ತೋಡೇ ಸಾರ್ವಜನಿಕ ಶೌಚಾಲಯ!
ಬಯಲುಮುಕ್ತ ಶೌಚಾಲಯ ಪುರಸ್ಕೃತ ಹರಿಹರ ಗ್ರಾಮದ ದುಃಸ್ಥಿತಿ
Team Udayavani, Sep 7, 2019, 5:11 AM IST
ಹರಿಹರ ಪಳ್ಳತ್ತಡ್ಕ: ಬಾಗಿಲು ಹಾಕಿರುವ ಸಾರ್ವಜನಿಕ ಶೌಚಾಲಯ.
ಸುಬ್ರಹ್ಮಣ್ಯ: ಹರಿಹರ ಗ್ರಾ.ಪಂ. ಕಚೇರಿಯ ಕೂಗಳತೆ ದೂರದಲ್ಲಿ ಮುಖ್ಯ ಪೇಟೆ ಇದೆ. ಆದರೆ ಇಲ್ಲಿ ಸಾರ್ವಜನಿಕ ಶೌಚಾಲಯವೇ ಇಲ್ಲ. ಪಕ್ಕದಲ್ಲೆ ಹರಿಯುತ್ತಿರುವ ತೋಡು ಸದ್ಯ ಇಲ್ಲಿ ಬಯಲು ಶೌಚಾಲಯ!
ಪೇಟೆಯ ನೂತನ ಬಸ್ ತಂಗುದಾಣ ಹಿಂಬದಿ ಸಾರ್ವಜನಕರಿಗೆಂದು ಶೌಚಾಲಯ ನಿರ್ಮಿಸಿ ಹಲವು ವರ್ಷಗಳು ಕಳೆದಿವೆ. ಅದು ಇನ್ನೂ ಸಾರ್ವಜನಿಕ ಉಪಯೋಗಕ್ಕೆ ದೊರಕಿಲ್ಲ. ಶೌಚಾಲಯ ನಿರ್ಮಿಸಿದ್ದರೂ ಅದಕ್ಕೆ ನೀರು ಒದಗಿಸಿಲ್ಲ. ಕಟ್ಟಡ ಶಿಥಿಲಗೊಂಡು ಪಾಳು ಬಿದ್ದಿದೆ. ಬಾಗಿಲುಗಳು ಸರಿಯಿಲ್ಲ. ಶೌಚಾಲಯ ನಿರ್ಮಿಸಿದ ಬಳಿಕ ಒಂದು ದಿನವೂ ಬಳಸಿಲ್ಲ. ಶೌಚಾಲಯವೀಗ ಪರಿಸರದ ಕಸವನ್ನು ತುಂಬಿಡುವ ಡಬ್ಬದಂತಾಗಿದೆ.
ಪೊದೆ ಕಡೆಗೆ ತೆರಳಬೇಕು
ನಿಲ್ದಾಣದಲ್ಲಿ ವಿಶ್ರಾಂತಿ ಪಡೆಯುವ ಸಾರ್ವಜನಿಕರು, ವಾಹನ ಚಾಲಕರು, ಪೇಟೆಯ ಅಂಗಡಿ ಮುಂಗಟ್ಟುಗಳ ಜನರು ಶೌಚಕ್ಕಾಗಿ ಪಕ್ಕದ ತೋಡಿಗೆ, ಪೊದೆಗಳ ಮರೆಗೆ ತೆರಳುತ್ತಿದ್ದಾರೆ. ಪೇಟೆ ಮಲಿನಗೊಂಡು ಆಸುಪಾಸಿನಲ್ಲಿ ಗಬ್ಬು ವಾಸನೆ ಮೂಗಿಗೆ ಹೊಡೆಯುತ್ತಿದೆ. ಮಹಿಳೆಯರು, ವಿದ್ಯಾರ್ಥಿಗಳು ಮುಜುಗರ ಪಡುತ್ತಿದ್ದಾರೆ. ತೋಡಿಗೆ ತೆರಳಿ ಎಲ್ಲರೂ ಗಲೀಜು ಮಾಡುತ್ತಿರುವುದರಿಂದ ಇತ್ತೀಚೆಗೆ ವಾಹನ ಚಾಲಕ-ಮಾಲಕರು ತಾತ್ಕಾಲಿಕವಾಗಿ ಬೇಲಿ ನಿರ್ಮಿಸಿ ಕೊಂಡಿದ್ದಾರೆ.
