ತುಂಗಾ ಸ್ನಾನಂ, ರಸಂ ಪಾನಂ
ಶ್ರೀ ಜಗನ್ಮಾತೆ ಶಾರದಾಂಬೆ ಕ್ಷೇತ್ರ, ಶೃಂಗೇರಿ
Team Udayavani, Sep 7, 2019, 2:46 PM IST
ಜಗನ್ಮಾತೆ ಶಾರದಾ ದೇವಿ, ಜ್ಞಾನ ಸ್ವರೂಪಿಣಿ, ವಿದ್ಯಾಧಿದೇವತೆ. ಹಾಗೆಯೇ, ಸಾಕ್ಷರತ್ ಅನ್ನಪೂರ್ಣೆ ಕೂಡ ಹೌದು. ಮಲೆನಾಡಿನ ತುಂಗಾ ನದಿಯ ತಟದಲ್ಲಿ ನೆಲೆ ನಿಂತ ಶ್ರೀದೇವಿಯ ಸನ್ನಿಧಾನದಲ್ಲಿ, ಅನ್ನ ಪ್ರಸಾದಕ್ಕೆ ಶತಮಾನಗಳ ಸೊಬಗಿದೆ. “ಊಟ ಅಂದ್ರೆ, ಶೃಂಗೇರಿ ಕ್ಷೇತ್ರದ್ದು’ ಎನ್ನುವ ಸಂತೃಪ್ತಿಯ ಉದ್ಗಾರ, ಇಲ್ಲಿಗೆ ಬಂದುಹೋದ ಭಕ್ತಾದಿಗಳ ಬಾಯಿಯಲ್ಲಿ ಬರುತ್ತದೆ. ಅದರಲ್ಲೂ ರಸಂನ ರುಚಿ ಅದ್ಭುತ.
ಅನ್ನದಾನ ಪರಂಪರೆ:
600 ವರ್ಷಗಳ ಹಿಂದೆಯೇ ಇಲ್ಲಿ ಅನ್ನದಾನ ಛತ್ರವಿದ್ದ ಕುರಿತು ಉಲ್ಲೇಖವಿದೆ. ಶ್ರೀ ವಿದ್ಯಾಶಂಕರರ ಕಾಲದಲ್ಲಿ ವಿಜಯನಗರ ಸ್ಥಾಪನೆ ಮಾಡಿದ ಮೊದಲನೇ ಹರಿಹರರಾಯ, 13ನೇ ಶತಮಾನದಲ್ಲೇ ಅನ್ನದಾನಕ್ಕಾಗಿ ಭೂಮಿ ನೀಡಿದ್ದನು. 1628ರಲ್ಲಿ ಕೆಳದಿಯ ವೆಂಕಟಪ್ಪ ನಾಯಕನು ಶ್ರೀ ಶಾರದಾ ಪೀಠದ ಜಗದ್ಗುರು ಪ್ರಥಮ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳಿಗೆ ಅನ್ನಛತ್ರ ನಡೆಸಲು 64 ವೃತ್ತಿಗಳನ್ನು (ಸಣ್ಣ ಭೂಭಾಗ) ವಿಶ್ವನಾಥಪುರದ ಅಗ್ರಹಾರದಲ್ಲಿ ನೀಡಿದ್ದರ ಬಗ್ಗೆ ಉಲ್ಲೇಖವಿದೆ.
