ಬವಣೆ ಇಳಿದ ಅರಣೆಪಾದೆ, ಅಂತರಗಳಲ್ಲಿ ಅರಳುತ್ತಿದೆ ಬದುಕು
ಕೈಭಾಷೆಯಲ್ಲೇ ವ್ಯಕ್ತವಾಯಿತು ಪ್ರವಾಹದ ರೌದ್ರಾವತಾರ
Team Udayavani, Aug 29, 2019, 5:12 AM IST
ಸಂಪೂರ್ಣ ಧರಾಶಾಯಿಯಾಗಿರುವ ಸುನಂದಾ ಅವರ ಮನೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೆಲವು ಗ್ರಾಮಗಳು ಈ ಬಾರಿಯ ನೆರೆಯಲ್ಲಿ ಕೊಚ್ಚಿ ಹೋಗಿವೆ. ಆ ಗ್ರಾಮಗಳನ್ನು ಪುನರ್‌ರೂಪಿಸುವುದು, ಸಂತ್ರಸ್ತರಿಗೆ ಬದುಕನ್ನು ಕಟ್ಟಿಕೊಡುವುದು ಎಲ್ಲರ ಹೊಣೆಗಾರಿಕೆ. ಸರಕಾರ, ಜನಪ್ರತಿನಿಧಿಗಳು, ಸಂಘ -ಸಂಸ್ಥೆಗಳು ನೊಂದವರ ಬದುಕ ಕಟ್ಟಲು ಹೊರಟಿವೆ. ಬನ್ನಿ , ಜತೆಗೂಡೋಣ.
ಬೆಳ್ತಂಗಡಿ: ಭೀಕರ ಪ್ರವಾಹದಿಂದ ಅವರ ಮನೆ ಕುರುಹೇ ಇಲ್ಲದಂತೆ ಕೊಚ್ಚಿ ಹೋಗಿದೆ. ಆದರೆ ಅದನ್ನು ಮಾತಿನಲ್ಲಿ ವಿವರಿಸುವ ಶಕ್ತಿ ಅವರಿಗಿಲ್ಲ. ಕೈಸನ್ನೆಯ ತನ್ನದೇ ಭಾಷೆಯಲ್ಲಿ ವೇದನೆಯನ್ನು ವ್ಯಕ್ತಪಡಿಸುತ್ತಾರೆ ಚಾರ್ಮಾಡಿ ಗ್ರಾಮದ ಅರಣೆಪಾದೆ ನಿವಾಸಿ ಶೇಖರ ಗೌಡ ಅವರು.
ಪ್ರವಾಹ ಪರಿಣಾಮ ಶೇಖರ ಗೌಡ ಮತ್ತು ಅವರ ಪುತ್ರ ವಾಸಿಸುತ್ತಿದ್ದ ಮನೆ ಹೊಳೆಯ ಪಾಲಾಗಿದೆ. ದಾಖಲೆ ಪತ್ರಗಳು, ಮಗನ ಶೈಕ್ಷಣಿಕ ಪ್ರಮಾಣಪತ್ರ ಇತ್ಯಾದಿ ಕೊಚ್ಚಿ ಹೋಗಿವೆ. ಗೌಡರಿಗೆ ಮಾತು ಬರುವುದಿಲ್ಲ. ಎರಡೂ ಕೈಗಳನ್ನು ಮೇಲಕ್ಕೆತ್ತಿ ಆಳೆತ್ತರಕ್ಕೆ ನೀರು ಬಂದಿತ್ತು ಎನ್ನುತ್ತಾರೆ, ಮನೆಯಿದ್ದ ಜಾಗ ತೋರಿಸಿ, ಇಲ್ಲಿ ತನ್ನ ಮನೆಯಿತ್ತು ಎನ್ನುತ್ತಾರೆ; ನದಿಯ ಕಡೆ ತೋರಿಸಿ, ಎಲ್ಲವೂ ಕೊಚ್ಚಿ ಹೋಗಿದೆ ಎಂದು ಮೂಕ ವೇದನೆ ವ್ಯಕ್ತಪಡಿಸುತ್ತಾರೆ.
