![Kodagu-Polcie](https://www.udayavani.com/wp-content/uploads/2025/02/Kodagu-Polcie-415x249.jpg)
![Kodagu-Polcie](https://www.udayavani.com/wp-content/uploads/2025/02/Kodagu-Polcie-415x249.jpg)
Team Udayavani, Sep 11, 2019, 10:11 AM IST
ಹುಬ್ಬಳ್ಳಿ: ‘ಸ್ವಚ್ಛಮೇವ ಜಯತೆ’ ಯೋಜನೆ ಹೆಸರಲ್ಲಿ ಇದ್ದ ಮೈದಾನದ ಅಂದ ಕೆಡಿಸಲಾಗಿದೆ. ಅಷ್ಟು ಇಷ್ಟು ಬಳಕೆಯಾಗುತ್ತಿದ್ದ ಮೈದಾನ ಇದೀಗ ವಾಹನಗಳಿಗೆ ಕೆಲ ಬಿಡಿಭಾಗ ಜೋಡಣೆ ಹಾಗೂ ದುರಸ್ತಿಯ ವರ್ಕ್‌ಶಾಪ್-ಗ್ಯಾರೇಜ್ ರೂಪ ತಾಳಿದೆ. ಮೈದಾನ ಸ್ವಚ್ಛತೆ ಜವಾಬ್ದಾರಿಯ ಅಧಿಕಾರಿಗಳು ಮಾತ್ರ ನಮಗೇನು ಸಂಬಂಧವಿಲ್ಲ ಎಂಬಂತೆ ಮೌನಕ್ಕೆ ಜಾರಿದಂತಿದೆ.
-ಇದು ನಗರದ ಹೃದಯ ಭಾಗದಲ್ಲಿರುವ, ಸ್ಮಾರ್ಟ್‌ಸಿಟಿ ಯೋಜನೆಯಡಿ ಆಧುನಿಕ ಸೌಲಭ್ಯಗಳ ಸ್ಪರ್ಶ ಪಡೆಯಬೇಕಾಗಿರುವ ನೆಹರು ಮೈದಾನದ ಕಥೆ. ಕೇಂದ್ರ ಸರಕಾರದ ಸ್ವಚ್ಛ ಭಾರತ ಯೋಜನೆಯ ಮುಂದುವರಿದ ಭಾಗವಾಗಿ ಸ್ವಚ್ಛಮೇವ ಜಯತೆ ಯೋಜನೆ ಗಾಂಧಿ ಜಯಂತಿ ದಿನವಾದ ಅ. 2ರಿಂದ ಚಾಲನೆ ಪಡೆಯಲಿದೆ. ಯೋಜನೆ ಪ್ರಚಾರ ವಾಹನಗಳನ್ನು ಸಜ್ಜುಗೊಳಿಸಲು ನೆಹರು ಮೈದಾನವನ್ನು ವರ್ಕ್‌ಶಾಪ್ ಮಾದರಿಯಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಹಲವು ವರ್ಷಗಳಿಂದ ಅಭಿವೃದ್ಧಿ ಹೊಂದುತ್ತದೆ ಎಂದು, ಅಭಿವೃದ್ಧಿ ಹೊಂದಿತೆಂದು, ಇದೀಗ ಸ್ಮಾರ್ಟ್‌ಸಿಟಿ ಯೋಜನೆಯಡಿ ಆಧುನಿಕ ರೂಪ ತಾಳಲಿದೆ ಎಂದು ಹೇಳಲ್ಪಡುವ, ಕ್ರೀಡೆ, ರಾಜಕೀಯ, ಧಾರ್ಮಿಕ, ಸಾಮಾಜಿಕ ಇನ್ನಿತರ ಸಮಾವೇಶಗಳಿಗೆ, ಪಟಾಕಿ ಮಾರಾಟಕ್ಕೂ ಬಳಕೆಯಾಗುತ್ತಿರುವ ನೆಹರು ಮೈದಾನ ಹಲವು ಸೌಲಭ್ಯ ಹಾಗೂ ನಿರ್ವಹಣೆ ಕೊರತೆಯಿಂದ ನರಳುತ್ತಿದೆ. ಇದು ಸಾಲದು ಎನ್ನುವಂತೆ ಸ್ವಚ್ಛಮೇವ ಜಯತೆ ಯೋಜನೆ ಹೆಸರಲ್ಲಿ ಇದ್ದ ಸ್ಥಿತಿಯನ್ನು ಹದಗೆಡುವ ಕಾರ್ಯ ನಿರ್ವಿಘ್ನವಾಗಿ ಸಾಗತೊಡಗಿದೆ.
