ಹೂಳಿನಿಂದ ನೆರೆ ಹಾವಳಿ, ಬೆಳೆ ನಾಶ; ಭಾವುಕರಾಗಿ ಪರಿಹಾರ ಕೋರಿದ ರೈತರು
ಕೋಟ ಗ್ರಾ.ಪಂ. ಗ್ರಾಮಸಭೆ
Team Udayavani, Aug 30, 2019, 5:44 AM IST
ಕೋಟ: ಗಿಳಿಯಾರಿನ ನೂರಾರು ಕುಟುಂಬಗಳು ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದೇವೆ. ಪ್ರತಿ ವರ್ಷ ಹೊಳೆಸಾಲಿನಲ್ಲಿರುವ ನಮ್ಮ ನೂರಾರು ಎಕ್ರೆ ಗದ್ದೆಗಳಲ್ಲಿ ಕಷ್ಟಪಟ್ಟು ನಾಟಿ ಮಾಡಿ ನೇಜಿಯನ್ನು ಮಕ್ಕಳಂತೆ ಬೆಳೆಸುತ್ತೇವೆ. ಆದರೆ ಮಳೆಗಾಲ ಆರಂಭವಾದ ತತ್‌ಕ್ಷಣ ಹೊಳೆಯಲ್ಲಿನ ಹೂಳಿನಿಂದಾಗಿ ಸರಿಯಾಗಿ ನೀರು ಹರಿಯದೆ ಹತ್ತು-ಹದಿನೈದು ದಿನ ನೆರೆ ಆವರಿಸಿ ನೂರಾರು ಎಕ್ರೆಯಲ್ಲಿ ನಾವು ಶ್ರಮಪಟ್ಟು ಬೆಳೆದ ಬೆಳೆ ಹಾನಿಯಾಗುತ್ತಿದೆ. ಇದನ್ನು ನೋಡುವಾಗ ಕರಳು ಕಿತ್ತುಬರುವ ವೇದನೆಯಾಗುತ್ತದೆ.
ಸುಮಾರು 15-20ವರ್ಷದಿಂದ ಈ ಸಮಸ್ಯೆ ಇದೆ. ಇಲಾಖೆಯ ಪರಿಹಾರದ ಹಣ ನಮಗೆ ಬೇಡ. ದಯವಿಟ್ಟು ಹೊಳೆಯ ಹೂಳೆತ್ತುವ ಮೂಲಕ ಶಾಶ್ವತ ಪರಿಹಾರ ನೀಡಿ. ಇಲ್ಲವಾದರೆ ನಾವು ಕೃಷಿಯಿಂದ ದೂರವಾಗುತ್ತೇವೆ ಎಂದು ಆ.29ರಂದು ನಡೆದ ಕೋಟ ಗ್ರಾ.ಪಂ. ಗ್ರಾಮಸಭೆಯಲ್ಲಿ ರೈತರಾದ ಸಾಧು ಪೂಜಾರಿ, ರಾಘವೇಂದ್ರ ಶೆಟ್ಟಿ ಮುಂತಾದವರು ಭಾವುಕರಾಗಿ ಅಂಗಲಾಚಿದರು.
ಈ ಬಗ್ಗೆ ಹಲವು ಬಾರಿ ಮನವಿ ನೀಡಿದ್ದೇವೆ. ಪ್ರತಿ ವರ್ಷ ಆಡಳಿತ ವ್ಯವಸ್ಥೆಯನ್ನು ಎಚ್ಚರಿಸುವ ಕಾರ್ಯ ಮಾಡುತ್ತೇವೆ. ಆದರೆ ಯಾವುದೇ ಪರಿಹಾರವಿಲ್ಲ ಎಂದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಪಿಡಿಓ ಸುರೇಶ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದಾಗಿ ತಿಳಿಸಿದರು.
ಜನಸ್ನೇಹಿ ಪೊಲೀಸ್
ವ್ಯವಸ್ಥೆಗೆ ಸಹಕರಿಸಿ
ಪೊಲೀಸ್ ವ್ಯವಸ್ಥೆ ಜನಸ್ನೇಹಿಯಾಗಿರಬೇಕು ಎನ್ನುವುದು ಇಲಾಖೆಯ ಹಂಬಲ. ಹೀಗಾಗಿ ಬೀಟ್ ಪೊಲೀಸ್ ಮುಂತಾದ ವ್ಯವಸ್ಥೆಗಳನ್ನು ಜಾರಿಗೆ ತರಲಾಗಿದೆ. ಆದ್ದರಿಂದ ನಿಮ್ಮ ವ್ಯಾಪ್ತಿಯ ಬೀಟ್ ಸಿಬಂದಿ ಜತೆ ಸಂಪರ್ಕದಲ್ಲಿರಿ. ಅಕ್ರಮ ವ್ಯವಹಾರಗಳು ನಡೆಯುತ್ತಿದ್ದರೆ ಇಲಾಖೆಗೆ ಮಾಹಿತಿ ನೀಡಿ. ಯಾವುದೇ ಸಹಕಾರ ಬೇಕಾದರು ಅಂಜಿಕೆ ಇಲ್ಲದೆ ಠಾಣೆಗೆ ಭೇಟಿ ನೀಡಿ ಎಂದು ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕ ನಿತ್ಯಾನಂದ ಗೌಡ ಗ್ರಾಮಸ್ಥರಲ್ಲಿ ತಿಳಿಸಿದರು.
