ಕತೆ: ಕಾಯಕ
Team Udayavani, Aug 25, 2019, 5:00 AM IST
ಆಳೆತ್ತರದ ಕಪ್ಪು ಗೇಟಿನ ಬದಿಯಲ್ಲಿದ್ದ ಪುಟ್ಟ ಕೋಣೆ. ಮೇಲ್ಭಾಗವನ್ನು ಅಲ್ಯುಮಿನಿಯಂ ಶೀಟ್‌ನಿಂದ ಅಚ್ಚುಕಟ್ಟಾಗಿ ಜೋಡಿಸಲಾಗಿತ್ತು. ಕೋಣೆಯಲ್ಲಿ ಒಂದು ಕುರ್ಚಿ, ಪುಟ್ಟಮೇಜು. ಗೋಡೆಯಲ್ಲಿ ತೂಗು ಹಾಕಿರುವ ಪ್ಯಾಂಟ್ ಮತ್ತು ಶರ್ಟ್. ಟೇಬಲ್ ಮೇಲೊಂದು ಟಾರ್ಚ್ ಹಾಗೂ ನೀರಿನ ಬಾಟಲಿ. ಗೇಟಿನ ಮುಂಭಾಗದಲ್ಲಿ ಒಮ್ಮೆ ಅತ್ತಿಂದಿತ್ತ ಇತ್ತಿಂದತ್ತ ನಡೆದು ಬಂದು ಕುರ್ಚಿಯಲ್ಲಿ ಕುಳಿತು ಸ್ವಲ್ಪ ನೀರು ಕುಡಿದು ದಣಿವಾರಿಸಿಕೊಂಡ ವಾಚ್‌ಮನ್ ಬಾಲಣ್ಣ. ವಾಹನವೇನಾದರೂ ಗೇಟಿನತ್ತ ಬಂದರೆ ಎದ್ದು ಓಡಿಬಂದು ವಿಚಾರಿಸಿ ಒಳಗೆ ಬಿಡುತ್ತಿದ್ದ ಆತ ಕುರ್ಚಿಯಲ್ಲಿ ಕುಳಿತುಕೊಳ್ಳುವುದೇ ಕಡಿಮೆ. ಆದರೆ, ಈ ದಿನ ಭಾನುವಾರ. ಉಸಿರುಗಟ್ಟಿಸುವ ವಾಹನಗಳ ಓಡಾಟವಿಲ್ಲ. ಕ್ಯಾಂಟೀನ್ ಮುಚ್ಚಿರುವ ಕಾರಣ ಅಲ್ಲೂ ಮೌನ. ಜನವಸತಿ ಪ್ರದೇಶದಿಂದ ದೂರದಲ್ಲಿದ್ದ ಕಾರಣ ಜನಸಂಚಾರವೂ ಕಡಿಮೆ. ಪರವೂರಿನಿಂದ ಕೆಲಸಕ್ಕೆ ಬರುತ್ತಿದ್ದ ಒಂದಿಬ್ಬರು ನಶೆ ಏರಿಸಿಕೊಂಡು ದೊಡ್ಡ ಸ್ವರದಲ್ಲಿ ಹಾಡು ಗುನುಗುತ್ತ ರಸ್ತೆಯಲ್ಲಿ ಸಾಗುತ್ತಿದ್ದರು.
ಕಳೆದ ರಾತ್ರಿಪಾಳಿ ಕೆಲಸ ಮಾಡಿದ್ದ ಬಾಲಣ್ಣ , ಈ ದಿನ ಬೆಳಿಗ್ಗೆ ಕೆಲಸಕ್ಕೆ ಹಾಜರಾಗಬೇಕಾಗಿದ್ದ ಫೆಡ್ರಿಕ್ ಬಾರದೇ ಇದ್ದ ಕಾರಣ ಮನೆಗೆ ಹೋಗಲಾಗದೆ ಅಲ್ಲೇ ಇರಬೇಕಾದ ಅನಿವಾರ್ಯತೆಗೆ ಸಿಲುಕಿದ್ದ. ರಾತ್ರಿ ನಿದ್ದೆಯಿಲ್ಲದೆ ಹಗಲು ಕೆಲಸವಿಲ್ಲದೆ ಸಹಜವಾಗಿ ತೂಕಡಿಸುತ್ತಿದ್ದ ಬಾಲಣ್ಣ ಕುಳಿತಲ್ಲೇ ಟೇಬಲ್‌ಗೆ ತಲೆಯಾನಿಸಿ ನಿದ್ದೆಗೆ ಜಾರಿದ.
.
ಮಂಗಳೂರಿನ ಹೊರವಲಯದ ತಿರ್ತಮೂಲೆಯ ಬಾಲಣ್ಣ ಬೆಂಗಳೂರಿನ ಇಂಡಸ್ಟ್ರಿಯಲ್ ಏರಿಯಾಕ್ಕೆ ಬಂದು ಇನ್ನೂ ಎರಡು ವರ್ಷಗಳಾಗಿಲ್ಲ. ಈ ಅರುವತ್ತರ ಆಸುಪಾಸಿನಲ್ಲಿ ಹಳ್ಳಿಯಿಂದ ದೂರದ ಪೇಟೆಗೆ ಬಂದು ನೆಲೆಸಿರುವುದಕ್ಕೆ ತನ್ನೂರಿನವರಂತೆ ಸ್ವತಃ ಬಾಲಣ್ಣನಿಗೂ ಸಮಾಧಾನವಿರಲಿಲ್ಲ. ಅದಕ್ಕೆ ಕಾರಣವೂ ಇಲ್ಲದಿಲ್ಲ. ತಿರ್ತಮೂಲೆ ಎಂಬ ಹಳ್ಳಿಯಲ್ಲಿ ಎರಡು ದನಗಳನ್ನು ಸಾಕಿ ಬದುಕು ಆರಂಭಿಸಿದ ಬಾಲಣ್ಣ ಶ್ರಮಜೀವಿ. ಪತ್ನಿ ಗೀತಾಳ ಸಹಕಾರದೊಂದಿಗೆ ಗುಡ್ಡವನ್ನು ಸಮತಟ್ಟು ಮಾಡಿ ಭತ್ತವನ್ನು ಬೆಳೆಯುವುದರ ಜತೆಗೆ ಖಾಲಿಯಿರುವ ಭಾಗಗಳಲ್ಲಿ ಅಡಿಕೆ ಗಿಡನೆಟ್ಟು ಸೀಮೆಎಣ್ಣೆ ಪಂಪಿನಲ್ಲಿ ನೀರು ಹಾಯಿಸಿ ತುಂಬಿದ ಫಸಲಿನಿಂದಾಗಿ ಆದಾಯ ಹೆಚ್ಚಿಸಿಕೊಂಡವನು. ಪುಟ್ಟ ಹಂಚು ಛಾವಣಿ ಮನೆ, ಮನೆಯ ಸುತ್ತ ತರಕಾರಿ, ತೆಂಗುಬಾಳೆ, ಕಾಳುಮೆಣಸು, ಹಲಸು, ಮಾವು… ಸಂತೃಪ್ತ ಬದುಕು.
