ಸಾವಿನ ದಾರಿಯಾಗಿದೆ ರಾಷ್ಟ್ರೀಯ ಹೆದ್ದಾರಿ -75
Team Udayavani, Aug 26, 2019, 2:40 PM IST
ಹಾಸನ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಹಾಸನ – ಸಕಲೇಶಪುರ- ಬಿ.ಸಿ. ರೋಡ್ ನಡುವಿನ 127 ಕಿ.ಮೀ. ರಸ್ತೆ ವಾಹನ ಚಾಲಕರಿಗೆ ಸಾವಿನ ಹಾದಿಯಾಗಿ ಪರಿಣಮಿಸಿದೆ.
ರಾಷ್ಟ್ರೀಯ ಹೆದ್ದಾರಿ ಇಲಾಖೆ ನಿರ್ವಹಿಸುತ್ತಿದ್ದ ಈ ರಸ್ತೆಯನ್ನು ಚತುಷ್ಪಥ ರಸ್ತೆಯಾಗಿ ನಿರ್ಮಿಸಲು ಒಪ್ಪಂದ ಮಾಡಿಕೊಂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಈಗ ಕಾಮಗಾರಿಯನ್ನು ಅರ್ಧಕ್ಕೆ ಕೈ ಬಿಟ್ಟಿರುವುದರಿಂದ ಹಾಳಾಗಿರುವ ರಸ್ತೆ ಅನಾಥವಾಗಿದೆ.
ಬೆಂಗಳೂರಿನ ನೆಲಮಂಗಲದಿಂದ ಹಾಸನದ ವರೆಗೆ ಚತುಷ್ಪಥ ರಸ್ತೆ ನಿರ್ಮಾಣವಾಗಿ 10 ವರ್ಷ ಕಳೆದಿದೆ. ಸುಸಜ್ಜಿತ ರಸ್ತೆ ಮಾದರಿಯಲ್ಲೇ ಹಾಸನ- ಸಕಲೇಶಪುರ- ಬಿ.ಸಿ.ರೋಡ್ (ಮಂಗಳೂರು) ನಡುವೆಯೂ ಚತುಷ್ಪಥ ರಸ್ತೆ ನಿರ್ಮಾಣವಾದರೆ ಕರಾವಳಿ ಹಾಗೂ ರಾಜಧಾನಿ ನಡುವೆ ಉತ್ತಮ ಸಂಪರ್ಕ ವ್ಯವಸ್ಥೆಯಾಗುತ್ತದೆ ಎಂಬ ಕನಸಿತ್ತು. ಆದರೆ, ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜನರ ಕನಸನ್ನು ನುಚ್ಚುನೂರು ಮಾಡಿ ಸಾವಿನ ಹೆದ್ದಾರಿ ಯಾಗಿದ್ದರೂ ಕಣ್ಣು ಮುಚ್ಚಿ ಕುಳಿತಿದೆ.
ಯುಪಿಎ ಸರ್ಕಾರದ ಅವಧಿಯಲ್ಲಿ ಅಂದು ಕೇಂದ್ರ ಭೂ ಸಾರಿಗೆ ಸಚಿವರಾಗಿದ್ದ ಆಸ್ಕರ್ ಫರ್ನಾಂಡೀಸ್ ಅವರು ಹಾಸನ-ಸಕಲೇಶಪುರ- ಬಿ.ಸಿ.ರೋಡ್ (ಮಂಗಳೂರು) ನಡುವೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಮಂಜೂರಾತಿ ನೀಡಿದ್ದರು. ಮಂಜೂರಾತಿ ದೊರೆತು 7 ವರ್ಷಗಳಾಗಿವೆ. ಹಾಸನ – ಮಂಗಳೂರು ನಡುವಿನ 172 ಕಿ.ಮೀ.ಪೈಕಿ ಶಿರಾಡಿಘಾಟ್‌ನ 32 ಕಿ.ಮೀ. ಮತ್ತು ಬಿ.ಸಿ.ರೋಡ್ – ಮಂಗಳೂರು ನಡುವಿನ 13 ಕಿ.ಮೀ.ಹೊರತುಪಡಿಸಿ 127 ಕಿ.ಮೀ. ರಸ್ತೆ ಚತುಷ್ಪಥ ರಸ್ತೆಯಾಗಿ ನಿರ್ಮಾಣ ವಾಗುವ ಸೂಚನೆಗಳಂತೂ ಕಂಡು ಬರುತ್ತಿಲ್ಲ.
