![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Sep 6, 2019, 9:51 AM IST
ಬೆಂಗಳೂರು: ಆ್ಯಂಬಿಡೆಂಟ್, ಐ ಮಾನಿಟರಿ ಅಡ್ವೈಸ್ (ಐಎಂಎ) ಕಂಪನಿಗಳ ಬಹುಕೋಟಿ ವಂಚನೆ ಪ್ರಕರಣಗಳ ಬೆನ್ನಲ್ಲೇ ಹಣ ದ್ವಿಗುಣಗೊಳಿಸಿ ಹೆಚ್ಚಿನ ಲಾಭಾಂಶ ನೀಡುವ ಆಮಿಷವೊಡ್ಡಿ ಕೋಟ್ಯಾಂತರ ರೂ. ಸಂಗ್ರಹಿಸಿ ವಂಚಿಸಿರುವ ಮತ್ತೂಂದು ವಂಚಕ ಕಂಪನಿಯ ಬಂಡವಾಳ ಬಯಲಾಗಿದೆ.
ವ್ಯಾಮ್ ಸರ್ವೀಸ್ ಪ್ರೈವೆಟ್ ಲಿಮೆಟೆಡ್ (WAM Services (opc) Pvt. Ltd ) ನಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಕೆಲವೇ ವಾರಗಳಲ್ಲಿ ಹೆಚ್ಚಿನ ಲಾಭಾಂಶ ಹಾಗೂ ಹೂಡಿಕೆ ಹಣ ವಾಪಸ್ ನೀಡುವ ಆಮಿಷವೊಡ್ಡಿ ಸಾವಿರಾರು ಮಂದಿಗೆ ವಂಚಿಸಿದ್ದ ಮಾಜಿ ಸೈನಿಕ ಸೇರಿ ಮೂವರು ಆರೋಪಿಗಳನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹರ್ಯಾಣ ಮೂಲದ ಮಾಜಿ ಸೈನಿಕ ಸುನೀಲ್ ಕುಮಾರ್ ಚೌಧರಿ (36) ಕೇರಳದ ಕಣ್ಣೂರು ಜಿಲ್ಲೆಯ ರಿಜೇಶ (36) ಕೆ.ಎಸ್ ರಾಜೇಶ್ (41) ಬಂಧಿತರು. ಆರೋಪಿಗಳು ಕೇರಳ ಸೇರಿ ಕರ್ನಾಟಕದ 2500ಕ್ಕೂ ಅಧಿಕ ಮಂದಿಯಿಂದ 20 ಕೋಟಿ ರೂ.ಗಿಂತಲೂ ಅಧಿಕ ಹಣ ಸಂಗ್ರಹಿಸಿ ವಂಚಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆರೋಪಿಗಳು ಇನ್ನೂ ಹೆಚ್ಚು ವಂಚಿಸಿರುವ ಸಾಧ್ಯತೆಯಿದ್ದು, ಹೆಚ್ಚಿನ ವಿಚಾರಣೆಗಾಗಿ ಹತ್ತು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ಆರೋಪಿಗಳು ಸಾರ್ವಜನಿಕರನ್ನು ವಂಚಿಸಲೆಂದೇ ಕಂಪನಿ ವೆಬ್‌ಸೈಟ್ ಸೃಷ್ಟಿಸಿದ್ದು, ಅದರಲ್ಲಿ ಹಣ ದ್ವಿಗುಣಗೊಳ್ಳುವ ಬಗೆಯನ್ನು ವಿವರಿಸಿದ್ದರು. ಹೂಡಿಕೆದಾರರು ಆರಂಭದಲ್ಲಿ 25 ಸಾವಿರ ರೂ. ಪಾವತಿಸಿದರೆ 20 ವಾರಗಳ ಕಾಲ ಪ್ರತಿವಾರ 1250 ರೂ. ಬ್ಯಾಂಕ್ ಅಕೌಂಟ್‌ಗೆ ನೀಡಲಾಗುತ್ತದೆ. ಜತೆಗೆ, 21ನೇ ವಾರದಲ್ಲಿ ಹೂಡಿಕೆ ಮಾಡಿದ್ದ 25 ಸಾವಿರ ರೂ. ಕೂಡ ವಾಪಸ್ ನೀಡಲಾಗುತ್ತದೆ. ಇದೇ ಮಾದರಿಯಲ್ಲಿ 50 ಸಾವಿರ, ಒಂದು ಲಕ್ಷ ರೂ. ಹೂಡಿಕೆ ಮಾಡಿದವರಿಗೂ ಹಣ ವಾಪಸ್ ನೀಡುವುದಾಗಿ ಘೋಷಿಸಿದ್ದರು.