ಗೌಡರಿಗೆ ಪತ್ನಿ ಮತ್ತು ಇಬ್ಬರು ಪುತ್ರರಿದ್ದು, ಪತ್ನಿ ಮತ್ತು ಓರ್ವ ಪುತ್ರ ಬೇರೆ ಕಡೆ ನೆಲೆಸಿದ್ದಾರೆ. ಮತ್ತೂಬ್ಬ ಮಗ ಇವರ ಜತೆಗಿದ್ದರೂ ಉದ್ಯೋಗ ನಿಮಿತ್ತ ನಿತ್ಯ ಮನೆಗೆ ಬರುವುದಿಲ್ಲ. ಆ.9ರ ಪ್ರವಾಹ ಮನೆಯ ಸೊತ್ತುಗಳನ್ನು, ಕಪಾಟಿನಲ್ಲಿದ್ದ ದಾಖಲೆಗಳನ್ನು ತನ್ನ ಜತೆಗೊಯ್ದಿದೆ.
ಅಂತರ ಪ್ರದೇಶದಲ್ಲಿ ಸುನಂದಾ ಅವರ ಮಣ್ಣಿನ ಗೋಡೆಯ ಮನೆ ಪೂರ್ತಿ ಬಿದ್ದು ಹೋಗಿದ್ದು, ಸಾಕಷ್ಟು ನಷ್ಟ ಸಂಭವಿಸಿದೆ. ಅವರು ಒಂಟಿಯಾಗಿದ್ದವರು, ಈಗ ತಾಯಿ ಮನೆಗೆ ತೆರಳಿದ್ದಾರೆ ಎಂದು ಅವರ ನೆರೆಮನೆಯವರು ಹೇಳಿದ್ದಾರೆ.
ಸುನಂದಾ ಅವರ ನೆರೆಮನೆಯವರು ಗಣೇಶ್ ಗೌಡ ಅಂತರ. ಅವರ ಕಲ್ಲಿನ ಗೋಡೆಯ ನಿರ್ಮಾಣ ಹಂತದ ಮನೆ ಬಿರುಕು ಬಿಟ್ಟಿದೆ. ಅಂತರ, ಅರಣೆಪಾದೆ ಪ್ರದೇಶದಲ್ಲಿ ಆಗಿರುವ ಹಾನಿಯ ಒಂದೆರಡು ಉದಾಹರಣೆ ಇದು. ಇನ್ನೂ ಹತ್ತಾರು ಮನೆಗಳಿಗೆ ಸಮಸ್ಯೆಯಾಗಿದೆ, ನೂರಾರು ಎಕರೆ ಕೃಷಿ ತೋಟ ನಷ್ಟ ಅನುಭವಿಸಿವೆ.
ಅವರನ್ನು ಕಾದರೆ ತೋಟ ನಾಶ!
ಪ್ರವಾಹ ಸಾಕಷ್ಟು ತೋಟಗಳಿಗೆ ಮರಳು ಮತ್ತು ಕೆಸರನ್ನು ತಂದು ಹಾಕಿದೆ. ಅದು ಅಡಿಕೆ ಮರಗಳಿಗೆ ಅಪಾಯಕಾರಿ. ತೋಟದಲ್ಲಿ ತುಂಬಿರುವ ಮರಳನ್ನು ಸ್ವಲ್ಪ ತೋಡಿದರೆ ಅಡಿಯಲ್ಲಿ ನೀರು ಕಾಣಿಸುತ್ತದೆ. ಹೀಗೆಯೇ ಹತ್ತಿಪ್ಪತ್ತು ದಿನ ಇದ್ದರೆ ಬೇರು ಕೊಳೆಯಬಹುದು. ಬಂದವರೆಲ್ಲರೂ ತೋಟದ ಮಣ್ಣು ತೆಗೆಯುವುದಾಗಿ ಹೇಳಿದ್ದಾರೆ. ಆದರೆ ಅವರನ್ನು ಕಾದರೆ ತೋಟ ಸಾಯಬಹುದು. ಹೀಗಾಗಿ ನಾವೇ ಖರ್ಚು ಮಾಡಿ ಮರಳು ತೆಗೆಯುತ್ತಿದ್ದೇವೆ ಎಂದರು ಅಂತರ ನಿವಾಸಿ ಚಂದ್ರಯ್ಯ ಗೌಡ. ಚಂದ್ರಯ್ಯ – ಧರ್ಮಣ ಗೌಡ ಸಹೋದರರು ತಮ್ಮ ತೋಟದಲ್ಲಿ ತುಂಬಿರುವ ಹೂಳನ್ನು ಎರಡು ಸಣ್ಣ ಯಂತ್ರಗಳ ಮೂಲಕ ತೆಗೆಯುವ ಕಾರ್ಯ ಆರಂಭಿಸಿದ್ದಾರೆ. ಇವರಿಬ್ಬರ ತೋಟಗಳು ಹೊಳೆಬದಿಯಲ್ಲಿವೆ, ಪ್ರವಾಹ ಹಲವಾರು ಅಡಿಕೆ ಮರಗಳನ್ನು ಕಿತ್ತುಹಾಕಿದೆ.
