ಆಸ್ಟ್ರಿಯಾದ ಕತೆ: ಚಿನ್ನದ ಸೀಬೆ ಹಣ್ಣು
Team Udayavani, Aug 25, 2019, 5:00 AM IST
ಒಂದು ಹಳ್ಳಿಯಲ್ಲಿ ಒಬ್ಬ ರೈತನಿದ್ದ. ಅವನಿಗೆ ಪ್ರಾಯಕ್ಕೆ ಬಂದ ಮೂವರು ಗಂಡುಮಕ್ಕಳಿದ್ದರು. ಮೂವರೂ ಜತೆಗೂಡಿ ತಂದೆಗೆ ವ್ಯವಸಾಯ ಕೆಲಸಕ್ಕೆ ಸಹಾಯ ಮಾಡುತ್ತಿದ್ದರು. ಹೊಲದಲ್ಲಿ ಸಮೃದ್ಧವಾಗಿ ಸಿಗುತ್ತಿದ್ದ ಫಸಲಿನಿಂದ ಸುಖವಾಗಿ ಜೀವನ ಕಳೆಯುತ್ತಿದ್ದರು. ಆದರೆ ಒಂದು ಸಲ ಮಳೆಯಿಲ್ಲದೆ ಯಾವ ಗಿಡವನ್ನೂ ಬೆಳೆಸಲು ಸಾಧ್ಯವಾಗಲಿಲ್ಲ. ರೈತನು ತಾವೆಲ್ಲರೂ ಉಪವಾಸ ಸಾಯುವ ಪರಿಸ್ಥಿತಿ ಬಂದಿತೆಂದು ದುಃಖೀಸತೊಡಗಿದ. “”ದೇವರೇ, ನಮಗೆ ಬದುಕಲು ಏನಾದರೂ ದಾರಿ ತೋರಿಸು” ಎಂದು ಬೇಡಿಕೊಂಡ. ರೈತನ ಮೊರೆ ದೇವರಿಗೆ ಕೇಳಿಸಿತೋ ಎಂಬ ಹಾಗೆ ಅವನ ಮನೆಯಂಗಳದಲ್ಲಿದ್ದ ಒಂದು ಸೀಬೆಯ ಮರ ತಾನಾಗಿ ಚಿಗುರಿ, ಹೂ ಬಿಟ್ಟಿತು, ಹೂಗಳು ಕಾಯಿಗಳಾಗಿ ಹೊಳೆಯುವ ಹಣ್ಣುಗಳು ಮರದ ತುಂಬ ಜೋತಾಡಿದವು. ರೈತನು ಕುತೂಹಲದಿಂದ ಒಂದು ಹಣ್ಣನ್ನು ಕೊಯಿದು ಕತ್ತರಿಸಲು ನೋಡಿದ. ಆಗ ಅದು ಸಾಮಾನ್ಯವಾಗಿರದೆ ಚಿನ್ನದ ಹಣ್ಣು ಎಂದು ಗೊತ್ತಾಯಿತು.
ರೈತ ಹರ್ಷಾತಿರೇಕದಿಂದ ಮನೆಯವರನ್ನು ಕೂಗಿ ಕರೆದ. “”ನೋಡಿರಿ, ನಮ್ಮ ಅದೃಷ್ಟ ಖುಲಾಯಿಸುವ ಕಾಲ ಒದಗಿ ಬಂದಿದೆ. ಈ ಮರ ಚಿನ್ನದ ಹಣ್ಣುಗಳನ್ನು ಕೊಟ್ಟಿದೆ. ಇದನ್ನು ಬಳಸಿ ಸುಖವಾಗಿ ಬದುಕುವ ಅವಕಾಶ ನಮ್ಮದಾಗಿದೆ” ಎಂದು ಹೇಳಿದ. ಎಲ್ಲರೂ ಹಣ್ಣುಗಳನ್ನು ಮುಟ್ಟಿ ನೋಡಿ ನಿಜವಾಗಿಯೂ ಚಿನ್ನವೆಂದೇ ಖಚಿತಪಡಿಸಿಕೊಂಡರು. ರೈತನ ಹೆಂಡತಿ, “”ಚಿನ್ನದ ಹಣ್ಣುಗಳಾಗಿವೆಯೆಂದು ಅದನ್ನು ಬೇಕಾದಂತೆ ಮಾರಾಟ ಮಾಡಬಾರದು. ಇಂತಹ ಹಣ್ಣುಗಳಿಗೆ ಸರಿಯಾದ ಬೆಲೆ ನೀಡಲು ಶಕ್ತನಾದವನು ಊರಿನ ಅರಸನೊಬ್ಬನೇ. ಆದಕಾರಣ ಅವನ ಬಳಿಗೆ ನೇರವಾಗಿ ತೆಗೆದುಕೊಂಡು ಹೋದರೆ ಯೋಗ್ಯವಾದ ಬೆಲೆ ಕೊಡಬಹುದು. ನಮ್ಮ ಕಷ್ಟವನ್ನರಿತು ಹುಡುಗರಿಗೆ ತನ್ನ ಆಸ್ಥಾನದಲ್ಲಿ ಒಳ್ಳೆಯ ಉದ್ಯೋಗ ಕರುಣಿಸಬಹುದು” ಎಂದು ಸಲಹೆ ನೀಡಿದಳು.
