ನೆಲ ಏಕೆ ಕುಸಿಯುತ್ತೆ?
ಇದು ನಿಜಕ್ಕೂ ನೆಲದ ಕಥೆ!
Team Udayavani, Sep 9, 2019, 5:35 AM IST
ಮನೆ ಕಟ್ಟಿ ವರ್ಷಗಳಾದ ಮೇಲೂ ಒಮ್ಮೊಮ್ಮೆ ಒಳಾಂಗಣದಲ್ಲಿ ದಿಢೀರನೆ ಹೆಜ್ಜೆಹೆಜ್ಜೆಗೂ “ಡಬ್ ಡಬ್’ ಶಬ್ದ ಬರಲು ಶುರುವಾಗಬಹುದು. ಶುರುವಿನಲ್ಲಿ ಕೇಳಿಸಿಯೂ ಕೇಳಿಸದಂತಿರುವ ಈ ಸದ್ದು, ನಂತರ ಹೆಚ್ಚಾಗಿ ಗದ್ದಲದಂತೆ ಭಾಸವಾಗಬಹುದು. ಹೀಗಾಗಲು ಮುಖ್ಯ ಕಾರಣ- ಫ್ಲೋರಿಂಗ್ ಬೆಡ್ ಕಾಂಕ್ರೀಟ್ ಕೆಳಗಿನ ಮಣ್ಣು ಕುಸಿದದ್ದೇ ಆಗಿರುತ್ತದೆ.
ನಾವು ನಡೆದಾಡುವ ನೆಲ-ಭೂಮಿಗೆ ಎಷ್ಟು ಒಗ್ಗಿ ಹೋಗಿರುತ್ತೇವೆ ಎಂದರೆ, ಅದು ಸ್ವಲ್ಪ ಕುಸಿಯಿತು ಎಂದರೆ ನಮ್ಮ ಜಂಘಾಬಲವೇ ಉಡುಗಿಹೋದಂತೆ ಆಗಿಬಿಡುತ್ತದೆ. ಎಲ್ಲ ಕಾಲದಲ್ಲೂ ನೆಲ ಅಲ್ಪ ಸ್ವಲ್ಪ ಕುಸಿಯುವ ಸಾಧ್ಯತೆ ಇದ್ದರೂ ಮಳೆಗಾಲದಲ್ಲಿ ನಾನಾ ಕಾರಣಗಳಿಂದ ಕುಸಿಯುವುದು ಹೆಚ್ಚು. ಇದಕ್ಕೆ ಮುಖ್ಯ ಕಾರಣ- ಈ ಅವಧಿಯಲ್ಲಿ ನೀರಿನ ಮಟ್ಟ ಏರುವುದರಿಂದ ತೊಂದರೆಗಳು ಸ್ವಾಭಾವಿಕವಾಗಿಯೇ ಹೆಚ್ಚಿರುತ್ತವೆ. ಒಣಗಿದಾಗ ಮೃದು ಕಲ್ಲಿನಷ್ಟು ಗಟ್ಟಿಯಿರುವ ಜೇಡಿಮಣ್ಣಿನ ಭೂಮಿಯೂ ನೀರು ತಾಗಿದರೆ ಮೆತ್ತಗಾಗುತ್ತದೆ. ಹಾಗೆಯೇ, ಮರಳು ಮಿಶ್ರಿತ ಮಣ್ಣೂ ಕೂಡ ನೀರು ಹರಿದರೆ, ಸುಲಭದಲ್ಲಿ ಕೊಚ್ಚಿಹೋಗುತ್ತದೆ. ಹಾಗಾಗಿ ನಾವು ಮಳೆಗಾಲದಲ್ಲಿ ನೀರಿನ ಹರಿವು ಹಾಗೂ ಅದರ ಮಟ್ಟದ ಬಗ್ಗೆ ವಿಶೇಷ ಗಮನ ಹರಿಸಬೇಕಾಗುತ್ತದೆ. ಮನೆಯ ಹೊರಗೆ, ಅದರ ಸುತ್ತಲೂ ಅಲ್ಲದೆ, ಮನೆಯ ಒಳಗೆ, ಫ್ಲೋರಿಂಗ್‌ನಲ್ಲೂ ಟೊಳ್ಳು ಶಬ್ದ- ಅದರ ಕೆಳಗಿನ ಮಣ್ಣಿನ ಮಟ್ಟದ ಏರುಪೇರಿನ ಸೂಚನೆಯೇ ಆಗಿರುತ್ತದೆ.
