ನಾಡಿನಾದ್ಯಂತ ತಿರುವೋಣಂ ಸಂಭ್ರಮ, ಸಡಗರ
Team Udayavani, Sep 11, 2019, 6:10 PM IST
ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಯುವ ಕೇಸರಿ ಮಧೂರು ಅವರು ರಚಿಸಿದ ಹೂವಿನ ರಂಗೋಲಿ "ಪೂಕಳಂ'.
ಕಾಸರಗೋಡು: ವಾಮನ ಅವತಾರದಲ್ಲಿ ಮಹಾವಿಷ್ಣುವು ಬಲಿ ಚಕ್ರವರ್ತಿಯ ಶಿರದಲ್ಲಿ ತನ್ನ ಪಾದವನ್ನಿಟ್ಟು ಪಾತಾಳಕ್ಕೆ ತಳ್ಳಿದ. ಈ ಸಂದರ್ಭದಲ್ಲಿ ವರ್ಷದಲ್ಲಿ ಒಂದು ಭಾರಿ ತನ್ನ ಪ್ರಜೆಗಳನ್ನು ನೋಡುವ ಅವಕಾಶ ಪಡೆಯುತ್ತಾನೆ. ಈ ಹಿನ್ನೆಲೆಯಲ್ಲಿ ಬಲಿ ಚಕ್ರವರ್ತಿ ನಾಡಿಗೆ ಬರುತ್ತಾನೆ ಎಂಬ ಸಂಕಲ್ಪದೊಂದಿಗೆ ಆಚರಿಸುವ ಕೇರಳೀಯರ ಪಾಲಿನ ಅತಿ ದೊಡ್ಡ ಹಬ್ಬ “ಓಣಂ’ ನಾಡಿನಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ತಿರುವೋಣಂ ಪ್ರಯುಕ್ತ ಬಹುತೇಕ ಎಲ್ಲ ದೇಗುಲಗಳಲ್ಲಿ, ಮಂದಿರಗಳಲ್ಲಿ, ದೈವಸ್ಥಾನಗಳಲ್ಲಿ ಸೋಮವಾರ ಭಾರೀ ಜನಸಂದಣಿ ಕಂಡು ಬಂತು. ಕುಂಬಳೆ ಸೀಮೆಯ ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಬೆಳಗ್ಗಿನಿಂದಲೇ ಭಾರೀ ಸಂಖ್ಯೆಯಲ್ಲಿ ಭಕ್ತರು ನೆರೆದು ವಿಶೇಷ ಪೂಜೆ, ಪುನಸ್ಕಾರ ನಡೆಸಿದರು.
ಸುಖ, ಶಾಂತಿ, ನೆಮ್ಮದಿಯ ಮತ್ತು ಭಾವೈಕ್ಯದ, ಸಾಮರಸ್ಯದ ಸಂದೇಶವನ್ನು ಸಾರುವ ಓಣಂ ಹಬ್ಬವನ್ನು ಸಂಪ್ರದಾಯಬದ್ಧವಾಗಿ ಶ್ರದ್ಧಾ, ಭಕ್ತಿಯಿಂದ, ಸಂಭ್ರಮ, ಸಡಗರದಿಂದ ಕೇರಳೀಯರು ಆಚರಿಸಿದರು. ಓಣಂ ಹಬ್ಬದ ವಿಶೇಷವಾಗಿ ರೂಪು ಪಡೆಯುವ ಹೂವಿನ ರಂಗೋಲಿ “ಪೂಕಳಂ’ ರಚಿಸಿ “ಮಾವೇಲಿ’ಯನ್ನು ಬರಮಾಡಿಕೊಂಡರು. ಮನೆ, ಮಠ, ದೇವಸ್ಥಾನ, ದೈವಸ್ಥಾನ, ತರವಾಡು ಮನೆಗಳಲ್ಲಿ ಪೂಕಳಂ ರಚಿಸಲಾಗಿತ್ತು. “ಸದ್ಯ’ವನ್ನು ಉಂಡು ಪರಸ್ಪರ ಶುಭಾಶಯವನ್ನು ಕೋರಿ ಮುಂದಿನ ದಿನಗಳಲ್ಲಿ ಸುಖ, ಶಾಂತಿ, ನೆಮ್ಮದಿಯ ಬದುಕಿಗಾಗಿ ಪ್ರಾರ್ಥಿಸಿದರು.