ಒಬ್ಬಳೇ ಮಗಳು ಕೃತಿ ಪಿಯುಸಿಯಲ್ಲಿ ತಾನು ಓದಿದ ಕಾಲೇಜಿಗೆ ಮೊದಲಿಗಳಾಗಿ ಹೊರಹೊಮ್ಮಿದಾಗ ಮುಂದೇನು ಎಂಬ ಚಿಂತೆ. ಹೆಣ್ಣುಮಗಳನ್ನು ಕಾಲೇಜು ಓದಿಸಿ ಏನು ಮಾಡುತ್ತಿಯೋ ಎಂದು ಕೇಳಿದವರಿಗೆ ನೋಡೋಣ ಎಂದು ಉತ್ತರಿಸುತ್ತಿದ್ದ ಬಾಲಣ್ಣ ಕಾಲೇಜು ಉಪನ್ಯಾಸಕರ ಸಲಹೆಯಂತೆ ಅವಳನ್ನು ಮಂಗಳೂರಿನಲ್ಲಿ ಬಿಎಸ್‌ಸಿ ಗೆ ಸೇರಿಸಿದ.
.
ಟಪ್ ಎಂಬ ಶಬ್ದಕ್ಕೆ ಬೆಚ್ಚಿ ಎಚ್ಚರಾದ ಬಾಲಣ್ಣ ಕಣ್ಣುಜ್ಜುತ್ತ ಸ್ವರಬಂದ ಕಡೆಯತ್ತ ದೃಷ್ಟಿ ಹರಿಸಿದಾಗ ಆಗ ಧ್ವನಿ ಎತ್ತರಿಸಿ ಹಾಡುತ್ತಿದ್ದ ಮಲೆಯಾಳಿ ನಿಂತಿದ್ದ. “”ಎಂದಾಡೋ ಉರಕ್ಕಂ?” ಎಂದು ತನ್ನದೇ ಭಾಷೆಯಲ್ಲಿ ನಿದ್ದೆ ಮಾಡುತ್ತಿರುವುದಕ್ಕೆ ಆಕ್ಷೇಪಿಸಿದ.
ಬಾಲಣ್ಣನಿಗೆ ಆತನ ಭಾಷೆ ಗೊತ್ತಿಲ್ಲ. ಆದರೂ ಇವತ್ತು ಡ್ನೂಟಿಗೆ ಬರಬೇಕಾದ ಫೆಡ್ರಿಕ್ ಬಾರದ ಕಾರಣ ನಿನ್ನೆ ರಾತ್ರಿಯಿಡೀ ನಿದ್ದೆ ಇಲ್ಲದ ನಾನು ಇಲ್ಲೇ ಉಳಿದಿದ್ದೇನೆಂದೂ ಆದುದರಿಂದಲೇ ನಿದ್ದೆ ಬಂತೆಂದೂ ವಿವರಿಸಿದ.
ಆತನಿಗೆ ಎಷ್ಟು ಅರ್ಥವಾಯಿತೋ ಗೊತ್ತಿಲ್ಲ. ಅಂತೂ ಓಕೆ, ಓಕೆ ಎನ್ನುತ್ತಾ ಯಾವುದೋ ಹಾಡು ಗುನುಗುತ್ತಾ ಮುಂದೆ ಸಾಗಿದ.
ಬಾಲಣ್ಣ ಎದ್ದು ಮುಖ ತೊಳೆದು ಕರವಸ್ತ್ರದಿಂದ ಮುಖ ಒರೆಸಿಕೊಳ್ಳುತ್ತ ಒಮ್ಮೆ ಹೊರಗೆ ಬಂದು ಸುತ್ತಲೂ ದೃಷ್ಟಿ ಹಾಯಿಸಿದ. ರಸ್ತೆಬದಿಯಲ್ಲಿದ್ದ ಅರಳಿ ಮರದ ನೆರಳಿನಲ್ಲಿ ಯಾರೋ ಕುಳಿತು ಸಿಗರೇಟು ಸೇದುತ್ತಿದ್ದರು. ಕ್ಯಾಂಟೀನ್‌ನಲ್ಲಿ ಏನಾದರೂ ತಿನ್ನೋಣವೆಂದರೆ ಅಲ್ಲಿ ಇನ್ನೂ ಬಾಗಿಲು ತೆರೆದಿಲ್ಲ. ಬೆಳಗ್ಗೆ ಏನೂ ತಿಂದಿರದ ಕಾರಣ ಹೊಟ್ಟೆ ಚುರುಗುಟ್ಟುತ್ತಿತ್ತು. ಇಷ್ಟು ಹೊತ್ತಾದರೂ ಬಾರದ ಫೆಡ್ರಿಕ್ ಬಗ್ಗೆ ಈಗ ಬಾಲಣ್ಣನಿಗೆ ನಿಜವಾಗಿ ಕೋಪಬಂದಿತ್ತು.ಆತ ಬರಲಿ, ಅಸಲು ಬಡ್ಡಿ ಸೇರಿಸಿ ಒಟ್ಟಿಗೆ ಕೊಡುತ್ತೇ ನೆಂದುಕೊಂಡ. ಅಯ್ಯೋ… ಆತನ ಮನೆಯಲ್ಲಿ ಯಾರಿಗಾದರೂ ಅಸೌಖ್ಯವೇನಾದರೂ ಇದ್ದಲ್ಲಿ…. ಯಾರಿಗೆ ಗೊತ್ತು? ಒಟ್ಟಿನಲ್ಲಿ ನನ್ನ ಪ್ರಾರಬ್ಧ ಎಂದು ಮರುಕ್ಷಣವೇ ಮನಸ್ಸು ಬದಲಾಯಿಸಿದ ಬಾಲಣ್ಣ ಒಳಗೆ ಹೋಗಿ ಬಾಗಿಲೆಳೆದು ಎರಡು ಲೋಟ ನೀರು ಕುಡಿದು ಮತ್ತೆ ಕುರ್ಚಿಯಲ್ಲಿ ಕುಳಿತುಕೊಂಡ.
.
