ಕೃಷ್ಣೆ ತಟದ ದೇವದೂತರು
Team Udayavani, Aug 27, 2019, 11:39 AM IST
ಚಿಕ್ಕೋಡಿ: ಅದು ಅಂತಿಂಥ ಪ್ರವಾಹವಲ್ಲ. ಅತಿ ಭಯಂಕರ ನೆರೆ. ಮಳೆಯೂ ಸಾಮಾನ್ಯವಾದುದಲ್ಲ. ರಾತೋರಾತ್ರಿ ಜನರಿಗೆ ತಾವಿದ್ದ ಮನೆಯೇ ನಡುಗಡ್ಡೆಯಾಗಿ ಜೀವವೇ ಬಾಯಿಗೆ ಬಂದ ಅನುಭವ. ಅಂಥ ಸಮಯದಲ್ಲಿ ತಮ್ಮ ಜೀವವನ್ನೂ ಲೆಕ್ಕಿಸದೇ ಅಂದಾಜು 7 ಸಾವಿರ ಜನರನ್ನು ರಕ್ಷಿಸಿದ ದೇವದೂತರಿವರು.
ಭೀಕರ ಪ್ರವಾಹದಲ್ಲಿ ಸಿಲುಕಿ ಜೀವ ರಕ್ಷಣೆಗೆ ಪರದಾಡುತ್ತಿದ್ದ ಸಾವಿರಾರು ಜನರನ್ನು ರಕ್ಷಣೆ ಮಾಡಿ ದಡಕ್ಕೆ ಸೇರಿಸಿದ ನಾಲ್ವರು ನಾವಿಕರು ನದಿ ತೀರದ ಸಂತ್ರಸ್ತರ ಪಾಲಿಗೆ ದೇವರಂತಾಗಿದ್ದಾರೆ. ಅವರನ್ನು ಸ್ಮರಿಸಿ ಮನದಲ್ಲಿಯೇ ಧನ್ಯವಾದ ಅರ್ಪಿಸುತ್ತಿದ್ದಾರೆ. ಇಂಗಳಿ ಗ್ರಾಮದ ರಾಜು ಅಪ್ಪಾಸಾಹೇಬ ಪನದೆ, ಗಜಾನನ ಭೋವಿ, ನೆರೆಯ ಮಹಾರಾಷ್ಟ್ರದ ಗಣೇಶವಾಡಿ ಗ್ರಾಮದ ಸದಾಶಿವ ಅಂಬಿ, ಅಲಾಸ ಗ್ರಾಮದ ಧೂಳಪ್ಪ ಅಂಬಿ ಇವರೇ ಆ ದೇವದೂತರು. ಸರ್ಕಾರದ ಎನ್‌ಡಿಆರ್‌ಎಫ್ ಹಾಗೂ ವಿವಿಧ ರಕ್ಷಣಾ ತಂಡಗಳು ಬರುವ ಮುನ್ನವೇ ಈ ದೋಣಿ ನಾವಿಕರು ಆರು ಸಾವಿರ ಜನರ ಜನರಿಗೆ ಜೀವದಾನ ನೀಡುವ ಕಾರ್ಯ ಇವರ ಕೈಯಿಂದ ಆಗಿದೆ. 2019ರ ಮಹಾ ಪ್ರವಾಹದಲ್ಲಿ ಇವರ ಕಾರ್ಯ ಅಮೂಲ್ಯವಾಗಿದೆ ಎನ್ನುತ್ತಾರೆ ಸ್ಥಳೀಯರು.
ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ರಾಜು ಅಪ್ಪಾಸಾಹೇಬ ಪನದೆ ಮತ್ತು ಗಜಾನನ ಲಕ್ಷ್ಮಣ ಭೋವಿ ಇವರು ದೋಣಿ ಮೂಲಕ ಇಂಗಳಿ ಗ್ರಾಮದ 700 ಜನ ಹಾಗೂ ಅಥಣಿ ತಾಲೂಕಿನ ಮಳವಾಡ ಗ್ರಾಮದ 100 ಜನ ಮತ್ತು ಒಂದು ಜಾನುವಾರು ರಕ್ಷಣೆ ಮಾಡಿದ್ದಾರೆ.
ನೆರೆಯ ಮಹಾರಾಷ್ಟ್ರದ ಶಿರೋಳ ತಾಲೂಕಿನ ಗಣೇಶವಾಡಿ ಗ್ರಾಮದ ಸದಾಶಿವ ಅಂಬಿ ಹಾಗೂ ಅಲಾಸ ಗ್ರಾಮದ ಧೂಳಪ್ಪ ಅಂಬಿ ಇವರು ದೋಣಿ ಮೂಲಕ 6 ಸಾವಿರಕ್ಕಿಂತ ಹೆಚ್ಚಿನ ಜನರನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಗಳಿಗೆ ತಂದು ಬಿಟ್ಟಿದ್ದಾರೆ. ಕೃಷ್ಣಾ ನದಿ ತೀರದ ಎಲ್ಲ ಕಡೆಗಳಲ್ಲಿ ಈ ನಾಲ್ಕು ಜನ ದೋಣಿ ನಾವಿಕರ ಮಾನವೀಯತೆ ಬಗ್ಗೆ ಎಲ್ಲ ಕಡೆಗಳಿಂದ ಪ್ರಶಂಸೆಯ ಮಾತುಗಳು ವ್ಯಕ್ತವಾಗುತ್ತಿದೆ.
