ಗಣಪನ ಸ್ವಾಗತಕ್ಕೆ ದೇವನಗರಿ ಸಜ್ಜು
ಕೊಲ್ಕತ್ತಾದ ಕಲಾವಿದರಿಂದ ತಯಾರಿ•ಧರ್ಮಸ್ಥಳ ದೇಗುಲ ಮಾದರಿ ಪ್ರಮುಖ ಆಕರ್ಷಣೆ
Team Udayavani, Sep 1, 2019, 10:20 AM IST
ದಾವಣಗೆರೆ: ಹೈಸ್ಕೂಲ್ ಮೈದಾನದಲ್ಲಿ ನಿರ್ಮಿಸುತ್ತಿರುವ ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನದ ಮಾದರಿ.
ರಾ.ರವಿಬಾಬು
ದಾವಣಗೆರೆ: ಸೋಮವಾರದಿಂದ ಪ್ರಾರಂಭವಾಗುವ ಗಣೇಶೋತ್ಸವಕ್ಕೆ ದೇವನಗರಿಯ ವಿವಿಧೆಡೆ ಭರ್ಜರಿ ಸಿದ್ಧತೆ ನಡೆದಿದೆ.
ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಕೆಲವಾರು ವರ್ಷಗಳ ಹಿಂದೆ ಸಾರ್ವಜನಿಕ ಗಣೇಶೋತ್ಸವದ ಸಂಭ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳ ನೋಡುವುದೇ ಹಬ್ಬ.
ಈಚೆಗೆ ಅಂತಹ ವೈಭವೋಪೇತ ಇಲ್ಲದೇ ಹೋದರೂ ಅನೇಕ ಸಂಘ-ಸಂಸ್ಥೆ ಪ್ರತಿಷ್ಠಾಪಿಸುವ ಗಣೇಶ, ವೇದಿಕೆ, ಸಭಾಂಗಣ, ಸಾಂಸ್ಕೃತಿಕ ಕಾರ್ಯಕ್ರಮ ಮಾತ್ರವಲ್ಲ ವಿಸರ್ಜನಾ ಮೆರವಣಿಗೆ ಹಬ್ಬದ ಸೊಬಗಿನ ಪ್ರತೀಕ. ದಾವಣಗೆರೆಯಲ್ಲಿನ ಹಲವಾರು ಸಂಘ ಸಂಸ್ಥೆಗಳು ನಡೆಸಿಕೊಂಡು ಬರುತ್ತಿರುವ ಗಣೇಶೋತ್ಸವಕ್ಕೆ ಅರ್ಧ ಶತಮಾನದ ಇತಿಹಾಸವೂ ಇದೆ.
20, 25 ವರ್ಷಗಳ ನಂತರ ಗಣೇಶೋತ್ಸವದ ಸಂಭ್ರಮ, ವೈಭವ ಕುಂದಿಲ್ಲ. ಬದಲಿಗೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಗಣೇಶ ಮೂರ್ತಿ, ವೇದಿಕೆ, ಸಭಾಂಗಣ… ಎಲ್ಲದರಲ್ಲೂ ನವ ನಾವಿನ್ಯತೆ ಕಂಡು ಬರುತ್ತದೆ. ಕಳೆದ ವರ್ಷ ಒಡಿಶಾದ ಪ್ರಸಿದ್ಧ ಶ್ರೀ ಕೃಷ್ಣ ದೇವಾಲಯ ಪ್ರತಿರೂಪದೊಂದಿಗೆ ಭಾರೀ ಗಮನ ಸೆಳೆದಿದ್ದ ಹಿಂದೂ ಮಹಾಸಭಾದಿಂದ ಈ ವರ್ಷ ಅಸಂಖ್ಯಾತ ಭಕ್ತಾದಿಗಳ ಆರಾಧ್ಯ ದೈವ ಶ್ರೀ ಮಂಜುನಾಥ ಸ್ವಾಮಿಯ ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಳದ ಮಾದರಿ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಸಿದ್ಧತೆ ಅಂತಿಮ ಘಟ್ಟದಲ್ಲಿದೆ.
