ಕಾಯಕ ಗುರುವಿಗೆ ನಮೋ ನಮಃ
Team Udayavani, Sep 5, 2019, 5:47 AM IST
ಇಂದು ಶಿಕ್ಷಕರ ದಿನಾಚರಣೆ. ನಮ್ಮ ಜೀವನವೆಂಬ ರಥವನ್ನು ಮುನ್ನಡೆಸಲು ಪಾಠ ಕಲಿಸಿದ ಶಿಕ್ಷಕರಷ್ಟೇ ಮಹತ್ತರವಾದ ಸ್ಥಾನವನ್ನು ಕಾಯಕ ಕಲಿಸಿದ ಗುರು ಕೂಡ ಹೊಂದಿದ್ದಾರೆ. ಅಂತಹ ಗುರುಗಳ ಬಗ್ಗೆ ಆಯ್ದ ಕೆಲವರು ನೆನಪಿಸಿಕೊಂಡದ್ದು ಹೀಗೆ…
ಬಸ್ ಮಾಲಕರೇ ನನ್ನ ಗುರು
ಮಂಗಳಾದೇವಿ – ಸ್ಟೇಟ್ಬ್ಯಾಂಕ್ ಮಧ್ಯೆ ಸಂಚರಿಸುವ 27 ಸಂಖ್ಯೆಯ ಗಣೇಶ್‌ಪ್ರಸಾದ್ ಬಸ್‌ನ ನಿರ್ವಾಹಕ ಭಗವಾನ್ ದಾಸ್ ಪೂಜಾರಿ ಅವರಿಗೆ ಬಸ್ ಮಾಲಕ ದಿ| ನಾರಾಯಣ ಆಳ್ವರೇ ಗುರು!
ಭಗವಾನ್ 40 ವರ್ಷ ಗಳಿಂದ ಒಂದೇ ಬಸ್‌ನಲ್ಲಿ ನಿರ್ವಾ ಹಕರಾಗಿದ್ದಾರೆ. ಅವರು ಮಾಲಕರ ಗರಡಿಯಲ್ಲೇ ಬೆಳೆದವರು. ಆಳ್ವರು ಮೊದಲ ಬಸ್ ಖರೀದಿಸಿದಾಗ ನೆರೆಮನೆಯ ಭಗವಾನ್ ಅವ ರನ್ನು ನಿರ್ವಾಹಕನಾಗುವಂತೆ ಕೇಳಿಕೊಂ ಡರಂತೆ. ಆಳ್ವರ ಮೇಲೆ ಅಪಾರ ಗೌರವ ಹೊಂದಿದ್ದ ಭಗವಾನ್, ಕೂಡಲೇ ಒಪ್ಪಿಕೊಂಡರು. ಅಲ್ಲಿಂದ ಆರಂಭವಾದ ಅವರ ವೃತ್ತಿ ಈಗಲೂ ಮುಂದುವರಿದಿದೆ.
ತನ್ನ ಬಳಿ ಕೆಲಸಕ್ಕೆ ಸೇರಿದ ಭಗವಾನ್ ಅವರಿಗೆ ಪರವಾನಿಗೆ ಮಾಡಿಸಿಕೊಟ್ಟದ್ದೂ ಆಳ್ವರೇ. ದಿನನಿತ್ಯ ಸಂಚರಿಸುವ ಪ್ರಯಾಣಿಕ ರೊಂದಿಗೆ ನಾನು ಸ್ನೇಹಪರತೆ, ಪ್ರಾಮಾಣಿಕತೆಯಿಂದ ವ್ಯವಹರಿ ಸುವುದು ದಣಿಗೆ ಬಹಳ ಅಚ್ಚುಮೆಚ್ಚಾಗಿತ್ತು.
ನಿರ್ವಾಹಕನಾಗಿ ಹೇಗಿರಬೇಕು, ಪ್ರಯಾಣಿಕರೊಂದಿಗೆ ಹೇಗೆ ಪ್ರಾಮಾಣಿಕ ಒಡನಾಟ ಇರಿಸಿಕೊಳ್ಳ ಬೇಕೆಂದು ಕಲಿಸಿದ ಅವರೇ ನನ್ನ ಬದುಕಿನ ಗುರು’ ಎಂದು ಸ್ಮರಿಸಿ ಕೊಳ್ಳುತ್ತಾರೆ.