ಸದ್ದು ಮಾಡುವ ನೆಲ
ಮನೆ ಕಟ್ಟಿ ವರ್ಷಗಳಾದ ಮೇಲೂ ಒಮ್ಮೊಮ್ಮೆ ಒಳಾಂಗಣದಲ್ಲಿ ದಿಢೀರನೆ ಹೆಜ್ಜೆಹೆಜ್ಜೆಗೂ ಡಬ್ ಡಬ್ ಶಬ್ದ ಬರಲು ಶುರುವಾಗಬಹುದು. ಶುರುವಿನಲ್ಲಿ ಕೇಳಿಸಿಯೂ ಕೇಳಿಸದಂತಿರುವ ಈ ಸದ್ದು ನಂತರ ಹೆಚ್ಚಾಗಿ ಗದ್ದಲದಂತೆ ಭಾಸವಾಗಬಹುದು. ಹೀಗಾಗಲು ಮುಖ್ಯ ಕಾರಣ- ಫ್ಲೋರಿಂಗ್ ಬೆಡ್ ಕಾಂಕ್ರೀಟ್ ಕೆಳಗಿನ ಮಣ್ಣು ಕುಸಿದದ್ದೇ ಆಗಿರುತ್ತದೆ. ಸಾಮಾನ್ಯವಾಗಿ, ಸರಿಯಾಗಿ ನೀರುಣಿಸಿ, ಧಿಮ್ಮಸ್ಸು ಹೊಡೆದು ಗಟ್ಟಿಗೊಳಿಸದಿದ್ದರೆ, ಪ್ಲಿಂತ್ ಮಟ್ಟದವರೆಗೆ ಭರ್ತಿ ಮಾಡಿದ ಮಣ್ಣು, ಮಳೆಗಾಲದಲ್ಲಿ, ಅದರಲ್ಲೂ ಅತಿ ಹೆಚ್ಚು ಮಳೆ ಬಿದ್ದ ವರ್ಷದಂದು ನೀರು ಕುಡಿದು, ಕುಗ್ಗಿ, ಕೆಳಕ್ಕೆ ಇಳಿಯಬಹುದು. ಹೀಗಾದಾಗ, ಅದು ಈವರೆಗೂ ಹೊರುತ್ತಿದ್ದ ನೆಲಹಾಸಿಗೆ ಆಧಾರವಾಗಿದ್ದ ಬೆಡ್ ಕಾಂಕ್ರೀಟ್ ಭಾರ ಹೊರದಂತಾಗುತ್ತದೆ. ಕೆಲವೊಮ್ಮೆ ಬೆಡ್ ಕಾಂಕ್ರೀಟ್ ಇಳಿಯಲೂಬಹುದು. ಆಗ, ನೆಲ ಹಾಸಿನ ಕೆಳಗೆ ಒಂದು ಗಾಳಿಯ ಪದರ ಉಂಟಾಗುತ್ತದೆ. ಈ ಪದರದಿಂದಾಗಿ ನಮಗೆ ನಡೆದಾಡಿದಾಗ “ಡಬ್ ಡಬ್’ ಶಬ್ದ ಬರುವುದು. ಶಬ್ದ ಮಾತ್ರ ಬಂದು, ನೆಲಹಾಸು ಕೆಳಗೆ ಇಳಿಯದಿದ್ದರೆ, ತಕ್ಷಣಕ್ಕೆ ರಿಪೇರಿ ಮಾಡದಿದ್ದರೂ ಪರವಾಗಿಲ್ಲ. ಆದರೆ, ಒಂದೆರಡು ಇಂಚು ಇಳಿದು ಹೋದರೆ, ಮತ್ತೂ ಇಳಿಯುವ ಸೂಚನೆ ಇದ್ದರೆ, ತುರ್ತು ರಿಪೇರಿ ಮಾಡುವುದು ಅಗತ್ಯ. ಇಲ್ಲದಿದ್ದರೆ, ಎಡವುವುದು ಇಲ್ಲವೇ ಮುಗ್ಗರಿಸುವ ಸಾಧ್ಯತೆ ಇರುವುದರ ಜೊತೆಗೆ, ದಿಢೀರನೆ ನೆಲ ಅರ್ಧ ಅಡಿಯಷ್ಟು ಕುಸಿಯುವ ಸಾಧ್ಯತೆಯೂ ಇರುತ್ತದೆ.