ಸುಸಜ್ಜಿತ ಭೋಜನ ಶಾಲೆ:
ಶಾರದಾ ಪೀಠದ ಶ್ರೀ ಭಾರತೀತೀರ್ಥ ಪ್ರಸಾದ ಭೋಜನ ಶಾಲೆಯನ್ನು 1999ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಉದ್ಘಾಟಿಸಿದ್ದರು. ಅತ್ಯಾಧುನಿಕ ತಾಂತ್ರಿಕ ನಿರ್ಮಾಣ, ಒಳಗೆ ಆಧಾರ ಸ್ತಂಭವಿಲ್ಲದ ವಿಶಿಷ್ಟವಾದ ಭೋಜನ ಶಾಲೆ, ಶುಚಿತ್ವದಿಂದಲೇ ಗಮನ ಸೆಳೆಯುತ್ತದೆ. ಸುಮಾರು 3.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿತವಾದ ಭವ್ಯ ಭವನವಿದು. ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿಯವರ ಆಶೀರ್ವಾದ ಹಾಗೂ ಮಾರ್ಗದರ್ಶನದಿಂದ ಆಡಳಿತಾಧಿಕಾರಿ ವಿ.ಆರ್. ಗೌರಿಶಂಕರ್‌ರ ಉಸ್ತುವಾರಿಯಲ್ಲಿ, ಅಚ್ಚುಕಟ್ಟಾದ ಭೋಜನ ವ್ಯವಸ್ಥೆ ನಿರ್ವಹಣೆ, ಇಲ್ಲಿನ ಹೆಗ್ಗಳಿಕೆ.
ನಿತ್ಯದ ಅನ್ನಸಂತರ್ಪಣೆ:
ಪ್ರತಿದಿನ 5 ಸಾವಿರ ಭಕ್ತರು ಇಲ್ಲಿ ಭೋಜನ ಪ್ರಸಾದ ಸವಿದು, ಸಂತೃಪ್ತರಾಗುತ್ತಾರೆ. ನವರಾತ್ರಿಯಂಥ ವಿಶೇಷ ಸಂದರ್ಭದಲ್ಲಿ ಈ ಸಂಖ್ಯೆ 25 ಸಾವಿರ ದಾಟುತ್ತದೆ.
37 ಶಾಲೆಗಳಿಗೆ ಬಿಸಿಯೂಟ:
ಇಲ್ಲಿನ ಪಾಕಶಾಲೆಯಿಂದಲೇ ಸುತ್ತಮುತ್ತಲಿನ ಶಾಲೆಗಳಿಗೆ ಬಿಸಿಯೂಟ ರವಾನೆಯಾಗುತ್ತದೆ. ಶಾಲಾ- ಕಾಲೇಜುಗಳ ಸುಮಾರು 10 ಸಾವಿರ ವಿದ್ಯಾರ್ಥಿಗಳು, ಶಾರದಾಂಬೆಯ ಅನ್ನಪ್ರಸಾದ ಸವಿದು ಕೃತಾರ್ಥರಾಗುತ್ತಾರೆ. ಶೃಂಗೇರಿ ಸುತ್ತಮುತ್ತ, ಕೊಪ್ಪ, ತೀರ್ಥಹಳ್ಳಿ, ಕಮ್ಮರಡಿ ಸೇರಿದಂತೆ 37 ಶಾಲೆಗಳು ಇದರ ಪ್ರಯೋಜನ ಪಡೆಯುತ್ತವೆ.
ಏನೇನು- ಎಷ್ಟೆಷ್ಟು?: ಪ್ರತಿನಿತ್ಯ 10 ರಿಂದ 12 ಕ್ವಿಂಟಲ್ ಅಕ್ಕಿ, (ವಿಶೇಷ ಸಂದರ್ಭಗಳಲ್ಲಿ 25-30 ಕ್ವಿಂಟಲ್ ಅಕ್ಕಿ), ತರಕಾರಿ 4-5 ಕ್ವಿಂಟಲ್, ತೆಂಗಿನಕಾಯಿ 400- 500, ಬೇಳೆ 2-5 ಕ್ವಿಂಟಲ್, ಸಾಂಬಾರು ಪದಾರ್ಥ ಕನಿಷ್ಠ 25 ಕಿಲೋ ಅವಶ್ಯ.