ಕನಸಿನ ಮಾತಾದ ಚತುಷ್ಫಥ: ಚತುಷ್ಪಥ ಕಾಂಕ್ರೀಟ್ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, 2016 ರಲ್ಲಿಯೇ 127 ಕಿ.ಮೀ.ಯನ್ನು ವಹಿಸಿಕೊಂಡು 2019 ಮೇ ಅಂತ್ಯ ದೊಳಗೆ ಚತುಷ್ಪಥ ರಸ್ತೆಯನ್ನಾಗಿ ನಿರ್ಮಿಸುವುದಾಗಿ ಒಪ್ಪಿಕೊಂಡಿತ್ತು. ಶಿರಾಡಿಘಾಟ್‌ನ 32 ಕಿ.ಮೀ.ನಲ್ಲಿ ಚತುಷ್ಪಥ ರಸ್ತೆ ನಿರ್ಮಿಸಲು ಭೌಗೋಳಿಕವಾಗಿ ಸಾಧ್ಯವಿಲ್ಲ. ಅಲ್ಲಿ ದ್ವಿಪಥ ಕಾಂಕ್ರೀಟ್ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆಯೇ ನಿರ್ವಹಿಸುತ್ತಿದೆ.
ಬಿ.ಸಿ.ರೋಡ್ – ಮಂಗಳೂರು ನಡುವೆ 13 ಕಿ.ಮೀ. ಈಗಾಗಲೇ ಚತುಷ್ಪಥ ರಸ್ತೆಯಾಗಿ ನಿರ್ಮಾಣ ವಾಗಿದೆ. ಇನ್ನುಳಿದ 127 ಕಿ. ಮೀ. ಪೈಕಿ ಹಾಸನ – ಸಕಲೇಶಪುರ ತಾಲೂಕಿನ ಹೆಗ್ಗದ್ದೆವರೆಗೆ ಹಾಗೂ ಗುಂಡ್ಯಾದಿಂದ ಬಿ.ಸಿ.ರೋಡ್‌ವರೆಗೆ ಚತುಷ್ಪಥ ರಸ್ತೆ ನಿರ್ಮಾಣವಾಗಬೇಕಾಗಿದೆ. ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಡಿಕೊಂಡ ಒಪ್ಪಂದದಂತೆ ರಸ್ತೆ ನಿರ್ಮಾಣದ ಅವಧಿ ಮುಗಿದಿದೆ. ಇನ್ನೂ ಶೇ.20 ರಷ್ಟು ಕಾಮಗಾರಿಯೂ ಮುಗಿದಿಲ್ಲ. ನಾಲ್ಕೆದು ವರ್ಷ ಗಳಾದರೂ ಚತುಷ್ಪಥ ರಸ್ತೆ ನಿರ್ಮಾಣವಂತೂ ಕನಸಿನ ಮಾತೇ ಸರಿ ಎಂಬಂತಾಗಿದೆ.
ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯ: ರಾಷ್ಟ್ರೀಯ ಹೆದ್ದಾರಿ ಇಲಾಖೆ ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ 127 ಕಿ.ಮೀ. ರಸ್ತೆಯನ್ನು ಹಸ್ತಾಂತರಿಸಿ ಕೈ ತೊಳೆದು ಕೊಂಡು ನೆಮ್ಮದಿಯಾಗಿದೆ. ಆದರೆ ಚತುಷ್ಪಥ ರಸ್ತೆ ನಿರ್ಮಾಣದ ಹೊಣೆ ಹೊತ್ತ ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ, ಈಗ ಕೈ ಚೆಲ್ಲಿ ಕುಳಿತಿದೆ. ಈ ಹಿಂದೆ ಇದ್ದ ದ್ವಿಪಥ ರಸ್ತೆಯನ್ನೂ ಕೆಲವು ಕಡೆ ಅಗೆದು ಹಾಳು ಮಾಡಲಾಗಿದೆ. ಕಳೆದ 3 ವರ್ಷಗಳಿಂದಲೂ ದ್ವಿಪಥ ರಸ್ತೆ ಡಾಂಬರು ಕಾಣದೇ ರಸ್ತೆಯಲ್ಲಿ ವಾಹನ ಗಳು ಸಂಚರಿಸಲಾರದಷ್ಟು ಹಾಳಾಗಿ ಹೋಗಿದೆ. ಪ್ರತಿ ದಿನವೂ ಅಪಘಾತಗಳು ಸಂಭವಿಸಿ ಅಮಾಯಕರು ಬಲಿಯಾಗುತ್ತಿದ್ದಾರೆ. ಮಂದೇನು ಎಂಬುದಕ್ಕೆ ಯಾರೊಬ್ಬರಿಂದಲೂ ಉತ್ತರವಿಲ್ಲ.
ಕಾಮಗಾರಿ ನಿಲ್ಲಲು ಕಾರಣವೇನು? : ಹಾಸನ- ಸಕಲೇಶಪುರ, ಗುಂಡ್ಯ-ಬಿ.ಸಿ.ರೋಡ್ ನಡುವಿನ ದ್ವಿಪಥ ರಸ್ತೆಯನ್ನು ಚತುಷ್ಪಥ ರಸ್ತೆ ನಿರ್ಮಾಣಕ್ಕೆ 2017 ರಲ್ಲೇ ಕಾಮಗಾರಿ ಆರಂಭವಾಯಿತು. ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಕಂಪನಿ, ರಸ್ತೆ ಬದಿ ಮರ ತೆಗೆಯುವಲ್ಲಿ ತೋರಿದ ಉತ್ಸಾಹವನ್ನು ರಸ್ತೆ ನಿರ್ಮಾಣದಲ್ಲಿ ತೋರಲಿಲ್ಲ.