ತಿರ್ತಮೂಲೆ ಕೃಷಿಕರ ಸಂಘವು ಪ್ರತೀವರ್ಷ ತಾಲೂಕು ಮಟ್ಟದ ಕೃಷಿಕರ ಸಮಾವೇಶ ಹಮ್ಮಿಕೊಳ್ಳುವುದು ವಾಡಿಕೆ. ಕೃಷಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಈ ಸಮಾವೇಶದಲ್ಲಿ ಕೃಷಿಯುತ್ಪನ್ನಗಳ ಸಂಸ್ಕರಣೆ, ಸಾವಯವ ಕೃಷಿ ವಿಧಾನ, ಕೃಷಿ ವಿಜ್ಞಾನಿಗಳಿಂದ ಮಾಹಿತಿ, ಕೃಷಿಕರಿಗೆ ಸನ್ಮಾನ… ಹೀಗೇ ಏನೇನೋ ಕಾರ್ಯಕ್ರಮಗಳು. ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳೂ ಕೃಷಿಕರ ಸಂಘದ ಜತೆ ಕೈ ಜೋಡಿಸುತ್ತವೆ. ತಿರ್ತಮೂಲೆ ಸಂಘ ಈ ವರ್ಷದ ಉತ್ತಮ ಕೃಷಿಕ ಪ್ರಶಸ್ತಿಗೆ ಬಾಲಣ್ಣನ್ನು ಆಯ್ಕೆ ಮಾಡಿರುವ ವಿಚಾರವನ್ನು ಅವನಿಗೆ ತಿಳಿಸಿದಾಗ ಏನು ಹೇಳುವುದೆಂದೇ ತಿಳಿಯದ ಬಾಲಣ್ಣ , “ಅಲ್ಲ ನಮ್ಮಂಥವರಿಗೆಲ್ಲ ಸನ್ಮಾನ ಯಾಕೆ?’ ಎಂದು ಅಳುಕಿದ. ಸಂಘದ ಅಧ್ಯಕ್ಷರು ಇದು ನನ್ನ ಒಬ್ಬನ ತೀರ್ಮಾನವಲ್ಲ. ಅದಕ್ಕೊಂದು ಆಯ್ಕೆ ಸಮಿತಿಯಿದೆ. ಅಲ್ಲದೆ ನಿಮ್ಮ ಹೊಲಗದ್ದೆಗಳನ್ನು ಕಣ್ಣಾರೆ ವೀಕ್ಷಿಸಿ ನಿಮ್ಮನ್ನು ಸನ್ಮಾನಿಸಲೇ ಬೇಕೆಂದು ತೀರ್ಮಾನ ಕೈಗೊಂಡಿದ್ದಾರೆ.
ಈಗ ಬಾಲಣ್ಣನಲ್ಲಿ ಮಾತುಗಳಿರಲಿಲ್ಲ. ವಿಚಾರ ತಿಳಿದಾಗ ಮನೆಯಲ್ಲೂ ಖುಷಿಪಟ್ಟರು. ಮಕ್ಕಳು ಇಸ್ತ್ರಿ ಹಾಕಿಕೊಟ್ಟ ಬಿಳಿಪಂಚೆ, ಶರ್ಟು, ಶಾಲು ಧರಿಸಿ ಕಾರ್ಯಕ್ರಮಕ್ಕೆ ಹೋದಾಗ ಸಾವಿರಾರು ಜನರ ಸಮ್ಮುಖದಲ್ಲಿ ಸ್ಮರಣಿಕೆ ನೀಡಿ ಶಾಲು ಹೊದಿಸಿ ಸನ್ಮಾನಿಸಿದಾಗ ಬಾಲಣ್ಣನ ಕಣ್ಣಾಲಿಗಳು ತುಂಬಿ ಬಂದಿದ್ದವು. ವ್ಯಕ್ತಿಯನ್ನು ನೋಡದೆ ಕೃಷಿ ನೋಡಿ ನನ್ನ ಶ್ರಮವನ್ನು ಗುರುತಿಸಿ ಗೌರವಿಸಿದ ಸಂಘಕ್ಕೆ ಆತ ಕೃತಜ್ಞತೆ ಸಲ್ಲಿಸಿದ. ಅಲ್ಲೇ ಆಕಾಶವಾಣಿಯವರು ನಡೆಸಿದ ಕಿರು ಸಂದರ್ಶನದಲ್ಲಿ ಮಾತನಾಡಿದ ಬಾಲಣ್ಣ ತನ್ನ ಪತ್ನಿ, ಮಗಳು ಹಾಗೂ ಕೃಷಿಕರ ಸಂಘದ ಸಹಕಾರವಿಲ್ಲದೆ ಈ ಸಾಧನೆ ಮಾಡುವುದು ಸಾಧ್ಯವಿರಲಿಲ್ಲ ಎಂದು ಅಭಿಮಾನದಿಂದ ಹೇಳುವುದನ್ನು ಮರೆಯಲಿಲ್ಲ.
.
ಬಾಗಿಲ ಬಳಿ ಟಪ್ ಟಪ್ ಮತ್ತೆ ಶಬ್ದವಾಯಿತು. ಲಗುಬಗೆಯಿಂದ ಎದ್ದು ಈ ಮಲೆಯಾಳಿ ನನ್ನನ್ನು ನಿದ್ದೆ ಮಾಡಲು ಬಿಡುತ್ತಿಲ್ಲವಲ್ಲ ಎನ್ನುತ್ತ ಬಾಗಿಲು ತೆರೆದ. ನಗುತ್ತ ಎದುರಲ್ಲಿ ಫೆಡ್ರಿಕ್‌ನ ಮಗ ಚೀಲ ಹಿಡಿದು ನಿಂತಿದ್ದ. “”ಏನಪ್ಪಾ… ಅಪ್ಪ ಎಲ್ಲಿ?” ವಿಚಾರಿಸಿದ ಬಾಲಣ್ಣ.
“ ”ಅಕ್ಕನಿಗೆ ಹೆರಿಗೆ ಆಗಿದೆ. ಅಮ್ಮ-ಅಪ್ಪ ಆಸ್ಪತ್ರೆಯಲ್ಲಿದ್ದಾರೆ, ಅಪ್ಪ ಮೂರು ಗಂಟೆ ಹೊತ್ತಿಗೆ ಬರ್ತಾರಂತೆ. ಅಲ್ಲಿಯವರೆಗೆ ನೀವಿರಬೇಕಂತೆ”
“”ನಾನಿಲ್ಲಿರದೆ ಮತ್ತೇನು ಮಾಡುವುದು? ಬೆಳಿಗ್ಗೆ ಒಂದು ಫೋನಾದರೂ ಮಾಡಬಹುದಿತ್ತು”
“”ಫೋನ್ ಸರಿ ಇಲ್ಲವೇನೋ, ತುಂಬಾ ಸಲ ಮಾಡಿದ್ದೇನೆ. ರಿಂಗ್ ಆಗ್ತಾನೆ ಇಲ್ಲ”
“”ಓಹೋ… ಹೌದಲ್ಲ. ಬೆಳಗ್ಗಿನಿಂದ ಒಂದು ಕಾಲ್ ಕೂಡ ಬಂದಿಲ್ಲ”
“”ಸರಿ, ಮತ್ತೆ ನೀನ್ಯಾಕೆ ಬಂದೆ?”
“”ಅಲ್ಲಿ ಕ್ಯಾಂಟೀನ್ ಮುಚ್ಚಿರುತ್ತೆ. ಟಿಫಿನ್ ಕೊಟ್ಟು ಬಾ ಎಂದು ಅಪ್ಪ ಫೋನ್ ಮಾಡಿ ಹೇಳಿದ್ರು. ಹಾಗೆ ತಗೊಂಡು ಬಂದೆ”
“”ಮೂರು ಗಂಟೆಗೆ ಬರ್ತಾನಲ್ಲ… ನಂತ್ರ ನಾನು ಮನೆಗೆ ಹೋಗಿ ಊಟ ಮಾಡ್ತಿ¨ªೆ. ಪರವಾಗಿಲ್ಲ ಹೇಗೂ ತಂದಿದ್ದೀಯಲ್ಲ” ಎಂದು ಚೀಲ ತೆಗೆದುಕೊಂಡು ಹುಡುಗನನ್ನು ಕಳುಹಿಸಿಕೊಟ್ಟ.