“ತಿರುವೋಣಂ’ ದಿನವಾದ ಬುಧವಾರ ಬೆಳಗ್ಗೆ ಎದ್ದು ದೇಗುಲಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಕುಟುಂಬ ಸಮೇತರಾಗಿ ಓಣಂ ಸಂತೋಷವನ್ನು ಹಂಚಿಕೊಂಡರು.
ಹಬ್ಬದ ಸಂಭ್ರಮ
ಕೇರಳೀಯರು ಎಲ್ಲೇ ಇರಲಿ. ಓಣಂ ಬಂತೆಂದರೆ ತವರಿಗೆ ತಲುಪಿ ಕುಟುಂಬದ ಜೊತೆ ಸೇರಿಕೊಳ್ಳುತ್ತಾರೆ. ಸುಖದು:ಖಕ್ಕೆ ಮಿಡಿಯುತ್ತಾರೆ. ಕೇರಳೀಯರಿಗೆ ಓಣಂ ಕೇವಲ ಹಬ್ಬ ಮಾತ್ರವಲ್ಲ. ಅದು ಸಮೃದ್ಧಿಯ ದಿನವೂ ಹೌದು. ಕೃಷಿಕರ ದಿನವೂ ಹೌದು. ಈ ಕಾರಣದಿಂದ ಓಣಂ ಕೇರಳೀಯರಿಗೆ ರಾಷ್ಟ್ರೀಯ ಹಬ್ಬ.
ಮಾವೇಲಿ ರಾಜನು ವರ್ಷಕ್ಕೊಮ್ಮೆ ಭೂಮಿಗೆ ಬಂದು ತನ್ನ ಪ್ರಜೆಗಳ ಸಂಕಷ್ಟಗಳನ್ನು ಪರಿಹರಿಸುತ್ತಾನೆ ಎಂಬ ನಂಬಿಕೆಯಲ್ಲಿ ಆಚರಿಸುವ ಓಣಂ ಅತ್ತ ನಕ್ಷತ್ರದಿಂದ ತಿರುವೋಣಂ ವರೆಗಿನ 10 ದಿವಸಗಳ ಕಾಲ ಆಚರಣೆಯಿದೆ. ಓಣಂಗೆ ಸಂಬಂಧಿಸಿ ಹಲವು ಕಥೆಗಳನ್ನು ಹೆಣೆಯಲಾಗಿದೆ. ಕನ್ನಡಿಗರು ನಂಬಿರುವ ಮಹಾಬಲಿಯನ್ನು ಮಲಯಾಳಿಗಳು “ಮಾವೇಲಿ’ ಎನ್ನುವ ಬಲಿಚಕ್ರವರ್ತಿಯ ಸುತ್ತ ಓಣಂ ಸಂಬಂಧ ಕಥೆಯನ್ನು ಹೆಣೆಯಲಾಗಿದೆ.
