ಪಿಎಂ ಕಿಸಾನ್ ಯೋಜನೆಗೆ ಗ್ರಹಣ!
ದಾಖಲೆಗಳಿಗಾಗಿ ಕಚೇರಿಗೆ ಅಲೆದಾಡುವ ಸ್ಥಿತಿ •ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ವಿಫಲ
Team Udayavani, Aug 25, 2019, 12:42 PM IST
ಸಾಗರ: ರೈತ ನೋಂದಣಿ ಅರ್ಜಿಗಳು ತೋಟಗಾರಿಕಾ ಇಲಾಖೆ ಕಚೇರಿಗೆ ದೊಡ್ಡ ಸಂಖ್ಯೆಯಲ್ಲಿಯೇ ಬರುತ್ತಿವೆ.
•ಮಾ.ವೆಂ.ಸ. ಪ್ರಸಾದ್
ಸಾಗರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿಗಳ ಮಾಹಿತಿ ಪದ್ಧತಿ-ಪಿಎಂ ಕಿಸಾನ್ ಯೋಜನೆ- ಫ್ರೂಟ್ಸ್’ ರೈತರಿಗೆ ಯಾವ ರೀತಿಯಲ್ಲಿಯೂ ನೆರವು ನೀಡದ ಹಿನ್ನೆಲೆಯಲ್ಲಿ ಕೃಷಿಕರು ತಮ್ಮ ತೋಟ- ಗದ್ದೆಗಳಲ್ಲಿ ಕೃಷಿ ಕೆಲಸ ಮಾಡುವುದರ ಬದಲು ದಾಖಲೆಗಳಿಗಾಗಿ ಸರ್ಕಾರದ ವಿವಿಧ ಇಲಾಖೆ, ಅಧಿಕಾರಿಗಳಲ್ಲಿ ಎಡತಾಕುವ ಪರಿಸ್ಥಿತಿ ಮುಂದುವರಿದಿದೆ.
ಒಂದೊಮ್ಮೆ ಫಾರ್ಮರ್ ರಿಜಿಸ್ಟ್ರೇಷನ್ ಎಂಡ್ ಬೆನಿಫಿಶಿಯರಿ ಇನ್‌ಫಾರ್ಮೇಶನ್ ಸೆಂಟರ್ (ಫ್ರೂಟ್ಸ್) ಸರಿಯಾಗಿ ಚಾಲ್ತಿಯಲ್ಲಿದ್ದಿದ್ದರೆ ಇದರಲ್ಲಿ ತಮ್ಮ ದಾಖಲೆಗಳನ್ನು ಸಲ್ಲಿಸಿ ನೋಂದಣಿಯಾದ ರೈತರು ಸಾಲ, ಸಹಾಯಧನ, ಪರಿಹಾರ ಮೊದಲಾದವುಗಳನ್ನು ಪಡೆಯಲು ಕನಿಷ್ಟ ದಾಖಲೆಗಳನ್ನು ಕೊಟ್ಟಿದ್ದರೆ ಸಾಕಿತ್ತು. ಆದರೆ ರಾಜ್ಯದಾದ್ಯಂತ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದರಲ್ಲಿ ಆಗಿರುವ ವೈಫಲ್ಯದಿಂದ ರೈತರ ಗೋಳು ಮುಂದುವರಿದಿದೆ.
ಏನಿದು ಪಿಎಂಕೆಐಡಿ?: ರಾಜ್ಯದ ರೈತರು ತಮ್ಮ ಪಹಣಿ, ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ವಿವರಗಳ ಸಹಿತ ತೋಟಗಾರಿಕೆ, ಕೃಷಿ, ಪಶುಸಂಗೋಪನೆ, ರೇಷ್ಮೆ ಮೊದಲಾದ ಕೃಷಿ ಸಂಬಂಧಿತ ಇಲಾಖೆಗಳ ಮೂಲಕ ರಾಜ್ಯ ಸರ್ಕಾರದ ಫ್ರೂಟ್ಸ್ ಅಪ್ಲಿಕೇಷನ್‌ನಲ್ಲಿ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆಯನ್ನು ಒದಗಿಸಲಾಗಿತ್ತು. ಇದರಲ್ಲಿ ನೋಂದಣಿಯಾದ ರೈತರಿಗೆ ವಿಶಿಷ್ಟ ಪಿಎಂಕೆ ಐಡಿಯನ್ನು ನೀಡಲಾಗಿದೆ. ಈ ಐಡಿಯನ್ನು ದಾಖಲಿಸುತ್ತಿದ್ದಂತೆ ರೈತನ ಜಮೀನು ವಿವರ, ವಿವಿಧ ಇಲಾಖೆಗಳಲ್ಲಿ ಆತ ಪಡೆದ ಸಹಾಯಧನ, ಪರಿಹಾರ, ಸಾಲ ವಿವರಗಳು ಪ್ರತ್ಯಕ್ಷವಾಗುವ ಸೌಲಭ್ಯವನ್ನು ಅಳವಡಿಸಲಾಗಿತ್ತು.