ಇದೇ ಬಸ್‌ನಲ್ಲಿ ದುಡಿದು ಗಳಿಸಿದ ಹಣದಿಂದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿದ್ದೇನೆ. ಪುತ್ರಿ ಉಪನ್ಯಾಸಕಿಯಾದರೆ, ಪುತ್ರ ಸಿವಿಲ್ ಎಂಜಿನಿಯರಿಂಗ್ ಕಲಿಯುತ್ತಿದ್ದಾನೆ. ಅದಕ್ಕೆ ಅವರೇ ಕಾರಣ. ಪ್ರಸ್ತುತ ದಿ| ನಾರಾಯಣ ಆಳ್ವ ಅವರ ಪುತ್ರ ದಿಲ್ರಾಜ್ ಆಳ್ವ ಅವರು ಮಾಲಕರು ಎನ್ನುತ್ತಾರೆ ಭಗವಾನ್.
ಬಂಟ್ವಾಳ ಪ್ರದೇಶದ ಹಿರಿಯ ಚಾಲಕರಲ್ಲಿ ಒಬ್ಬರು ಬಿ.ಎಂ. ಪ್ರಭಾಕರ ದೈವ ಗುಡ್ಡೆ. ಅವರಿಗೆ ವಾಹನ ಚಲಾಯಿಸುವುದನ್ನು ಕಲಿಸಿದವರು ಇಸುಬು ಕೈಕಂಬ. ಅವರೇ ತನ್ನ ಗುರು ಎಂದು ಧನ್ಯತೆಯಿಂದ ಸ್ಮರಿಸಿಕೊಳ್ಳುತ್ತಾರೆ ಪ್ರಭಾಕರ.
ಕೆಲವು ದಶಕಗಳ ಹಿಂದಿನ ಮಾತು. ಬಾಡಿಗೆಗೆ ಹೋಗುವ ಕಾರುಗಳನ್ನು ತೊಳೆಯುವ ಕ್ಲೀನರ್ ಆಗಿದ್ದೆ. ಆಗ ನನ್ನನ್ನು ಕರೆದು ಡ್ರೈವಿಂಗ್ ಕಲಿಸಿದವರು ಇಸುಬು ಕೈಕಂಬ. ಅಂದಿನ ದಿನಮಾನ ಇಂದಿನ ಹಾಗಲ್ಲ. ಬಾಡಿಗೆ ಸರ್ವೀಸ್ ಕಾರುಗಳ ಸಂಚಾರವೇ ಹೆಚ್ಚು. ಬಾಡಿಗೆ ಇದ್ದಾಗ ಅಲ್ಲಿಗೆ ನನ್ನನ್ನೂ ಕರೆದೊಯ್ದು, ಗಿರಾಕಿಗಳನ್ನು ಇಳಿಸಿ ಹಿಂದಿರುಗುವಾಗ ನನಗೆ ಡ್ರೈವಿಂಗ್ ಕಲಿಸುತ್ತಿದ್ದರು.
ಆಗ ರಸ್ತೆಗಳು ಈಗಿನಂತಿರಲಿಲ್ಲ. ಆದರೂ ಇಸುಬು ಅವರು ತಾಳ್ಮೆ ಯಿಂದ ಈ ವೃತ್ತಿಯನ್ನು ಕಲಿಸಿದ್ದರು. ಅವರು ಕೇವಲ ಚಾಲನೆಯನ್ನು ಮಾತ್ರ ಕಲಿಸಲಿಲ್ಲ, ಪ್ರಯಾಣಿಕರನ್ನು ಹೇಗೆ ಗೌರವಿಸಬೇಕು ಎಂಬುದರ ಜತೆಗೆ ಅವರಿಂದ ಸುಲಿಗೆ ಮಾಡಬಾರದು ಎಂಬ ನೀತಿಯನ್ನೂ ಹೇಳಿಕೊಟ್ಟಿದ್ದರು. ‘ನಮ್ಮ ವಾಹನ ಹತ್ತಿದ ಮಂದಿ ಇಳಿಯುವ ತನಕ ಅವರ ಜವಾಬ್ದಾರಿ ನಮ್ಮದು’ ಇದು ಪ್ರಭಾಕರರಿಗೆ ಇಸುಬು ಹೇಳಿಕೊಟ್ಟ ಸ್ವರ್ಣವಾಕ್ಯವಂತೆ.
ಡ್ರೈವಿಂಗ್ ಮಾತ್ರ ಅಲ್ಲ, ರಾಷ್ಟ್ರೀಯತೆ ಕುರಿತೂ ಇಸುಬು ಹೇಳುತ್ತಿದ್ದರು. ಅವರ ಧರ್ಮ ಬೇರೆಯಾದರೂ ಎಂದೂ ಅದು ನಮ್ಮ ಮಾತು, ಸ್ನೇಹ, ಗುರು-ಶಿಷ್ಯ ಸಂಬಂಧದ ನಡುವೆ ಬಂದುದಿಲ್ಲ. ಅವರ ಆದರ್ಶವನ್ನೇ ಎದುರು ಇರಿಸಿಕೊಂಡು ನಾನು ಚಾಲಕನಾಗಿ ಬಾಳಿದ್ದೇನೆ ಎನ್ನುತ್ತಾರೆ ಪ್ರಭಾಕರ.