“”ನಿನ್ನ ಮಾತು ನಿಜ” ರೈತ ಹೆಂಡತಿಯನ್ನು ಮೆಚ್ಚಿಕೊಂಡ. ಹಗ್ಗಗಳಿಂದ ಒಂದು ಬುಟ್ಟಿಯನ್ನು ಹೆಣೆದ. ಅದರಲ್ಲಿ ಚಿನ್ನದ ಹಣ್ಣುಗಳನ್ನು ತುಂಬಿಸಿದ. ಬೇರೆ ಯಾರಿಗೂ ಅನುಮಾನ ಬರಬಾರದೆಂದು ಮೇಲಿನಿಂದ ಸೀಬೆ ಎಲೆಗಳನ್ನು ಮುಚ್ಚಿದ. ಹಿರಿಯ ಮಗನನ್ನು ಕರೆದು ಅದನ್ನು ಹೊತ್ತುಕೊಂಡು ಹೋಗಿ ರಾಜನಿಗೆ ಒಪ್ಪಿಸಲು ಹೇಳಿದ. ಹಿರಿಯವನು ಬುಟ್ಟಿ ಹೊತ್ತುಕೊಂಡು ಅರಮನೆಯ ಹಾದಿ ತುಳಿದ. ಆದರೆ ಭಾರವಾದ ಬುಟ್ಟಿ ಹೊತ್ತು ಕಡು ಬಿಸಿಲಿಗೆ ನಡೆಯುವಾಗ ಹಸಿವು, ಬಾಯಾರಿಕೆಗಳು ಬಾಧಿಸಿದವು. ನಡೆಯಲಾಗದೆ ಅಶಕ್ತಿಯಿಂದ ಒಂದು ಕಡೆ ಕುಳಿತ. ಅಲ್ಲಿಗೆ ಒಬ್ಬ ಮುದುಕಿ ಬಂದಳು. ಅವನ ಪರಿಸ್ಥಿತಿಯನ್ನು ತಿಳಿದುಕೊಂಡು ತನ್ನಲ್ಲಿದ್ದ ನೀರು ಕೊಟ್ಟು ಕುಡಿಯಲು ಹೇಳಿದಳು. ಜೋಳಿಗೆಯಿಂದ ರೊಟ್ಟಿಗಳನ್ನು ತೆಗೆದು ಕೊಟ್ಟು ಹಸಿವು ತಣಿಸಿದಳು. ಬಳಿಕ, “”ಎಲ್ಲಿಗೆ ಹೋಗುತ್ತಿರುವೆ, ಬುಟ್ಟಿಯಲ್ಲಿ ಏನಿದೆ?” ಎಂದು ಕೇಳಿದಳು.