ಮರಗಳ ತೆರವು ನಂತರ ಅಲ್ಲಲ್ಲಿ ಚತುಷ್ಪಥ ರಸ್ತೆ ನಿರ್ಮಾಣದ ಮಣ್ಣಿನ ಕಾಮಗಾರಿ ಆರಂಭವಾದ ಕೆಲ ತಿಂಗಳಲ್ಲೇ ಕಾಮಗಾರಿ ಸ್ಥಗಿತವಾಯಿತು. ಅಂದರೆ ಗುತ್ತಿಗೆ ವಹಿಸಿಕೊಂಡ ಕಂಪನಿ ದಿವಾಳಿಯೆಂದು ಕಾಮಗಾರಿ ಕೈ ಬಿಟ್ಟಿತು. ಆನಂತರ ಕಾಮಗಾರಿಯನ್ನು ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಾಜ್‌ಕಮಲ್ ಎಂಬ ಕಂಪನಿಗೆ ವಹಿಸಿತು. ಆ ಕಂಪನಿಯೂ ಸುಮಾರು ಶೇ.10 ಕಾಮಗಾರಿ ನಿರ್ವಹಿಸಿ ತಾನೂ ದಿವಾಳಿ ಎಂದು ಕಾಮಗಾರಿ ಕೈ ಬಿಟ್ಟು ಪರಾರಿಯಾಗಿದೆ. ರಸ್ತೆ ನಿರ್ಮಾಣಕ್ಕೆ ಮುಂಗಡವಾಗಿ ನೀಡಿದ್ದ ಮೊತ್ತವನ್ನು ವಸೂಲಿ ಮಾಡಿಕೊಂಡು ಇಎಂಡಿಯನ್ನೂ ಮುಟ್ಟು ಗೋಲು ಹಾಕಿಕೊಂಡು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುಮ್ಮನೆ ಕುಳಿತಿದೆ. ಈಗ, ಹೊಸದಾಗ ಟೆಂಡರ್ ಪ್ರಕ್ರಿಯೆ ಆರಂಭಿಸಿ, ಪ್ರಕ್ರಿಯೆ ಮುಗಿದ ನಂತರವಷ್ಟೇ ರಸ್ತೆ ನಿರ್ಮಾಣ ಆರಂಭವಾಗ ಬೇಕಾಗಿದೆ. ಈ ಎಲ್ಲಾ ಪ್ರಕ್ರಿಯೆಗಳು ಸದ್ಯಕ್ಕೆ ಆರಂಭ ವಾಗುವ ಲಕ್ಷಣ ಕಾಣುತ್ತಿಲ್ಲ.
ಮುಂದೇನು ಎಂಬ ಚಿಂತನೆ: 147 ಕಿ.ಮೀ. ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬದ್ಧವಾಗಿದೆ. 573 ಕೋಟಿ ರೂ. ಅಂದಾಜಿನ ಹಾಸನ – ಸಕಲೇಶಪುರ ನಡುವಿನ ಚತುಷ್ಪಥ ರಸ್ತೆ ನಿರ್ಮಾಣದ ಕಾಮಗಾರಿ ವಹಿಸಿ ಕೊಂಡಿದ್ದ ಒಬ್ಬ ಗುತ್ತಿಗೆದಾರರು ಕೈ ಬಿಟ್ಟರು. ಆನಂತರ ಬಂದ ಮತ್ತೂಬ್ಬ ಗುತ್ತಿಗೆದಾರರೂ ಬಿಟ್ಟು ಹೋಗಿ ದ್ದಾರೆ. ರಸ್ತೆ ನಿರ್ಮಾಣಕ್ಕೆ ಸಾಮಗ್ರಿ ಸಂಗ್ರಹಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗುತ್ತಿಗೆದಾರರಿಗೆ ನೀಡಿದ್ದ 42 ಕೋಟಿ ರೂ. ವಾಪಸ್ ಪಡೆದುಕೊಂಡಿದೆ. ಕಾಮಗಾರಿ ಬಿಟ್ಟು ಹೋಗಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಮತ್ತು ಮುಂದೆ ಕಾಮಗಾರಿ ಪುನಾರಂಭಿಸಲು ಏನು ಮಾಡ ಬೇಕೆಂಬುದರ ಬಗ್ಗೆ ಚಿಂತನೆ ನಡೆದಿದೆ.
● ಎನ್.ನಂಜುಂಡೇಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.