ಓಣಂ ಹಬ್ಬವನ್ನು ಮಲೆಯಾಳಿಗಳು ವಿಶಿಷ್ಟವಾಗಿ ಆಚರಿಸುತ್ತಾರೆ. ಇಲ್ಲಿನ ಪ್ರಧಾನ ಆಕರ್ಷಣೆ ಹೂವಿನ ರಂಗೋಲಿ ಪೂಕಳಂ. ಇದಕ್ಕಾಗಿ ಮಕ್ಕಳು ಓಣಂ ಪಾಟನ್ನು(ಹಾಡು) ಹಾಡುತ್ತಾ ಹೂಗಳನ್ನು ಕೊಯ್ದು ತರುತ್ತಾರೆ. ಬಳಿಕ ಮನೆಯ ಮುಂಭಾಗದಲ್ಲಿ ಪೂಕಳಂ ರಚಿಸಲಾಗುತ್ತದೆ. ಇದರಲ್ಲೂ ಎರಡು ರೀತಿ ಇದೆ. ಒಂದು ಸಾಧಾರಣ ಪೂಕಳಂ. ಇನ್ನೊಂದು ವಾಮನನ ಪ್ರತಿರೂಪವಾದ ತ್ರಿಕ್ಕಾಕ್ಕರೆಯಪ್ಪನನ್ನು ಹೂ ರಂಗೋಲಿಯ ಮಧ್ಯದಲ್ಲಿ ಸ್ಥಾಪಿಸಲಾಗುತ್ತದೆ.
ಓಣಂ ಸದ್ಯ : “ಕಾಣಂ ವಿಟ್ಟುಂ ಓಣಂ ಉಣ್ಣಣಂ’ ಅಂದರೆ ಮನೆ, ಪಾತ್ರೆ ಮಾರಿಯಾದರೂ ಓಣಂ ಸದ್ಯ (ಭೂರೀ ಭೋಜನ)ಮಾಡಬೇಕು ಎಂಬ ಮಾತಿನಂತೆ ಕೇರಳೀಯರು ಸುಮಾರು 28 ಬಗೆಯ ಭಕ್ಷ್ಯಗಳನ್ನು ತಯಾರಿಸಿ ಸವಿದರು. ಉಪ್ಪೇರಿ, ಶರ್ಕರ ವರಟ್ಟಿ, ಪಳಂ, ಪಪ್ಪಡಂ, ನಾರಂಙ ಅಚ್ಚಾರ್, ಮಾಂಙ ಅಚ್ಚಾರ್, ಪುಳಿಯಿಂಜಿ, ತೀಯಲ್, ಕಿಚ್ಚಡಿ, ಪಚ್ಚಡಿ, ತೋರನ್, ಅವಿಯಲ್, ಕೂಟ್ಟುಕರಿ, ಓಲನ್, ಚೋರ್ ಅನ್ನ, ಪರಿಪ್ಪ್ ಕರಿ – ನೈ, ಸಾಂಬಾರ್, ರಸಂ, ಕಾಳನ್, ಪಚ್ಚ ಮೋರ್ – ಸಂಬಾರಂ, ಆಡ ಪ್ರಥಮನ್, ಪಾಲ್ ಪಾಯಸಂ, ಸೇಮಿಯಾ ಪಾಯಸಂ, ಕಡಲ ಪಾಯಸಂ, ಪಯರು ಪಾಯಸಂ, ಚಕ್ಕ ಪಾಯಸಂ, ನೇಂದ್ರಪಳಂ ಪಾಯಸಂ, ಕೈತಚಕ್ಕ ಪಾಯಸಂ ಹೀಗೆ ವಿವಿಧ 28 ಹೆಸರಿನ ಭಕ್ಷ್ಯಗಳನ್ನು ಸವಿದು ಸಂಭ್ರಮಿಸಿದರು.
ಓಣಂ ಹಬ್ಬದ ಅಂಗವಾಗಿ ನಾಡಿನೆಲ್ಲೆಡೆ ಮಹಿಳೆಯರು ತಿರುವಾದಿರ ನೃತ್ಯ, ಕೈಕೊಟ್ಟುಕಳಿ, ತುಂಬಿ ತುಳ್ಳಲ್, ಉಯ್ನಾಲೆಯಾಟ ಮೊದಲಾದವುಗಳಿಂದ ರಂಜಿಸಿದರು. ಪುರುಷರಿಗೆ ಓಣಂ ತಲ್, ಹಗ್ಗ ಜಗ್ಗಾಟ, ಪಂಚವಾದ್ಯ ವಾದನ, ತಾಯಂಬಕ, ಹುಲಿ ವೇಷ ಹೀಗೆ ವಿವಿಧ ಸ್ಪರ್ಧೆಗಳು ನಡೆಯಿತು.
