ಕಲ್ಯಾಣ ಕರ್ನಾಟಕಕ್ಕೆ ಕೆಎಟಿ ಕೊಡುಗೆ!
•17ರಂದು ಸಿಎಂ ಬಿಎಸ್‌ವೈ ಚಾಲನೆ•ಹೈ-ಕ ಜನರ ಬೆಂಗಳೂರು ಅಲೆದಾಟಕ್ಕೆ ಬ್ರೇಕ್•ಸಂಭ್ರಮ ಇಮ್ಮಡಿ
Team Udayavani, Sep 9, 2019, 5:11 PM IST
• ರಂಗಪ್ಪ ಗಧಾರ
ಕಲಬುರಗಿ: ಹೈದ್ರಾಬಾದ ಕರ್ನಾಟಕ ಭಾಗವನ್ನು ‘ಕಲ್ಯಾಣ ಕರ್ನಾಟಕ’ ಎಂದು ಮರು ನಾಮಕರಣ ಮಾಡಿರುವ ಬೆನ್ನಲ್ಲೇ ಈ ಭಾಗದ ಜನತೆ ದಶಕದ ಬೇಡಿಕೆಯಾದ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ ಕಲಬುರಗಿ ಪೀಠ ಆರಂಭಿಸಲು ರಾಜ್ಯ ಸರ್ಕಾರ ಮಹೂರ್ತ ನಿಗದಿ ಮಾಡಿದೆ.
ಹೈದ್ರಾಬಾದ ನಿಜಾಮರಿಂದ ಮುಕ್ತಿ ಪಡೆದು ಭಾರತದ ಒಕ್ಕೂಟದಲ್ಲಿ ಸೇರ್ಪಡೆಯಾದ ಸೆ.17ರಂದು ಕೆಎಟಿ ಕಲಬುರಗಿ ಪೀಠವನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. ಕೆಎಟಿ ಪೀಠಕ್ಕಾಗಿ ನಗರದ ಜಿಲ್ಲಾ ನ್ಯಾಯಾಲಯ ಹಿಂಭಾಗದ ಖಾಸಗಿ ಕಟ್ಟಡವನ್ನು ಒಂದು ವರ್ಷ ಹಿಂದೆಯೇ ಬಾಡಿಗೆಗೆ ಪಡೆಯಲಾಗಿದೆ. ಕೋರ್ಟ್ ಹಾಲ್ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳುಳ್ಳ ಸುಸಜ್ಜಿತ ಕಟ್ಟಡ ಇದಾಗಿದೆ. ‘ಕಲಬುರಗಿ ಪೀಠ’ ಎಂದು ನಾಮಫಲಕವನ್ನು ಅಳವಡಿಸಲಾಗಿದ್ದು, ಉದ್ಘಾಟನೆ ಭಾಗ್ಯಕ್ಕಾಗಿ ಕಟ್ಟಡ ಕಾಯುತ್ತಿದೆ.
ಸರ್ಕಾರಿ ನೌಕರರು ನ್ಯಾಯಬದ್ಧ ಹಕ್ಕು ಪಡೆಯಲು ಮತ್ತು ಸಮಸ್ಯೆ ಪರಿಹರಿಸಿಕೊಳ್ಳಲು ಆಡಳಿತಾತ್ಮಕ ನ್ಯಾಯಮಂಡಳಿ ಸಹಕಾರಿಯಾಗಿದೆ. 1986ರಲ್ಲಿ ಬೆಂಗಳೂರಲ್ಲಿ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ ಸ್ಥಾಪಿಸಲಾಗಿತ್ತು. ಆದರೆ, ಉತ್ತರ ಕರ್ನಾಟಕದ ದೂರದ ಜಿಲ್ಲೆಗಳ ನೌಕರರು ಬೆಂಗಳೂರಿಗೆ ತೆರಳಿ ನ್ಯಾಯ ಪಡೆಯುವುದು ದುಸ್ತರವಾಗಿತ್ತು.
ಉತ್ತರ ಕರ್ನಾಟಕ ಭಾಗದಲ್ಲಿ ಆಡಳಿತಾತ್ಮಕ ನ್ಯಾಯಮಂಡಳಿ ಪೀಠ ಸ್ಥಾಪಿಸಬೇಕೆಂದು ದಶಕಗಳಿಂದ ಹೋರಾಟ ಮಾಡುತ್ತಾ ಬಂದಿದ್ದರು. ನಂತರ ಬೆಳಗಾವಿ ಮತ್ತು ಕಲಬುರಗಿ ವಿಭಾಗದಲ್ಲಿ ಪ್ರತ್ಯೇಕವಾದ ಪೀಠ ಆರಂಭಿಸಬೇಕೆಂದು ಬೇಡಿಕೆ ಇಟ್ಟಿದ್ದರು. ಕಳೆದ ಒಂದು ದಶಕದ ಹಿಂದೆ ಹೋರಾಟದ ಕಿಚ್ಚು ಹೆಚ್ಚಾಗಿದ್ದರಿಂದ 2015ರಲ್ಲಿ ಕಲಬುರಗಿ ಮತ್ತು ಬೆಳಗಾವಿ ಕೆಎಟಿ ಪೀಠ ಸ್ಥಾಪನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿತ್ತು.
