ಭದ್ರಾ ಜಲಾಶಯ ಪ್ರವಾಸಿ ತಾಣವಾಗಲಿ
ಜಲಾಶಯ ವೀಕ್ಷಣೆಗೆ ಬರುವವರಿಗೆ ಸಂತಸ •ಗರಿಷ್ಠ ಮಟ್ಟ ತುಂಬಿರುವ ಜಲಾಶಯ
Team Udayavani, Aug 28, 2019, 12:00 PM IST
ಭದ್ರಾವತಿ: ಭದ್ರಾಜಲಾಶಯದ ವಿಹಂಗಮ ದೃಶ್ಯ.
ಕೆ.ಎಸ್. ಸುಧೀಂದ್ರ, ಭದ್ರಾವತಿ
ಭದ್ರಾವತಿ: ಎಷ್ಟು ದೂರ ಕಣ್ಣು ಹಾಯಿಸಿದರೂ ಬರೀ ನೀರು, ನೀರು,ನೀರು. ಅದರಾಚೆ ನುಣುಪಾದ ರೀತಿ ಕಾಣುವ ಕಪ್ಪು ಮಿಶ್ರಿತ ಹಸಿರು ಬೆಟ್ಟಗಳ ಸಾಲು, ಸಾಲು. ಅದರ ಮೇಲೆ ನೀಲಿ, ಬಿಳಿ ಮಿಶ್ರಿತ ಆಗಸದ ಹೊದಿಕೆ. ಇದು ಭದ್ರಾ ಜಲಾಶಯ ವೀಕ್ಷಿಸುವವರಿಗೆ ಕಾಣುವ ಅನನ್ಯ, ಅನುಪಮವಾದ ದೃಶ್ಯ.
ಕೆಲವೇ ದಿನಗಳಲ್ಲಿ ಸುರಿದ ಮಳೆಯಿಂದಾಗಿ ಈ ಬಾರಿ ಗರಿಷ್ಠ ಮಟ್ಟ ತುಂಬಿ ರೈತರ ಮೊಗದಲ್ಲಿ ಮಂದಹಾಸ ಮಿನುಗುವಂತೆ ಮಾಡುವುದರ ಜೊತೆಗೆ ಜಲಾಶಯದ ವೀಕ್ಷಣೆಗೆ ಬರುವ ಜನರಿಗೂ ಕಣ್ಮನಗಳಿಗೆ ಸುಂದರ ದೃಶ್ಯಕಾವ್ಯವನ್ನು ವೀಕ್ಷಿಸುವ ಸೌಭಾಗ್ಯ ನೀಡಿದೆ.
ಡಾ| ರವಿಶಂಕರ್ ಗುರೂಜಿ ಧ್ಯಾನಮಾಡಿದ ಸ್ಥಳ: ವಿಶ್ವದಾದ್ಯಂತಹೆಸರು ಮಾಡಿರುವ ವಿಕಾಸ ಕೇಂದ್ರ ಮತ್ತು ವೇದ ವಿಜ್ಞಾನ ಮಹಾವಿದ್ಯಾಪೀಠದ ಸಂಸ್ಥಾಪಕ ಡಾ| ರವಿಶಂಕರ್‌ಗುರೂಜಿ 1982ರಲ್ಲಿ ಸುದರ್ಶನ ಕ್ರಿಯೆ ಮತ್ತು ದಿವ್ಯಜ್ಞಾನವನ್ನು ಈ ಜಲಾಶಯದ ತಟದಲ್ಲಿಯೇ ಧ್ಯಾನ ಮಾಡಿ ಪಡೆದರು ಎಂಬುದು ಗಮನಾರ್ಹ ಸಂಗತಿ. ಈ ಕುರಿತು ಒಂದು ಫಲಕವನ್ನು ಅವರು ಧ್ಯಾನ ಮಾಡಿದ ಸ್ಥಳದಲ್ಲಿ ಹಾಕಲಾಗಿದೆ.