ಕೈತೊಳೆದು ಬುತ್ತಿ ಬಿಡಿಸಿದಾಗ ಘಮಘಮಿಸುವ ಬಿಸಿಬಿಸಿ ಹೀರೆಕಾಯಿ ಪಲ್ಯ, ಬದನೆ-ಟೊಮೆಟೋ ಸಾಂಬಾರು, ಅನ್ನ. ಹಸಿದ ಹೊಟ್ಟೆಗೆ ಎಷ್ಟು ಬೇಗ ಇಳಿಯಿತೋ ಗೊತ್ತಿಲ್ಲ. ಡರ್ರನೇ ತೇಗಿ ಟಿಫಿನ್ ಬಾಕ್ಸ್ ತೊಳೆದಿಟ್ಟು ಕುರ್ಚಿಯಲ್ಲಿ ಕುಳಿತಾಗ ಸಮಾಧಾನವಾಯಿತು. ಇನ್ನರ್ಧ ಗಂಟೆಯಲ್ಲಿ ಫೆಡ್ರಿಕ್ ಬರುತ್ತಾನೆ. ಮನೆಗೆ ಹೋಗಿ ಬಿದ್ದುಕೊಂಡರೆ ಸಾಕಿತ್ತು ಎಂದುಕೊಳ್ಳುತ್ತ ಟೇಬಲ್‌ಗೆ ತಲೆಯಾನಿಸಿದ.
.
ಎಂಎಸ್‌ಸಿ ಮುಗಿಸಿದ ಕೃತಿ ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಬೆಂಗಳೂರಿನ ಕಂಪೆನಿಯೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಳು. ಕೈತುಂಬ ಸಂಬಳ ತರುವ ಕೆಲಸವಾಗಿದ್ದರೂ ಒಬ್ಬಳನ್ನೇ ಹೇಗೆ ಅಷ್ಟು ದೂರ ಕಳುಹಿಸಿಕೊಡುವುದು?
ಸರಕಾರಿ ನೌಕರಿಯಲ್ಲಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದ ತಮ್ಮನಲ್ಲಿ ಅಭಿಪ್ರಾಯ ಕೇಳಿದಾಗ ಆತ ಕಳುಹಿಸಿಕೊಡುವುದು ಒಳ್ಳೆಯದು ಎಂದು ಬಿಟ್ಟ.
“”ಈಗ ಉದ್ಯೋಗವಿಲ್ಲದಿದ್ದರೆ ಯಾವ ಹುಡುಗರೂ ಮದುವೆಗೆ ಮುಂದೆ ಬರುವುದಿಲ್ಲ. ಮದುವೆಗೆ ಒಪ್ಪಿದರೂ ಕಾರ್ ಕೊಡಿಸಿ, ಪ್ಲ್ಯಾಟ್
ಕೊಡಿಸಿ ಎಂದು ಒತ್ತಾಯಿಸುತ್ತಾರೆ. ಒಳ್ಳೆಯ ಕಂಪೆನಿ ಸಿಕ್ಕಿದೆ. ಸಂಬಳವೂ ಚೆನ್ನಾಗಿದೆ. ನನ್ನ ಮನೆ ಈ ಕಂಪೆನಿಗಿಂತ ಸ್ವಲ್ಪ ದೂರದಲ್ಲಿದೆ. ಆದರೂ ವಾರಕ್ಕೊಮ್ಮೆ ಬಂದು ಹೋಗಬಹುದು. ಕಂಪೆನಿಯ ವಸತಿಗೃಹ ಚೆನ್ನಾಗಿದೆ. ಬೇಡವಾದರೆ ಪಿ.ಜಿ. ಸೇರೊಳ್ಬಹುದು” ಎಂದು ಧೈರ್ಯ ತುಂಬಿದ.
ಬಾಲಣ್ಣನಿಗೆ ಒಂದು ರೀತಿಯ ಅಳುಕು. ದಿನಾ ಟಿ.ವಿ- ಪತ್ರಿಕೆಯಲ್ಲಿ ಬರುವ ಅತ್ಯಾಚಾರ, ಕೊಲೆ… ಸುದ್ದಿಗಳನ್ನು ನೋಡಿ ಹೆದರಿ ಹೋಗಿದ್ದ. ಆದರೆ, ಮಗಳು ಬಿಡಬೇಕಲ್ಲ. “”ಅಪ್ಪಾ… ಇಷ್ಟು ಕಷ್ಟಪಟ್ಟು ಓದಿಸಿದ್ದೀರಾ? ಎಜುಕೇಶನ್ ಲೋನ್ ಬೇರೆ ಇದೆ. ಇನ್ನಾದರೂ ನಿಮಗೆ ಕಷ್ಟ ಕೊಡಬಾರದೆಂಬ ಆಸೆ ನನಗೆ. ನೀವು ನಿಶ್ಚಿಂತೆಯಲ್ಲಿರಿ” ಎಂದು ಹೊರಟು ನಿಂತಳು. ತಮ್ಮನ ಜತೆ ಬಾಲಣ್ಣನೂ ಬೆಂಗಳೂರು ತನಕ ಹೋಗಿ ಅವಳನ್ನು ಬಿಟ್ಟು ಬಂದ.
ಈಗ ಮನೆಯಲ್ಲಿ ಗಂಡ-ಹೆಂಡತಿ ಇಬ್ಬರೇ. ಮಗಳ ನಗು-ಕೋಪ- ಹಾಡು-ಹರಟೆಗಳಿಲ್ಲದೆ ಮನೆ ಬಿಕೋ ಎನ್ನುತ್ತಿತ್ತು. ಆದರೂ ದಿನಾ ಸಂಜೆ ಬರುವ ಆಕೆಯ ಒಂದು ಕರೆಗೆ ಇಬ್ಬರೂ ಕಾದು ಕುಳಿತಿರುತ್ತಿದ್ದರು.