1974ರಿಂದ ಚಾಲಕರಾಗಿರುವ ಪ್ರಭಾಕರ ಈಗ ಕಣ್ಣಿಗೆ ಶಸ್ತ್ರಚಿಕಿತ್ಸೆಯಾಗಿ ಸ್ಟಿಯರಿಂಗ್ ವೀಲ್ ಹಿಡಿಯುತ್ತಿಲ್ಲ.
ಸುಮಾರು 20 ವರ್ಷಗಳ ಹಿಂದೆ ವಾರಕ್ಕೆ 200 ರೂ. ಸಂಬಳಕ್ಕೆ ಮೆಕ್ಯಾನಿಕ್ ಆಗಿ ಕೆಲಸಕ್ಕೆ ಸೇರಿದ ಮರೋಳಿಯ ರಾಜೇಶ್ ಈಗ ಸ್ವಂತ ಶಾಪ್ ಇರಿಸಿಕೊಂಡು ಸಂತೃಪ್ತ ಔದ್ಯೋಗಿಕ – ಕುಟುಂಬ ಜೀವನವನ್ನು ಸಾಗುತ್ತಿದ್ದಾರೆ.
ಇದಕ್ಕೆ ಕಾರಣ ಅವರ ಮೊದಲ ವೃತ್ತಿಗುರು ಪ್ರವೀಣ್. ರಾಜೇಶ್ ಅವರು ಕಲಿತದ್ದು ಕೇವಲ ಏಳನೇ ತರಗತಿ. ವಿದ್ಯೆ ತಲೆಗೆ ಹತ್ತದಿದ್ದಾಗ ಮೆಕ್ಯಾನಿಕ್ ಉದ್ಯೋಗಕ್ಕಾಗಿ ಪ್ರವೀಣ್ ಬಳಿ ಸೇರಿದರು. ವೃತ್ತಿಗೆ ಸಂಬಂಧಿಸಿ ಅವರೇ ಮೊದಲ ಗುರು. ಟೂಲ್ಸ್, ಬೈಕ್ ರಿಪೇರಿ ಸೇರಿದಂತೆ ವೃತ್ತಿಗೆ ಸಂಬಂಧಿತ ಎಲ್ಲ ವಿಷಯಗಳನ್ನು ಕಲಿತದ್ದು ಅಲ್ಲಿಯೇ.
ಅಂದಹಾಗೆ, ಕೆಲಸಕ್ಕೆ ಸೇರಿದ ಮೊದಲಿಗೇನೇ ಪ್ರವೀಣ್ ಅವರು ರಾಜೇಶರ ಕೈಗೆ ಸ್ಪ್ಯಾನರ್ ಕೊಡಲಿಲ್ಲ. ವರ್ಕ್‌ಶಾಪ್ ನಿರ್ವಹಣೆ ಹೇಗೆ ಎಂಬುದನ್ನೇ ಮೊದಲು ಕಲಿಸಿದ್ದು. ಗುಡಿಸುವುದರಿಂದ ಹಿಡಿದು, ಟೂಲ್ಗಳನ್ನು ಒಪ್ಪ ಓರಣವಾಗಿ ಇರಿಸುವುದು ಹೇಗೆ ಎಂದೆಲ್ಲ ಹೇಳಿಕೊಟ್ಟರು. ಬಳಿಕ ನಿಧಾನವಾಗಿ ಒಂದೊಂದೇ ವಿಭಾಗಗಳನ್ನು ಕಲಿಸಿದರು. 1999ರ ಬಳಿಕ ರಾಜೇಶ್ ಮೂರ್‍ನಾಲ್ಕು ಗ್ಯಾರೇಜ್‌ಗಳಲ್ಲಿ ದುಡಿದು ಈಗ ವೆಲೆನ್ಸಿಯಾ ಬಳಿಯ ಗೋರಿಗುಡ್ಡೆಯಲ್ಲಿ ವಿಶ್ವಾಸ್ ಬೈಕ್ ಪಾೖಂಟ್ ಎಂಬ ಬೈಕ್ ಮೆಕ್ಯಾನಿಕ್ ಶಾಪ್ ನಡೆಸುತ್ತಿದ್ದಾರೆ.
