ಕೃಷಿ, ರಾಸುಗಳ ಜತೆಗೆ ಬದುಕು ಮರಳಿ ಗೂಡು ಕಟ್ಟಿಕೊಳ್ಳುತ್ತಿದೆ
Team Udayavani, Aug 30, 2019, 5:18 AM IST
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೆಲವು ಗ್ರಾಮಗಳು ಈ ಬಾರಿಯ ನೆರೆಯಲ್ಲಿ ಕೊಚ್ಚಿ ಹೋಗಿವೆ. ಆ ಗ್ರಾಮಗಳನ್ನು ಪುನರ್ ರೂಪಿಸುವುದು, ಸಂತ್ರಸ್ತರಿಗೆ ಬದುಕನ್ನು ಕಟ್ಟಿಕೊಡುವುದು ಎಲ್ಲರ ಹೊಣೆಗಾರಿಕೆ. ಸರಕಾರ, ಜನಪ್ರತಿನಿಧಿಗಳು, ಸಂಘ -ಸಂಸ್ಥೆಗಳು ನೊಂದವರ ಬದುಕ ಕಟ್ಟಲು ಹೊರಟಿವೆ. ಬನ್ನಿ ಜತೆಗೂಡೋಣ.
ಬೆಳ್ತಂಗಡಿ: ನಮ್ಮ ಮನೆ ವಾಸಕ್ಕೆ ಯೋಗ್ಯವಲ್ಲ ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಆದರೆ ಕೃಷಿ ಬದುಕು, ದನಕರು ಬಿಟ್ಟು ಹಾಗೆಲ್ಲ ಎಲ್ಲಿಗಾದರೂ ಎದ್ದು ಹೋಗಲಾಗುತ್ತದೆಯೆ! ಹೀಗಾಗಿ ಭದ್ರವಲ್ಲದಿದ್ದರೂ ಅದೇ ಮನೆಯಲ್ಲಿ ಉಳಿದುಕೊಂಡಿದ್ದೇವೆ – ಮಹಾಬಲ ಗೌಡ ಹೇಳಿಕೊಂಡರು. ಅವರು ಪಟ್ರಮೆ ಗ್ರಾಮದ ಮಣಿಯೇರು ನಿವಾಸಿ.
ಎಷ್ಟೇ ಮಳೆ ಸುರಿದರೂ ಮನೆಯಿಂದ 50 ಮೀ. ದೂರದವರೆಗೆ ನೆರೆ ಬರುತ್ತಿತ್ತು, ಹಾಗೆಯೇ ಹಿಂದೆ ಸರಿಯುತ್ತಿತ್ತು. ಆದರೆ ಮೊನ್ನೆಯಂತಹ ಪ್ರವಾಹ ಕಂಡು ಕೇಳಿದ್ದಿಲ್ಲ. ಅಂದು ನಾವೆಲ್ಲ ಮನೆಯಲ್ಲಿದ್ದೆವು. ಪ್ರವಾಹದ ನೀರು ತೋಟವನ್ನು ಸೋಕುವಾಗ ಈ ಬಾರಿ ಎಂದಿನಂತಲ್ಲ ಎಂಬ ಅನುಮಾನ ಬಂತು. ನೀರು ಏರುತ್ತಿದ್ದಂತೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸೊಸೆ ಮತ್ತು ಮಕ್ಕಳು ಹಾಗೂ ನಾನು ತಮ್ಮನ ಮನೆಯಲ್ಲಿ ಆಶ್ರಯ ಪಡೆದೆವು. ನೀರಿನ ಸೆಳೆತ ಭಯಾನಕವಾಗಿತ್ತು. ನನ್ನ ಗಂಡುಮಕ್ಕಳಿಬ್ಬರು ಸಂಜೆ 5 ಗಂಟೆಯ ವರೆಗೆ ಮನೆಯಲ್ಲಿದ್ದರು. ಎರಡು ಎಕರೆ ಕೃಷಿ ಭೂಮಿಯಲ್ಲಿ ಎಲ್ಲಿ ಕಣ್ಣು ಹಾಯಿಸಿದರೂ ನೀರೇ. ಮಕ್ಕಳು ದನ ಕರುಗಳನ್ನು ಎತ್ತರ ಪ್ರದೇಶಕ್ಕೆ ಕರೆತಂದರು. ಪ್ರವಾಹ ಇಳಿದುದು ಮರುದಿನವೇ ಎಂದು ಮಹಾಬಲ ಗೌಡ ಅಂದಿನ ಚಿತ್ರಣ ತೆರೆದಿಟ್ಟರು.