ಇಲಾಖೆಯ ಅಂಕಿ-ಅಂಶಗಳನ್ನೇ ನಂಬುವುದಾದರೆ, ಕಳೆದ 12 ತಿಂಗಳಿನಲ್ಲಿ 11,15,121 ರೈತರ ನೋಂದಣಿಯಾಗಿದ್ದರೆ, ಈವರೆಗೆ 57,14,094 ಜನ ಕೃಷಿಕರನ್ನು ದಾಖಲಿಸಿ ಪಿಎಂಕೆ ಐಡಿ ನೀಡಲಾಗಿದೆ. ಆದರೆ ಈವರೆಗೆ ಸರ್ಕಾರ ರೈತರ ಪರಿಹಾರ, ಸಬ್ಸಿಡಿ ಮೊದಲಾದ ವಿಚಾರಗಳಲ್ಲಿ ಪಿಎಂಕೆಐಡಿಯನ್ನೇ ದಾಖಲೆಯಾಗಿ ಪರಿಗಣಿಸಲು ಆದೇಶ ಹೊರಡಿಸಿಲ್ಲ.
ಮತ್ತದೇ ಸರದಿ ಸಾಲಲ್ಲಿ ರೈತ!: ಕೃಷಿ ಕೆಲಸ ಮಾಡುವ ಹೊತ್ತಲ್ಲಿ ಕೊನೆಯ ದಿನಾಂಕದ ಒತ್ತಡಕ್ಕೆ ಸಿಲುಕುವ ರೈತ ಪಹಣಿ, ಮ್ಯುಟೇಷನ್, ಬೆಳೆ ದೃಢೀಕರಣ ಮೊದಲಾದ ದಾಖಲೆ ಪಡೆಯಲು ಮತ್ತೆ ಕ್ಯೂನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಉದಾಹರಣೆಗೆ ತೋಟಗಾರಿಕಾ ಇಲಾಖೆ ಪ್ರತಿ ವರ್ಷ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅಡಿಯಲ್ಲಿ ಅಡಕೆಯ ಕೊಳೆ ರೋಗದ ಬೋರ್ಡೋ ಔಷಧ ಖರೀದಿಗೆ ಸಹಾಯ ಧನವಿದೆ. ಇದಕ್ಕೆ ಅರ್ಜಿ ಸಲ್ಲಿಸುವ ರೈತ ತನ್ನ ಆಧಾರ್, ಬ್ಯಾಂಕ್ ಪಾಸ್‌ಬುಕ್ ನಕಲು, ವರ್ಷದ ಪಹಣಿ, ಮತದಾರರ ಗುರುತಿನ ಚೀಟಿ ಹಾಗೂ ಸಸ್ಯ ಸಂರಕ್ಷಣಾ ಔಷಧ ಖರೀದಿಸಿದ ಜಿಎಸ್‌ಟಿ ಬಿಲ್ ದಾಖಲೆ ಇರಿಸಬೇಕು. ಪಹಣಿಯಲ್ಲಿ ಬೆಳೆ ನಮೂದು ಇಲ್ಲದಿದ್ದರೆ ಮತ್ತೆ ಗ್ರಾಮ ಲೆಕ್ಕಿಗರಿಂದ ಬೆಲೆ ದೃಢೀಕರಣ ಪತ್ರವನ್ನು ಲಗತ್ತಿಸಬೇಕು. ರೈತ ಕೇವಲ ಪಹಣಿ ಪಡೆಯಲೇ ಹನುಮಂತನ ಬಾಲದಂತಹ ಕ್ಯೂನಲ್ಲಿ ನಿಂತು ದಿನಗಟ್ಟಲೆ ಕಳೆಯುವ ಪರಿಸ್ಥಿತಿಯಿದೆ. ಒಂದೊಮ್ಮೆ ಪಿಎಂಕೆ ಐಡಿ ಕಾರ್ಯ ನಿರ್ವಹಿಸಿದ್ದರೆ ಕೇವಲ ಸಸ್ಯ ಸಂರಕ್ಷಣಾ ಔಷಧ ಖರೀದಿಯ ಅಧಿಕೃತ ದಾಖಲೆ ಇಟ್ಟು ಅರ್ಜಿ ಸಲ್ಲಿಸಿದ್ದರೆ ಸಾಕಿತ್ತು.