ಸರ್ವೀಸ್ ರಸ್ತೆಗಳ ಸಮಸ್ಯೆಯ ಕುರಿತು ಗ್ರಾಮಸ್ಥರಾದ ಸುರೇಶ್ ಗಿಳಿಯಾರು ಗಮನ ಸೆಳೆದಾಗ, ಕೋಟ ಠಾಣೆ ವ್ಯಾಪ್ತಿಯಲ್ಲಿ ಸಾಕಷ್ಟು ಸರ್ವೀಸ್ ರಸ್ತೆಯ ಸಮಸ್ಯೆ ಇದೆ. ಹೀಗಾಗಿ ಎಲ್ಲೆಲ್ಲಿ ಸಮಸ್ಯೆ ಇದೆ ಎನ್ನುವುದರ ಕುರಿತು ವರದಿ ತಯಾರಿಸಿ ಎನ್.ಎಚ್., ಪಿ.ಡಬ್ಲೂ.ಡಿ. ಜಿಲ್ಲಾಧಿಕಾರಿ ಮುಂತಾದವರಿಗೆ ರವಾನಿಸಲಾಗಿದೆ ಎಂದರು ಹಾಗೂ ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಎಲ್ಲರೂ ಪಾಲಿಸಬೇಕು ಎಂದರು.
ಕೋಟ ಆಸ್ಪತ್ರೆಯಲ್ಲಿ
ಹೆರಿಗೆ ಸೌಲಭ್ಯ
ಕೋಟ ಸಮುದಾಯ ಆರೋಗ್ಯ ಕೇಂದ್ರಕ್ಕೆ ಈ ಹಿಂದಿನ ಹೆರಿಗೆ ತಜ್ಞರು ಹಿಂದಿರುಗಿದ್ದಾರೆ ಹಾಗೂ ಇದಕ್ಕೆ ಬೇಕಾಗುವ ಪೂರಕ ಉಪಕರಣಗಳನ್ನು ಕೂಡ ಅಳವಡಿಸಲಾಗಿದೆ. ಅರಿವಳಿಕೆ ತಜ್ಞರ ಸೇವೆ ಕೂಡ ಲಭ್ಯವಿದೆ. ಹೀಗಾಗಿ ಹೆರಿಗೆ ಮುಂತಾದ ಸೌಲಭ್ಯಗಳನ್ನು ಗ್ರಾಮಸ್ಥರು ಬಳಸಿಕೊಳ್ಳಬೇಕು ಎಂದು ವೈದ್ಯಾಧಿಕಾರಿ ಡಾ|ವಿಶ್ವನಾಥ ತಿಳಿಸಿದರು.
ಬೆಳೆವಿಮೆ ಮೂಲಕ
ಪರಿಹಾರ ನೀಡಿ
ಕೃಷಿ ಇಲಾಖೆ ಹಾಗೂ ಸಹಕಾರಿ ಸಂಘಗಳ ಮೂಲಕ ಸಾಕಷ್ಟು ಮಂದಿಗೆ ಬೆಳೆ ವಿಮೆ ಮಾಡಲಾಗಿದೆ. ಇದೀಗ ನೆರೆ ಬಂದು ಬೆಳೆ ಹಾನಿಯಾಗಿದೆ. ಆದರೆ ವಿಮಾ ಪರಿಹಾರವನ್ನು ನೀಡುವ ಕುರಿತು ಸಂಬಂಧಪಟ್ಟ ಇಲಾಖೆಗಳು ಗಮನಹರಿಸುತ್ತಿಲ್ಲ. ಯಾವ ಕಂಪನಿ ಮೂಲಕ ವಿಮೆ ಮಾಡಿದ್ದಾರೆ ಎನ್ನುವ ಮಾಹಿತಿ ಕೂಡ ರೈತರಿಗಿಲ್ಲ. ಹೀಗಾಗಿ ವಿಮೆಯ ಹೆಸರಲ್ಲಿ ರೈತರಿಗೆ ಮೋಸವಾಗಿದೆಯೇ ಎನ್ನುವ ಅನುಮಾನವಿದೆ. ಈ ಕುರಿತು ಕ್ರಮೈಗೊಳ್ಳಬೇಕು ಎಂದು ರೈತ ಭಾಸ್ಕರ ಶೆಟ್ಟಿ ಆಗ್ರಹಿಸಿದರು. ಈ ಕುರಿತು ಸಮಸ್ಯೆಯನ್ನು ಇಲಾಖೆಯ ಗಮನಕ್ಕೆ ತರುವುದಾಗಿ ಕೋಟ ಕೃಷಿ ಕೇಂದ್ರದ ಎ.ಒ. ಸುಪ್ರಭಾ ಭರವಸೆ ನೀಡಿದರು.
