ನಡಾಲ್, ಜ್ವರೇವ್ ಗೆಲುವಿನ ಆಟ
ಟಾಪ್-10 ಹಂತದ ನಾಲ್ವರಿಗೆ ಮೊದಲ ಸುತ್ತಿನ ಆಘಾತ
Team Udayavani, Aug 29, 2019, 5:45 AM IST
ನ್ಯೂಯಾರ್ಕ್: ನಾಲ್ಕನೇ ಯುಎಸ್ ಓಪನ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ರಫೆಲ್ ನಡಾಲ್ ಮೊದಲ ಸುತ್ತನ್ನು ಯಶಸ್ವಿಯಾಗಿ ದಾಟಿದ್ದಾರೆ. ಇವರೊಂದಿಗೆ ನಿಕ್ ಕಿರ್ಗಿಯೋಸ್, ಅಲೆಕ್ಸಾಂಡರ್ ಜ್ವೆರೇವ್, ಮರಿನ್ ಸಿಲಿಕ್ ಅವರೆಲ್ಲ ಗೆಲುವಿನ ಆರಂಭ ಪಡೆದಿದ್ದಾರೆ. ಆದರೆ ವಿಶ್ವ ರ್‍ಯಾಂಕಿಂಗ್‌ನಲ್ಲಿ ಟಾಪ್-10 ಯಾದಿಯಲ್ಲಿರುವ ನಾಲ್ವರ ನಿರ್ಗಮನ ದ್ವಿತೀಯ ದಿನದಾಟದ ಆಘಾತಕಾರಿ ಫಲಿತಾಂಶಕ್ಕೆ ಸಾಕ್ಷಿಯಾಗಿದೆ.
ಡೊಮಿನಿಕ್ ಥೀಮ್, ಸ್ಟೆಫನಸ್ ಸಿಸಿಪಸ್, ಕರೆನ್ ಕಶನೋವ್ ಮತ್ತು ರಾಬರ್ಟೊ ಬಟಿಸ್ಟ ಅಗುಟ್ ಪರಾಭವಗೊಂಡ ಅಗ್ರ ಶ್ರೇಯಾಂಕಿತ ಆಟಗಾರರು. ಇವರಲ್ಲಿ ಕೆಲವರಾದರೂ ಕ್ವಾರ್ಟರ್ ಫೈನಲ್, ಸೆಮಿಫೈನಲ್ ತಲಪುವ ಅರ್ಹತೆ ಹೊಂದಿದ್ದರು.
2 ಗಂಟೆಗಳ ಕಾದಾಟ
2010, 2013 ಮತ್ತು 2017ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ರಫೆಲ್ ನಡಾಲ್ ಭರ್ತಿ 2 ಗಂಟೆಗಳ ಕಾದಾಟದಲ್ಲಿ ಆಸ್ಟ್ರೇಲಿಯದ 60ನೇ ರ್‍ಯಾಂಕಿಂಗ್ ಟೆನಿಸಿಗ ಜಾನ್ ಮಿಲ್ಮನ್ ಅವರನ್ನು 6-3, 6-2, 6-2 ಅಂತರದಿಂದ ಮಣಿಸಿದರು. ಇವರಿನ್ನು ಆಸ್ಟ್ರೇಲಿಯದ ಮತ್ತೂಬ್ಬ ಆಟಗಾರ ಥನಾಸಿ ಕೊಕಿನಾಕಿಸ್ ವಿರುದ್ಧ ಆಡುವರು.
ನಿಕ್ ಕಿರ್ಗಿಯೋಸ್ ಆತಿಥೇಯ ನಾಡಿನ ಸ್ಟೀವ್ ಜಾನ್ಸನ್ ವಿರುದ್ಧ 6-3, 7-6 (7-1), 6-4 ಅಂತರದಿಂದ ಗೆದ್ದು ಬಂದರು. ಜರ್ಮನಿಯ ಅಪಾಯಕಾರಿ ಟೆನಿಸಿಗ ಅಲೆಕ್ಸಾಂಡರ್ ಜ್ವೆರೇವ್ ಮೊಲ್ಡೋವಾದ ರಾಬು ಅಲ್ಬೋಟ್ ಅವರನ್ನು ಮಣಿಸಲು 5 ಸೆಟ್‌ಗಳ ಹೋರಾಟ ನಡೆಸಿದ್ದು ಅಚ್ಚರಿಯಾಗಿ ಕಂಡಿತು. ಜ್ವೆರೇವ್ ಗೆಲುವಿನ ಅಂತರ 6-1, 6-3, 3-6, 4-6, 6-2.