ಕಳೆದ 40 ದಿನಗಳಿಂದ ಕಲ್ಕತ್ತಾದ ಗೋಪಿವಾಲ್ ನೇತೃತ್ವದ 30 ಕಲಾವಿದರು ದೇವಳದ ಮಾದರಿ ಸಿದ್ಧತೆಯಲ್ಲಿ ತೊಡಗಿದ್ದಾರೆ. 130+55 ಅಡಿ ಸುತ್ತಳತೆಯಲ್ಲಿ ನಿರ್ಮಾಣವಾಗುತ್ತಿರುವ ದೇವಳದ ಮಾದರಿಗೆ 3 ಸಾವಿರದಷ್ಟು ವಿವಿಧ ಮಾದರಿ ಸೀರೆಗಳು, 2.5 ಲಕ್ಷ ಮೊತ್ತದ ಬಟ್ಟೆ, 45ಸಾವಿರ ಅಡಿಯಷ್ಟು ರೀಪರ್, 150 ಕೆಜಿ ಮೊಳೆಗಳು ಬಳಸಲಾಗಿದೆ.
20 ಅಡಿ ಸುತ್ತಳತೆಯ ವೇದಿಕೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಶ್ರೀ ಮಂಜುನಾಥ ಸ್ವಾಮಿ ರೂಪಕದ ಪ್ರದರ್ಶನದ ಮೂಲಕ ಗಣೇಶಮೂರ್ತಿ ದರ್ಶನದ ವ್ಯವಸ್ಥೆ ಮಾಡಲಾಗುತ್ತಿದೆ. ಶನಿವಾರ ಮತ್ತು ಭಾನುವಾರ ಹೊರತುಪಡಿಸಿ ಇತರೆ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. 20 ದಿನಗಳ ನಂತರ ಗಣೇಶಮೂರ್ತಿ ವಿಸರ್ಜನೆ ನಡೆಯಲಿದೆ. ಕಳೆದ ಬಾರಿ ಇದ್ದಂತಹ ಪ್ರವೇಶ ಶುಲ್ಕ ಈ ಬಾರಿ ಇಲ್ಲ ಎನ್ನುತ್ತವೆ ಸಮಿತಿ ಮೂಲಗಳು.
ಪ್ರತಿ ವರ್ಷ ಒಂದಲ್ಲ ಒಂದು ಅತ್ಯಾಕರ್ಷಕ ಗಣೇಶಮೂರ್ತಿ ಪ್ರತಿಷ್ಠಾಪನೆಯ ಮೂಲಕವೇ ದಾವಣಗೆರೆ, ರಾಜ್ಯದ ಗಮನ ಸೆಳೆಯುವ ಹಿಂದೂ ಯುವ ಶಕ್ತಿ ಸಮಿತಿಯಿಂದ ಈ ವರ್ಷ 5,001 ನವಿಲುಗರಿಗಳಿಂದ ಅಲಂಕೃತಗೊಂಡಿರುವ 13 ಅಡಿ ಎತ್ತರದ ಗಣೇಶನ ದರ್ಶನಕ್ಕೆ ಸಿದ್ಧತೆ ನಡೆದಿದೆ. ಕಲ್ಕತ್ತಾ ಮೂಲದ ಸಂಜಿತ್ ಗಣೇಶನ ಮೂರ್ತಿ ಸಿದ್ಧಪಡಿಸಿದ್ದು, ಹಿಂದೂ ಯುವ ಶಕ್ತಿ ಸಮಿತಿ ಕಾರ್ಯಕರ್ತರು ನವಿಲುಗರಿ ಜೋಡಣೆ ಇತರೆ ಅಲಂಕಾರ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ತೊಗಟವೀರ ಕಲ್ಯಾಣ ಮಂಟಪದಲ್ಲಿ ನವಿಲುಗರಿ ಅಲಂಕೃತ ಗಣೇಶಮೂರ್ತಿ ದರ್ಶನಕ್ಕೆ ಅಂತಿಮ ಹಂತದ ಕೆಲಸ ಜೋರಾಗಿಯೇ ನಡೆಯುತ್ತಿವೆ.