ಹಲ್ಲರ್ ಪೂರ್ತಿ ನಾಶ
ಅರಣೆಪಾದೆ ನಿವಾಸಿ ಆನಂದ ಗೌಡ ಅವರ ಹಳೆಮನೆ, ನಿರ್ಮಾಣ ಹಂತದಲ್ಲಿದ್ದ ಹೊಸ ಮನೆಗೆ ಸಾಕಷ್ಟು ಹಾನಿಯಾಗಿದೆ. ದ್ವಿಚಕ್ರ ವಾಹನವೂ ಜಖಂಗೊಂಡಿತ್ತು. ಕಾಲೇಜಿಗೆ ಹೋಗಿದ್ದ ಮಗನಿಗೂ ಹೆತ್ತವರಿಗೂ ಮೂರು ದಿನ ಸಂಪರ್ಕವೇ ಇರಲಿಲ್ಲ. ಇವರ ಮನೆ ಬಳಿ ಇದ್ದ ಅಕ್ಕಿ ಹಲ್ಲರ್, ಅದರ ಕೊಟ್ಟಿಗೆ ನಾಶವಾಗಿದೆ. ವರ್ಷದಲ್ಲಿ ಹತ್ತಾರು ಮನೆಯ ಬೇಸಾಯಗಾರರು ಇಲ್ಲಿಗೆ ಬಂದು ಅಕ್ಕಿ ಮಾಡಿಸುತ್ತಿದ್ದರು. ಸುಮಾರು 50 ಕ್ವಿಂಟಾಲ್‌ಗೂ ಅಧಿಕ ಅಕ್ಕಿ ಮಾಡಲಾಗುತ್ತಿತ್ತು ಎಂದು ಆನಂದ ಗೌಡ ಹೇಳುತ್ತಾರೆ.
ಗೋದಾಮಿನ ಕುರುಹೇ ಇಲ್ಲ
ಅರಣೆಪಾದೆ ಪ್ರದೇಶದಲ್ಲಿ ಸರಕಾರ ಕಿಂಡಿ ಅಣೆಕಟ್ಟು ನಿರ್ಮಿಸಿತ್ತು. ಬೇಸಗೆಯಲ್ಲಿ ಕೃಷಿಗಾಗಿ ಕಾಲುವೆಯ ಮೂಲಕ ಸ್ಥಳೀಯ ಮುಗುಳುದಡ್ಕ, ಮೂಡಾಯಬೆಟ್ಟು ಪ್ರದೇಶಕ್ಕೆ ನೀರು ಪೂರೈಸಲಾಗುತ್ತಿತ್ತು. ಮಳೆಗಾಲದಲ್ಲಿ ಹಲಗೆ ತೆಗೆದು ಹೊಳೆಬದಿಯಲ್ಲಿದ್ದ ಗೋದಾಮಿನಲ್ಲಿ ಇರಿಸಲಾಗುತ್ತಿತ್ತು. ಆದರೆ ಗಟ್ಟಿಮುಟ್ಟಾದ ಆ ಕಟ್ಟಡದ ಕುರುಹು ಕೂಡ ಈಗಿಲ್ಲ.
ನಾವೇ ಮರಳು ತೆಗೆದಿದ್ದೇವೆ
ಮಧ್ಯಾಹ್ನ ಊಟ ಮಾಡಿದ್ದೆವಷ್ಟೆ. ಏಕಾಏಕಿ ಪ್ರವಾಹ ನುಗ್ಗಿ ತೋಟ, ಮನೆಯನ್ನು ಆವರಿಸಿತ್ತು. ಜಾನುವಾರುಗಳ ಹಗ್ಗ ಬಿಡಿಸಿ ತತ್‌ಕ್ಷಣ ಓಡಿ ಪಾರಾದೆವು. ತೋಟದಲ್ಲಿ ತುಂಬಿರುವ ಮರಳು ತೆಗೆಯದಿದ್ದರೆ ಅಡಿಕೆ ಮರಗಳು ಸತ್ತು ಹೋಗಬಹುದು. ಹೀಗಾಗಿ ಉಳಿದಿರುವ ಮರಗಳ ರಕ್ಷಣೆಗಾಗಿ ಯಾರನ್ನೂ ಕಾಯದೆ ನಾವೇ ಮರಳು ತೆಗೆಯುವ ಕಾರ್ಯಕ್ಕೆ ಇಳಿದಿದ್ದೇವೆ.