‘ನಾನು ಇಂದು ಸ್ವಂತ ಉದ್ಯೋಗ ನಡೆಸಲು ನನ್ನ ಮೊದಲ ಗುರು ಪ್ರವೀಣ್ ಅವರೇ ಕಾರಣ. ಅವರ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ. ಅವರಿಗೆ ನನ್ನ ಧನ್ಯವಾದಗಳು ಸಲ್ಲಲೇಬೇಕು. ಬಾಳಿಗೆ ಬೆಳಕು ಕೊಟ್ಟರು’ ಎನ್ನುತ್ತಾರೆ ರಾಜೇಶ್.
ಹಿರಿಯ ಜವುಳಿ ವರ್ತಕರಾಗಿ, ‘ಬೇಬಿ ಪೊರ್ಬುಲು’ ಎಂದೇ ಮೂಡುಬಿದಿರೆಯಲ್ಲಿ ಚಿರಪರಿ ಚಿತರಾಗಿ, ಸದ್ಯ ಇತರ ಗೃಹೋ ಪಕರಣ ಮಾರಾಟದತ್ತ ಹೊರಳಿ ಕೊಂಡಿರುವ ಸಿಲ್ವೆಸ್ಟರ್ ಡಿ’ಕೊಸ್ತರೇ ನನ್ನ ಬದುಕಿನ ಗುರು ಎನ್ನುತ್ತಾರೆ ಮೇನಕಾ ಟೆಕ್ಸ್ ಟೈಲ್ಸ್ನ ಪ್ರವರ್ತಕ ನೆಲ್ಲಿಮಾರು ಸದಾಶಿವ ರಾವ್.
‘ನಿಟ್ಟೆಯ ತೀರಾ ಹಳ್ಳಿ ಪರಪ್ಪಾಡಿ ಯವನಾದ ನಾನು 1984ರಲ್ಲಿ ಎಸೆಸೆಲ್ಸಿ ಮುಗಿಸಿ, ಕಾಲೇಜು ಶಿಕ್ಷಣಕ್ಕಾಗಿ ಇಲ್ಲಿಗೆ ಬಂದು ಜವುಳಿ ವ್ಯವಹಾರದಲ್ಲಿ ತೊಡಗಿದ್ದ ಅಣ್ಣ ವಸಂತರ ಜತೆ ಇದ್ದೆ. ಆಗ ಪರಿಚಯವಾದವರು ಬೇಬಿ ಪೊರ್ಬುಲು. ಗ್ರಾಹಕರನ್ನು ಸ್ವಾಗತಿಸುವುದರಿಂದ ತೊಡಗಿ ವಸ್ತ್ರ ಅಳೆಯುವ, ವಸ್ತ್ರ ಕತ್ತರಿಸುವ ರೀತಿ, ಒಂದು ವಸ್ತ್ರಕ್ಕಾಗಿ ಬಂದ ವನಿಗೆ ಹಲವು ವಸ್ತ್ರಗಳನ್ನು ಖರೀದಿಸುವಂಥ ಮನಸ್ಸನ್ನು ಸಿದ್ಧಪಡಿಸುತ್ತಿದ್ದ ರೀತಿಯನ್ನೆಲ್ಲ ಅವರು ನನಗೆ ಪ್ರಾಮಾಣಿಕವಾಗಿ ಕಲಿಸಿಕೊಟ್ಟರು.
ಕೆಲವನ್ನು ಲಾಭರಹಿತವಾಗಿ ಯೂ ಕೆಲವನ್ನು ಅತಿ ಕಡಿಮೆ ಬೆಲೆಗೂ ಮಾರಿ ಜನಪ್ರಿಯರಾದದ್ದು ನನ್ನ ಮೇಲೂ ಪರಿಣಾಮ ಬೀರಿತ್ತು. ಎರಡರ ಬೆಲೆ ಸೇರಿಸಿ ಅತಿ ಕಡಿಮೆ ಲಾಭವಿಟ್ಟು ಒಂದಕ್ಕೊಂದು ಉಚಿತ ಕೊಡುವ ಬಗೆಯನ್ನು ಹೇಳಿಕೊಟ್ಟವರು ಅವರು. ‘ಬಂಧನ’ ‘ತೋಫಾ’ ಚಲನಚಿತ್ರಗಳ ಹೆಸರಿನ, ರೂ.30ರ ಸೀರೆಗಳನ್ನು ರೂ. 25ಕ್ಕೆ ಮಾರಿ ಮಾರುಕಟ್ಟೆಯನ್ನೇ ನಡುಗಿಸಿಬಿಟ್ಟಿದ್ದರು.