ಮನೆ ಮುರಿದರೂ ಸ್ಥಳ ಬಿಡದ ಕುಟುಂಬ
ಪತಿಯ ನೆನಪಾಗಿ ಇದ್ದ ಮನೆ ಪ್ರವಾಹದಲ್ಲಿ ಸಂಪೂರ್ಣ ನೆಲಸಮವಾಗಿದೆ. ಇಬ್ಬರು ಮಕ್ಕಳು, ನಾನು 25 ವರ್ಷಗಳಿಂದ ಇಲ್ಲೇ ವಾಸವಾಗಿದ್ದೆವು. ಸಂಜೆ 5ಯ ಸುಮಾರಿಗೆ ಬಂದ ಪ್ರವಾಹದಿಂದ ತಪ್ಪಿಸಿಕೊಳ್ಳಲು ಎತ್ತ ಓಡುವುದೆಂದೇ ತೋಚಿರಲಿಲ್ಲ ಎಂದರು ಪಟ್ರಮೆ ಗ್ರಾಮದ ಮಣಿಯೇರು ನಿವಾಸಿ ಸುಂದರಿ. ಅವರದು ಇದ್ದೊಂದು ಸೂರು ಕಳೆದುಕೊಂಡ ನೋವು. “ಕಡೆಗೂ ಮಕ್ಕಳು ಮತ್ತು ನಾನು ಅಡಿಕೆ ಮರಗಳನ್ನು ಆಧರಿಸಿ ಹಿಡಿದುಕೊಂಡು ಪಾರಾದೆವು. ಮರುದಿನ ಹಿಂದಿರುಗಿ ಬಂದಾಗ ಗೋಡೆ ಕುಸಿದ ಮನೆಯ ಗುರುತೇ ಸಿಗಲಿಲ್ಲ. ಇರುವ ಗೋಡೆಗಳ ಮೇಲಕ್ಕೆ ಹೇಗೋ ಶೀಟು ಏರಿಸಿ ಇಲ್ಲೇ ವಾಸವಾಗಿದ್ದೇವೆ. ಮಗಳ ಶಾಲೆಯ ದಾಖಲೆ ಪತ್ರ, ಪುಸ್ತಕಗಳೆಲ್ಲ ಕಳೆದುಹೋಗಿವೆ. ಮತ್ತೆ ಹೇಗೆ ಪಡೆಯುವುದು ತಿಳಿಯುತ್ತಿಲ್ಲ. ಶಾಸಕರ “ಶ್ರಮಿಕ’ದಿಂದ ಅಕ್ಕಿ, ಮನೆ ಸೊತ್ತುಗಳು ಬಂದಿವೆ’ ಎಂದರವರು. ಮುರುಕು ಮನೆ ಸುಧಾರಿಸಿಕೊಂಡು ಬದುಕು ಮುಂದುವರಿಸುವ ಮನಸ್ಸು ಅವರದು.