ನನಸಾಗದ ಕನಸು: ಭದ್ರಾ ಜಲಾಶಯದ ರೂವಾರಿಗಳಾದ ದಿವಾನ್ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಸುಂದರ ಪುತ್ಥಳಿಯನ್ನು ಈ ಜಲಾಶಯದ ಸಮೀಪ ಸ್ಥಾಪಿಸಬೇಕೆಂದು ಪ್ರತೀವರ್ಷ ಜಲಾಶಯಕ್ಕೆ ಬಾಗಿನ ಬಿಡುವ ಸಂದರ್ಭದಲ್ಲಿ ಆಗಮಿಸುವ ರಾಜಕಾರಣಿಗಳು ಭಾಷಣ ಬಿಗಿಯುತ್ತಲೇ ಬಂದಿದ್ದಾರೆ. ಅದನ್ನು ಕಾರ್ಯಗತ ಮಾಡುವ ಅಧಿಕಾರ ಸಹ ಆ ರಾಜಕಾರಣಿಗಳಿಗೆ ಜನತೆ ನೀಡಿದ್ದಾರೆ. ಆದರೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಲೋ ಅಥವಾ ಆ ರೀತಿ ಅನಿಸಿಕೆ ಕೇವಲ ವೇದಿಕೆ ಬಾಷಣಕ್ಕೆ ಸೀಮಿತವಾಗಿರುವುದರಿಂದಲೋ ಏನೋ ಒಟ್ಟಿನಲ್ಲಿ ಈ ಜಲಾಶಯದ ಸಮೀಪ ಸರ್.ಎಂ.ವಿ. ಅವರ ಪುತ್ಥಳಿಯ ಸ್ಥಾಪನೆಯ ಕನಸು ಈವರೆಗೂ ನನಸಾಗದೆ ಹಾಗೇ ಉಳಿದಿದೆ.
ಕಸದ ರಾಶಿ: ರಾಜಕೀಯ ನಾಯಕರು ಜಲಾಶಯಕ್ಕೆ ಬಾಗಿನ ಬಿಡುವ ಪದ್ಧತಿಯನ್ನು ಕೆಲವು ವರ್ಷಗಳಿಂದ ಇಲ್ಲಿ ಆಚರಿಸುತ್ತಾ ಬರುತ್ತಿದ್ದಾರೆ. ಈ ರೀತಿ ಬಾಗಿನ ಬಿಡುವ ಸಂಭ್ರಮದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಾರೆ. ಆ ರೀತಿ ಬಂದವರಿಗೆ ಇಲ್ಲಿ ಊಟ- ಉಪಹಾರದ ವ್ಯವಸ್ಥೆಯನ್ನು ಏರ್ಪಡಿಸಲಾಗಿರುತ್ತದೆ. ಆದರೆ ಊಟ ಮಾಡಿದ ನಂತರ ಊಟದ ಹಾಳೆ,ನೀರಿನ ಖಾಲಿ ಬಾಟಲ್ಗಳನ್ನು ಜನರು ಜಲಾಶಯದ ಆಸುಪಾಸಿನಲ್ಲಿ ಬಿಸಾಡಿ ಹೋಗುವುದರಿಂದ ಅಸ್ವಚ್ಛತೆಯ ವಾತಾವರಣ ಅಲ್ಲಿ ಸೃಷ್ಟಿಯಾಗಿದೆ. ಇದರ ಜೊತೆಗೆ ಕೆಲವರು ಈ ಸ್ಥಳವನ್ನು ಮದ್ಯಸೇವನೆ ಮುಂತಾದ ಮೋಜುಮಸ್ತಿಗೆ ಬಳಸಿಕೊಳ್ಳುತ್ತಿರುವುದರಿಂದ ಅಲ್ಲಿ ಹಲವೆಡೆ ಮದ್ಯದ ಬಾಟಲ್, ಪೌಚ್ ಪ್ಯಾಕ್‌ಗಳು ಸಹ ಕಸದ ರಾಶಿಗೆ ತಮ್ಮ ಕೊಡುಗೆ ನೀಡಿವೆ. ಇದನ್ನು ಸಂಬಂಧಪಟ್ಟವರು ಗಮನಹರಿಸದೆ ಇರುವುದರಿಂದ ಸುಂದರ ಜಲಾಶಯದ ಸನಿಹ ಅಶುದ್ಧ ವಾತಾವರಣ ಕಾಣುವಂತಾಗಿದೆ.