ಮಹಾರಾಷ್ಟ್ರದ ಗಣೇಶವಾಡಿಯಲ್ಲಿ ಗಾವಭಾಗ ಸಂಪೂರ್ಣ ಮುಳುಗಡೆಯಾಗಿತ್ತು. ಇಲ್ಲಿಯ 1840 ನಾಗರಿಕರು ಹಾಗೂ 22 ಜಾನುವಾರುಗಳನ್ನು ಅವರು ಸುರಕ್ಷಿತವಾಗಿ ದೋಣಿಯಿಂದ ಹೊರ ತೆಗೆದಿದ್ದಾರೆ. ಅದೇ ರೀತಿ ಬಣವಾಡಿಯ 14 ಜನರು, ಕವಟೆಗೂಲಂದ ಗ್ರಾಮದ 216 ಜನರು ಒಂದು ಆಕಳು, ಶೇಡಶ್ಯಾಳ ಗ್ರಾಮದ 8 ಜನರು ಈ ರೀತಿ ಒಟ್ಟು 2,064 ಜನರನ್ನು ರಕ್ಷಣೆ ಮಾಡಿದ್ದಾರೆ.
ಅದರಂತೆ ಅಲಾಸ ಎಂಬ ಗ್ರಾಮ ನಡುಗಡ್ಡೆಯಾಗಿತ್ತು. ಈ ಗ್ರಾಮದ ಸಂಖ್ಯೆ 8 ಸಾವಿರಕ್ಕಿಂತ ಹೆಚ್ಚಿದ್ದು, ಪ್ರವಾಹ ಬರುವ ಮುಂಚೆ 3500 ಹೆಚ್ಚು ಜನರು ಸುರಕ್ಷಿತ ಸ್ಥಳಗಳಿಗೆ ಹೋಗಿದ್ದರು. ಆದರೆ ತನ್ನ ಜಾನುವಾರುಗಳನ್ನು ಕಾಪಾಡಲು ಹೋಗಿದ್ದ ಸಂದರ್ಭದಲ್ಲಿ ನಾಲ್ಕೂವರೆ ಸಾವಿರ ಜನರು ನೀರಿನಲ್ಲಿ ಸಿಲುಕಿಕೊಂಡು ಪ್ರಾಣ ರಕ್ಷಣೆಗೆ ಸಹಾಯ ಹಸ್ತ ಚಾಚಿ ಕುಳಿತಿದ್ದರು. ಇದನ್ನು ಮನಗಂಡ ಧೂಳಪ್ಪ ಅಂಬಿ ಗ್ರಾಮದ ರಾಜು ಪಾಟೀಲ, ಸದಾತ ಪಠಾಣ ಕಾಶಿಮ್ ಕಲಾವಂತ ದಾದಾಪೀರ ಸಾಹೇಬವಾಲೆ ನೆರವಿನಿಂದ ಅಲಾಸದ 4200 ಗ್ರಾಮಸ್ಥರನ್ನು ರಕ್ಷಿಸುವ ಕಾರ್ಯ ಮಾಡಿದರು.
ಧೂಳಪ್ಪ ಅಂಬಿ ಕೃಷ್ಣಾ ನದಿಯ ಅಲಾಸ-ಅಕ್ಕಿವಾಟ ಗ್ರಾಮಗಳ ನಡುವೆ ದೋಣಿ ನಡೆಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ವಿಚಿತ್ರವೆಂದರೆ ಧೂಳಪ್ಪಗೆ ಈಜು ಬಾರದು. ನಾಲ್ಕು ತಿಂಗಳ ಹಿಂದೆ ಅಲಾಸದಲ್ಲಿ ಜಿಲ್ಲಾ ಪರಿಷತ್‌ದಿಂದ ಹೊಸ ದೋಣಿ ಇವರಿಗೆ ಸಿಕ್ಕಿದೆ. ಇದರಿಂದ ಪ್ರವಾಹದಲ್ಲಿ ಸುಮಾರು 4200 ಜನರ ರಕ್ಷಣೆ ಮಾಡಿದ್ದಾರೆ. ಇವರು ಮಾಡಿರುವ ಕಾರ್ಯವನ್ನು ನೋಡಿ ಶಿವಸೇನೆ ಯುವ ನೇತಾರ ಆದಿತ್ಯ ಠಾಕರೆ ಕುರಂದವಾಡದಲ್ಲಿ ಅವರನ್ನು ಸನ್ಮಾನಿಸಿ ಒಂದು ಲಕ್ಷ ರೂ. ಆರ್ಥಿಕ ಸಹಾಯ ಮಾಡಿದ್ದಾರೆ.
ಇಂತಹ ಭೀಕರ ಪ್ರವಾಹದಲ್ಲಿ ತನ್ನ ಪ್ರಾಣವನ್ನೇ ಲೆಕ್ಕಿಸದೇ ಬೇರೆಯವರ ಸಾವಿರಾರು ಜೀವ ಉಳಿಸಿದ ದೋಣಿ ನಾವಿಕರ ಕಾರ್ಯವನ್ನು ಗುರ್ತಿಸಲು ಸರಕಾರ ಮುಂದೆ ಬರಬೇಕು.
•ಮಹಾದೇವ ಪೂಜೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.