2014ರ ಚಾಂಪಿಯನ್ ಮರಿನ್ ಸಿಲಿಕ್ ಸ್ಲೊವಾಕಿಯಾದ ಮಾರ್ಟಿನ್ ಕ್ಲಿಜಾನ್ ವಿರುದ್ಧ 6-3, 6-2, 7-6 (8-6)ರಿಂದ ಜಯ ಸಾಧಿಸಿದರು.
ಸೋತು ಹೊರಬಿದ್ದರು
ಎರಡು ಬಾರಿಯ “ಫ್ರೆಂಚ್ ಓಪನ್’ ರನ್ನರ್-ಅಪ್, ಆಸ್ಟ್ರಿಯಾದ ಡೊಮಿನಿಕ್ ಥೀಮ್ ಅವರನ್ನು ಇಟಲಿಯ ಥಾಮಸ್ ಫ್ಯಾಬಿಯಾನೊ 6-4, 3-6, 6-3, 6-2ರಿಂದ ಮಣಿಸಿದರು.
ಗ್ರೀಕ್‌ನ 8ನೇ ಶ್ರೇಯಾಂಕಿತ ಆಟಗಾರ ಸ್ಟೆಫನಸ್ ಸಿಸಿಪಸ್ ಅವರನ್ನು ರಶ್ಯದ ಆ್ಯಂಡ್ರೆ ರುಬ್ಲೇವ್ ಭಾರೀ ಹೋರಾಟದ ಬಳಿಕ 6-4, 6-7 (5-7), 7-6 (9-7), 7-5ರಿಂದ ಪರಾಭವಗೊಳಿಸಿ ಮುನ್ನಡೆದರು. ಇದು ಸಿಸಿಪಸ್‌ಗೆ ಗ್ರ್ಯಾನ್‌ಸ್ಲಾಮ್ ಮೊದಲ ಸುತ್ತಿನಲ್ಲಿ ಎದುರಾದ ಸತತ 2ನೇ ಸೋಲು.
9ನೇ ಶ್ರೇಯಾಂಕದ ರಶ್ಯನ್ ಆಟಗಾರ ಕರೆನ್ ಕಶನೋವ್ ಅವರನ್ನು ಕೆನಡಾದ ವಾಸೆಕ್ ಪೊಸ್ಪಿಸಿಲಿ 4-6, 7-5, 7-5, 4-6, 6-3ರಿಂದ ಪರಾಭವಗೊಳಿಸಿದರು. ಅಗುಟ್ ಆಟಕ್ಕೆ ತೆರೆ ಎಳೆದವರು ಕಜಾಕ್‌ಸ್ಥಾನದ ಮಿಖೈಲ್ ಕುಕುಶ್ಕಿನ್. ಅಂತರ 3-6, 6-1, 6-4, 3-6, 6-3.
ಕ್ಯಾನ್ಸರ್ ಗೆದ್ದ ನಿಕೋಲ್ ಗಿಬ್ಸ್
ಯುಎಸ್ ಓಪನ್ ಮೊದಲ ಸುತ್ತಿನಲ್ಲಿ ಸಿಮೋನಾ ಹಾಲೆಪ್ ಅವರಿಗೆ ಭಾರೀ ಪೈಪೋಟಿ ನೀಡಿದ ನಿಕೋಲ್ ಗಿಬ್ಸ್ ಮಾರಕ ಕ್ಯಾನ್ಸರ್ ಗೆದ್ದು ಬಂದ ಆಟಗಾರ್ತಿ ಎಂಬುದು ವಿಶೇಷ.