ಕ್ರಿಕೆಟ್, ವಾಲಿಬಾಲ್, ರನ್ನಿಂಗ್ ಇನ್ನಿತರ ಕ್ರೀಡೆಗಳಿಗಾಗಿ ಅನೇಕರು ನೆಹರು ಮೈದಾನಕ್ಕೆ ನಿತ್ಯವೂ ಆಗಮಿಸುತ್ತಾರೆ. ವಿವಿಧ ಶಾಲಾ-ಕಾಲೇಜು ಹಾಗೂ ಸಂಘ-ಸಂಸ್ಥೆಗಳು ಕ್ರೀಡಾಕೂಟ ಆಯೋಜನೆಗೆ ಇದನ್ನೇ ಅವಲಂಬಿಸಿವೆ. ಬೆಳಗ್ಗೆ, ಸಂಜೆ ವೇಳೆ ವಾಯುವಿಹಾರಕ್ಕೆ ಇದೇ ಮೈದಾನ ಆಸರೆಯಾಗಿದೆ. ಆದರೆ, ಮೈದಾನದ ಸದ್ಯದ ಸ್ಥಿತಿಯಿಂದ ಕ್ರೀಡೆ, ವಾಯುವಿಹಾರಕ್ಕೂ ಅವಕಾಶ ಇಲ್ಲದ ಸ್ಥಿತಿ ನಿರ್ಮಾಣಗೊಂಡಿದೆ.
ವಾಹನಗಳಿಗೆ ಬ್ಯಾನರ್ ಕಟ್ಟಲು ಬಳಕೆ: ‘ಸ್ವಚ್ಛಮೇವ ಜಯತೆ’ ಯೋಜನೆ ಜಾಗೃತಿಗಾಗಿ 22 ಮಿನಿ ಲಾರಿಗಳನ್ನು ಪ್ರಚಾರಕ್ಕಾಗಿ ಬಳಸುವ ಉದ್ದೇಶದಿಂದ ನಾಲ್ಕೈದು ದಿನಗಳಿಂದ ವಾಹನಗಳಿಗೆ ಪ್ರಚಾರ ಸಾಮಗ್ರಿ ಅಳವಡಿಕೆಗಾಗಿ ನೆಹರು ಮೈದಾನ ಬಳಸಿಕೊಳ್ಳಲಾಗುತ್ತಿದೆ. ಮಿನಿ ಲಾರಿಗಳ ಓಡಾಟದಿಂದ ರನ್ನಿಂಗ್ ಟ್ರ್ಯಾಕ್ ಸೇರಿದಂತೆ ಮೈದಾನ ಸಂಪೂರ್ಣ ಹಾಳಾಗಿದೆ.
‘ಸ್ವಚ್ಛಮೇವ ಜಯತೆ’ ಜಾಗೃತಿಗಾಗಿ ಪ್ರಚಾರ ವಾಹನಗಳ ಬಾಡಿಗೆ ಪಡೆಯುವ ನಿಟ್ಟಿನಲ್ಲಿ ಖಾಸಗಿಯವರಿಗೆ ಇದರ ಗುತ್ತಿಗೆ ನೀಡಲಾಗಿದೆ. ಖಾಲಿಯಾಗಿರುವ ಜಾಗದಲ್ಲಿ ಪ್ರಚಾರ ವಾಹನಗಳ ತಯಾರಿ ಕೈಗೊಳ್ಳಬೇಕಾಗಿತ್ತಾದರೂ, ಅದರ ಬದಲು ನೆಹರು ಮೈದಾನವನ್ನೇ ಬಳಸಿಕೊಳ್ಳಲಾಗುತ್ತಿದೆ.
