ಮಹಾ ಮಳೆಯಿಂದ ವಿನಾಯಕ ಚತುರ್ಥಿಗೆ ವಿಘ್ನ
Team Udayavani, Aug 27, 2019, 4:55 PM IST
ಚನ್ನರಾಯಪಟ್ಟಣದಲ್ಲಿ ಗಣಪತಿ ಮೂರ್ತಿ ತಯಾರಿಕೆಯಲ್ಲಿ ತೊಡಗಿರುವ ಕಲಾವಿದ ಹರೀಶ್.
ಚನ್ನರಾಯಪಟ್ಟಣ: ಪೂರ್ವ ಮುಂಗಾರಿನಲ್ಲಿ ವರುಣ ಕೈಕೊಟ್ಟು ಆಷಾಢ ಮುಗಿದ ಮೇಲೆ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿರುವುದು ಹಾಗೂ ವಾತಾ ವರಣದಲ್ಲಿ ಆಗಿರುವ ಏರು-ಪೇರಿನಿಂದ ಗಣೇಶೋತ್ಸವ ಆಚರಣೆಗೂ ವಿಘ್ನ ಉಂಟಾಗುವ ಲಕ್ಷಣಗಳು ಗೋಚರವಾಗುತ್ತಿವೆ.
ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆ ಹಾಗೂ ಉತ್ತರ ಕರ್ನಾಟಕದಲ್ಲಿ ಭಾರಿ ಪ್ರವಾಹ ಉಂಟಾ ಗಿರುವುದರಿಂದ ಗಣೇಶೋತ್ಸವ ಆಚರಣೆಯನ್ನು ವಿಜೃಂಭಣೆಯಿಂದ ಮಾಡುವ ಬದಲಾಗಿ ಸರಳವಾಗಿ ಆಚರಣೆ ಮಾಡಲು ಈಗಾಗಲೇ ತಾಲೂಕಿನ ಹಲವು ಸಂಘ ಸಂಸ್ಥೆಗಳು ಲೆಕ್ಕಾಚಾರ ಮಾಡುತ್ತಿವೆ.
ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ನೀಡುತ್ತಿರುವ ದಾನಿಗಳು ಅದ್ದೂರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವುದು ಬೇಡ ಎಂದು ಗಣೇಶೋತ್ಸವ ಸಂಘಟಕರಿಗೆ ತಿಳಿ ಹೇಳುತ್ತಿದ್ದಾರೆ.
ಅರ್ಧರಾಜ್ಯ ಮಹಾ ಮಳೆಗೆ ಮುಳುಗಿದೆ ಇಂತಹ ವೇಳೆಯಲ್ಲಿ ನಾವು ಸಂಭ್ರಮಿಸುವುದಲ್ಲಿ ಅರ್ಥವಿಲ್ಲ ಸಾಂಪ್ರದಾಯಿಕವಾಗಿ ಚತುರ್ಥಿ ಹಬ್ಬ ಆಚರಣೆ ಮಾಡೋಣ. ಹಬ್ಬಕ್ಕಾಗಿ ವೆಚ್ಚ ಮಾಡುವ ಹಣವನ್ನು ನೆರೆ ಸಂತ್ರಸ್ತರಿಗೆ ನೀಡುವ ಮೂಲಕ ಸಂತ್ರಸ್ತರ ಬಾಳಿಗೆ ಬೆಳಕಾಗುವುದು ಉತ್ತಮ ಎಂಬುದನ್ನು ಅರಿತಿರುವ ಹಲವು ಸಂಘ ಸಂಸ್ಥೆಗಳು ಈಗಾಗಲೇ ನೆರೆ ಸಂತ್ರಸ್ತರಿಗಾಗಿ ಜಿಲ್ಲಾ ಹಾಗೂ ತಾಲೂಕು ಆಡಳಿತದ ಮೂಲಕ ಸರ್ಕಾರಕ್ಕೆ ಧನ, ಉಪಯುಕ್ತ ಸಾಮಗ್ರಿಗಳ ಸಹಾಯ ಮಾಡುತ್ತಿವೆ.