ಅದೊಂದು ದಿನ ಬೆಳಿಗ್ಗೆ ನೆರೆಮನೆಯ ಸೋಮಪ್ಪ ಹೊಸ ಸುದ್ದಿಯೊಂದನ್ನು ತಂದಿದ್ದ. ನಮ್ಮ ತಿರ್ತಮೂಲೆಯಿಂದಾಗಿ ಗ್ಯಾಸ್ ಪೈಪ್‌ಲೈನ್ ಹಾದುಹೋಗುತ್ತದಂತೆ, ನನ್ನ ಮತ್ತು ನಿಮ್ಮ ತೋಟದ ಬದಿಯಲ್ಲಿ ನಕ್ಷೆ ಮಾಡಿದ್ದಾರಂತೆ. ಸರ್ವೆಗೆ ಬರ್ತಾರಂತೆ, ಪೈಪ್‌ಲೈನ್ ಹೋಗುವ ಜಮೀನಿಗೆ ಪರಿಹಾರ ಕೊಡ್ತಾರಂತೆ. ಪೈಪ್ ಹಾಕಿದ ಬಳಿಕ ನಾವು ಅದರ ಮೇಲೆ ಕೃಷಿ ಮಾಡಬಹುದಂತೆ. ಹೀಗೆ ಅಂತೆಕಂತೆಗಳನ್ನು ಹೇಳುವುದರಲ್ಲಿ ಸೋಮಪ್ಪ ನಿಸ್ಸೀಮ. ಆದರೂ ಏನೂ ಸುದ್ದಿ ಇಲ್ಲದೆ ಹೇಳಲಾರ. ಹಾಗಿದ್ದರೆ ನನ್ನ ಬಂಗಾರ ಬೆಳೆಯುವ ಭೂಮಿ ಪೈಪ್‌ಲೈನಿಗೆ ಆಹುತಿಯಾಗುತ್ತದೆಯೆ? ಎಂಬ ಚಿಂತೆಯಲ್ಲಿ ಮುಳುಗಿದ ಬಾಲಣ್ಣ.
ಸೋಮಪ್ಪ ಹೇಳಿದ ಒಂದೆರಡು ದಿನಗಳಲ್ಲಿ ಅಧಿಕಾರಿಗಳು ಗ್ರಾಮದ ಗಡಿಭಾಗದಿಂದ ಸರ್ವೇ ಪ್ರಾರಂಭಿಸಿಯೇ ಬಿಟ್ಟರು. ಕೆಲವರು ಗ್ಯಾಸ್ ಪೈಪ್‌ಲೈನ್ ಹಾಕುವುದನ್ನು ವಿರೋಧಿಸಿ ಧರಣಿ ನಡೆಸಿದರು.ಇನ್ನು ಕೆಲವರು ಇದರಿಂದ ಏನೂ ಅಪಾಯ ಇಲ್ಲ ಎಂದು ಹೇಳುತ್ತ ಮನವೊಲಿಸುವಲ್ಲಿ ನಿರತರಾದರು. ಏನೂ ಆಗುವುದಿಲ್ಲವಾದರೆ ತಮಿಳುನಾಡಿನಲ್ಲಿ ಹೇಗೆ ದುರಂತ ಸಂಭವಿಸಿತ್ತು? ಎಂಬುದು ಕೆಲವರ ಪ್ರಶ್ನೆ. ಇವೆಲ್ಲದರ ಮಧ್ಯೆ ಒಂದು ಮುಂಜಾನೆ ಸೋಮಪ್ಪ ಗಣೇಶರಾಯರ ಜತೆಗೆ ಬಾಲಣ್ಣನ ಮನೆಗೆ ಬಂದ. ಅಳುಕುತ್ತಲೇ ವಿಷಯ ಪ್ರಸ್ತಾಪಿಸಿದ ಸೋಮಪ್ಪ ರಾಯರ ಸಂಬಂಧಿಕರೋರ್ವರು ಬ್ಯಾಂಕ್ ಉದ್ಯೋಗಕ್ಕೆ ವಿಆರ್‌ಎಸ್ ಕೊಟ್ಟು ಹಳ್ಳಿಯಲ್ಲಿ ಕೃಷಿ ಭೂಮಿ ಯೊಂದನ್ನು ಖರೀದಿಸಲು ಉದ್ದೇಶಿಸಿದ್ದಾರೆಂದೂ ಬಾಲಣ್ಣನ ಜಮೀನು ಕೊಡುವುದಿದ್ದರೆ ಒಳ್ಳೆಯ ಬೆಲೆಗೆ ಕೊಂಡುಕೊಳ್ಳುತ್ತಾರೆಂದೂ ಹೇಳಿದ. ಪೈಪ್‌ಲೈನ್ ಹೋಗುವ ವಿಚಾರ ಅವರಿಗೆ ತಿಳಿದಿಲ್ಲವೆ? ಆತಂಕದಿಂದ ಕೇಳಿದ ಬಾಲಣ್ಣ. ಎಲ್ಲವೂ ಗೊತ್ತು. ಆದರೆ, ಅವರೇನೂ ಇಲ್ಲೇ ವಾಸವಾಗಿರುವುದಿಲ್ಲ, ತಾನೆ? ಎಂದರು ಗಣೇಶರಾಯರು. ಬಾಲಣ್ಣ ಸಂದಿಗ್ಧªತೆಯಲ್ಲಿ ಸಿಲುಕಿದ. ಇದನ್ನರಿತ ರಾಯರು ನಿಧಾನಕ್ಕೆ ಯೋಚನೆ ಮಾಡಿ
ಹೇಳಿದರಾಯಿತು ಎಂದು ಹೇಳಿಹೊರಟರು.
ಮಗಳು ಬೆಂಗಳೂರಿನಲ್ಲಿರುವ ಕಾರಣ ನಾವಿಬ್ಬರು ಇಲ್ಲಿದ್ದು ಏನು ಮಾಡುವುದು? ಒಳ್ಳೆಯ ಬೆಲೆ ಸಿಕ್ಕರೆ ಜಮೀನು ಕೊಟ್ಟು ಬೆಂಗಳೂರಿನಲ್ಲೇ ನೆಲೆಸುವುದು. ಈ ಜಮೀನಿನಲ್ಲಿ ಗ್ಯಾಸ್ ಪೈಪ್‌ಲೈನ್ ಹಾದುಹೋದ ಬಳಿಕ ಈ ಬೆಲೆ ಸಿಗಲಾರದು. ಬೆಂಗಳೂರಿನಲ್ಲಿದ್ದರೆ ಅಲ್ಲೇ ಮಗಳಿಗೆ ಯೋಗ್ಯ ವರನೂ ಸಿಗಬಹುದು. ಅವಳಿಗೆ ಮದುವೆ ಮಾಡಿಸಿ ಅವಳಿಗೊಂದು ನೆಲೆಯಾದರೆ ನಮಗೂ ನೆಮ್ಮದಿ- ಹೀಗೇ ಯೋಚಿಸಿ ಪತ್ನಿ ಹಾಗೂ ಮಗಳನ್ನೂ ಒಪ್ಪಿಸಿದ ಬಾಲಣ್ಣ. ಮನಸ್ಸಿಲ್ಲದಿದ್ದರೂ ಮಗಳ ಜತೆ ಇರುವ ಆಸೆಯಿಂದ ಗೀತಕ್ಕ ಸಮ್ಮತಿ ಸೂಚಿಸಿದರು.