ಈ ಕುರಿತು ಪ್ರತಿಕ್ರಿಯಿಸುವ ಅಂತಾರಾಜ್ಯ ರೈತಸಂಘದ ಸಂಚಾಲಕ ಕೆ.ಟಿ. ಗಂಗಾಧರ್, ಆಡಳಿತಾತ್ಮಕ ಸುಧಾರಣೆಯ ಕಾರ್ಯಕ್ರಮಗಳನ್ನು ಜಾರಿಗೆ ತರುವಲ್ಲಿ ಕಾರ್‍ಯಾಂಗ ಸೋಲುತ್ತಿದೆ. ಸೇವಾ ಮನೋಭಾವದ ಬದಲು ಸುಲಿಗೆ ಮನೋಭಾವವೇ ಮುಂದುವರಿದಿದೆ. ಸರ್ಕಾರ ತರುವ ಅಂಥ ವ್ಯವಸ್ಥೆಗಳನ್ನು ನೌಕರರು, ಅಧಿಕಾರಿಗಳು ಉದಾಸೀನ ಮಾಡುತ್ತಾರೆ. ಅವಿದ್ಯಾವಂತ ಕೃಷಿವರ್ಗಕ್ಕೆ ಇಂಥ ಯೋಜನೆಗಳ ಮಾಹಿತಿಯೂ ಇರುವುದಿಲ್ಲ. ವ್ಯವಸ್ಥೆಯ ಇಂಥ ನ್ಯೂನತೆಗಳ ವಿರುದ್ಧ ನಾವು ಹೋರಾಡಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಆಗಬೇಕಾದುದು ಇಷ್ಟೇ!
ಈಗಾಗಲೇ ಫ್ರೂಟ್ಸ್‌ನಲ್ಲಿ ರಾಜ್ಯದ ಹಲವು ರೈತರ ವಿವರ ನೋಂದಣಿಯಾಗಿದೆ. ರೈತರಿಗೆ ಪಿಎಂಕೆ ಐಡಿಯನ್ನೂ ನೀಡಲಾಗಿದೆ. ಸಾಫ್ಟ್‌ವೇರ್‌ನಲ್ಲಿರುವ ದೋಷಗಳನ್ನು ಸರಿಪಡಿಸುವ ಕೆಲಸವನ್ನು ಮಾಡಲಿ. ಈ ನಡುವೆ ನೋಂದಣಿಯಾಗಿರುವ ರೈತರು ತಮ್ಮ ಅರ್ಜಿ ಜೊತೆಗೆ ಪಿಎಂಕೆ ಐಡಿ ನಮೂದಿಸಿದರೆ ದಾಖಲೆಗಳು ಸಾಕು ಎಂದು ಸರ್ಕಾರ ಆದೇಶ ಹೊರಡಿಸಿದರೆ ಕೊನೆ ಪಕ್ಷ ನೋಂದಾಯಿತ ರೈತರಿಗೆ ಅನುಕೂಲವಾಗುತ್ತದೆ. ಇದರಿಂದ ಉಳಿದ ರೈತರೂ ಉತ್ತೇಜಿತರಾಗಿ ನೋಂದಣಿಗೆ ಕ್ಯೂ ನಿಲ್ಲುವಂತಾಗುತ್ತದೆ ಎಂಬ ಅಭಿಪ್ರಾಯವನ್ನು ಹೆಸರು ಪ್ರಕಟಿಸಲಿಚ್ಛಿಸದ ತೋಟಗಾರಿಕಾ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸುತ್ತಾರೆ.
ಇಲಾಖೆಯ ಅಧಿಕಾರಿಗಳು ಈ ಯೋಜನೆ ಬಗ್ಗೆ ಮಾಹಿತಿ ನೀಡಿದ್ದರು. ನೋಂದಣಿ ಅರ್ಜಿ, ವಿವರ ನೀಡುವುದಾಗಿ ತಿಳಿಸಿದ್ದರು. ಆದರೆ ಆ ನಂತರ ಏನೂ ಮಾಹಿತಿ ಇಲ್ಲ. ರೈತರ ಮಾಹಿತಿ ಇಲಾಖೆ ಬಳಿ ಇದ್ದರೆ ವಿವಿಧ ಯೋಜನೆಗಳ ಅರ್ಜಿ ಸಲ್ಲಿಕೆಯ ಸಂದರ್ಭದಲ್ಲಿ ಅಗತ್ಯ ದಾಖಲೆಗಳ ಸಂಗ್ರಹ, ಜೆರಾಕ್ಸ್ ಮಾಡುವ ಶ್ರಮ ಇರುತ್ತಿರಲಿಲ್ಲ. ರೈತ ನೋಂದಣಿ ಕಾರ್ಯ ಶೀಘ್ರವಾಗಿ ಆಗಬೇಕು.
•ಬಿ.ಆರ್. ಗಣಪತಿ ಬಂದಗದ್ದೆ,
ಕೃಷಿಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.