ಅಧಿಕಾರಿಗಳ ಮಧ್ಯೆ ಸಮನ್ವಯವಿಲ್ಲದೆ ಅಭಿವೃದ್ಧಿ ಕುಂಠಿತ
ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಶಾಸಕಿ ರೂಪಕಲಾ ಬೇಸರ
Team Udayavani, Aug 31, 2019, 1:07 PM IST
ಕೆಜಿಎಫ್ ನಗರಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಶಾಸಕಿ ಎಂ.ರೂಪಕಲಾ ಮಾತನಾಡಿದರು.
ಕೆಜಿಎಫ್: ವಿವಿಧ ಇಲಾಖೆಗಳ ಅಧಿಕಾರಿಗಳ ನಡುವಿನ ಸಮನ್ವಯ ಕೊರತೆಯಿಂದ ಕೆಲಸಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ ಎಂದು ಶಾಸಕಿ ಎಂ.ರೂಪಕಲಾ ಅಸಮಾಧಾನ ವ್ಯಕ್ತಪಡಿಸಿದರು.
ನಗರಸಭೆ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ ಅವರು, 14ನೇ ಹಣಕಾಸು ಯೋಜನೆಯಲ್ಲಿ 20 ಹೊಸ ಬೋರ್‌ವೆಲ್ ಕೊರೆಯಿಸಲಾಗುವುದು. ನೀರು ಕಡಿಮೆಯಾಗಿರುವ 68 ಬೋರ್‌ವೆಲ್ಗಳನ್ನು ಮತ್ತಷ್ಟು ಆಳಕ್ಕೆ ಕೊರೆಯಲಾಗುವುದು ಎಂದು ಹೇಳಿದರು.
ಹತ್ತು ವರ್ಷಗಳಿಂದ ಅನೇಕ ಬೋರ್‌ವೆಲ್ಗಳನ್ನು ಕೊರೆಯಲಾಗಿದೆ. ಅವುಗಳೆಲ್ಲವೂ ಎಲ್ಲಿ ಹೋದವು. ಅದಕ್ಕೆ ಅಳವಡಿಸಿದ್ದ ಯಂತ್ರಗಳು ಎಲ್ಲಿವೆ. ಹತ್ತು ವರ್ಷಗಳಿಂದ ನೀರಿನ ಸಮಸ್ಯೆ ಬಗೆಹರಿಸಲು ಯಾಕೆ ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸಮಸ್ಯೆ ನೀಗುತ್ತೆ: ನಗರದ ಹೊರವಲಯದ ನಾಗಾವರಂ, ಮಸ್ಕಿನ್, ಕೃಷ್ಣಾವರಂ ಪ್ರದೇಶಗಳಲ್ಲಿ ನೀರಿನ ಲಭ್ಯತೆ ಇರುವುದರಿಂದ ಅಲ್ಲಿ ಹೆಚ್ಚಿನ ಬೋರ್‌ವೆಲ್ ಕೊರೆಯಲಾಗುವುದು. ಅಲ್ಲಿಂದ ಹತ್ತಿರದ ಬಡಾವಣೆಗಳಿಗೆ ನೀರು ಪೂರೈಕೆ ಮಾಡಿದರೆ ಸಮಸ್ಯೆ ನೀಗುತ್ತದೆ ಎಂದು ಹೇಳಿದರು.
ಕಸ ಸ್ವಚ್ಛ ಮಾಡಿ: ಈಚೆಗೆ ನಡೆದ ಜನಸ್ಪಂದನ ಕಾರ್ಯಕ್ರಮ, ಪಾದಯಾತ್ರೆ ವೇಳೆ ಸಾಕಷ್ಟು ಜನ ನೀರಿನ ಸಮಸ್ಯೆ ಮತ್ತು ಚರಂಡಿ ಸ್ವಚ್ಛತೆ ಬಗ್ಗೆ ದೂರು ನೀಡಿದ್ದರು. ಹಲವು ದಿನಗಳಿಂದ ಕಸ, ಹೂಳು ತುಂಬಿಕೊಂಡಿರುವ ಚರಂಡಿಗಳನ್ನು ಕೂಡಲೇ ಸ್ವಚ್ಛಗೊಳಿಸಬೇಕು. ನಗರದ ಜನತೆಗೆ ಎಲ್ಲೆಂದರಲ್ಲಿ ಕಸ ಹಾಕುವುದು ತಡೆಯಬೇಕು. ಈ ಬಗ್ಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ಲೈಟ್ ಅಳವಡಿಸಿ: ಸಾರ್ವಜನಿಕರು ಓಡಾಡುವ ಜಾಗದಲ್ಲಿ ಕಸ ಹಾಕದಂತೆ ಬೋರ್ಡ್‌ಗಳನ್ನು ಅಳವಡಿಸಬೇಕು. ನಗರದಲ್ಲಿ ಬೀದಿ ದೀಪಗಳ ಸಮಸ್ಯೆ ಬಗ್ಗೆ ಸಾಕಷ್ಟು ದೂರುಗಳಿವೆ. ಗುತ್ತಿಗೆದಾರ ಲೈಟ್ ಅಳವಡಿಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಶಾಸಕಿ ಅಸಮಾಧಾನ ವ್ಯಕ್ತಪಡಿಸಿದರು.
ರಾಜಕೀಯ ಮಾಡಬೇಡಿ: ನಗರೋತ್ಥಾನ ಯೋಜನೆಯಲ್ಲಿ ಕಾಲೋನಿಗಳಿಂದ ರೈಲು ನಿಲ್ದಾಣಕ್ಕೆ ಹೋಗಿ ಬರುವ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಬೇಕು. ಈ ಕೆಲಸ ತುರ್ತಾಗಿ ಆಗಬೇಕು. ಹಲವು ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಲಭ್ಯತೆ ಇದ್ದರೂ, ನೀರುಗಂಟಿಗಳು ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದರು.
ಹೊಸದಾಗಿ ನೇಮಕ: ಸ್ವರ್ಣನಗರ, ಊರಿಗಾಂ, ಆಂಡರಸನ್‌ಪೇಟೆಯ 34ನೇ ವಾರ್ಡ್, ರಾಜೇಶ್ ಕ್ಯಾಂಪ್, ವಾರ್ಡ್‌ಗಳಾದ 16, 17 ಮತ್ತು 7 ರಲ್ಲಿ ನೀರು ಅಸಮರ್ಪಕವಾಗಿ ಪೂರೈಕೆ ಆಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಪಕ್ಷಪಾತದಿಂದ ಕೆಲಸ ಮಾಡುವ ನೀರುಗಂಟಿಗಳನ್ನು ಕೆಲಸದಲ್ಲಿ ಇಟ್ಟುಕೊಳ್ಳುವುದಿಲ್ಲ. ಹೊಸದಾಗಿ 17 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ರೂಪಕಲಾ ತಿಳಿಸಿದರು.
ನಗರದಲ್ಲಿ ಶೌಚಾಲಯ ನಿರ್ವಹಣೆಗೆ ಸುಲಭಶೌಚಾಲಯ ಸ್ವಯಂಸೇವಾ ಸಂಸ್ಥೆಯೊಡನೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಶಾಸಕಿ ತಿಳಿಸಿದರು. ತಾಪಂ ಇಒ ವೆಂಕಟೇಶಪ್ಪ, ಎಇಇ ಶ್ರೀಧರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.