ನೆಲದಡಿ ಭರ್ತಿ ಮಾಡಿ
ಮನೆ ಕಟ್ಟುವಾಗಲೇ ಭರ್ತಿ ಮಾಡುವಾಗ ಜೇಡಿ ಮಣ್ಣಿನ ಹೆಚ್ಚು ಅಂಶ ಇರುವ ಮಣ್ಣನ್ನು ಉಪಯೋಗಿಸಬಾರದು. ನುರುಜು ಕಲ್ಲು, ಇಲ್ಲವೇ ಮರಳು ಮಿಶ್ರಿತ ಮಣ್ಣನ್ನೇ ಬಳಸಬೇಕು. ಇಲ್ಲದಿದ್ದರೆ ಬೌಲ್ಡರ್ ಅಂದರೆ ಸಣ್ಣ ಗಾತ್ರದ ಕಲ್ಲುಗಳನ್ನು ತುಂಬಿ, ಅದರ ಸಂದಿಗಳಿಗೆ ಮರಳನ್ನು ತುಂಬಬೇಕು. ಈ ಮಾದರಿಯಲ್ಲಿ ಭರ್ತಿ ಮಾಡುವುದರಿಂದ ನೀರು ಕುಡಿದರೂ ನೆಲ ಕುಸಿಯುವುದಿಲ್ಲ. ಜೊತೆಗೆ ಯಾವುದೇ ಭರ್ತಿಯನ್ನು ಸರಿಯಾಗಿ ಧಿಮ್ಮಸ್ಸು ಬಡಿದು ಮಟ್ಟಮಾಡಬೇಕು- ಇದಕ್ಕೆ “ಧಿಮ್ಮಸ್ಸು ಹಾಕುವುದು’ ಅನ್ನುತ್ತಾರೆ. ಈ ಧಿಮ್ಮಸ್ಸು ಒಂದು ಭಾರವಾದ ಕಬ್ಬಿಣದ ಸುಮಾರು ಒಂಭತ್ತು ಇಂಚು ಚೌಕದ ಪಾದ ಹೊಂದಿದ ಸಲಕರಣೆಯಾಗಿದೆ. ಇದನ್ನು ಮಣ್ಣು ಹಾಗೂ ಕಾಂಕ್ರೀಟನ್ನು ಒತ್ತಿಹಾಕಲು ಬಳಸಲಾಗುತ್ತದೆ. ಹಾಗೆಯೇ ಯಾವುದೇ ಭರ್ತಿ ಮಾಡುವಾಗ ಸರಿಯಾಗಿ ನೀರು ಉಣಿಸಲು ಮರೆಯಬಾರದು. ಒಮ್ಮೆ ನೀರು ಕುಡಿದ ಭರ್ತಿ ಮಣ್ಣು ಇಲ್ಲವೆ ಇತರೆ ವಸ್ತುಗಳು ನಂತರ ನೀರು ಕುಡಿದರೂ ಕುಸಿಯುವ ಸಾಧ್ಯತೆ ಕಡಿಮೆ ಇರುತ್ತದೆ. ಕಲ್ಲು- ಮರಳು ದುಬಾರಿಯಾಗಿರುವ ಪ್ರದೇಶದಲ್ಲಿ, ಚೆನ್ನಾಗಿ ಸುಟ್ಟ ಮಣ್ಣಿನ ಇಟ್ಟಿಗೆಯ ಚೂರುಗಳನ್ನು, ಅವು ಹಳೆಯದಾದರೂ ಉಪಯೋಗಿಸಬಹುದು.