ಗಣೇಶರಾಯರನ್ನು ಸಂಪರ್ಕಿಸಿ ವ್ಯವಹಾರ ಕುದುರಿಸಿಯೇ ಬಿಟ್ಟ ಬಾಲಣ್ಣ. ಸೆಂಟ್ಸ್‌ಗೆ ಎಪ್ಪತ್ತೆçದು ಸಾವಿರ ಒಳ್ಳೆಯ ದರವೇ. ಬರೇ ಬೋಳು ಗುಡ್ಡವೀಗ ಹಸಿರಿನಿಂದ ನಳನಳಿಸುತ್ತಿರುವುದರಿಂದ ಐವತ್ತು ಲಕ್ಷ ಮೌಲ್ಯದ ಆಸ್ತಿಯಾಗಿ ಬದಲಾಗಿತ್ತು. ಆದರೆ, ಬೆಂಗಳೂರಿನಲ್ಲಿ ಈ ಮೊತ್ತದಲ್ಲಿ ಮನೆ ಖರೀದಿ ಮಾಡಿದರೆ ಮಗಳ ಮದುವೆಗೇನು ಮಾಡುವುದು? ಎಂದು ಚಿಂತಿಸಿದ ಬಾಲಣ್ಣ. ಅಲ್ಲೊಂದು ಬಾಡಿಗೆ ಮನೆ ಮಾಡಿ ಖರ್ಚಿಗೊಂದಷ್ಟು ದುಡ್ಡು ಇರಿಸಿಕೊಂಡು ಬಾಕಿ ಮೊತ್ತವನ್ನು ಮಗಳ ಹೆಸರಿಗೆ ಎಫ್ಡಿ ಇರಿಸಿದ.
ಕಂಪೆನಿಯ ಪಕ್ಕದಲ್ಲೇ ಬಾಡಿಗೆ ಮನೆ ಲಭಿಸಿದ ಕಾರಣ ದಿನಾ ಮನೆಗೆ ಬಂದು ಹೋಗಲು ಕೃತಿಗೆ ಅನುಕೂಲವೇ ಆಯಿತು. ಆದರೆ, ದಿನಾ ಬೆವರು ಸುರಿಸಿ ದುಡಿಯುತ್ತಿದ್ದ ದಂಪತಿಗಳಿಗೆ ನಗರದಲ್ಲಿ ನಾಲ್ಕು ಗೋಡೆಗಳ ಮಧ್ಯೆ ಇರುವುದು ಕಷ್ಟವಾಗುತ್ತಿತ್ತು. ಕೊನೆಗೆ ಯಾರಲ್ಲೊ ಮಾತನಾಡಿ ಬಾಲಣ್ಣನಿಗೆ ಈ ವಾಚ್‌ಮನ್ ಕೆಲಸವೇನೋ ಲಭಿಸಿತ್ತು. ಆದರೆ, ಗೀತಕ್ಕನಿಗೆ ಇಡೀ ದಿನ ಟಿ.ವಿ.ಯ ಮುಂದೆ ಕುಳಿತಿರುವುದು ಹಿಂಸೆಯೆನಿಸುತ್ತಿತ್ತು. ತಿರ್ತಮೂಲೆಯಲ್ಲಾದರೆ ಬೆಳಿಗ್ಗೆ ಬೇಗನೆದ್ದು ದನಗಳಿಗೆ ಅಕ್ಕಚ್ಚು ಕೊಡುವುದು, ಬೈಹುಲ್ಲು ಹಾಕುವುದು, ಹಾಲು ಕರೆಯುವುದು, ಗಿಡಗಳಿಗೆ ನೀರು ಹಾಕುವುದು, ತರಕಾರಿ ಕೊಯ್ಯುವುದು- ಹೀಗೇ ಎಲ್ಲ ಕೆಲಸಗಳಲ್ಲಿ ಬಾಲಣ್ಣನಿಗೆ ಜತೆಯಾಗುತ್ತಿದ್ದಳು. ವಾರದಲ್ಲೊಮ್ಮೆ ಸ್ವಸಹಾಯ ಸಂಘದ ಸಭೆ, ಹತ್ತಿಪ್ಪತ್ತು ಮನೆಗಳ ಮಹಿಳೆಯರ ಜತೆ ಮಾತುಕತೆ, ಹತ್ತಿರದ ಭಜನಾ ಮಂದಿರಗಳಲ್ಲಿ ಜರಗುವ ಭಜನೆಯಲ್ಲಿ ಪಾಲ್ಗೊಳ್ಳುವುದು, ಊರ ಜಾತ್ರೆ, ಕುಟುಂಬದ ಭೂತದ ಕಾರ್ಯಕ್ರಮ, ಅಷ್ಟಮಿಯ ಕೊಟ್ಟಿಗೆ, ನಾಗರಪಂಚಮಿಯ ಅರಸಿನೆಲೆಯ ತಿಂಡಿ, ದೀಪಾವಳಿಯ ದೋಸೆ ಹೀಗೇ ನೂರಾರು ನೆನಪುಗಳು ಆಕೆಯನ್ನು ಕಾಡತೊಡಗಿದವು. ಬಾಲಣ್ಣನಿಗೆ ತನ್ನ ನಿರ್ಧಾರ ತಪ್ಪಾಯಿತೇನೋ ಎಂದು ಪರಿತಪಿಸುವಂತಾಯಿತು.
.
“”ಬಾಲಣ್ಣ… ಬಾಲಣ್ಣ…” ಫೆಡ್ರಿಕ್ ಕರೆಯುತ್ತಿದ್ದ. ಬಾಲಣ್ಣ ಎದ್ದು ಹೋಗಿ ಬಾಗಿಲು ತೆರೆದ.
“”ನನ್ನಿಂದ ತೊಂದರೆಯಾಯಿತು” ಎಂದ ಫೆಡ್ರಿಕ್.
“”ಪರವಾಗಿಲ್ಲ, ಅನಿವಾರ್ಯತೆಯಲ್ಲವೆ? ಈಗ ತಾಯಿ-ಮಗು ಹೇಗಿದ್ದಾರೆ?”
“”ಅವ್ರು ಚೆನ್ನಾಗಿದ್ದಾರೆ, ಎರಡು ದಿನಗಳಲ್ಲಿ ಡಿಸ್‌ಚಾರ್ಜ್ ಆಗುತ್ತೆ, ಬಾಲಣ್ಣ ನೀವು ಮನೆಗೆ ಹೋಗಿ ರೆಸ್ಟ್ ತಗೊಳ್ಳಿ”
“”ಸರಿ” ಎಂದು ಮನೆಗೆ ಹೊರಟ ಬಾಲಣ್ಣ.