“4ನೇ ಶ್ರೇಯಾಂಕದ ಆಟಗಾರ್ತಿ ಸಿಮೋನಾ ಹಾಲೆಪ್ ವಿರುದ್ಧ ಅಂಕಣದಲ್ಲಿ ಏನು ಸಂಭವಿಸಿತು ಎಂಬುದು ಮುಖ್ಯವಲ್ಲ. ಸಾವನ್ನು ಗೆದ್ದು ಟೆನಿಸ್ ಕೋರ್ಟ್‌ನಲ್ಲಿ ಕಾಣಿಸಿಕೊಂಡಿರುವುದೇ ನನ್ನ ಬದುಕಿನ ದೊಡ್ಡ ಗೆಲುವು’ ಎಂದು ಬಾಯಿಯ ಕ್ಯಾನ್ಸರ್‌ನಿಂದ ಚೇತರಿಸಿಕೊಂಡ ಅಮೆರಿಕನ್ ಆಟಗಾರ್ತಿ ಸೋಲಿನ ಬಳಿಕ ಪ್ರತಿಕ್ರಿಯಿಸಿದರು.
ಒಸಾಕಾಗೆ ಬೆವರಿಳಿಸಿದ ಬ್ಲಿಂಕೋವಾ
ಯುಎಸ್ ಓಪನ್ ವನಿತಾ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್, ನಂ.1 ಖ್ಯಾತಿಯ ನವೋಮಿ ಒಸಾಕಾ ಮೊದಲ ಸುತ್ತು ದಾಟಲು ಹರಸಾಹಸಪಟ್ಟರು. 2015ರ ವಿಂಬಲ್ಡನ್ ಜೂನಿಯರ್ ಫೈನಲಿಸ್ಟ್ , ರಶ್ಯದ 84ನೇ ರ್‍ಯಾಂಕಿಂಗ್ ಆಟಗಾರ್ತಿ ಅನ್ನಾ ಬ್ಲಿಂಕೋವಾ ವಿರುದ್ಧ ಅವರು 3 ಸೆಟ್‌ಗಳ ಕಾದಾಟ ನಡೆಸಬೇಕಾಯಿತು. ಅಂತರ 6-4, 6-7 (5-7), 6-2. ಬ್ಲಿಂಕೋವಾ ಮೊದಲ ಸೆಟ್‌ನಲ್ಲಿ 4-1ರ ಮುನ್ನಡೆಯಲ್ಲಿದ್ದರು. ಇದನ್ನು ವಶಪಡಿಸಿಕೊಳ್ಳದೇ ಹೋಗಿದ್ದರೆ ಒಸಾಕಾ ಬಹುಶಃ ಮೊದಲ ಸುತ್ತಿನಲ್ಲೇ ಹೊರಬೀಳುತ್ತಿದ್ದರು. ವಿಂಬಲ್ಡನ್‌ನಲ್ಲಿ ಅವರು ಇದೇ ಆಘಾತಕ್ಕೆ ಸಿಲುಕಿದ್ದರು.
ವಿಂಬಲ್ಡನ್ ಚಾಂಪಿಯನ್ ಸಿಮೋನಾ ಹಾಲೆಪ್ ಕೂಡ ಗೆಲುವಿಗೆ 3 ಸೆಟ್‌ಗಳ ಹೋರಾಟ ನಡೆಸಬೇಕಾಯಿತು. ಅಮೆರಿಕದ ನಿಕೋಲ್ ಗಿಬ್ಸ್ ವಿರುದ್ಧ ಅವರು 6-3, 3-6, 6-2 ಮೇಲುಗೈ ಸಾಧಿಸಿದರು. ಹಾಲೆಪ್ ಕಳೆದೆರಡು ವರ್ಷ ಇಲ್ಲಿ ಮೊದಲ ಸುತ್ತಿನಲ್ಲೇ ಎಡವಿದ್ದರು.
ಯುಎಸ್ ಓಪನ್ ಪದಾರ್ಪಣೆಗೈದ ಅಮೆರಿಕದ 15ರ ಹರೆಯದ ಬಾಲಕಿ ಕೊಕೊ ಗಾಫ್ ರಶ್ಯದ ಮತ್ತೋರ್ವ ಯುವ ಆಟಗಾರ್ತಿ, 18ರ ಹರೆಯದ ಅನಾ ಪೊಟಪೋವಾ ಅವರನ್ನು 3-6, 6-2, 6-4 ಅಂತರದಿಂದ ಹೊರದಬ್ಬಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.