ಎರಡ್ಮೂರು ತಿಂಗಳಿನಿಂದ ಬಿಸಿಲಿಲ್ಲ: ಕಳೆದ ಎರಡ್ಮೂರು ತಿಂಗಳಿನಿಂದ ಸೂರ್ಯ ಮರೆಯಾಗಿದ್ದು ಗಣಪತಿ ಮೂರ್ತಿ ತಯಾರಿಕರಿಗೆ ಆಂತಕ ಸೃಷ್ಟಿ ಯಾಗಿದೆ. ಅರೆ ಮಲೆನಾಡಿನ ವಾತಾವರಣ ಸಂಪೂರ್ಣವಾಗಿ ಮಲೆನಾಡಿನ ವಾತಾವರಣ ದಂತಾಗಿದೆ ಇದರಿಂದಾಗಿ ಜೇಡಿ ಮಣ್ಣಿನಿಂದ ತಯಾ ರಾಗಿರುವ ಮೂರ್ತಿಗಳು ಒಣಗುತ್ತಿಲ್ಲ. ಶೀತದ ವಾತಾವರಣದಲ್ಲಿ ಬೀಸುತ್ತಿರುವ ತಣ್ಣನೆ ಗಾಳಿಯಿಂದ ಮಣ್ಣಿನ ಗಣಪ ಮೂರ್ತಿ ಬಿರುಕು ಬಿಡುತ್ತಿವೆ. ಗಾಳಿ ಯಿಂದ ರಕ್ಷಣೆ ಪಡೆಯಲು ಮೂರ್ತಿಗೆ ಹೊದಿಕೆ ಹಾಕಿ ಒಣಗಿಸುತ್ತಿದ್ದೇವೆ. ತಿಂಗಳು ಕಳೆದರೂ ಜೇಡಿ ಮಣ್ಣಿನ ಮೂರ್ತಿಗಳು ಒಣಗುತ್ತಿಲ್ಲ ಎಂದು ಮೂರ್ತಿ ತಯಾರಕರು ಉದಯವಾಣಿಗೆ ತಿಳಿಸಿದ್ದಾರೆ.
ಹಣಕೊಟ್ಟು ಮಣ್ಣು ತರಬೇಕಿದೆ: ಕಳೆದ ಮೂರು ವರ್ಷದಿಂದ ಜೇಡಿ ಮಣ್ಣಿಗೂ ಹಣ ಕೊಡಬೇಕಿದೆ. 100 ಕೇಜಿ ಮಣ್ಣಿಗೆ ಮೂರರಿಂದ ನಾಲ್ಕು ಸಾವಿರ ನೀಡಬೇಕಿದೆ. ಈ ಹಿಂದೆ ಗ್ರಾಮದ ಕೆರೆಗಳಿಗೆ ತೆರಳಿ ಜೇಡಿ ಮಣ್ಣು ತರಲಾಗುತ್ತಿತ್ತು. ಇತ್ತೀಚಿನ ದಿವಸಗಳಲ್ಲಿ ಗ್ರಾಮಸ್ಥರು ಅದಕ್ಕೆ ಅವಕಾಶ ನೀಡದೇ ಇರುವುದ ರಿಂದ ಹಣ ಕೊಟ್ಟು ಮಣ್ಣು ತರಬೇಕಿದೆ ಎಂದು ಮಣ್ಣಿನ ಮೂರ್ತಿ ತಯಾರಿಸುವ ಕಲಾವಿದ ಹರೀಶ ಮಾಹಿತಿ ನೀಡಿದರು.
ಗಣೇಶೋತ್ಸವದ ಬದಲು ನೆರವು ನೀಡಿ: ಪುರಸಭೆ ವ್ಯಾಪ್ತಿ 23 ವಾರ್ಡ್‌ಗಳಲ್ಲಿ ಇರುವ ನೂರಾರು ರಸ್ತೆಗಳಲ್ಲಿ ಪ್ರತಿ ರಸ್ತೆ, ಕೇರಿ, ಬೀದಿ ಹೀಗೆ ಸಾವಿರಾರು ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡ ಲಾಗುತ್ತಿದೆ. ಆದರೆ ಈ ಸಾಲಿನಲ್ಲಿ ಇದನ್ನು ತ್ಯಜಿಸಿ ಪ್ರತಿ ವಾರ್ಡಿಗೆ ಒಂದೇ ಮೂರ್ತಿಯನ್ನು ಸ್ಥಾಪನೆ ಮಾಡುವ ಕಡೆ ಸಾರ್ವಜನಿಕರು ಚಿಂತನೆ ಮಾಡ ಬೇಕಿದೆ. ಗಣಪತಿ ಮೂರ್ತಿ ಸ್ಥಾಪನೆಗೆ ವೆಚ್ಚ ಮಾಡುವ ಹಣವನ್ನು ನೆರೆ ಸಂತ್ರಸ್ತ ಗ್ರಾಮಗಳಿಗೆ ಇಲ್ಲವೇ ಮುಖ್ಯ ಮಂತ್ರಿ ಪರಿಹಾರ ನಿಧಿಗೆ ನೀಡುವ ಮೂಲಕ ಇತರರಿಗೆ ಮಾದರಿಯಾಗುವಂತೆ ಆಲೋಚನೆ ಮಾಡಬೇಕಿದೆ.