ಊಟ ಮಾಡದೆ ಮನೆಯಲ್ಲಿ ತನಗಾಗಿ ಕಾಯುತ್ತಿದ್ದ ಪತ್ನಿಯನ್ನು ಕಂಡು ದುಃಖ ವಾಯಿತು ಬಾಲಣ್ಣನಿಗೆ. “”ಫೆಡ್ರಿಕ್ ಈಗಷ್ಟೇ ಬಂದ, ಆತನ ಮಗಳ ಹೆರಿಗೆ ಆಗಿದೆ ಹಾಗೆ ಲೇಟ್ ಆಯಿತು. ಮಧ್ಯಾಹ್ನದ ಊಟವನ್ನು ಆತನೇ ಮಗನಲ್ಲಿ ಕಳುಹಿಸಿ ಕೊಟ್ಟಿದ್ದ. ನೀನು ಊಟ ಮಾಡು” ಎಂದ ಬಾಲಣ್ಣ ಚಾಪೆ ಹಾಸಿ ಮಲಗಿದ. ಈಗ ಮನೆಯಲ್ಲಿ ಮಲಗಿದ ಕಾರಣ, ಆತನಿಗೆ ಯಾರಾದರೂ ಬರುತ್ತಾರೆಂಬ ಆತಂಕವಿರಲಿಲ್ಲ. ನಿಧಾನಕ್ಕೆ ಗೊರಕೆ ಹೊಡೆಯುತ್ತ ಸುಖನಿದ್ರೆಗೆ ಜಾರಿದ.
.
“”ರೀ… ನಿದ್ದೆ ಸಾಕು, ನೋಡಿ ಯಾರು ಬಂದಿದ್ದಾರೆ?” ಹೆಂಡತಿ ಬಾಲಣ್ಣನ ಭುಜತಟ್ಟಿ ಕರೆದಾಗ ಗಡಬಡಿಸಿ ಎದ್ದ ಬಾಲಣ್ಣ ಎದುರಲ್ಲಿ ಕುಳಿತ ಸದಾಶಿವ ಶೆಟ್ಟರನ್ನು ನೋಡಿ ಅವಕ್ಕಾದ.
“”ಗೀತಕ್ಕ ಯಾಕೆ ಅವಸರ ಮಾಡ್ತೀರಾ? ಅವರು ನಿದ್ದೆ ಮಾಡ್ಲಿ” ಎನ್ನುತ್ತಲೇ ಬಾಲಣ್ಣನಲ್ಲಿ, “”ನಾನು ಎಚ್ಚರಿಸ್ಬೇಡಿ ಎಂತ ಹೇಳ್ತಾನೆ ಇದ್ದೇನೆ. ಗೀತಕ್ಕ ಕೇಳ್ಬೇಕಲ್ಲ?” ಎಂದರು.
“”ನೀವು ಅಷ್ಟು ದೂರದಿಂದ ಬರುವುದು ಹೆಚ್ಚಾ, ಅಲ್ಲ ಇವ್ರ ನಿದ್ದೆ ಹೆಚ್ಚಾ? ನೀವು ಮಾತಾಡ್ತಾ ಇರಿ, ನಾನು ಕಾಫಿ ಮಾಡಿ ತರ್ತೇನೆ” ಎಂದು ಅಡುಗೆ ಮನೆಗೆ ಧಾವಿಸಿದರು ಗೀತಕ್ಕ.
ಬಾಲಣ್ಣ ಎದ್ದು ಮುಖತೊಳೆದು ಕರವಸ್ತ್ರದಲ್ಲಿ ಮುಖ ಒರಸಿಕೊಳ್ಳುತ್ತ ಬಂದು ಶೆಟ್ಟರಲ್ಲಿ ಕುಶಲೋಪರಿ ಮಾತನಾಡಿದ ಬಳಿಕ ತಿಳಿದ ವಿಚಾರವೆಂದರೆ ಸಂಪಿಲ ದಾಮೋದರಣ್ಣನ ಮಗ ಶ್ಯಾಮ್‌ಪ್ರಕಾಶ್ ಎಂಟೆಕ್ ಮಾಡಿ ಬೆಂಗಳೂರಿನ ಸಾಪ್ಟ್ವೇರ್ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದ. ಈಗ ಆತ ಕೆಲಸ ಬಿಟ್ಟು ಊರಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾನೆ. ಬಾಲಣ್ಣನ ಮಗಳನ್ನು ತನ್ನ ಮಗನಿಗೆ ಮದುವೆಮಾಡಿಸಬೇಕೆಂಬುದು ದಾಮೋದರಣ್ಣನ ಆಸೆ. ಆದರೆ, ಬಾಲಣ್ಣ ಊರು ಬಿಟ್ಟ ನಂತರ ಸಂಪರ್ಕಕ್ಕೇ ಸಿಗದ ಕಾರಣ ಬೆಂಗಳೂರಿನ ಮಗಳ ಮನೆಗೆ ಹೊರಟಿದ್ದ ಸದಾಶಿವ ಶೆಟ್ಟರಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡುವಂತೆ ಹೇಳಿದ್ದಾರೆ. ಆದುದರಿಂದ ಶೆಟ್ಟರು ಮನೆ ಹುಡುಕಿ ಈ ಕಡೆ ಬಂದಿದ್ದರು. ಹುಡುಗನಿಗೆ ಕೃತಿಯ ಪರಿಚಯವಿದ್ದುದರಿಂದ ಆಕೆ ಒಪ್ಪಿದಲ್ಲಿ ಆತನ ಆಕ್ಷೇಪವೇನೂ ಇರಲಿಲ್ಲ.
ಗೀತಕ್ಕ ಇಬ್ಬರಿಗೂ ಚಹಾ ಕೊಟ್ಟ ಬಳಿಕ ಬಾಲಣ್ಣನಿಂದ ಮೊಬೈಲ್ ಸಂಖ್ಯೆ ಪಡೆದು ಶೆಟ್ಟರು ಹೊರಟರು. ವಿಚಾರ ತಿಳಿದ ಗೀತಕ್ಕ “ಶ್ಯಾಮನಿಗೇನಾಗಿದೆ? ತಲೆಗಿಲೆ ಕೆಟ್ಟಿದೆಯೋ ಹೇಗೆ?’ ಎಂದು ತನಗೆ ತಾನೇ ಪ್ರಶ್ನಿಸುತ್ತ, “ನಮ್ಮ ಮಗಳಿಗಂತೂ ಈ ಸಂಬಂಧ ಬೇಡಪ್ಪ’ ಎಂಬ ತೀರ್ಮಾನಕ್ಕೆ ಬಂದುಬಿಟ್ಟರು. ಶ್ಯಾಮ ಉತ್ತಮಗುಣ ನಡತೆಯ ಹುಡುಗ.ಎಳವೆಯಲ್ಲೇ ಕೃಷಿಯಲ್ಲಿ ಆಸಕ್ತಿ. ಆದರೆ, ಇಷ್ಟು ಕಲಿತು ಉದ್ಯೋಗ ಬಿಟ್ಟು ಕೃಷಿಯಲ್ಲಿ ತೊಡಗಿಸಿಕೊಳ್ಳುವುದೆಂದರೆ! ಬಾಲಣ್ಣನಿಗೆ ಯಾವುದೇ ತೀರ್ಮಾನಕ್ಕೆ ಬರಲಾಗಲಿಲ್ಲ. ಕೃಷಿಕನೊಬ್ಬನಿಗೆ ಮಗಳನ್ನು ಮದುವೆಮಾಡಿ ಕೊಡುವುದಿದ್ದರೆ ಜಮೀನು ಮಾರಿ ಈ ಬಾಡಿಗೆ ಮನೆಯಲ್ಲಿ ಕುಳಿತು ವಾಚ್‌ಮನ್ ಕೆಲಸ ಮಾಡುವ ಅನಿವಾರ್ಯತೆ ನನಗೇನಿತ್ತು? ಯಾವುದಕ್ಕೂ ಕೃತಿಯ ಬಳಿ ಸದಾಶಿವ ಶೆಟ್ಟರು ಬಂದ ವಿಚಾರ ತಿಳಿಸಿಬಿಡುವುದು ಒಳ್ಳೆಯದು ಎಂದು ಕೊಂಡ ಬಾಲಣ್ಣ.