ಫ್ಲೋರಿಂಗ್ ರಿಪೇರಿ
ಬೆಡ್ ಕಾಂಕ್ರೀಟ್ ಹೆಚ್ಚು ಕುಸಿದಿಲ್ಲದಿದ್ದರೆ, ಫ್ಲೋರಿಂಗ್‌ನ ಕೆಲ ಬಿಲ್ಲೆಗಳು ಮಾತ್ರ ಸಡಿಲಗೊಂಡಿದ್ದರೆ, ಅವನ್ನು ಮಾತ್ರ ತೆಗೆದು ಮತ್ತೆ ಸಿಮೆಂಟ್ ಅಥವಾ ಈಗ ಲಭ್ಯವಿರುವ ಇತರೆ ಅಂಟುಗಳನ್ನು ಬಳಸಿ ರಿಪೇರಿ ಮಾಡಬಹುದು. ಒಮ್ಮೆ ಬಳಸಿದ ಟೈಲ್ಸ್‌ಗಳಿಗೆ ಅವುಗಳ ಹಿಂಬದಿಯೇ ಅಲ್ಲದೆ ಅಕ್ಕಪಕ್ಕವೂ ಸಿಮೆಂಟ್ ಅಂಟಿರುತ್ತದೆ. ಇವನ್ನೆಲ್ಲ ಚೆನ್ನಾಗಿ ಶುಚಿಗೊಳಿಸಿಯೇ ಮರುಬಳಕೆ ಮಾಡಬೇಕು. ಇಲ್ಲದಿದ್ದರೆ, ದಪ್ಪ ಹೆಚ್ಚಾಗಿ, ಮತ್ತೆ ಇದ್ದ ಸ್ಥಳದಲ್ಲಿ ಕೂರಿಸಲು ತೊಂದರೆ ಆಗಬಹುದು. ಅದೇ ರೀತಿಯಲ್ಲಿ, ಅಕ್ಕಪಕ್ಕ ಅಂಟಿರುವ ಹಳೆಯ ಸಿಮೆಂಟ್, ನೋಡಲು ಕೂದಲೆಳೆಯಷ್ಟು ಸಣ್ಣ ಎನಿಸಿದರೂ ಅವು ಒಂದಕ್ಕೊಂದು ಸರಿಯಾಗಿ ಕೂರದೆ, ಸಂದಿ ದೊಡ್ಡದಾಗಿ ನಾಲ್ಕಾರು ಟೈಲ್ಸ್‌ಗಳನ್ನು ಕೂರಿಸುವಾಗ, ಕಷ್ಟವಾಗಬಹುದು. ಅಕಸ್ಮಾತ್ ಬೆಡ್ ಕಾಂಕ್ರೀಟ್ ಕೆಳಗಿನ ಮಣ್ಣು ಕುಸಿದಿದ್ದರೆ, ಮಟ್ಟದಲ್ಲಿ ಹೆಚ್ಚು ಏರುಪೇರು ಇರದಿದ್ದರೆ, ಕಾಂಕ್ರೀಟ್‌ಅನ್ನು ಮತ್ತೆ ಹಾಕುವ ಅಗತ್ಯ ಇರುವುದಿಲ್ಲ. ಆದರೆ ಬೆಡ್ ಕಾಂಕ್ರೀಟ್ ನಾಲ್ಕಾರು ಇಂಚು ಇಳಿದಿದ್ದರೆ, ಅನಿವಾರ್ಯವಾಗಿ, ಫ್ಲೋರಿಂಗ್ ತೆಗೆದು, ಹಳೆಯ ಬೆಡ್ ಕಾಂಕ್ರೀಟ್ ರಿಪೇರಿ ಮಾಡಿ, ಅದು ಗಟ್ಟಿಗೊಂಡ ನಂತರವೇ ಅದರ ಮೇಲೆ ಮತ್ತೆ ಟೈಲ್ಸ್ ಹಾಕಲು ಸಾಧ್ಯ. ಮನೆಯ ಒಳಗೆ ರಿಪೇರಿ ಮಾಡುವುದು, ಅದರಲ್ಲೂ ನೆಲದ ರಿಪೇರಿ ಅತಿ ಕಿರಿಕಿರಿ ಆದರೂ, ಕುಸಿದ ನೆಲವನ್ನು ರಿಪೇರಿ ಮಾಡಲೇಬೇಕಾಗುತ್ತದೆ.