ಸತ್ಯ ಹೇಳಿದರೆ ಮುದುಕಿಗೆ ಚಿನ್ನದ ಹಣ್ಣಿನ ಮೇಲೆ ಆಶೆಯಾಗಬಹುದೆಂದು ಭಾವಿಸಿ ಹಿರಿಯವನು, “”ಅರಸನಿಗೆ ನೆಲ ಗುಡಿಸಲು ಹಸಿರೆಲೆಯ ಪೊರಕೆ ಬೇಕಾಗಿದೆಯಂತೆ. ಕೊಡಲು ಹೋಗುತ್ತಿದ್ದೇನೆ” ಎಂದು ಹೇಳಿದ. “”ಹಾಗೆಯೇ ಆಗಲಿ” ಎಂದು ಹೇಳಿದಳು ಮುದುಕಿ. ಅವನು ಅರಸನ ಸಭೆಗೆ ಹೋಗಿ ಬುಟ್ಟಿಯನ್ನು ಮುಂದಿರಿಸಿದ. “”ಇದರೊಳಗೆ ಏನಿದೆ?” ಎಂದು ಅರಸು ಕೇಳಿದ. “”ನೀವೇ ನೋಡಿ. ಹಿಂದೆಂದೂ ನೀವು ಕಂಡಿರದ ಚಿನ್ನದ ಸೀಬೆಹಣ್ಣುಗಳಿವೆ” ಎಂದ ರೈತನ ಹಿರಿಯ ಮಗ.
ಅರಸನು ಬುಟ್ಟಿಗೆ ಮುಚ್ಚಿದ್ದ ಎಲೆಗಳನ್ನು ಸರಿಸಿ ನೋಡಿದರೆ ಒಳಗೆ ಎರಡು ಪೊರಕೆಗಳ ಹೊರತು ಬೇರೆ ಏನೂ ಇರಲಿಲ್ಲ. ಅವನಿಗೆ ತಾಳಲಾಗದ ಕೋಪ ಬಂತು. “”ನನ್ನನ್ನು ಅವಮಾನಿಸಿದ ಇವನನ್ನು ಹಾಗೆಯೇ ಬಿಡಬೇಡಿ. ಎಳೆದುಕೊಂಡು ಹೋಗಿ ಸೆರೆಮನೆಗೆ ದೂಡಿ” ಎಂದು ಸೇವಕರಿಗೆ ಆಜ್ಞಾಪಿಸಿದ.
ರೈತ ತನ್ನ ಮಗ ಚಿನ್ನದ ನಾಣ್ಯಗಳ ಮೂಟೆಯನ್ನು ಅರಸನಿಂದ ಪ್ರತಿಫಲವಾಗಿ ಹೊತ್ತುಕೊಂಡು ಬರುತ್ತಾನೆಂದು ದಾರಿ ಕಾದು ನಿರಾಶನಾದ. “”ಬಹುಶಃ ಅರಸರು ನಮ್ಮ ಮಗನಿಗೆ ಉನ್ನತ ಉದ್ಯೋಗವನ್ನು ಕರುಣಿಸಿರಬಹುದು ಅನಿಸುತ್ತದೆ. ಹಾಗಾಗಿ ಹೋದವನು ಮರಳಿ ಬರಲಿಲ್ಲ, ನಮಗೆ ಏನೂ ಅನುಕೂಲವಾಗಲಿಲ್ಲ” ಎಂದು ಹೆಂಡತಿಯೊಂದಿಗೆ ವ್ಯಥೆ ತೋಡಿಕೊಂಡ. ಅವಳು, “”ಇದ್ದರೂ ಇರಬಹುದು. ಇನ್ನು ಕಾಯುವುದು ಬೇಡ. ಎರಡನೆಯ ಮಗನ ಕೈಯಲ್ಲಿ ಇನ್ನೊಂದು ಬುಟ್ಟಿ ಹಣ್ಣುಗಳನ್ನು ಅರಸರ ಬಳಿಗೆ ಕಳುಹಿಸಿದರಾಯಿತು” ಎಂದು ಹೇಳಿದಳು. ರೈತ ಮತ್ತೆ ಹಣ್ಣುಗಳನ್ನು ಬುಟ್ಟಿಗೆ ತುಂಬಿಸಿ, ಎಲೆಗಳಿಂದ ಮುಚ್ಚಿ ಎರಡನೆಯ ಮಗನ ತಲೆಯ ಮೇಲಿಟ್ಟು ಕಳುಹಿಸಿದ.