ಬದುಕಿನ ಸಂಧ್ಯಾಕಾಲದಲ್ಲಿರುವ ಬೇಬಿ ಪೊರ್ಬುಲು ನನ್ನ ಜವುಳಿ ವ್ಯವಹಾರದಲ್ಲಿ ಇಂದಿಗೂ ನನಗೆ ಆದರ್ಶ. ಇವತ್ತೂ ಅವರಿಂದ ಮಾಹಿತಿ ಪಡೆಯುತ್ತಿರುತ್ತೇನೆ.
ನಾನು 31 ವರ್ಷಗಳಿಂದ ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದೇನೆ. ಪ್ರಾಮಾಣಿಕವಾಗಿ ವೃತ್ತಿ ಜೀವನ ನಡೆಸುವುದಕ್ಕೆ ಮಾರ್ಗದರ್ಶಕ ಮತ್ತು ಬೆಂಗಾವಲಾಗಿ ಹಲವು ಜನರು ಸಹಕರಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಅಣ್ಣನೇ ಗುರುವಿನ ಸ್ಥಾನದಲ್ಲಿ ನಿಂತು ಪ್ರೋತ್ಸಾಹ ನೀಡಿದ್ದಾರೆ. ಈ ಮಾತನ್ನು ನಾನು ಹೇಳಲೇಬೇಕು’ ಎನ್ನುತ್ತಾರೆ ಕುಮಾರ ಬೆಳ್ಚಾಡ ಕುಡುಪು.
ಆರನೇ ತರಗತಿ ತ್ಯಜಿಸಿ ಬಸ್ ಕ್ಲೀನರ್ ಆಗಿ ಸೇರಿದ್ದೆ. ಆಗ ನನಗೆ ದೇವದಾಸ್ ಪೆದಮಲೆ ರಿಕ್ಷಾ ಚಾಲನೆಯ ತರಬೇತಿ ನೀಡಿದರು. ಅದಕ್ಕೂ ಧನ್ಯವಾದಗಳು ಸಲ್ಲಬೇಕು. ಬದುಕಿನ ಪ್ರತಿ ನೆಲೆಯಲ್ಲೂ ಬೆಳವಣಿಗೆ ಕಾರಣರಾದವರು ನಮಗೆ ಗುರುಗಳೇ. ಅವರೆಲ್ಲರಿಗೂ ನಾವು ಋಣಿ ಎಂಬುದು ನನ್ನ ಅಭಿಪ್ರಾಯ.
ಕ್ರಮೇಣ ರಿಕ್ಷಾದಲ್ಲಿ ಅನು ಭವ ಬೆಳೆಯಿತು. ಕಷ್ಟಪಟ್ಟು ದುಡಿಯತೊಡಗಿದೆ. ಎಲ್ಲವೂ ಅನುಕೂಲವಾಗಿ ರಿಕ್ಷಾ ಖರೀದಿ ಸಲು ಸಾಧ್ಯವಾಯಿತು. ಊರಲ್ಲಿ ರಿಕ್ಷಾ ಡ್ರೈವರ್ ಆಗಿ ಪ್ರಾಮಾಣಿಕ ಕೆಲಸವನ್ನು ಮಾಡಿದ್ದೇನೆ. ನನ್ನ ಬದುಕನ್ನು ನಾನು ರೂಪಿಸಿ ಕೊಂಡಿದ್ದೇನೆ.
ಇಂತಹ ಕಾಲದಲ್ಲಿ ನನಗೆ ನಿತ್ಯ ಮಾರ್ಗದರ್ಶನ ಮತ್ತು ಸಲಹೆ-ಸಹಕಾರ ನೀಡಿ ಬದಕುವ ಕ್ರಮವನ್ನು ಕಲಿಸಿದವರು ಅಣ್ಣ ಲೋಕನಾಥ್ ಕುಡುಪು. ಅವರು ಬರೀ ಅಣ್ಣನಾಗಿ ಅಲ್ಲ, ಬದುಕಿನ ಮಾರ್ಗದರ್ಶಕರಾಗಿ ಕಷ್ಟ ಬಂದಾಗ ಧೈರ್ಯ ತುಂಬುತ್ತಾ, ಖುಷಿಯಾದಾಗ ಹಂಚಿಕೊಳ್ಳುತ್ತಾ ದಾರಿ ತೋರಿದರು. ಈ ಉಪಕಾರ ಎಂದಿಗೂ ಮರೆಯಲಾರದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ.