ಗಣೇಶಮೂರ್ತಿಯ ವಿರ್ಸಜನಾ ಮೆರವಣಿಗೆಯ ಮೂಲಕವೇ ಭಾರೀ ಗಮನ ಸೆಳೆದಿರುವ ವಿನೋಬ ನಗರದ 2ನೇ ಮುಖ್ಯ ರಸ್ತೆಯಲ್ಲಿ ಶ್ರೀ ವೀರ ವರಸಿದ್ಧಿ ವಿನಾಯಕ ಸಮಿತಿ ಅಧ್ಯಕ್ಷ ಟಿ.ಎಚ್. ಗುರುನಾಥ್‌ಬಾಬು ಇತರರ ನೇತೃತ್ವದಲ್ಲಿ 27ನೇ ವರ್ಷದ ಗಣೇಶೋತ್ಸವಕ್ಕೆ ವಾರದಿಂದಲೇ ಭಾರೀ ಸಿದ್ಧತೆ ನಡೆದಿದೆ. ನವಿಲು ಮೇಲೆ ಕುಳಿತ ಪರಮೇಶ್ವರನ ರೂಪಧಾರಿಯಾಗಿ ಗಣೇಶನ ಮೂರ್ತಿ ಪ್ರತಿಷ್ಠಾಪನೆಗೆ ಸಿದ್ಧತೆ ನಡೆದಿದೆ.
ಪಿ.ಜೆ. ಬಡಾವಣೆಯ 3ನೇ ಮುಖ್ಯ ರಸ್ತೆ 5ನೇ ಕ್ರಾಸ್‌ನಲ್ಲಿ ಪ್ರಿನ್ಸ್ ವಿನಾಯಕ ಗ್ರೂಪ್‌ನಿಂದ ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲಿ ನಡೆದ ಮಿಂಚಿನ ಕಾರ್ಯಾಚರಣೆಯ ಕುರಿತ ಸಾರುವ ಸಂದೇಶದ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಸಿದ್ಧತೆ ನಡೆದಿದೆ. ನಿಖೀಲ್ ಶೆಟ್ಟಿ ಮತ್ತವರ ಗೆಳೆಯರ ತಂಡ ಅಹರ್ನಿಶಿಯಾಗಿ ಕೆಲಸ ಮಾಡುತ್ತಿದೆ.
ಗಣೇಶನ ಮೂರ್ತಿಯ ಜತೆಗೆ ಒಂದು ಸಂದೇಶ ನೀಡಬೇಕು ಎಂಬ ಉದ್ದೇಶದಿಂದ ವಿಶೇಷ ಒತ್ತು ನೀಡಲಾಗುತ್ತಿದೆ ಎನ್ನುತ್ತಾರೆ ನಿಖೀಲ್ಶೆಟ್ಟಿ. ದಾವಣಗೆರೆ ಚಾಮರಾಜಪೇಟೆಯ ಶ್ರೀ ಕೋದಂಡರಾಮ ದೇವಸ್ಥಾನ, ಕನ್ನಿಕಾಪರಮೇಶ್ವರಿ ದೇವಸ್ಥಾನ, ಹೊಂಡದ ವೃತ್ತ, ನಿಟುವಳ್ಳಿ, ಕೆಟಿಜೆ ನಗರ, ವಿದ್ಯಾನಗರ, ಸಿದ್ದವೀರಪ್ಪ ಬಡಾವಣೆ, ಬೇತೂರು ರಸ್ತೆ… ವಿವಿಧೆಡೆ ಸಾರ್ವಜನಿಕ ಗಣೇಶೋತ್ಸವಕ್ಕೆ ಸಿದ್ಧತೆ ನಡೆದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.