ಇದನ್ನು ನಿಜ ಎಂದು ನಂಬಿದ ಸಾವಿರಾರು ಮಂದಿ ಕಂಪನಿಗೆ ಕರೆ ಮಾಡಿ ವಿಚಾರಿಸುತ್ತಲೇ ಅವರನ್ನು ಪ್ರತಿಷ್ಠಿತ ಹೋಟೆಲ್ಗಳಿಗೆ ಕರೆಸಿಕೊಂಡು ಮತ್ತಷ್ಟು ಸುಳ್ಳು ಹೇಳಿ ಕಂಪನಿ ಬ್ಯಾಂಕ್ ಖಾತೆಗೆ ಹಣ ಕಟ್ಟಿಸಿಕೊಳ್ಳುತ್ತಿದ್ದರು.
ಇದೇ ರೀತಿ ಹಣ ಹೂಡಿಕೆ ಮಾಡಿ ವಂಚನೆಗೊಳಗಾದ ಸಂಜೀವ್‌ಕುಮಾರ್ ದಾನಾ ಎಂಬವರು ಇ-ಮೇಲ್ ಮೂಲಕ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ ಇನ್ಸ್‌ಪೆಕ್ಟರ್ ಅಯ್ಯಣ್ಣ ರೆಡ್ಡಿ ನೇತೃತ್ವದ ತಂಡ, ಮೂವರು ಆರೋಪಿಗಳನ್ನು ಬಂಧಿಸಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.
ಸೈನಿಕ ವಂಚಕನಾದ: ಹರ್ಯಾಣದ ಗುರಗಾಂವ್ ಮೂಲದ ಸುನೀಲ್ ಕುಮಾರ್ ಚೌಧರಿ ಈ ಹಿಂದೆ ಭಾರತೀಯ ಸೇನೆಯಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಿದ್ದು, 2009ರಲ್ಲಿ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾನೆ. ವ್ಯಾಮ್ ಕಂಪನಿಯ ಮುಖ್ಯ ಕಚೇರಿ ಕೂಡ ಗುರಗಾಂವ್‌ನಲ್ಲಿದ್ದು, ಮಾಲೀಕನಾಗಿ ಸುನೀಲ್ ಕುಮಾರ್ ಚೌಧರಿ, ಮಾರ್ಕೆಟಿಂಗ್ ಮ್ಯಾನೇಜರ್‌ಗಳಾಗಿ ರಿಜೇಶ್ ಹಾಗೂ ರಾಜೇಶ್ ಕಾರ್ಯನಿರ್ವಹಿಸುತ್ತಿದ್ದರು.
ಆರೋಪಿಗಳು ಬೆಂಗಳೂರಿನ ಯುಬಿ ಸಿಟಿಯಲ್ಲಿ ಕಂಪನಿಯ ಕಚೇರಿ ತೆರೆದು ವಂಚನೆ ಎಸಗುತ್ತಿದ್ದರು. ಈ ಕಂಪನಿಯ ಬಹುತೇಕ ಹೂಡಿಕೆದಾರರು ಕೇರಳ ಮೂಲದವರಾಗಿದ್ದಾರೆ. ಇನ್ನೂ ಹಲವು ರಾಜ್ಯದವರು ಮೋಸ ಹೋಗಿರುವ ಸಾಧ್ಯತೆಯಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.