“ಹೆದರಿ ಓಡಿ ಹೋಗಲ್ಲ, ಎದುರಿಸುತ್ತೇನೆ’


Team Udayavani, Aug 31, 2019, 3:09 AM IST

hedari

ಬೆಂಗಳೂರು: “ಯಾವುದಕ್ಕೂ ಹೆದರಿ ಓಡಿ ಹೋಗುವುದಿಲ್ಲ. ಕಾನೂನಾತ್ಮಕ, ರಾಜಕೀಯ, ಸಾಮಾಜಿಕವಾಗಿ ಎಲ್ಲವನ್ನೂ ಧೈರ್ಯದಿಂದ ಎದುರಿಸುತ್ತೇನೆ’ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಸದಾಶಿವನಗರ ನಿವಾಸದಲ್ಲಿ ಕಿಕ್ಕಿರಿದು ತುಂಬಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “2016 ರಿಂದ ಮಾಧ್ಯಮಗಳು ವಿಚಿತ್ರ ಕಲ್ಪನೆ ಮಾಡಿಕೊಂಡು ನನ್ನ ಬಗ್ಗೆ ವ್ಯಾಖ್ಯಾನ ಮಾಡಿವೆ.

ನಾನು ಕಾಂಗ್ರೆಸ್‌ ಪಕ್ಷದ ನಾಯಕನಾಗಿ ಪಕ್ಷ ವಹಿಸಿದ್ದ ಜವಾಬ್ದಾರಿ ನಿರ್ವಹಿಸಿದ್ದೇನೆ. ಗುಜರಾತ್‌, ಮಹಾರಾಷ್ಟ್ರ ಹಾಗೂ ಕರ್ನಾಟಕದ ಶಾಸಕರನ್ನು ರಕ್ಷಣೆ ಮಾಡುವ ಕೆಲಸ ಮಾಡಿದ್ದೇನೆ. ನಾನೇನು ಅತ್ಯಾಚಾರ, ಕೊಲೆ, ದರೋಡೆ ಮಾಡಿಲ್ಲ. ಯಾವುದೇ ಅಕ್ರಮ ವ್ಯವಹಾರದಲ್ಲಿ ತೊಡಗಿಕೊಂಡಿಲ್ಲ. ವಿದೇಶದಲ್ಲಿ ಯಾವುದೇ ವ್ಯವಹಾರ ಇಲ್ಲ. ನನ್ನ ಎಲ್ಲ ವ್ಯವಹಾರವೂ ಪಾರದರ್ಶಕವಾಗಿದೆ’ ಎಂದರು.

“ನಾನು ಕಾನೂನಿಗೆ ಗೌರವ ಕೊಡುವ ವ್ಯಕ್ತಿ. ಆದಾಯ ತೆರಿಗೆ ಇಲಾಖೆಗೆ ಎಲ್ಲ ಮಾಹಿತಿಯನ್ನೂ ನೀಡಿದ್ದೇನೆ. ಜಾರಿ ನಿರ್ದೇಶನಾಲಯ ನೀಡಿರುವ ಎಲ್ಲ ನೋಟಿಸ್‌ಗೂ ಉತ್ತರ ನೀಡಿದ್ದೇನೆ. 80 ವಷ ವಯಸ್ಸಿನ ನಮ್ಮ ತಾಯಿಯ ಆಸ್ತಿಯನ್ನು ಬೇನಾಮಿ ಆಸ್ತಿ ಎಂದು ಐಟಿ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ನನ್ನ ತಾಯಿಗೆ ತನ್ನ ಇಬ್ಬರು ಮಕ್ಕಳ ಮೇಲೆ ನಂಬಿಕೆ ಇದೆ. ಅವರು ಸಾಕಷ್ಟು ಆಸ್ತಿಯನ್ನು ಜನರಿಗೆ ದಾನ ಮಾಡಿದ್ದಾರೆ.

