾಗ ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಮಾಡಲಿಲ್ಲ ಎನ್ನುವ ಸಿಟ್ಟಿದೆ ಎಂದು ದೇವೇಗೌಡರು ಹೇಳುತ್ತಾರೆ. ಆದರೆ ನಾನು ಎಲ್ಲಿಯೂ ಹೇಳಿಲ್ಲ. ಕುಮಾರಸ್ವಾಮಿಯೇ ನಿಮ್ಮನ್ನು ಮುಖ್ಯಮಂತ್ರಿ ಯಾಗುವುದನ್ನು ತಪ್ಪಿಸಿದ್ದೇ ನಾನು ಎಂದು ಸದನದಲ್ಲಿಯೇ ಒಪ್ಪಿಕೊಂಡಿದ್ದಾರೆ. ಅದರ ಬಗ್ಗೆ ಹೆಮ್ಮೆ ಇದೆ ಅಂತಾನೂ ಹೇಳಿದ್ದಾರೆ.
ಸೋಲಿಗೆ ಗೌಡರ ಕುಟುಂಬ ಕಾರಣ: ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಬೇಡ ಅಂತ ಹೈ ಕಮಾಂಡ್‌ಗೆ ನಾನೇ ಹೇಳಿದ್ದೆ. ಫ್ರೆಂಡ್ಲಿ ಫೈಟ್ ಮಾಡೋಣ ಅಂತ ಹೈ ಕಮಾಂಡ್‌ಗೆ ಹೇಳಿದ್ದೆ. ಮಂಡ್ಯ, ತುಮಕೂರಿ ನಲ್ಲಿ ಜೆಡಿಎಸ್ ಸೋಲಲು ಕಾಂಗ್ರೆಸ್ ಕಾರಣ ಅಂತ ದೇವೇಗೌಡರು ಹೇಳಿದ್ದಾರೆ. ಹಾಗಾ ದರೆ, ಮೈಸೂರು, ಚಾಮರಾಜನಗರ, ಚಿಕ್ಕ ಬಳ್ಳಾಪುರ, ಕೋಲಾರ, ಚಿತ್ರದುರ್ಗ ಹಾಗೂ ಬೆಂಗಳೂರು ಉತ್ತರದಲ್ಲಿ ಕಾಂಗ್ರೆಸ್ ಸೋಲಿಗೆ ಯಾರು ಕಾರಣ ಮೈಸೂರಿನಲ್ಲಿ ಜೆಡಿಎಸ್‌ನವರು ಕಾಂಗ್ರೆಸ್‌ಗೆ ಮತ ಹಾಕಿಲ್ಲ ಅಂತ ಜಿ. ಟಿ. ದೇವೇಗೌಡ ನೇರವಾಗಿಯೇ ಹೇಳಿದ್ದಾರೆ. ಆದರೆ, ಅವರು ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ನಾವು ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಅವರ ಸೋಲಿಗೆ ಅವರ ಕುಟುಂಬದ ಎಲ್ಲರೂ ಚುನಾವಣೆಗೆ ನಿಂತಿರುವುದು ಕಾರಣ.
ನೀಚ ರಾಜಕಾರಣ ಮಾಡಲ್ಲ ಎಂದ ಸಿದ್ದು: ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿ ಪ್ರತಿಪಕ್ಷದ ನಾಯಕ ಆಗಲು ಸರ್ಕಾರವನ್ನು ಪತನಗೊಳಿಸಿರುವುದಾಗಿ ದೇವೇ ಗೌಡರು ಹೇಳಿದ್ದಾರೆ. ಪ್ರತಿಪಕ್ಷದ ನಾಯಕನ ಸ್ಥಾನಕ್ಕಾಗಿ ಈ ರೀತಿಯ ನೀಚ ರಾಜಕಾರಣ ಮಾಡುವುದಿಲ್ಲ. ಅದೇನಿದ್ರೂ ದೇವೇಗೌಡರು ಮತ್ತು ಅವರ ಮಕ್ಕಳ ಕೆಲಸ. ಸರ್ಕಾರ ಉರುಳಿಸುವಲ್ಲಿ ದೇವೇಗೌಡರು ನಿಪುಣರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್ ಬೋರ್ಡ್ ಗೆ ಬರೆಯುವುದು ಬೇರೆ: ಸಿ.ಟಿ ರವಿ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.