ಎರಡನೆಯವನಿಗೂ ದಾರಿಯಲ್ಲಿ ಹಸಿವು, ದಾಹಗಳು ಬಾಧಿಸಿದವು. ಒಂದು ಹೆಜ್ಜೆಯನ್ನೂ ಮುಂದಿಡಲಾಗದೆ ನೆಲಕ್ಕೆ ಕುಸಿದ. ಅವನ ಬಳಿಗೆ ಮುದುಕಿ ಬಂದಳು. ನೀರು, ಆಹಾರ ಕೊಟ್ಟು ಉಪಚರಿಸಿದಳು. ಬಳಿಕ ಬುಟ್ಟಿಯೊಳಗೆ ಏನಿದೆ ಎಂದು ಕೇಳಿದಳು. ಅವನು ಸತ್ಯ ಹೇಳಲು ಹಿಂಜರಿದ. “”ಅರಮನೆಯ ಬೆಕ್ಕುಗಳಿಗೆ ತಿನ್ನಲು ಇಲಿಮರಿಗಳು ಬೇಕೆಂದು ಹೇಳಿದ್ದಾರೆ. ಬುಟ್ಟಿಯಲ್ಲಿ ತುಂಬಿಸಿ ತೆಗೆದುಕೊಂಡು ಹೋಗುತ್ತಿದ್ದೇನೆ” ಎಂದು ಹೇಳಿದ. ಮುದುಕಿ, “”ಹಾಗೆಯೇ ಆಗಲಿ” ಎಂದಳು. ಅವನು ಅರಸನ ಮುಂದೆ ಬುಟ್ಟಿಯನ್ನು ತಂದಿರಿಸಿದ. “”ದೊರೆಗಳೇ, ಇದರೊಳಗೆ ಚಿನ್ನದ ಸೀಬೆಹಣ್ಣುಗಳಿವೆ. ತಾವು ಹಿಂದೆ ಎಲ್ಲಿಯೂ ಇಂತಹ ಅದ್ಭುತವನ್ನು ನೋಡಿರಲಿಕ್ಕಿಲ್ಲ” ಎಂದು ವರ್ಣಿಸಿದ.
ಅರಸನು ಬುಟ್ಟಿಯನ್ನು ಮುಚ್ಚಿರುವ ಸೀಬೆಯ ಎಲೆಗಳನ್ನು ಸರಿಸಿದ. ಆಗ ಒಳಗಿನಿಂದ ನೂರಾರು ಇಲಿಗಳು ಚಿಂವ್ ಚಿಂವ್ ಎನ್ನುತ್ತ ಹೊರಗೆ ಬಂದು ಆಸ್ಥಾನದ ತುಂಬ ಓಡಾಡಿದವು. “”ಏನಿದು ಹುಡುಗಾಟ? ಬುಟ್ಟಿಯಲ್ಲಿ ಇಲಿಗಳನ್ನು ತುಂಬಿಸಿ ತಂದು ನನ್ನನ್ನು ಮೂರ್ಖನನ್ನಾಗಿ ಮಾಡಲು ಪ್ರಯತ್ನಿಸಿದ ಈ ಅಧಮನನ್ನು ಎಳೆದುಕೊಂಡು ಹೋಗಿ ಸೆರೆಮನೆಗೆ ಸೇರಿಸಿ” ಎಂದು ಸೇವಕರಿಗೆ ಕೂಗಿ ಹೇಳಿದ. ರೈತನ ಎರಡನೆಯ ಮಗನೂ ಸೆರೆಮನೆ ಸೇರಿಕೊಂಡ.