1989ರಲ್ಲಿ ಶಾಲಾ ರಜಾ ಸಮಯ ಟೈಲರಿಂಗ್ ತರಗತಿಗೆ ಹೋಗಿ ಮೂಡಿದ ಆಸಕ್ತಿಯಿಂದ ಈಗ ನೂರಾರು ವಿದ್ಯಾರ್ಥಿಗಳಿಗೆ ಟೈಲರಿಂಗ್ ತರಬೇತಿ ನೀಡುತ್ತಿದ್ದೇನೆ ಎಂದು ಹೇಳುತ್ತಾರೆ ಟೈಲರ್ ಸುಜಾತಾ ಜೋಗಿ.
ನಾಗುರಿಯಲ್ಲಿ ಸಿ. ಆಂಟೋನಿ ಅವರಿಂದ ಪಡೆದ ತರಬೇತಿ ಇಂದು ನನ್ನನ್ನು ಈ ಸ್ಥಾನಕ್ಕೆ ತಂದು ನಿಲ್ಲಿಸಿದೆ ಎನ್ನುತ್ತಾರವರು. ಅಂದಿನ ಗುರುವಿನ ಪಾಠವನ್ನು ಸದಾ ನೆನಪಿಸಿಕೊಳ್ಳುತ್ತಾರೆ.
ಬಜಾಲ್ನಲ್ಲಿ ನಮ್ಮ ಮನೆ. ನಾನಾಗ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದೆ. ಮೊದಲ ಬಾರಿಗೆ ಬೇಸಗೆ ರಜಾ ಸಮಯದಲ್ಲಿ ಟೈಲರಿಂಗ್ ತರಗತಿಗೆ ಹೋದೆ. ಆ ಬಳಿಕ ನನಗೆ ಶಾಲೆಗಿಂತ ಹೆಚ್ಚಾಗಿ ಟೈಲರಿಂಗ್ ಹೆಚ್ಚು ಪ್ರಿಯವಾಯಿತು. ಶಾಲೆಯನ್ನು ಆರನೇ ತರಗತಿಯಲ್ಲಿ ನಿಲ್ಲಿಸಿ ಟೈಲರಿಂಗ್ ತರಬೇತಿಗೆ ತೆರಳಿದೆ. 1887ರಲ್ಲಿ ಜನಾರ್ದನ ಪೂಜಾರಿ ಅವರು ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ ಕಡಿಮೆ ಬಡ್ಡಿಯಲ್ಲಿ ಟೈಲರಿಂಗ್ ಮಷಿನ್ ದೊರೆಯಿತು- ಸುಜಾತಾ ಸ್ಮರಿಸುತ್ತಾರೆ.
ಸಿ.ಆಂಟೋನಿ ಅವರು ನನ್ನ ಗುರುಗಳು. ಅವರಿಂದ ನಾನು ತರಬೇತಿ ಪಡೆದ ಬಳಿಕ ಹಲವಾರು ಟೈಲರಿಂಗ್ ಅಂಗಡಿಗಳಲ್ಲಿ ಕೆಲಸ ಮಾಡಿದ್ದೇನೆ. ಈಗ ನಾನು ಪೊಲೀಸ್ ಇಲಾಖೆ ಸಿಬಂದಿ ಸೇರಿದಂತೆ ನೂರಾರು ಮಂದಿಗೆ ತರಬೇತಿ ನೀಡುತ್ತಿದ್ದೇನೆ. ಇದಕ್ಕೆಲ್ಲ ಅಂಟೋನಿ ಅವರಿಂದ ಪಡೆದ ಹೊಲಿಗೆ ವಿದ್ಯೆಯೇ ಕಾರಣ ಎಂಬುದಾಗಿ ಸುಜಾತಾ ವಿನಮ್ರವಾಗಿ ನೆನಪಿಸಿಕೊಳ್ಳುತ್ತಾರೆ.
ನನ್ನ ಗುರು ಎಂದು ನಾನು ಸ್ವೀಕರಿಸಿರುವುದು ಸುಳ್ಯದ ಆಯಶಿಲ್ಪದ ಮಾಲಕ, ತೂಗು ಸೇತುವೆಗಳ ಸರದಾರ, ಪದ್ಮಶ್ರೀ ಡಾ| ಗಿರೀಶ್ ಭಾರದ್ವಾಜ್ ಅವರನ್ನು ಎನ್ನುತ್ತಾರೆ ಕಡಬದ ಶ್ರೀಗಣೇಶ್ ಇಂಡಸ್ಟ್ರೀಸ್‌ನ ಮಾಲಕ ಸುಂದರ ಗೌಡ ಮಂಡೆಕರ.