ಆದರೆ, ಪೀಠಗಳನ್ನು ಕಾರ್ಯಾರಂಭ ಮಾಡುವಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿತ್ತು. ಮತ್ತೆ ಹೋರಾಟ ಆರಂಭವಾದ ಪರಿಣಾಮ ಕಳೆದ ವರ್ಷ ಡಿ.17ರಂದು ಬೆಳಗಾವಿ ಪೀಠಕ್ಕೆ ಚಾಲನೆ ನೀಡಲಾಗಿದೆ. ಅದೇ ಸಮಯದಲ್ಲಿ ಕಲಬುರಗಿ ಪೀಠವೂ ಆರಂಭವಾಗಲಿದೆ ಎನ್ನುವ ಭರವಸೆ ಇತ್ತು. ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ಪೀಠ ನನೆಗುದಿಗೆ ಬಿದ್ದಿತ್ತು. ಸೆ.17ರಿಂದ ಕಾರ್ಯಾರಂಭ ಆಗಲಿರುವ ಕಲಬುರಗಿ ಪೀಠ ರಾಜ್ಯದ ಮೂರನೇ ಪೀಠವಾಗಲಿದ್ದು, ಈ ಮೂಲಕ ಜನರ ಬಹುದಿನಗಳ ಕನಸು ನನಸಾಗಲಿದೆ.
ಕಲಬುರಗಿ ವಿಭಾಗದ ಸರ್ಕಾರಿ ನೌಕರರು ಕಚೇರಿ ಕೆಲಸ ಬಿಟ್ಟು ಸಾಕಷ್ಟು ಹಣ ಖರ್ಚು ಮಾಡಿಕೊಂಡು ಬೆಂಗಳೂರಿಗೆ ಅಲೆಯಬೇಕಿತ್ತು. ವರ್ಗಾವಣೆ ಸಂದರ್ಭದಲ್ಲಿ ಬೆಂಗಳೂರಿಗೆ ಹೋಗಿ ಪ್ರಕರಣ ಹೂಡುವಷ್ಟರಲ್ಲಿ ಸರ್ಕಾರದಿಂದ ವರ್ಗಾವಣೆ ಆದೇಶ ಹೊರ ಬೀಳುತ್ತಿತ್ತು. ಈಗ ಪೀಠ ಆರಂಭ ಆಗುವುದರಿಂದ ಸ್ಥಳೀಯವಾಗಿ ನೌಕರರಿಗೆ ಶೀಘ್ರ ಪರಿಹಾರ ಸಿಗಲಿದೆ. •ರಾಜು ಲೇಂಗಟಿ,
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ
ಕಲಬುರಗಿಯಲ್ಲಿ ಏಕ ಸದಸ್ಯರನ್ನು ಒಳಗೊಂಡ ಪೀಠ ಸ್ಥಾಪನೆಯಾಗಲಿದೆ. 10ಕ್ಕೂ ಹೆಚ್ಚು ಜನ ಸಿಬ್ಬಂದಿ ಇರಲಿದ್ದಾರೆ. ಹೈಕೋರ್ಟ್ ಪೀಠ ವ್ಯಾಪ್ತಿಯ ಕಲಬುರಗಿ, ಯಾದಗಿರಿ, ರಾಯಚೂರು, ಬೀದರ, ವಿಜಯಪುರ ಜಿಲ್ಲೆಗಳನ್ನು ಕೆಎಟಿ ಹೊಂದಿರಲಿದೆ. ಬೆಂಗಳೂರು ಪೀಠದಿಂದ ಕಲಬುರಗಿ ಪೀಠಕ್ಕೆ ಸುಮಾರು 3,500 ಪ್ರಕರಣ ವರ್ಗಾವಣೆ ಆಗಲಿವೆ. •ರಾಜಶೇಖರ ಡೋಂಗರಗಾಂವ,
ಉಪಾಧ್ಯಕ್ಷರು, ಗುಲಬರ್ಗಾ ನ್ಯಾಯವಾದಿಗಳು ಸಂಘ, ಕಲಬುರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.