ಆದರೆ, ಅವರ ಆಸ್ತಿ ಎಲ್ಲವೂ ಬೇನಾಮಿ ಎಂದು ಘೋಷಿಸಿದ್ದಾರೆ. ಇದರ ವಿರುದ್ಧ ಕಾನೂನು ಹೋರಾಟ ನಡೆಸಿದ್ದೇನೆ’ ಎಂದರು. “ನಮ್ಮ ನಿವಾಸದಲ್ಲಿ ದೊರೆತ ಹಣ ನಮ್ಮದು ಎಂದು ಐಟಿ ಇಲಾಖೆಗೆ ಸ್ಪಷ್ಟಪಡಿಸಿದ್ದೇವೆ. ಆದರೆ ಜಾರಿ ನಿರ್ದೇಶನಾಲಯ ನೋಟಿಸ್‌ ನೀಡಿದೆ. ಐಟಿ ವ್ಯವಹಾರಕ್ಕೂ ಇಡಿಗೂ ಸಂಬಂಧವಿಲ್ಲ. ನಾನು ಕೋರ್ಟ್‌ ಮೊರೆ ಹೋಗಿದ್ದೆ, ಕೋರ್ಟ್‌ ನನ್ನ ಮನವಿ ವಜಾ ಮಾಡಿರುವುದರಿಂದ ಕಾನೂನು ಹೋರಾಟ ಮುಂದುವರೆಸುತ್ತೇನೆ’ ಎಂದರು.

“ನಾನು ಯಾವುದೇ ತಪ್ಪು ಮಾಡದಿದ್ದರೂ ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ನಾನು ಎಲ್ಲಿಗೂ ಓಡಿ ಹೋಗುವುದಿಲ್ಲ. ಎಲ್ಲವನ್ನೂ ಧೈರ್ಯವಾಗಿ ಎದುರಿಸುತ್ತೇನೆ. ರಾಜ್ಯದಲ್ಲಿ ಆಪರೇಷನ್‌ ಕಮಲದಲ್ಲಿ ಕೋಟ್ಯಂತರ ರೂ. ವ್ಯವಹಾರ ನಡೆದಿದೆ. ಕೋಲಾರ ಶಾಸಕ ಶ್ರೀನಿವಾಸಗೌಡ ಬಹಿರಂಗವಾಗಿಯೇ ತಮಗೆ ಹಣದ ಆಮಿಷ ಒಡ್ಡಲಾಗಿದೆ ಎಂದು ಹೇಳಿದ್ದರು. ಆಪರೇಷನ್‌ ಕಮಲಕ್ಕೆ ಆಮಿಷ ಒಡ್ಡಿರುವ ಕುರಿತು ರಾಯಚೂರಿನಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಈ ಬಗ್ಗೆ ಇಡಿ ಯಾರಿಗೂ ನೋಟಿಸ್‌ ನೀಡಿಲ್ಲ. ಸಾಕ್ಷಿ ಪುರಾವೆಗಳಿದ್ದರೂ ಇಡಿ ಅಧಿಕಾರಿಗಳು ಯಾಕೆ ಸುಮ್ಮನಿದ್ದಾರೆ? ಈ ದೇಶದಲ್ಲಿ ಒಬ್ಬರಿಗೊಂದು ನ್ಯಾಯ ಇನ್ನೊಬ್ಬರಿಗೊಂದು ನ್ಯಾಯ ಎನ್ನುವಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ದ್ವೇಷ ರಾಜಕಾರಣದ ವಿರುದ್ಧ ಪ್ರತಿಭಟನೆ: ಮುಖ್ಯಮಂತ್ರಿ ಯಡಿಯೂರಪ್ಪಅವರು ವಿಧಾನಸಭೆಯಲ್ಲಿ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿ, ಈಗ ಪ್ರತಿಪಕ್ಷಗಳ ಶಾಸಕರ ಕ್ಷೇತ್ರಗಳಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ತಡೆ ಹಿಡಿದ್ದಾರೆ. ಅಧಿಕಾರಕ್ಕೆ ಬಂದ ದಿನದಿಂದಲೇ ದ್ವೇಷ ಸಾಧಿಸಲಾರಂಭಿಸಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌ ದೂರಿದರು. ಮೈತ್ರಿ ಸರ್ಕಾರದಲ್ಲಿ ಮಂಜೂರಾಗಿದ್ದ ಕನಕಪುರ ಮೆಡಿಕಲ್ ಕಾಲೇಜನ್ನು ಮುಖ್ಯಮಂತ್ರಿ ರದ್ದು ಮಾಡಿದ್ದಾರೆ. ತಮ್ಮ ಏಕ ವ್ಯಕ್ತಿ ಸಂಪುಟದಲ್ಲಿ ಕನಕಪುರ ಮೆಡಿಕಲ್‌ ಕಾಲೇಜನ್ನು ರದ್ದು ಪಡಿಸಿ, ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಮಾಡಿ ಆದೇಶ ಹೊರಡಿಸಿದ್ದಾರೆ. ಶನಿವಾರದೊಳಗೆ ಸ್ಥಳಾಂತರ ಆದೇಶವನ್ನು ರದ್ದು ಪಡಿಸದಿದ್ದರೆ, ಸೋಮವಾರದಿಂದ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಘೋಷಣೆ ಕೂಗಿದ ಕಾರ್ಯಕರ್ತರು: ಶುಕ್ರವಾರ ಬೆಳಗ್ಗೆಯೇ ಯುವ ಕಾಂಗ್ರೆಸ್‌ ಹಾಗೂ ಎನ್‌ಎಸ್‌ಯುಐ ಕಾರ್ಯಕರ್ತರು ಡಿಕೆಶಿ ನಿವಾಸ ಬಳಿ ಆಗಮಿಸಿ, ಅವರ ಪರ ಘೋಷಣೆಗಳನ್ನು ಕೂಗತೊಡಗಿದರು. ಇದಕ್ಕೂ ಮುನ್ನ ವರ್ತೂರು ಪ್ರಕಾಶ್‌ ಹಾಗೂ ಎಚ್‌.ಸಿ.ಬಾಲಕೃಷ್ಣ, ಶಿವಕುಮಾರ್‌ ಅವರನ್ನು ಭೇಟಿ ಮಾಡಿದರು. ಈ ವೇಳೆ ಇನ್ನಿತರೆ ಯಾವುದೇ ನಾಯಕರು ಡಿಕೆಶಿ ನಿವಾಸದ ಬಳಿ ಬಂದಿರಲಿಲ್ಲ.