ನಮ್ಮದು ಬಹಳ ಬಡ ಕುಟುಂಬ. ಮಡಿಕೇರಿಯಲ್ಲಿ ಐಟಿಐ ಕಲಿಯಲು ಸೇರಿ ಕಾರಣಾಂತರದಿಂದ ಅರ್ಧಕ್ಕೇ ಓದು ನಿಲ್ಲಿಸಿ ಕಂಗೆಟ್ಟು ಕುಳಿತಿದ್ದೆ. ಆಗ ಆಶಾಕಿರಣವಾಗಿ ಕಂಡವರು ಅಂದು ಸುಳ್ಯದಲ್ಲಿ ರೇಶನಲ್ ಇಂಜಿನಿಯರಿಂಗ್ ವರ್ಕ್ಸ್ ನಡೆಸುತ್ತಿದ್ದ ಡಾ|ಗಿರೀಶ್ ಭಾರದ್ವಾಜ್. 1978ರಲ್ಲಿ ನಾನು ಅವರ ಸಂಸ್ಥೆಗೆ ಸೇರಿ ಸುಮಾರು 3 ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿದೆ. ಅದು ನನ್ನ ಜೀವನಕ್ಕೆ ಹೊಸ ತಿರುವನ್ನು ನೀಡಿತು. ಅಲ್ಲಿ ವೆಲ್ಡಿಂಗ್, ಲೇತ್ ಮುಂತಾದ ಕೆಲಸಗಳಲ್ಲಿ ಪರಿಣತಿ ಪಡೆದೆ ಎಂದು ಸುಂದರ ಗೌಡ ಹೇಳುತ್ತಾರೆ.
ಸ್ನೇಹಿತರೊಬ್ಬರ ಜತೆಗೂಡಿ ಅವರು ಸ್ವಂತ ವರ್ಕ್‌ಶಾಪ್ ತೆರೆಯಲು ಮುಂದಾದಾಗ ಆಶೀರ್ವದಿಸಿ ಕಳುಹಿಸಿಕೊಟ್ಟರಂತೆ ಗಿರೀಶರು. ‘ಅವರು ನನಗೆ ಗುರು, ಮಾರ್ಗದರ್ಶಕ. ಒಂದು ವರ್ಷ ಸ್ನೇಹಿತನ ಜತೆ ಪಾಲುದಾರಿಕೆಯಲ್ಲಿ ವರ್ಕ್‌ಶಾಪ್ ನಡೆಸಿ ಮುಂದೆ 1982ರಲ್ಲಿ ಕಡಬದಲ್ಲಿ ಉದ್ಯಮ ಆರಂಭಿಸಬೇಕೆನ್ನುವಾಗ ಎದುರಾದ ಆತಂಕಗಳ ವೇಳೆ ಧೈರ್ಯ ತುಂಬಿ ಪ್ರೋತ್ಸಾಹಿಸಿದರು. ಋಣಾತ್ಮಕ ಮಾತುಗಳಿಂದ ಗೊಂದಲದಲ್ಲಿದ್ದ ನನ್ನ ಬೆನ್ನುತಟ್ಟಿ, ಹೆದರಬೇಡ, ನಿನ್ನೊಂದಿಗೆ ನಾನಿದ್ದೇನೆ ಎಂದವರು. ಅವರಿಗೆ ನಾನು ಋಣಿ.
‘ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕಿದ ನನಗೆ ಜೀವನ ಪಾಠ ಹೇಳಿಕೊಟ್ಟು ಸಾವಿರಾರು ಮಂದಿ ಉದ್ಯೋಗಿಗಳಿಗೆ ಉದ್ಯೋಗ ಕರುಣಿ ಸುವಲ್ಲಿ ಪ್ರೇರಣೆಯಾದ ಗುರು ನನ್ನಮ್ಮ’ – ದೂರದ ಗುಜರಾತ್‌ನಲ್ಲಿ ಉದ್ಯಮಿಯಾಗಿರುವ ಬೆಳ್ತಂಗಡಿಯ ಶಶಿಧರ್ ಬಿ. ಶೆಟ್ಟಿ ತನ್ನ ಬದುಕಿನ ಗುರು, ತಾಯಿ ಕಾಶಿ ಶೆಟ್ಟಿ ಅವರ ಬಗ್ಗೆ ಹೇಳುತ್ತಾರೆ.