ಯಂತ್ರ ಮೋಡಿ:
ಇಲ್ಲಿ ಒಟ್ಟು 7 ಅನ್ನದ ಬಾಯ್ಲರ್‌ಗಳಿದ್ದು, 1 ಬಾಯ್ಲರ್‌ನಲ್ಲಿ 50 ಕೆ.ಜಿ. ಅಕ್ಕಿ ಹಾಕಿದರೆ ಅರ್ಧ ಗಂಟೆಯಲ್ಲಿ ಬಿಸಿ ಬಿಸಿ ಅನ್ನ ತಯಾರಾಗುತ್ತದೆ. ಏಕಕಾಲದಲ್ಲಿ 7 ಬಾಯ್ಲರ್‌ಗಳಲ್ಲಿ 3.5 ಕ್ವಿಂಟಲ್ ಅನ್ನ ಬೇಯುತ್ತದೆ. ಮಿಕ್ಕಂತೆ, 10 ಬಾಯ್ಲರ್‌ಗಳನ್ನು ಸಾರು, ಸಾಂಬಾರು, ಪಾಯಸಕ್ಕಾಗಿ ಬಳಕೆಯಾಗುತ್ತದೆ. ಎಲ್ಲವೂ ಡೀಸೆಲ್ ಬಾಯ್ಲರ್‌ಗಳಾಗಿದ್ದು, ಗಂಟೆಗೆ 35 ಲೀ. ಡೀಸೆಲ್ ಅವಶ್ಯ.
ಭಕ್ಷ್ಯ ಸಮಾಚಾರ:
ಪ್ರತಿನಿತ್ಯದ ಊಟಕ್ಕೆ ಅನ್ನ, ಪಾಯಸ, ರಸಂ, ಸಾಂಬಾರು, ಮಜ್ಜಿಗೆ ಇರುತ್ತದೆ. ವಿಶೇಷ ಸಂದರ್ಭಗಳಲ್ಲಿ ಪಲ್ಯ, ಸಿಹಿತಿಂಡಿ, ಪುಳಿಯೊಗರೆ ಮಾಡಲಾಗುತ್ತದೆ. ಇಲ್ಲಿನ ರಸಂ ಅನ್ನು ಒಮ್ಮೆಯಾದರೂ ಸವಿಯಲೇಬೇಕು. ಊಟಕ್ಕೆ ಸ್ಟೀಲ್ ತಟ್ಟೆಗಳನ್ನು ಬಳಸಲಾಗುತ್ತದೆ.
ಊಟದ ಸಮಯ:
ಮಧ್ಯಾಹ್ನ: 12 - 2.30
ರಾತ್ರಿ: 7- 8.30
ಕಳೆದ 25 ವರ್ಷಗಳಿಂದ ಶ್ರೀಕ್ಷೇತ್ರದಲ್ಲಿ ಅಡುಗೆ ಮಾಡುತ್ತಿದ್ದೇನೆ. ಬಂದವರೆಲ್ಲರಿಗೂ ಇಲ್ಲಿನ ರಸಂ ಇಷ್ಟವಾಗುತ್ತದೆ. ಶಾರದಾಂಬೆಯ, ಜಗದ್ಗುರುಗಳ ಆಶೀರ್ವಾದದಿಂದ ಎಲ್ಲವೂ ಅಚ್ಚುಕಟ್ಟಾಗಿ ನಡೆಯುತ್ತಿದೆ.– ನಾಗರಾಜ್, ಮುಖ್ಯ ಅಡುಗೆ ನಿರ್ವಾಹಕ
ಸಂಖ್ಯಾ ಸೋಜಿಗ:
13- ಬಾಣಸಿಗರಿಂದ ಪಾಕ ತಯಾರಿ
17- ಬಾಯ್ಲರ್‌ಗಳಲ್ಲಿ ಅಡುಗೆ
100- ಮಂದಿ ಪಾಕಶಾಲೆಯಲ್ಲಿ ಸಕ್ರಿಯರು
3500- ಭಕ್ತರಿಂದ ಏಕಕಾಲದಲ್ಲಿ ಭೋಜನ
5000- ಮಂದಿಗೆ ನಿತ್ಯ ಅನ್ನಸಂತರ್ಪಣೆ
10,000- ವಿದ್ಯಾರ್ಥಿಗಳಿಗೆ ಬಿಸಿಯೂಟ
48,00,000- ಮಂದಿ ಕಳೆದವರ್ಷ ಭೋಜನ ಸವಿದವರು
– ರಮೇಶ್ ಕುರುವಾನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಚಾಲಕ ಸಾವು
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.