ರೈತನು ಮಗ ಮರಳಿ ಬರುತ್ತಾನೆಂದು ಕೆಲವು ದಿನ ದಾರಿ ಕಾದ. ಹೆಂಡತಿಯೊಂದಿಗೆ, “”ಈ ಹುಡುಗರ ಕತೆಯೇ ಹೀಗೆ. ಅರಸರು ಚಿನ್ನದ ಹಣ್ಣು ಕಂಡು ಖುಷಿಯಾಗಿ ತಮ್ಮ ಬಳಿಯೇ ಉದ್ಯೋಗ ಕೊಟ್ಟು ಉಳಿಸಿಕೊಂಡಿರಬಹುದು. ಇವನು ವೃದ್ಧರಾದ ನಮ್ಮ ಕಷ್ಟವನ್ನು ಅರಿತುಕೊಳ್ಳದೆ ಎಲ್ಲರನ್ನೂ ಮರೆತು ಅಲ್ಲಿಯೇ ಉಳಿದುಕೊಂಡ ಎನಿಸುತ್ತದೆ” ಎಂದು ವ್ಯಥೆಯನ್ನು ತೋಡಿಕೊಂಡ. ಅದಕ್ಕೆ ಅವಳು, “”ವ್ಯಥೆ ಪಡುವುದರಿಂದ ಪ್ರಯೋಜನವಿಲ್ಲ. ಮರದಲ್ಲಿ ಇನ್ನಷ್ಟು ಹಣ್ಣುಗಳಿವೆ. ಇನ್ನೊಂದು ಬುಟ್ಟಿಯಲ್ಲಿ ತುಂಬಿಸಿ ಕಿರಿಯ ಮಗನ ಬಳಿ ಕೊಟ್ಟು ಕಳುಹಿಸಿ. ಅಲ್ಲಿಯೇ ಉಳಿಯಬಾರದು. ಮರಳಿ ಬರಲೇಬೇಕು ಎಂಬುದನ್ನು ಒತ್ತಿ ಹೇಳಿ” ಎಂದಳು.
ರೈತ ಮತ್ತೂಂದು ಬುಟ್ಟಿ ಹಣ್ಣುಗಳನ್ನು ಕಿರಿಯ ಮಗನ ಬಳಿ ಅರಸನ ಬಳಿಗೆ ಕಳುಹಿಸಿದ. ಹೋಗುವ ಮೊದಲು, “”ನಿನ್ನ ಅಣ್ಣಂದಿರು ಹೋದವರು ತಮ್ಮ ಸುಖ ನೋಡಿಕೊಂಡು ಅಲ್ಲಿಯೇ ಕುಳಿತರು. ಆದರೆ ನೀನು ಹಾಗೆ ಮಾಡಬಾರದು. ಮುದುಕರಾದ ನಮಗೆ ಆಧಾರವಾಗಿ ಉಳಿದುಕೊಂಡಿರುವುದು ನೀನೊಬ್ಬನೇ” ಎಂದು ನೆನಪು ಮಾಡಿದ. ಕಿರಿಯವನಿಗೂ ದಾರಿಯ ನಡುವೆ ಹಸಿವು, ಬಾಯಾರಿಕೆಗಳು ಬಾಧಿಸಿದವು. ಒಂದು ಹೆಜ್ಜೆಯನ್ನೂ ಮುಂದಿಡಲಾಗದೆ ಕುಸಿದವನಿಗೆ ಅದೇ ಮುದುಕಿ ನೀರು, ರೊಟ್ಟಿ ನೀಡಿ ಉಪಚರಿಸಿದಳು. ಬಳಿಕ ಬುಟ್ಟಿಯಲ್ಲಿ ಏನಿದೆಯೆಂದು ಕೇಳಿದಳು.
ಕಿರಿಯವನು ಬುಟ್ಟಿಗೆ ಮುಚ್ಚಿದ್ದ ಎಲೆಗಳನ್ನು ಸರಿಸಿದ. “”ನೋಡು, ಚಿನ್ನದ ಸೀಬೆಹಣ್ಣುಗಳಿವೆ. ಅರಸರಿಗೆ ಕೊಡಲು ತೆಗೆದುಕೊಂಡು ಹೋಗುತ್ತಿದ್ದೇನೆ. ಒಂದು ಹಣ್ಣು ನೀನು ತೆಗೆದುಕೊ” ಎಂದು ಹೇಳಿದ. “”ಹಾಗೆಯೇ ಆಗಲಿ” ಎಂದು ಮುದುಕಿ ಹಣ್ಣನ್ನು ತೆಗೆದುಕೊಂಡಳು. ಅವನು ಬುಟ್ಟಿಯೊಂದಿಗೆ ಅರಮನೆಯತ್ತ ಹೊರಟ. ದಾರಿಯಲ್ಲಿ ಅರಸನು ತನ್ನ ಮಗಳೊಂದಿಗೆ ಉದ್ಯಾನವನದತ್ತ ಬರುತ್ತ ಇದ್ದ. ಅವನ ಮುಂದೆ ಬುಟ್ಟಿಯನ್ನಿಳಿಸಿ ವಂದಿಸಿಕೊಂಡ. “”ದೊರೆಗಳೇ, ಅಪರೂಪವಾಗಿ ನಮ್ಮ ಮರದಲ್ಲಿ ಚಿನ್ನದ ಸೀಬೆಹಣ್ಣುಗಳಾಗಿವೆ. ತಮಗೆ ಕಾಣಿಕೆಯಾಗಿ ಸಮರ್ಪಿಸಲು ತಂದಿದ್ದೇನೆ, ಸ್ವೀಕರಿಸಬೇಕು” ಎಂದು ನಿವೇದಿಸಿದ.