ಕೃತಿ, ಶ್ಯಾಮ್‌ನ ಕೃಷಿಬದುಕಿನ ಬಗ್ಗೆ ಹಲವು ಪತ್ರಿಕೆಗಳಲ್ಲಿ ಲೇಖನಗಳನ್ನು ಓದಿದ್ದಳು. ಯೂಟ್ಯೂಬ್ ಮೂಲಕ ಆತನ ಕೃಷಿಯಲ್ಲಿನ ಸಂಶೋಧನೆಗಳು, ಸುಧಾರಿತ ಬೇಸಾಯ ಕ್ರಮಗಳು, ತೋಟಗಾರಿಕಾ ಉತ್ಪನ್ನಗಳನ್ನು ಸಂಸ್ಕರಿಸಲು ಬಳಸುವ ಸುಲಭ ವಿಧಾನಗಳು, ಸಂಶೋಧಿಸಿದ ಹೊಸ ತಳಿಗಳು ಹೀಗೇ ಹಲವಾರು ವಿಚಾರಗಳ ಬಗ್ಗೆ ತಿಳಿದುಕೊಂಡಿದ್ದಳು. ತಾನು ಬೆಂಗಳೂರಿಗೆ ಬಾರದಿದ್ದರೆ ಅಪ್ಪ ಅಮ್ಮನ ಜತೆ ಕೃಷಿ ಭೂಮಿಯಲ್ಲಿ ಇಂತಹ ಸಾಧನೆ ಮಾಡಬಹುದಿತ್ತು ಎಂಬ ಸಣ್ಣ ಆಸೆ ಕೂಡ ಆಕೆಯ ಮನದ ಮೂಲೆಯಲ್ಲಿ ಮೂಡಿ ಮರೆಯಾಗಿತ್ತು. ಅಪ್ಪ, ಅಮ್ಮ ಇಳಿವಯಸ್ಸಿನಲ್ಲಿ ನನಗಾಗಿ ಊರುಬಿಟ್ಟು ಬಂದು ಇಲ್ಲಿ ಪಡುತ್ತಿರುವ ಬವಣೆಯನ್ನು ಕಂಡು ಬೇಸರಪಟ್ಟಿದ್ದಳು. ಈಗ ಅವಕಾಶ ನನ್ನನ್ನು ಹುಡುಕಿಕೊಂಡು ಬಂದಿದೆ. ಸೋಮಪ್ಪ ಮತ್ತು ಗಣೇಶರಾಯರು ಸೇರಿ ಹೆಣೆದ ಬಲೆಗೆ ಅಪ್ಪ ಸುಲಭವಾಗಿ ಬಿದ್ದಿದ್ದರು. ಯಾಕೆಂದರೆ, ವಾಸ್ತವವಾಗಿ ಪೈಪ್‌ಲೈನ್ ಅಳವಡಿಸಲು ಭೂಸ್ವಾಧೀನಪಡಿಸುವ ಜಮೀನಿನಲ್ಲಿ ನಮ್ಮ ಜಮೀನಿನ ಸರ್ವೇ ನಂಬರ್ ಇರಲಿಲ್ಲ. ಅವರು ಜಮೀನು ಖರೀದಿಸುವ ಉದ್ದೇಶದಿಂದ ಸುಳ್ಳು ಕಥೆ ಹೆಣೆದಿದ್ದರು. ನಾವು ಊರಿಗೆ ಹೋದರೆ ಇದ್ದ ಹಣದಲ್ಲಿ ಮಾರಾಟ ಮಾಡಿದ ಜಮೀನಿನ ಹತ್ತಿರದಲ್ಲೇ ಸ್ವಲ್ಪ ಜಮೀನು ಕೊಂಡುಕೊಳ್ಳಬಹುದು. ಮತ್ತೆ ಕೃಷಿ ಬದುಕು ಕಟ್ಟಿಕೊಳ್ಳುವುದು ಅಪ್ಪ-ಅಮ್ಮನಿಗಂತೂ ಕಷ್ಟವೇ ಆಗಲಾರದು. ದುಡ್ಡು ಮಾತ್ರ ಜೀವನವಲ್ಲ. ಕೃಷಿಯಲ್ಲೂ ನೆಮ್ಮದಿಯ ಬದುಕು ಸಾಧ್ಯವಿದೆ ಎಂಬುದನ್ನು ನಾವು ತೋರಿಸಿಕೊಡಬೇಕು.
ಮಗಳ ಮಾತುಗಳನ್ನು ಕೇಳಿದ ಬಾಲಣ್ಣ ಮತ್ತು ಗೀತಕ್ಕ ಆಕೆಯ ನಿರ್ಧಾರ ಕಂಡು ಬೆರಗಾದರು. ಆಕೆ, ತಾನು ಕೆಲಸಕ್ಕೆ ರಾಜೀನಾಮೆ ನೀಡಲು ಸಿದ್ಧಪಡಿಸಿದ್ದ ಪತ್ರಕ್ಕೆ ಸಹಿ ಹಾಕಿ ಆಫೀಸಿನತ್ತ ಹೆಜ್ಜೆಹಾಕುತ್ತಿರುವಾಗ ಬಾಲಣ್ಣನೂ ತನ್ನ ರಾಜೀನಾಮೆ ಪತ್ರವನ್ನು ಬರೆಯಲು ಪೆನ್ನು ಹಾಳೆ ಕೈಗೆತ್ತಿಕೊಂಡ.
ಚಂದ್ರಶೇಖರ ಪಾತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ
Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್
Congress Guarantee: ಎರಡು-ಮೂರು ಗ್ಯಾರಂಟಿ ನಿಲ್ಲಿಸಿ: ಎಚ್.ಆರ್. ಗವಿಯಪ್ಪ ಒತ್ತಾಯ
ಕೆರೆ ಬತ್ತುವ ಮೊದಲೇ ಎಚ್ಚರಿಕೆ ಅಗತ್ಯ; ಜೀವ ಸೆಲೆಯಾಗಿರುವ ಕೆರೆಗಳ ನಿರ್ವಹಣೆಯೇ ಆಗುತ್ತಿಲ್ಲ
Cyclone Fengal: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ತಮಿಳುನಾಡಲ್ಲಿ 3 ದಿನ ಭಾರೀ ಮಳೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.