ಊರಿಗೊಂದು ಗಣಪ: ಗಣೇಶ ಮೂರ್ತಿ ಕೊರತೆ ಕಾಡುತ್ತಿರುವುದು ಹಾಗೂ ರಾಜದಲ್ಲಿ ಸಾವಿರಾರು ಕುಟುಂಬಗಳೂ ಸಂಕಷ್ಟದಲ್ಲಿ ಇರುವುದರಿಂದ ಊರಿಗೆ ಒಂದೇ ಗಣಪ ಮೂರ್ತಿ ಸ್ಥಾಪನೆ ಬಗ್ಗೆ ಚಿಂತನೆ ಆರಂಭಗೊಂಡಿವೆ. ಗಲ್ಲಿ ಗಲ್ಲಿಯಲ್ಲೂ ಸ್ಥಾಪನೆ ಗೊಳ್ಳುತ್ತಿರುವ ಮೂರ್ತಿ ಸಂಖ್ಯೆ ತಗ್ಗಿಸಿ ಒಂದೇ ಕಡೆ ಎಲ್ಲರೂ ಕೂಡಿ ಹಬ್ಬ ಆಚರಿಸುವುದರಿಂದ ಸಮಾಜ ವನ್ನು ಇನ್ನಷ್ಟು ಗಟ್ಟಿಗೊಳಿಸಲು ಸಾಧ್ಯವಾಗುತ್ತದೆ. ಜೊತೆಗೆ ವ್ಯವಸ್ಥಿತ ಆಡಳಿತ ನಿರ್ವಹಣೆಗೂ ಅನುಕೂಲ ಎನ್ನುವ ಮಾತುಗಳು ತಾಲೂಕಿನ ಕೆಲ ಗ್ರಾಮದಲ್ಲಿ ಕೇಳಿ ಬರುತ್ತಿವೆ.
ಪರಿಸರ ಸ್ನೇಹಿ ಗಣಪನಿಗೆ ಬೇಡಿಕೆ: ರಾಸಾಯನಿಕ ಬಣ್ಣ ಲೇಪಿತ ಮೂರ್ತಿ ಹಾಗೂ ನಿಷೇಧಿತ ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಒಪಿ) ಮೂರ್ತಿಯನ್ನು ಪ್ರತಿ ಷ್ಠಾಪನೆ ಮಾಡುವುದು ಬೇಡ ಎಂಬ ಆಲೋಚನೆ ಹೊಂದಿರುವ ಭಕ್ತರು ಈಗಾಗಲೇ ಪರಿಸರ ಸ್ನೇಹಿ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾಗಿದ್ದು, ಮೂರ್ತಿ ತಯಾರಿಕೆ ಮಾಡುವವರಿಗೆ ಮುಂಗಡ ಹಣ ನೀಡಿ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಮುಂದಾಗು ತ್ತಿರುವುದು ಶ್ಲಾಘನೀಯ ಸಂಗತಿ.
ಮಳೆಯಿಂದಾಗಿ ಮೂರ್ತಿಯ ಕೊರತೆ: ಮಹಾ ಮಳೆಯಿಂದ ಹಲವು ಜಿಲ್ಲೆಗಳು ಸಂಪುರ್ಣ ಜಲಾವೃತ್ತ ಗೊಂಡಿರುವುದರಿಂದ ವಿಘ್ನೇಶ್ವರ ಮೂರ್ತಿ ಹೆಚ್ಚು ತಯಾರಿಕೆಯಾಗಿಲ್ಲ ಇದರಿಂದಾಗಿ ಮಹಾ ನಗರದಲ್ಲಿ ಜೇಡಿ ಮಣ್ಣಿನ ಗಣಪ ಮೂರ್ತಿ ಕೊರತೆ ಆಗುವ ಲಕ್ಷಣಗಳು ಗೋಚರಿಸುತ್ತಿದೆ.
● ಶಾಮಸುಂದರ್ ಕೆ.ಅಣ್ಣೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.