ಅರಸನು ಕೋಪದಿಂದ ಹಾರಾಡಿದ. “”ಏನಿದು, ದಿನಕ್ಕೊಬ್ಬರು ಚಿನ್ನದ ಸೀಬೆಹಣ್ಣಿನ ಹೆಸರಿನಲ್ಲಿ ಬಂದು ನನ್ನನ್ನು ಅವಹೇಳನೆ ಮಾಡುತ್ತಿದ್ದೀರಿ? ಈ ಹಿಂದೆ ಬಂದ ಇಬ್ಬರು ಸೆರೆಮನೆಯಲ್ಲಿದ್ದಾರೆ. ನೀನೂ ಅಲ್ಲಿಗೇ ಹೋಗುತ್ತೀಯಾ?” ಎಂದು ಕೇಳಿದ. ಸೇವಕರೊಂದಿಗೆ ಅವನನ್ನು ಸೆರೆಮನೆಗೆ ತಳ್ಳಿ, ಬುಟ್ಟಿಯನ್ನು ನೋಡದೆಯೇ ಹೊರಗೆ ಎಸೆಯಲು ಆಜ್ಞಾಪಿಸಿದ. ಆಗ ರಾಜಕುಮಾರಿ ತಡೆದಳು. “”ಇವನನ್ನು ನೋಡಿದರೆ ಸತ್ಯವಂತನೆಂದು ಕಾಣಿಸುತ್ತದೆ. ಮೊದಲು ಬುಟ್ಟಿಯ ಒಳಗೆ ಏನಿದೆಯೆಂದು ನೋಡಿ” ಎಂದು ಹೇಳಿದಳು. ಬುಟ್ಟಿಯ ಮುಚ್ಚಳ ತೆರೆದಾಗ ಒಳಗೆ ಚಿನ್ನದ ಹಣ್ಣುಗಳು ಹೊಳೆಯುತ್ತಿದ್ದವು.
ಅರಸನಿಗೆ ಸಂತೋಷವಾಯಿತು. “”ಭೇಷ್! ನಿನ್ನ ಸತ್ಯ ವಾಕ್ಯಕ್ಕೆ ಪ್ರತಿಫಲವಾಗಿ ಏನು ಬೇಕಿದ್ದರೂ ಕೇಳು ಕೊಡುತ್ತೇನೆ” ಎಂದು ಉದಾರವಾಗಿ ಹೇಳಿದ. ಕಿರಿಯವನು, “”ನನಗೆ ರಾಜ್ಯ ಬೇಡ, ಬಂಗಾರ ಬೇಡ. ಆದರೆ ನಿಮ್ಮ ಸೆರೆಯಲ್ಲಿರುವವರಿಬ್ಬರೂ ನನ್ನ ಅಣ್ಣಂದಿರು. ಅವರನ್ನು ಬಿಡುಗಡೆ ಮಾಡಿಸಿ” ಎಂದು ಪ್ರಾರ್ಥಿಸಿದ. ಅರಸನು ಅವರನ್ನು ಬಿಡುಗಡೆ ಮಾಡಿದ. ಸತ್ಯ ಹೇಳಿ ತನ್ನ ಮನ ಮೆಚ್ಚಿಸಿದ ರೈತನ ಕಿರಿಯ ಮಗನಿಗೆ ಮಗಳನ್ನು ಕೊಟ್ಟು ಮದುವೆ ಮಾಡಿದ. “”ಮುಂದೆ ಈ ರಾಜ್ಯದ ಅರಸನಾಗುವುದು ನೀನೇ” ಎಂದು ಹೇಳಿದ.
ಪ. ರಾಮಕೃಷ್ಣ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.