ವಿವಿಧ ಸೌಲಭ್ಯ ಇಲ್ಲದಿರುವುದು, ನಿರ್ವಹಣೆ ಕೊರತೆಯಿಂದ ನೈಹರು ಮೈದಾನವನ್ನು ಸುತ್ತಲು ಗೋಡೆ ಕಟ್ಟಿದ ಒಂದು ಬಯಲು ಜಾಗ ಎಂದು ಕರೆಯಬಹುದೆ ವಿನಃ ಅದನ್ನು ಕ್ರೀಡಾ ಮೈದಾನವೆಂದು ಭಾವಿಸಿಕೊಳ್ಳಬೇಕಾದ ಸ್ಥಿತಿಯಲ್ಲಿದೆ. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ರಾಡಿಮಯವಾಗಿರುವ ಮೈದಾನ ಇದೀಗ ವಾಹನಗಳ ಓಡಾಟದಿಂದ ಇನ್ನಷ್ಟು ಹದಗೆಟ್ಟಿದೆ.
ನಿತ್ಯ ಇಲ್ಲಿಗೆ ಕ್ರಿಕೆಟ್ ಆಟವಾಡಲು ಬರುತ್ತಿದ್ದೇವೆ. ನಾಲ್ಕೈದು ದಿನದಿಂದ 20ಕ್ಕೂ ಹೆಚ್ಚು ವಾಹನಗಳು ಮೈದಾನದಲ್ಲೆಲ್ಲ ತಿರುಗಾಡುತ್ತಿವೆ. ಮೈದಾನ ಹಾಳು ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲಿ. •ಸಲೀಂ, ಕ್ರೀಡಾಪಟು ಬೆಳಗ್ಗೆ ವಾಯುವಿಹಾರಕ್ಕೆ ಅನುಕೂಲವಾಗಿರುವ ಮೈದಾನವನ್ನು ಈ ರೀತಿ ಹಾಳು ಮಾಡಲು ಇವರಿಗೆ ಯಾರು ಪರವಾನಗಿ ಕೊಟ್ಟಿದ್ದಾರೆ. ಮೊದಲೇ ಮಳೆಯಾಗಿ ಹಸಿಯಾಗಿರುವ ಮೈದಾನದಲ್ಲಿ ಲಾರಿಗಳು ಓಡಾಡಿದರೆ ಹಾಳಾಗುತ್ತದೆ ಎಂಬ ಜ್ಞಾನವೂ ಅಧಿಕಾರಿಗಳಿಗಿಲ್ಲವೇ? •ಮಲ್ಲಿಕಾರ್ಜುನ ಬಸಾಪುರ, ವಾಯುವಿಹಾರಿ
ನೆಹರು ಮೈದಾನ ಸದ್ಯದ ಸ್ಥಿತಿ ಕುರಿತು ಅಧಿಕಾರಿಗಳನ್ನು ವಿಚಾರಿಸಿದ್ದೇನೆ. ಸರ್ಕಾರಿ ಯೋಜನೆ ಹಿನ್ನೆಲೆಯಲ್ಲಿ ಖಾಸಗಿ ವ್ಯಕ್ತಿಗಳ ಬಳಕೆಗೆ ಪಾಲಿಕೆಯ ಪಿಆರ್‌ಒ ಕಚೇರಿಯಿಂದ ಪರವಾನಗಿ ನೀಡಲಾಗಿದೆ. ಮೈದಾನ ಹಾಳಾಗಿದ್ದರೆ ಅನುಮತಿ ಪಡೆದ ವ್ಯಕ್ತಿಯಿಂದಲೇ ಅದನ್ನು ಸರಿಪಡಿಸಲು ಆದೇಶಿಸಲಾಗುವುದು. •ಸುರೇಶ ಇಟ್ನಾಳ, ಪಾಲಿಕೆ ಆಯುಕ್ತ
•ಸೋಮಶೇಖರ ಹತ್ತಿ
Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’
ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ
Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು
Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್ ವಶಕ್ಕೆ
ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್
You seem to have an Ad Blocker on.
To continue reading, please turn it off or whitelist Udayavani.