“ಐಟಿ ದಾಳಿಯಾದಾಗಲೂ ಯಾವ ರಾಜ್ಯ ನಾಯಕರೂ ಬಂದಿರಲಿಲ್ಲ. ನಾನು ಒಂದು ಸಿದ್ಧಾಂತವನ್ನು ಒಪ್ಪಿಕೊಂಡಿದ್ದೇನೆ. ಅದಕ್ಕಾಗಿ ಹೋರಾಟ ಮಾಡುತ್ತೇನೆ’ ಎಂದು ಪರೋಕ್ಷವಾಗಿ ರಾಜ್ಯ ನಾಯಕರ ವಿರುದ್ಧ ಡಿಕೆಶಿ ಅಸಮಾಧಾನ ಹೊರ ಹಾಕಿದರು. ಟಾಟಾ ಮಾಡಿದ ಪತ್ನಿ, ಮಗಳು: ಪತ್ರಿಕಾಗೋಷ್ಠಿ ಮುಗಿಸಿ ಡಿಕೆಶಿ, ದೆಹಲಿಗೆ ತೆರಳಲು ಕಾರು ಹತ್ತುವ ಮೊದಲು ಮೊದಲನೇ ಮಹಡಿಯ ಟೆರೇಸ್‌ನಲ್ಲಿ ಪತ್ನಿ ಹಾಗೂ ಮಗಳು ಅವರತ್ತ ಕೈ ಬೀಸಿ ಟಾಟಾ ಮಾಡಿದರು. ಶಿವಕುಮಾರ್‌ ಕೂಡ “ಹೋಗಿ ಬರುತ್ತೇನೆ’ ಎನ್ನುವ ರೀತಿಯಲ್ಲಿ ಕೈ ಬೀಸಿ ಹೊರಟರು.