ಮುತ್ತಜ್ಜ ಕಟ್ಟಿದ ಹೊಟೇಲು ನದಿ ಪಾಲು
ನಮ್ಮ ಹೊಟೇಲು ನನ್ನ ಮುತ್ತಜ್ಜ ಸ್ಥಾಪಿಸಿದ್ದು. ಅವರ ಬಳಿಕ ಅಜ್ಜ ನಾರಾಯಣ ಭಟ್ ನಡೆಸು ತ್ತಿದ್ದರು, ಬಳಿಕ ನನ್ನ ಕೈಯಲ್ಲಿತ್ತು. ಅದು ಮೊನ್ನೆ ನೇತ್ರಾವತಿ ನದಿಯ ರೌದ್ರಾವತಾರದಲ್ಲಿ ಕೊಚ್ಚಿ ಹೋಗಿದೆ ಎಂದು ಕನ್ಯಾಡಿಯ ಚೆನ್ನಕೇಶವ ಅಳಲು ತೋಡಿಕೊಂಡರು. “ನಾನು 9 ತಿಂಗಳಿಂದೀಚೆಗೆ ಹೊಟೇಲು ನಡೆಸುತ್ತಿದ್ದೆ. ನೆರೆ ಬರುವ ಮುನ್ಸೂಚನೆಯಿದ್ದುದರಿಂದ ಕೆಲವು ಅಗತ್ಯ ಸೊತ್ತುಗಳನ್ನಷ್ಟೆ ಉಜಿರೆಗೆ ಸ್ಥಳಾಂತರಿಸಿದ್ದೆ. ಆದರೆ ಅಂದು ಇದ್ದಕ್ಕಿದ್ದಂತೆ ಬಂದ ಪ್ರವಾಹ ಹೊಟೇಲಿನ ಹಿಂಬದಿ ಗೋಡೆಯನ್ನು ಉರುಳಿಸಿತ್ತು. 2 ಫ್ರಿಡ್ಜ್, ಪಾತ್ರೆ, ಗ್ಯಾಸ್ ಸ್ಟೌ, ತಟೆ – ಬಟ್ಟಲುಗಳೆಲ್ಲವೂ ನೀರಲ್ಲಿ ಕೊಚ್ಚಿ ಹೋಗಿವೆ. ನಾನೀಗ ಬೇರೊಬ್ಬರ ಹೋಟೆಲ್‌ನಲ್ಲಿ ದುಡಿದು ಜೀವನ ಸಾಗಿಸುವಂತಾಗಿದೆ, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂತ್ರಸ್ತರಾದರೂ ಮಿಡಿದ ಮನ
ತಾನು ಮನೆ ಕಳೆದುಕೊಳ್ಳುವ ಆತಂಕದಲ್ಲಿದ್ದರೂ ಮಾನವೀಯತೆಯ ಪ್ರದರ್ಶಿಸಿದವರು ಮಣಿಯೇರು ನಿವಾಸಿ ಮಹಾಬಲ ಗೌಡ. ದಾನಿಗಳು ಮತ್ತು ಶಾಸಕರ “ಶ್ರಮಿಕ’ದಿಂದ ಬಂದ ಅಕ್ಕಿ ಮತ್ತು ಅಗತ್ಯ ಸೊತ್ತುಗಳನ್ನು ಅವರು ತನಗಿಂತ ಹೆಚ್ಚು ಅಗತ್ಯವುಳ್ಳವರಿಗೆ ದಾನ ಮಾಡಿದ್ದಾರೆ. “ನಾವು ದಾನ ಮಾಡಿದ್ದನ್ನು ದೇವರು ಮತ್ತೂಂದು ರೂಪದಲ್ಲಿ ನೀಡುತ್ತಾನೆ. ದಾನಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಎಂದು ನಂಬಿದ್ದೇನೆ’ ಎಂದವರು ಗೌಡ ನೋವಲ್ಲೂ ನೆರವಿನ ಸಂತಸ ಹಂಚಿಕೊಂಡರು.
ಸಹಜ ಸ್ಥಿತಿಗೆ ಹಾನಿ ಪ್ರದೇಶ
ನೆರೆಯಿಂದ ತತ್ತರಿಸಿದ ಪ್ರದೇಶಗಳೆಲ್ಲ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿವೆ. ಪಟ್ರಮೆ ಪ್ರದೇಶದ ಅನೇಕ ಮನೆ ಮತ್ತು ತೋಟಗಳಿಗೆ ನೀರು ನುಗ್ಗಿದ್ದರೂ ಜನರು ಈಗ ಸುಧಾರಿಸಿಕೊಂಡು ಹೊಸ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ದೈನಂದಿನ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಅಡಿಕೆ ಮರಗಳಿಗೆ ರೋಗ ಬಾರದಂತೆ ಮದ್ದು ಸಿಂಪಡಣೆ ಮಾಡಲಾಗುತ್ತಿದೆ. ನೆರೆ ನೀರು ನುಗ್ಗಿದ ಮನೆ ಸ್ವತ್ಛಗೊಳಿಸಿ ವಾಸವಾಗಿದ್ದಾರೆ. ವಿದ್ಯುತ್ ತಂತಿ ಜೋಡಣೆ, ಸೇತುವೆಗಳಲ್ಲಿ ತುಂಬಿದ್ದ ಕಟ್ಟಿಗೆ ರಾಶಿ ತೆರವುಗೊಳಿಸಲಾಗಿದೆ. ಆದರೆ ಇಲ್ಲಿನ ರಸ್ತೆಗಳು ತೀರ ಹದಗೆಟ್ಟಿದ್ದು, ಮಣ್ಣಿನ ರಸ್ತೆಯಲ್ಲಿ ಸಂಚಾರ ದುಸ್ತರವಾಗಿದೆ.