ಕಷ್ಟದ ದಿನಗಳಲ್ಲಿ ಶಶಿಧರ ಶೆಟ್ಟಿಯವರ ತಂದೆ ತೀರಿಕೊಂಡರು. ಆದರೆ ಆ ಕೊರತೆ ಅರಿವಿಗೆ ಬರದಂತೆ ತಾಯಿ ನೋಡಿಕೊಂಡರು, ಶಿಕ್ಷಣ ಒದಗಿಸಿದರು. ಅವರಿಗೆ ಆದಾಯ ಮೂಲವಾಗಿದ್ದದ್ದು ಗದ್ದೆ ಕೆಲಸ. ‘ಏಳು ಬೀಳಿನ ಜೀವನದಲ್ಲಿ ಆರಂಭದಿಂದ ಇಂದಿನವರೆಗೂ ತಾಯಿಯೇ ಗುರುವಾಗಿ ಆಶೀರ್ವಾದ ನೀಡಿ ದ್ದಾರೆ. ನೋವು ಮರೆಯಲು, ಉದ್ಯಮದಲ್ಲಿ ಮುಂದುವರಿಯಲು ತೊಡಕಾದಾಗ ಅಮ್ಮನೊಂದಿಗೆ ಕುಳಿತು ಮಾತಾಡಿದಾಗ ಸಿಗುವ ಜೀವನಾನುಭವದಲ್ಲಿ ಬದುಕಿನ ಮುಂದಿನ ಹಾದಿಗೆ ಮಾರ್ಗದರ್ಶನ ಸಿಗುತ್ತದೆ ಎನ್ನುತ್ತಾರೆ ಶಶಿಧರ ಶೆಟ್ಟಿ.
ಅವರ ತಾಯಿ ಶಾಲೆ ಕಲಿತವರಲ್ಲ. ವಿದ್ಯೆ ಇಲ್ಲದಿರಬಹುದು, ಆದರೆ ಅನುಭವದಿಂದ ಸಿಗುವ ಪಾಠವನ್ನು ಯಾವ ಗುರುವೂ ನೀಡಲು ಸಾಧ್ಯವಿಲ್ಲ ಎನ್ನುತ್ತಾರೆ ಶೆಟ್ಟರು.
ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಶಕ್ತಿನಗರದ ನಿವಾಸಿ ಶಶಿಧರ್ ಬಿ. ಶೆಟ್ಟಿ ಈಗ ಬರೋಡಾದಲ್ಲಿ ಶಶಿ ಕ್ಯಾಟರಿಂಗ್ ಸರ್ವೀಸ್ ಸ್ಥಾಪಿಸಿ ಅದರ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದಾರೆ. ಅವರ ಉದ್ಯಮ 12 ರಾಜ್ಯಗಳಲ್ಲಿ ವಿಸ್ತರಿಸಿದೆ. 8,500ಕ್ಕೂ ಅಧಿಕ ಮಂದಿಗೆ ಉದ್ಯೋಗ ಕಲ್ಪಿಸಿದ್ದಾರೆ. ಇದಕ್ಕೆಲ್ಲ ಕಾರಣ ಅಮ್ಮ ಎನ್ನುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಕ್ಕಳ ಜತೆಗೆ ಶಿಕ್ಷಕರಿಗೂ ಆನ್ ಲೈನ್ ಕ್ಲಾಸ್ ಎಂಬ ಹೊಸ ಅನುಭವ
ವಿದ್ಯಾರ್ಥಿಗಳ ನೇರ ಒಡನಾಟವಿಲ್ಲದೇ ವೃತ್ತಿ ಜೀವನ ಬೇಸರವೆನಿಸಿದೆ
ಈಗ ಶಾಲಾ ಕಾಲೇಜುಗಳಲ್ಲಿ ಎಲ್ಲರ ಬಾಯಲ್ಲೂ ಆನ್ ಲೈನ್ ತರಗತಿಗಳದ್ದೇ ವಿಚಾರ
ಮಕ್ಕಳೊಂದಿಗೆ ಇದ್ದು ಪಾಠ ಮಾಡುವ ಖುಷಿ ಆನ್ ಲೈನ್ ಕ್ಲಾಸ್ ನಲ್ಲಿ ಸಿಗಲ್ಲ..!
ವಸತಿ ಪ್ರದೇಶಕ್ಕೆ ತೆರಳಿ ಮಕ್ಕಳ ಕಲಿಕೆಗೆ ಶ್ರಮಿಸುತ್ತಿರುವ ಶಿಕ್ಷಕರು ಅಭಿನಂದನಾರ್ಹರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Legislative House: ಶಾಸನಸಭೆಯೊಳಗೆ ಪೊಲೀಸ್ ಪ್ರವೇಶಕ್ಕಿಲ್ಲ ಅವಕಾಶ: ತಜ್ಞರು
Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು
Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Koteshwara: ಟಯರ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.