ತಪ್ಪು ಮಾಡದಿದ್ದರೆ ಹೆದರೋದೇಕೆ?
ವಿಜಯಪುರ: ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಉಪ್ಪು ತಿಂದವ ನೀರು ಕುಡಿಯಲೇ ಬೇಕು. ಅಷ್ಟಕ್ಕೂ ತಪ್ಪು ಮಾಡಿಲ್ಲ ಎಂದಾದರೆ ಇಡಿ ನೋಟಿಸ್‌ಗೆ ಡಿ.ಕೆ.ಶಿವಕುಮಾರ ಹೆದರುವುದು ಏಕೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಪ್ರಶ್ನಿಸಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜಕೀಯ ಬೇರೆ, ಆರ್ಥಿಕ ವ್ಯವಹಾರ ಬೇರೆ. ಇಡಿ ಹಾಗೂ ಕೇಂದ್ರ ಸರ್ಕಾರ ನನ್ನ ರಕ್ತ ಹೀರಿದೆ, ದೇಹ ಮಾತ್ರ ಉಳಿದಿದೆ ಎಂಬ ಡಿಕೆಶಿ ಆರೋಪ ಸರಿಯಲ್ಲ. ಕಾನೂನು ಎಲ್ಲರಿಗೂ ಒಂದೆ. ತಪ್ಪು ಮಾಡಿರದಿದ್ದರೆ ಹೆದರುವ ಅಗತ್ಯ ಇಲ್ಲ.

ಕಾಂಗ್ರೆಸ್‌ನ ಹಲವು ನಾಯಕರು ಆರ್ಥಿಕ ಅಪರಾಧ ಕೃತ್ಯದಲ್ಲಿ ಜೈಲಿಗೆ ಹೋಗಿದ್ದಾರೆ. ಕೆಲವರು ಬೇಲ್‌ ಪಡೆದು ಹೊರ ಬಂದಿದ್ದಾರೆ. ಕಾನೂನು ತನ್ನ ಕೆಲಸ ಮಾಡುತ್ತದೆ ಎಂದರು. ಮೈತ್ರಿ ಸರ್ಕಾರ ಪತನದ ವೇಳೆ ಡಿ.ಕೆ.ಶಿವಕುಮಾರ ಅವರು ಬಿಜೆಪಿ ಸರ್ಕಾರದಲ್ಲಿ ನಿಮಗೆ ಉಪ ಮುಖ್ಯಮಂತ್ರಿ ಸ್ಥಾನ ಸಿಗುವುದಿಲ್ಲ ಎಂದು ಗೇಲಿ ಮಾಡಿದ್ದರು. ಆದರೆ, ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಸಚಿವ ಸ್ಥಾನ ದೊರೆಯದಿದ್ದರೂ ನಾನು ಬಿಜೆಪಿ ತೊರೆಯಲ್ಲ ಎಂದರು.

ಉಪ್ಪು ತಿಂದವರು ನೀರು ಕುಡಿಯಲೇ ಬೇಕು
ಹುಬ್ಬಳ್ಳಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ ಹಿಂದೆ ಹೇಗಿದ್ದರು, ಇಂದು ಯಾವ ಸ್ಥಿತಿಯಲ್ಲಿದ್ದಾರೆ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಜಾರಿ ನಿರ್ದೇಶನಾಲಯದ ತನಿಖೆಯನ್ನು ರಾಜಕೀಯಕರಣಗೊಳಿಸುವ ಶಿವಕುಮಾರ ಅವರ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಗುಜರಾತ್‌ನ ಕಾಂಗ್ರೆಸ್‌ ಶಾಸಕರಿಗೆ ಆತಿಥ್ಯ ನೀಡಿದ್ದಕ್ಕಾಗಿ ಕೇಂದ್ರ ಸರ್ಕಾರ ನನ್ನ ಮೇಲೆ ಜಾರಿ ನಿರ್ದೇಶನಾಲಯವನ್ನು ಛೂ ಬಿಟ್ಟಿದೆ ಎನ್ನುವ ಡಿ.ಕೆ.ಶಿವಕುಮಾರ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿಲ್ಲ. ಅವುಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದರು.