ಸಂಪೂರ್ಣ ಹಾನಿ
ಪಟ್ರಮೆ ಪ್ರದೇಶಲ್ಲಿ 5ರಿಂದ 6 ಮನೆಗಳಿಗೆ ನೀರು ನುಗ್ಗಿದೆ. ಸಮೀಕ್ಷೆಯಲ್ಲಿ ಸಂಪೂರ್ಣ 4 ಮನೆ ಹಾನಿಯಾಗಿರುವ ಕುರಿತು ವರದಿ ನೀಡಲಾಗಿದೆ. ಮಣಿಯೇರು ವಿಜಯಾ, ಮಹಾಬಲ ಗೌಡ, ಹೊಳೆಬದಿಯ ಲಕ್ಷ್ಮೀ, ಲಕ್ಷ್ಮಣ ಗೌಡ ಅವರ ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ.
– ರೂಪೇಶ್, ಗ್ರಾಮ ಲೆಕ್ಕಿಗ
ಶೀಟು ಹಾಕಿ ವಾಸ
ಮಣ್ಣಿನ ಗೋಡೆ ನೆಲಸಮ ವಾಗಿದ್ದರಿಂದ ಶೀಟು ಹಾಕಿ ವಾಸವಾಗಿದ್ದೇವೆ. ನಮಗೆ ಬೇರೆ ಮನೆ ಅಗತ್ಯವಿದೆ. ಮಕ್ಕಳ ದಾಖಲೆ ಪತ್ರ ಮತ್ತೆ ಪಡೆಯಲು ಯಾವ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ತಿಳಿದಿಲ್ಲ. ದಾಖಲೆ ಪತ್ರ ಒದಗಿಸಿ ಕೊಟ್ಟರೆ ಅನುಕೂಲ.
– ಸುಂದರಿ, ಮಣಿಯೇರು
ವಾಸಕ್ಕೆ ಯೋಗ್ಯವಿಲ್ಲ
ನದಿಯಿಂದ ನಮ್ಮ ಮನೆಗೆ 200 ಮೀ. ದೂರವಿದೆ. 90 ವರ್ಷಗಳಿಂದ ಇಲ್ಲಿ ವಾಸವಿದ್ದೇವೆ. ಇಂಥ ಪ್ರವಾಹ ಕಂಡು ಕೇಳಿರಲಿಲ್ಲ. ಕೋಳಿಗಳು ತರಗೆಲೆಗಳಂತೆ ನೀರಲ್ಲಿ ಕೊಚ್ಚಿ ಹೋಗಿವೆ. ಇರುವ ಮನೆ ಬಿರುಕು ಬಿಟ್ಟಿದೆ. ಮನೆ ವಾಸಕ್ಕೆ ಯೋಗ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಕೃಷಿ ಭೂಮಿ ಬಿಟ್ಟು ಬೇರೆಡೆ ಹೋಗಲು ಮನಸ್ಸು ಒಪ್ಪುತ್ತಿಲ್ಲ..
– ಮಹಾಬಲ ಗೌಡ, ಮಣಿಯೇರು
ಹೊಟೇಲ್ ನದಿ ಪಾಲು
ಸ್ವಂತ ಹೊಟೇಲ್ ನಡೆಸುತ್ತಿದ್ದ ನಾನೇ ಈಗ ಇನ್ನೊಬ್ಬ ಹೊಟೇಲ್‌ನಲ್ಲಿ ಕೆಲಸ ಮಾಡಬೇಕಾಗಿ ಬಂದಿದೆ. ನದಿ ಪಾಲಾದ ಸೊತ್ತುಗಳ ಮೌಲ್ಯ 5ರಿಂದ 6 ಲಕ್ಷ ರೂ. ಈಗ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ.
– ಚೆನ್ನಕೇಶವ, ಕನ್ಯಾಡಿ
- ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.