ಬೀದಿ ದೀಪಕ್ಕೆ
ಸಿ.ಎಫ್.ಎಲ್. ಬಲ್ಬ್ ಬಳಸಿ
ಪ್ರಸ್ತುತ ಬೀದಿ ದೀಪಗಳಿಗೆ ಸಾಮಾನ್ಯ ಟ್ಯೂಬ್‌ಗಳನ್ನು ಬಳಸಲಾಗುತ್ತಿದೆ. ಆದರೆ ಇದು ಬಹುಬೇಗ ಹಾಳಾಗುತ್ತದೆ ಜತೆಗೆ ಇದರ ಬೆಲೆ ಕೂಡ ಸಿ.ಎಫ್.ಎಲ್. ಬಲ್ಬ್ ಗಳಿಗಿಂತ ಎರಡು ಪಟ್ಟು ಹೆಚ್ಚಿರುತ್ತದೆ. ಆದ್ದರಿಂದ ವಿದ್ಯುತ್ ಮಿತವ್ಯಯ, ಉಳಿತಾಯಕ್ಕೆ ಸಹಕಾರಿಯಾಗುವ ಸಿ.ಎಫ್.ಎಲ್. ಬಲ್ಬಗಳನ್ನು ಬೀದಿ ದೀಪಕ್ಕೆ ಅಳವಡಿಸಬೇಕು ಎಂದು ಗ್ರಾಮಸ್ಥರು ಕೋರಿದರು.
ಗ್ರಾ.ಪಂ. ಅಧ್ಯಕ್ಷೆ ವನಿತಾ ಶ್ರೀಧರ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಶು ಇಲಾಖೆಯ ಉಪ ನಿರ್ದೇಶಕ ಡಾ|ಅರುಣ್ ಕುಮಾರ್ ಸಮನ್ವಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ತಾ.ಪಂ. ಸದಸ್ಯೆ ಲಲಿತಾ, ಗ್ರಾ.ಪಂ. ಉಪಾಧ್ಯಕ್ಷ ರಾಜಾರಾಮ್ ಶೆಟ್ಟಿ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಮಂಜು ವಾರ್ಷಿಕ ವರದಿ ಮಂಡಿಸಿದರು. ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖಾ ಕಾರ್ಯಕ್ರಮದ ಕುರಿತು ತಿಳಿಸಿದರು.
ವರ್ಗಾವಣೆ ರದ್ದುಪಡಿಸುವಂತೆ ನಿರ್ಣಯ
ಉತ್ತಮ ಸೇವಾ ಹಿನ್ನೆಲೆ ಹೊಂದಿರುವ ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕ ನಿತ್ಯಾನಂದ ಗೌಡರಿಗೆ ಕರ್ತವ್ಯಕ್ಕೆ ಹಾಜರಾಗಿ ಎರಡೇ ತಿಂಗಳಲ್ಲಿ ಕಾರವಾರಕ್ಕೆ ವರ್ಗವಣೆ ಆದೇಶವಾಗಿತ್ತು. ಆದರೆ ಅಲ್ಲಿನ ಉಪನಿರೀಕ್ಷಕರು ಕೋಟದಲ್ಲಿ ಕರ್ತವ್ಯಕ್ಕೆ ಹಾಜರಾಗದ ಕಾರಣ ಇದೀಗ ಜಿಲ್ಲೆಯ ಬೇರೆ ಠಾಣೆಯೊಂದರ ಪಿ.ಎಸ್.ಐ. ಅವರನ್ನು ಇಲ್ಲಿಗೆ ವರ್ಗಾವಣೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎನ್ನುವ ಸುದ್ದಿ ಇದೆ. ಗ್ರಾಮಸ್ಥರು ಇದನ್ನು ಒಕ್ಕೊರಲಿನಿಂದ ವಿರೋಧಿಸುತ್ತೇವೆ ಹಾಗೂ ಇವರ ವರ್ಗಾವಣೆ ರದ್ದುಪಡಿಸಬೇಕು ಎಂದು ಗ್ರಾಮಸ್ಥರಾದ ಜಯರಾಮ್ ಶೆಟ್ಟಿಯವರ ಸೂಚನೆಯಂತೆ ನಿರ್ಣಯ ಕೈಗೊಳ್ಳಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ಸ್ವಯಂ ರಕ್ಷಣೆಗಾಗಿ ಕರಾಟೆ ಕಲೆಯ ಅಭ್ಯಾಸ ಇಂದಿನ ಅಗತ್ಯತೆ: ಪುತ್ತಿಗೆ ಶ್ರೀ
Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
MUST WATCH
ಹೊಸ ಸೇರ್ಪಡೆ
Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್ ಮಗುಚಿ ಇಬ್ಬರು ನಟಿಯರ ಸಾವು
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ
Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.