ಭರವಸೆ ಈಡೇರಿಲ್ಲ
ಶೌಚಾಲಯ ಇಲ್ಲದೆ ಸಮಸ್ಯೆ ಆಗುತ್ತಿರುವ ಬಗ್ಗೆ ಸಾರ್ವಜನಿಕರು ಗ್ರಾಮಸಭೆ, ಸಾಮಾನ್ಯ ಸಭೆ, ವಿಶೇಷ ಸಭೆಗಳಲ್ಲಿ ಪ್ರಸ್ತಾವಿಸಿದ್ದರು. ಅದೆಲ್ಲದಕ್ಕೂ ತಲೆ ಕೆಡಿಸಿಕೊಳ್ಳದ ಪಂಚಾಯತ್, ಶೌಚಾಲಯ ನಿರ್ಮಿಸಿ ಉಪಯೋಗಕ್ಕೆ ತೆರೆಯುವುದನ್ನು ಮರೆತು ಬಿಟ್ಟಿದೆ. ಶೀಘ್ರವೇ ಅಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸುತ್ತೇವೆ ಎನ್ನುವ ಭರವಸೆ ಪ್ರತಿ ಬಾರಿಯೂ ದೊರಕುತ್ತದೆ ವಿನಾ ಕಾರ್ಯಪ್ರವೃತ್ತವಾಗುತ್ತಿಲ್ಲ ಎಂದು ವಾಹನಗಳ ಚಾಲಕರು ಹೇಳುತ್ತಾರೆ.
ಸಮಸ್ಯೆಗಳ ಪಟ್ಟಿ
ಶೌಚಾಲಯವನ್ನು ಸುಸ್ಥಿರಗೊಳಿಸಿ ಸಾರ್ವಜನಿಕರಿಗೆ ಬಳಕೆಗೆ ನೀಡುವುದಕ್ಕೆ ಏಕೆ ಸ್ಥಳೀಯಾಡಳಿತ ಹಿಂದೇಟು ಹಾಕುತ್ತಿದೆ ಎಂದು ಪಂಚಾಯತ್‌ನಲ್ಲಿ ಪ್ರಶ್ನಿಸಿದರೆ, ಅಲ್ಲಿಗೆ ನೀರಿನ ಸರಬರಾಜು ಇಲ್ಲ. ನೀರಿನ ಸಮಸ್ಯೆ ಇದೆ. ಬೇರೆಡೆ ಸ್ಥಾಪಿಸಲು ಜಾಗದ ಸಮಸ್ಯೆ ಇತ್ಯಾದಿಗಳನ್ನು ಜನರ ಮುಂದಿಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಾರೆ.
ಹೊಟೇಲ್‌ಗಳಿಗೆ ಮಾತ್ರ ಪಂಚಾಯತ್ ವ್ಯವಸ್ಥಿತವಾಗಿ ನೀರು ಪೂರೈಸುತ್ತಿದೆ. ಅವರು ಬಿಲ್ ಕೊಡುತ್ತಾರೆ. ಪಂಚಾಯತ್‌ಗೆ ಆದಾಯ ಬರುತ್ತದೆ. ಆದರೆ ಶೌಚಾಲಯಕ್ಕೆ ನೀರು ಒದಗಿಸಲು ಮಾತ್ರ ಕುಂಟು ನೆಪ. ಶೌಚಾಲಯ ಬಳಕೆಗೆ ಶುಲ್ಕ ಪಾವತಿಸಲೂ ಸಿದ್ಧ. ಆದರೆ, ನೀರಿನ ವ್ಯವಸ್ಥೆ ಕಲ್ಪಿಸಿ ಶೌಚಾಲಯ ಬಳಕೆಗೆ ಸಿಗುವಂತೆ ಮಾಡಬೇಕು ಎಂದು ವಾಹನ ಚಾಲಕರು ಹೇಳುತ್ತಾರೆ.