ಬೃಂದಾವನ ಗಾರ್ಡನ್ ರೀತಿ ಆಗಲಿ: ಸುಂದರವಾದ ಪರಿಸರದ ನಡುವೆ ಜಲಸಾಗರದಿಂದ ಕಂಗೊಳಿಸುತ್ತಾ ಜನಸಾಗರವನ್ನು ಆಕರ್ಷಿಸುವ ಭದ್ರಾ ಜಲಾಶಯದ ಬಳಿ ಮೈಸೂರಿನ ಕೆಆರ್‌ಎಸ್ ಮಾದರಿಯ ಬೃಂದಾವನ ನಿರ್ಮಾಣ ಮಾಡಲಾಗುವುದು. ವಿದ್ಯುತ್ ಅಲಂಕೃತ ನೀರಿನ ಕಾರಂಜಿ, ವಿವಿಧ ಪುಷ್ಪರಾಶಿಗಳ ಗಿಡ ಮರಗಳನ್ನೊಳಗೊಂಡ ಸುಂದರವಾದ ಉದ್ಯಾನವನವನ್ನು ಈ ಸ್ಥಳದಲ್ಲಿ ನಿರ್ಮಿಸಲಾಗುವುದು ಎಂದು ಅನೇಕ ಬಾರಿ ಈ ಕ್ಷೇತ್ರದ ಚುನಾಯಿತ ಜನನಾಯಕರು ಸಾರ್ವಜನಿಕವಾಗಿ ಹೇಳುತ್ತಲೇ ಬಂದಿದ್ದಾರೆ ಆದರೆ ಈವರೆಗೂ ಆ ರೀತಿ ಬೃಂದಾವನವನ್ನು ನಿರ್ಮಾಣ ಮಾಡುವ ಯಾವುದೇ ಕುರುಹು ಅಥವ ಸೂಚನೆ ಇಲ್ಲಿ ಕಾಣುತ್ತಿಲ್ಲ.
ಸೂಕ್ತ ಮೇಲ್ವಿಚಾರಣೆ ಕೊರತೆ?: ಭದ್ರಾ ಜಲಾಶಯದ ಆಸುಪಾಸಿನಲ್ಲಿ ಸೂಕ್ತ ನಿರ್ವಹಣೆ ಕೊರತೆಯಿರುವುದು ಅಲ್ಲಿಗೆ ಭೇಟಿ ನೀಡಿದಾಗ ಮೇಲ್ನೋಟಕ್ಕೆ ಗೋಚರವಾಗುತ್ತದೆ.ಜಲಾಶಯದ ವೀಕ್ಷಣೆಗೆ ಹೋಗುವ ಸೇತುವೆ ದಾರಿಯ ಉಭಯ ಪಾರ್ಶ್ವದಲ್ಲಿ ಹಾಕಿರುವ ಸುರಕ್ಷತಾ ಕಂಬಿಗಳಲ್ಲಿ ಕೆಲವು ಕಿತ್ತು ಹೋಗಿವೆ. ಕೆಲವು ಕಡೆ ಸರಪಳಿಗಳು ಇಲ್ಲ, ಸುರಕ್ಷತೆಗೆ ಸೂಕ್ತ ವ್ಯವಸ್ಥೆ ಇಲ್ಲದಿರುವುದು ಸಹ ಕಾಣಿಸುತ್ತದೆ.
ಬಾಗಿನ ಬಿಡಲು ಹೋಗುವ ರಾಜಕಾರಣಿಗಳು, ಗಣ್ಯರು, ನಾಯಕರು ಕಾರಿನಲ್ಲಿ ಬರುತ್ತಾರೆ. ಬಾಗಿನ ಬಿಟ್ಟು ಐಬಿಯಲ್ಲಿ ಉಂಡು ಪುನಃ ಕಾರಿನಲ್ಲಿ ಹೋಗುತ್ತಾರೆ. ಅವರಿಗೆ ಈ ಎಲ್ಲಾ ಸಮಸ್ಯೆಗಳು ಅಥವಾ ಜಲಾಶಯದ ಸುತ್ತಮುತ್ತಲಿನ ನ್ಯೂನತೆಗಳನ್ನು ಗಮನಿಸುವ ವ್ಯವಧಾನವೂ ಇರುವುದಿಲ್ಲ ಹಾಗಾಗಿ ಎಲ್ಲ ಜನರ ಅಗತ್ಯವನ್ನು ಪೂರೈಸುವ ಭದ್ರಾ ಜಲಾಶಯದ ಸುಂದರತಾಣ ಅಭಿವೃದ್ಧಿಯ ಹಾಗೂ ಸ್ವಚ್ಛತೆಯ ಕೊರತೆಯಿಂದ ಬಳಲುತ್ತಾ ಇದೆ. ಮೈಸೂರಿನ ಕೆಆರ್‌ಎಸ್ ಮಾದರಿಯ ಉದ್ಯಾನವನ ನಿರ್ಮಾಣ ವಾಗುತ್ತದೆ ಎಂದು ಕಾಣುತ್ತಿರುವ ಕನಸು ನನಸಾಗದೆ ಕನಸಾಗಿಯೇ ಉಳಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.