ಡಿ.ಕೆ.ಶಿವಕುಮಾರ ಹಿನ್ನೆಲೆ ಏನು, ಹಿಂದೆ ಯಾವ ಸ್ಥಿತಿಯಲ್ಲಿದ್ದರು, ಇಂದಿನ ಸ್ಥಿತಿ ಹೇಗಿದೆ ಎಂಬುದು ಜನರಿಗೆ ಗೊತ್ತಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಆಸ್ತಿ, ಹಣ ಪತ್ತೆಯಾಗಿದೆ. ಕೋಟ್ಯಂತರ ರೂ.ಚಲಾವಣೆ ಆಗಿರುವ ಕುರಿತು ಸೂಕ್ತ ದಾಖಲೆಗಳು ಜಾರಿ ನಿರ್ದೇಶನಾಲಯಕ್ಕೆ ದೊರಕಿರಬಹುದು. ಈ ಆಧಾರದ ಮೇಲೆ ತನಿಖೆ ನಡೆಸುತ್ತಿದೆ. ದೇಶದ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್‌ ಸರ್ಕಾರವಿದೆ. ಅಲ್ಲಿನ ಮಂತ್ರಿಗಳು, ಮಾಜಿ ಮಂತ್ರಿಗಳ ಮೇಲೆ ಯಾವುದಾದರೂ ತನಿಖೆ ನಡೆಯುತ್ತಿವೆಯೇ, ತಾವು ಮಾಡಿರುವ ತಪ್ಪನ್ನು ಮರೆಮಾಚುವ ಉದ್ದೇಶದಿಂದ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಮಾಜಿ ಸಚಿವ ಡಿ.ಕೆ.ಶಿವಕುಮಾರ ವಿರುದ್ಧ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿರುವುದು ರಾಜಕೀಯ ಪ್ರೇರಿತವಲ್ಲ. ಅದು ತನ್ನ ಕೆಲಸ ಮಾಡುತ್ತಿದೆ. ಇಡಿ ದಾಳಿಗೂ, ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ.
-ಲಕ್ಷ್ಮಣ ಸವದಿ, ಡಿಸಿಎಂ, ಸಾರಿಗೆ ಸಚಿವ

ಮಾಜಿ ಸಚಿವ ಡಿ.ಕೆ.ಶಿವಕುಮಾರ ಪ್ರಕರಣ ರಾಜಕೀಯ ಪ್ರೇರಿತವಲ್ಲ. ಇಡಿ ಮುಂದೆ ಹಾಜರಾಗಲು ಕೋರ್ಟ್‌ ಆದೇಶ ನೀಡಿದೆ. ಮುಂದಿನ ವಿಚಾರಣೆ ಕೋರ್ಟ್‌ ಆದೇಶದಂತೆ ನಡೆಯುವುದರಿಂದ ಇದು ರಾಜಕೀಯ ಪ್ರೇರಿತ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ.
-ಬಸವರಾಜ ಬೊಮ್ಮಾಯಿ, ಗೃಹ ಸಚಿವ

ಜಾರಿ ನಿರ್ದೇಶನಾಲಯ ಜಾರಿ ಮಾಡಿರುವ ಸಮನ್ಸ್‌ ರದ್ದು ಮಾಡುವಂತೆ ಡಿ.ಕೆ.ಶಿವಕುಮಾರ್‌ ಅವರು ಕಾನೂನು ಹೋರಾಟ ಮಾಡುತ್ತಿದ್ದಾರೆ. ಹೈಕೋರ್ಟ್‌ನಲ್ಲಿ ಅರ್ಜಿ ವಜಾ ಆಗಿರುವುದರಿಂದ ಸುಪ್ರೀಂಕೋರ್ಟ್‌ಗೆ ಹೋಗುತ್ತಾರೆ. ಇದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರನ್ನು ಬಂಧಿಸಿದಂತಹ ಕೇಸ್‌ನಂತೆ ಅಲ್ಲ. ಸಹಜ ನ್ಯಾಯ ಇರಬೇಕು. ಆದರೆ, ಈ ಪ್ರಕರಣವನ್ನು ನೋಡಿದರೆ ಅಧಿಕಾರ ದುರುಪಯೋಗ ಆಗುವಂತಹ ಕೆಲಸ ನಡೆಯುತ್ತಿದೆ ಎಂದು ಅನಿಸುತ್ತಿದೆ.
-ಸಿದ್ದರಾಮಯ್ಯ, ಮಾಜಿ ಸಿಎಂ

ಟಾಪ್ ನ್ಯೂಸ್

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?

1-bbbbb

Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?

ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

BJP: ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

1

Sullia: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.