-ಚಂದ್ರಯ್ಯ ಗೌಡ, ಅಂತರ
ದಾಖಲೆಗಳು ನಾಶ
ಆಳೆತ್ತರಕ್ಕೆ ನೀರು ಬಂದು ಮನೆಯ ಕುರುಹು ಕೂಡ ಇಲ್ಲದಂತೆ ಮನೆ ಕೊಚ್ಚಿ ಹೋಗಿದೆ. ದಾಖಲೆಗಳ ಸಹಿತ ಯಾವುದೂ ಉಳಿದಿಲ್ಲ. ಮುಂದೆ ಏನು ಮಾಡಬೇಕು ಎಂದು ದಿಕ್ಕೇ ತೋಚುತ್ತಿಲ್ಲ.
-ಶೇಖರ, ಅರಣೆಪಾದೆ (ಕೈಸನ್ನೆಯಲ್ಲಿ ವಿವರಿಸಿದ್ದು)
ಕಂಗಾಲಾಗಿದ್ದೇವೆ
ಪ್ರವಾಹದ ನೀರು ಹರಿದ ಬಳಿಕ ಕಂಗಾಲಾಗಿ ಹೋಗಿದ್ದೇವೆ. ಅಕ್ಕಿ ಮಾಡುವ ಹಲ್ಲರ್ ಸಂಪೂರ್ಣ ಜಖಂಗೊಂಡಿದೆ. ದ್ವಿಚಕ್ರ ವಾಹನಕ್ಕೂ ಹಾನಿಯಾಗಿದೆ. ನೀರು ಬಂದ ರಭಸಕ್ಕೆ ಜಾನುವಾರುಗಳನ್ನು ಬಿಡಿಸುವುದಕ್ಕೂ ಸಾಧ್ಯವಾಗದೆ ಓಡಿದೆವು. ಬಳಿಕ ಈಜಿಕೊಂಡು ಬಂದು ಅವುಗಳನ್ನು ಕೊಟ್ಟಿಗೆಯಿಂದ ಬಿಡಿಸಿದ ಕಾರಣ ಬದುಕುಳಿದಿವೆ..
– ಆನಂದ ಗೌಡ, ಅರಣೆಪಾದೆ
ಸಹಜ ಸ್ಥಿತಿಯತ್ತ ಹಾನಿ ಪ್ರದೇಶಗಳು
ಪ್ರವಾಹದಿಂದ ಅತಂತ್ರವಾಗಿರುವ ಅರಣೆಪಾದೆ, ಅಂತರ ಪ್ರದೇಶಗಳನ್ನು ಸಹಜ ಸ್ಥಿತಿಗೆ ತರುವ ಶ್ರಮ ಮುನ್ನಡೆಯುತ್ತಿದೆ. ನೀರು ನುಗ್ಗಿರುವ ಮನೆಗಳಿಂದ ಕೆಸರು ತೆಗೆದು ಶುಚಿಗೊಳಿಸಲಾಗುತ್ತಿದೆ. ತೋಟಗಳಲ್ಲಿ ತುಂಬಿರುವ ಮರಳು, ಕೆಸರು ತೆಗೆಯುವುದು, ರಸ್ತೆಗಳನ್ನು ಸುಸಜ್ಜಿತಗೊಳಿಸುವ ಕಾರ್ಯ ನಡೆಯಬೇಕಿದೆ. ಚಂದ್ರಯ್ಯ ಗೌಡರು ಸ್ವತಃ ಖರ್ಚು ಹಾಕಿ ತೋಟದ ಹೂಳು ತೆಗೆಸುತ್ತಿದ್ದಾರೆ. ಅರಣೆಪಾದೆಯಲ್ಲಿ ಹೊಳೆ ಬದಿಯ ರಸ್ತೆ ಪೂರ್ತಿ ಕೊಚ್ಚಿ ಹೋಗಿದ್ದು, ಎರಡು ಜೆಸಿಬಿಗಳಿಂದ ಕಲ್ಲು ಮಣ್ಣು ತುಂಬಿಸಿ ಮರುನಿರ್ಮಾಣ ಭರದಿಂದ ಸಾಗಿದೆ.
- ಕಿರಣ್ ಸರಪಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.