ನಿರ್ಮಲ ಗ್ರಾಮ ಪ್ರಶಸ್ತಿ
ಹರಿಹರ ಗ್ರಾ.ಪಂ.ಗೆ 2008ರಲ್ಲಿ ನಿರ್ಮಲ ಗ್ರಾಮ ಪುರಸ್ಕಾರ ಲಭಿಸಿತ್ತು. ಇದೇ ಯೋಜನೆಯಲ್ಲಿ ಇಲ್ಲಿ ಶೌಚಾಲಯ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ. 2016-17ರಲ್ಲಿ ಬಯಲು ಮುಕ್ತ ಗ್ರಾ.ಪಂ. ಎಂಬ ಹೆಗ್ಗಳಿಕೆ ಪಡೆದು ಬೆಂಗಳೂರಿಗೆ ತೆರಳಿ ಅದ್ದೂರಿ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದರು. ಪ್ರಶಸ್ತಿ ಪಡೆದ ಕಾರಣಕ್ಕೆ ಮತ್ತೆ ಶೌಚಾಲಯ ನಿರ್ಮಿಸಲು ಬೇರೆ ಅನುದಾನ ಮೀಸಲಿಡುವಂತಿಲ್ಲ. ಪ್ರಧಾನಿ ಮೋದಿ ಸ್ವತ್ಛ ಭಾರತ ನಿರ್ಮಾಣಕ್ಕೆ ಕರೆ ನೀಡಿದಾಗ ದೇಶವ್ಯಾಪಿ ಇರುವ ಗ್ರಾ.ಪಂ.ಗಳು ಸ್ವತ್ಛತೆ ನಿಟ್ಟಿನಲ್ಲಿ ಮುಂದಡಿ ಇಟ್ಟಿದ್ದವು. ಹರಿಹರ ಪಳ್ಳತ್ತಡ್ಕ ಗ್ರಾ.ಪಂ. ಕೂಡ ಸ್ವತ್ಛ ಗ್ರಾಮದ ಕುರಿತು ಸಭೆ, ವಿಶೇಷ ಸಭೆ – ಹೀಗೆ ಹತ್ತು ಹಲವು ಕಾರ್ಯಕ್ರಮ ರೂಪಿಸಿತ್ತು. ಅದೆಲ್ಲವೂ ವೇದಿಕೆಗೆ ಸೀಮಿತವಾಯಿತೇ ಹೊರತು ಅನುಷ್ಠಾನಕ್ಕೆ ಬಂದಿಲ್ಲ ಎನ್ನುವುದು ಸ್ಥಳೀಯರ ದೂರು.
ತಿಂಗಳೊಳಗೆ ಬಳಕೆಗೆ
ಈಗ ಇರುವ ಶೌಚಾಲಯಕ್ಕೆ ಅಳವಡಿಸಿದ ಹೊಂಡ ಸಮರ್ಪಕವಾಗಿಲ್ಲ. ಒರತೆ ಜಾಗವಾದ ಕಾರಣ ಸಮಸ್ಯೆ ಇದೆ. ಅದಕ್ಕಿಂತ ಸ್ವಲ್ಪ ದೂರದಲ್ಲಿ ಹೊಂಡ ತೆಗೆದು ಈಗಿನ ಶೌಚಾಲಯವನ್ನೇ ಸಮರ್ಪಕಗೊಳಿಸಲು ನಿರ್ಧರಿಸಿದ್ದೇವೆ. ತಿಂಗಳೊಳಗೆ ಅದನ್ನು ಸರಿಪಡಿಸಿ ಸಾರ್ವಜನಿಕರ ಬಳಕೆಗೆ ನೀಡುತ್ತೇವೆ.
– ರವಿಚಂದ್ರ , ಪಿಡಿಒ, ಹರಿಹರ ಗ್ರಾ.ಪಂ.
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.