ಗೆದ್ದಲು ನಾಶಕ್ಕೆ ಸಿರಿಂಜ್‌ನಲ್ಲಿ ಮದ್ದು
ಒಮ್ಮೆ ಕುಸಿದ ನೆಲ ಮತ್ತೆ ಕುಸಿದರೆ ಅದು ತೀರಾ ಆಘಾತಕಾರಿ ಸಂಗತಿಯಾಗಿಬಿಡುತ್ತದೆ, ಹಾಗಾಗಿ ರಿಪೇರಿ ಮಾಡುವ ಮೊದಲು ತಜ್ಞರಿಂದ ಮೂಲ ಕಾರಣವನ್ನು ಪತ್ತೆ ಮಾಡಿ ಮುಂದುವರಿಯುವುದು ಉತ್ತಮ. ಈ ಹಿಂದೆ ಮಣ್ಣು ಭರ್ತಿ ಮಾಡುವಾಗ ಸರಿಯಾಗಿ ಮಾಡಿರದಿದ್ದರೆ, ಒಮ್ಮೆ ರಿಪೇರಿ ಮಾಡಿದ ನಂತರ ಪುನಃ ಇಳಿಯುವ ಸಾಧ್ಯತೆ ಕಡಿಮೆ ಇರುತ್ತದೆ. ಆದರೆ ಇತರೆ ಕಾರಣಗಳಿಗೆ ಆಗಿದ್ದರೆ, ಅದನ್ನೂ ಪರಿಹರಿಸಿಕೊಳ್ಳುವುದು ಅಗತ್ಯ. ಕೆಲವೊಮ್ಮೆ ಗೆದ್ದಲು ಗೂಡು ಕಟ್ಟುವುದರಿಂದಲೂ ನೆಲದ ಕೆಳಗೆ ನಡೆದಾಡಿದಾಗ “ಡಬ್ ಡಬ್’ ಶಬ್ದ ಬರುತ್ತದೆ. ಇದು ಒಂದೇ ಸ್ಥಳದಲ್ಲಿದ್ದರೆ, ನೆಲ ಕುಸಿಯದೇ ಇದ್ದರೆ, ಸಾಮಾನ್ಯವಾಗಿ ಗೆದ್ದಲಿಗೆ ಔಷಧಿ ಹೊಡೆದರೆ, ಗೂಡು ನಾಶವಾಗುತ್ತದೆ. ಈ ಮೂಲಕ ಈಗಾಗಲೇ ಬರುತ್ತಿರುವ ಶಬ್ದ ನಿಲ್ಲದಿದ್ದರೂ ಅದು ಹೆಚ್ಚಾಗುವುದನ್ನು ತಡೆಯಬಹುದು. ಇತ್ತೀಚಿನ ದಿನಗಳಲ್ಲಿ ನೆಲ ಕೊರೆಯಲು ಸಣ್ಣ ಭೈçರಿಗೆ(ಡ್ರಿಲ್‌ಗಳು) ಲಭ್ಯ ಇದ್ದು, ಇವನ್ನು ನಾಲ್ಕು ಟೈಲ್ಸ್ ಕೂಡುವ ಸ್ಥಳದಲ್ಲಿ ಬಳಸಿ, ಸಣ್ಣ ರಂಧ್ರ- ಸುಮಾರು ಏಳೆಂಟು ಇಂಚು ಇಳಿಯುವಷ್ಟು ಮಾಡಿ, ಗೆದ್ದಲು ನಿರೋಧಕ ರಾಸಾಯನಿಕವನ್ನು ಸಿರಿಂಜ್ ಮೂಲಕ ಸಿಂಪಡಿಸಬಹುದು. ಆ ಮೂಲಕ ನೆಲ ಅಗೆದು ರಿಪೇರಿ ಮಾಡುವ ತೊಂದರೆ ತಪ್ಪುತ್ತದೆ. ಒಮ್ಮೆ ರಾಸಾಯನಿಕವನ್ನು ಹಾಕಿದ ನಂತರ, ನೆಲಹಾಸಿನಲ್ಲಿ ಇರುವ ರಂಧ್ರವನ್ನು ಮುಚ್ಚಲು ಮರೆಯಬಾರದು. ಬಣ್ಣ ಸರಿದೂಗಿಸಿ, ರಂಧ್ರ ಹೆಚ್ಚು ಕಾಣದಂತೆ ಬಿಳಿ ಸಿಮೆಂಟ್ ಹಾಗೂ ಕಲರ್ ಪುಡಿಯ ಮಿಶ್ರಣ ಮಾಡಿ ಬಳಿಯಬೇಕು. ಹೀಗೆ ಮಾಡುವುದರಿಂದ ಮನೆಯೊಳಗೆ ರಾಸಾಯನಿಕದ ಘಾಟು ನಿಲ್ಲುವುದರ ಜೊತೆಗೆ, ಹಾಕಿದ ಮದ್ದು ನೆಲದಲ್ಲೇ ಉಳಿಯುವಂತೆಯೂ ಆಗುತ್ತದೆ.
ಹೆಚ್ಚಿನ ಮಾಹಿತಿಗೆ ಫೋನ್ 9844132826
ಆರ್ಕಿಟೆಕ್ಟ್ ಕೆ ಜಯರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.