ಸಾಮರಸ್ಯದ ಹಬ್ಬ
ಸಮಾನತೆಯ ಸಾರವನ್ನು, ಶಾಂತಿ ಸಾಮರಸ್ಯದ ಸಂದೇಶವನ್ನು ಸಾರುವ ಕೇರಳೀಯರ ನಾಡ ಹಬ್ಬ “ಓಣಂ’. ಜಾತಿ, ಮತ, ಧರ್ಮಗಳ ಎಲ್ಲೆ ಮೀರಿ ಯಾವುದೇ ತಾರತಮ್ಯವಿಲ್ಲದೆ ಆಚರಿಸುವ ಓಣಂ ಹಬ್ಬ ಭಾವೈಕ್ಯತೆಯನ್ನು ಬಿಂಬಿಸಿ ಮುಖ್ಯ ವಾಹಿನಿಯಲ್ಲಿ ಬೆರೆಯುವುದು ಒಂದು ರಸ ಕ್ಷಣ. ಸಿಂಹ ಮಾಸದ ಹಸ್ತಾ ನಕ್ಷತ್ರದಂದು ಆರಂಭಿಸಿ ಶ್ರಾವಣ ನಕ್ಷತ್ರದ ವರೆಗೆ ಹತ್ತು ದಿವಸಗಳ ಕಾಲ ಕೇರಳದಲ್ಲಿ ಓಣಂ ಹಬ್ಬ ಆಚರಿಸಲಾಗುತ್ತದೆ. ಇದು “ಅತ್ತಂ ಪತ್ತಿನ್ ಪೊನ್ನೋಣಂ’ ಎಂದು ಕರೆಯಲ್ಪಡುತ್ತದೆ. ಇದರಲ್ಲಿ 9ನೇ ದಿನ ಉತ್ತರಾಪಾದ ನಕ್ಷತ್ರದ ದಿನವನ್ನು “ಉತ್ರಾಡಂ’ ಸೆ.10 ರಂದು ಕೊಂಡಾಡಲಾಯಿತು. ಉತ್ರಾಡಂ ಹೆಣ್ಣು ಮಕ್ಕಳಿಗೆ ಸಂಭ್ರಮ. ಮಕ್ಕಳಿಗೆ ಅವರವರ ತವರು ಮನೆಯವರು, ಸಂಬಂಧಿಕರು, ಬಂಧು-ಬಳಗದವರು ನೂತನ ಬಟ್ಟೆ, ಆಭರಣಗಳನ್ನು ಉಡುಗೊರೆಯಾಗಿ ನೀಡಿದರು. 10ನೇ ದಿನವಾದ ಬುಧವಾರ ತಿರುವೋಣಂ ಆಚರಿಸಿದ್ದು, ಮನೆಯವರೆಲ್ಲರಿಗೂ “ಓಣಕೋಡಿ’ ಎಂದರೆ ಅವರವರಿಗೆ ಒಗ್ಗುವ ಹೊಸತಾದ ಉಡುಗೆಗಳನ್ನು ನೀಡಿದರು. ಹಿಂದಿನ ಕಾಲದಲ್ಲಿ ತರವಾಡು ಮನೆಗಳಲ್ಲಿ ಮಕ್ಕಳು, ಮರಿಮಕ್ಕಳೆಲ್ಲಾ ಓಣಂನ ದಿನ ಒಟ್ಟಾಗಿ ಸೇರುತ್ತಿದ್ದರು. ಅವರಿಗೆಲ್ಲಾ ಹೊಸ ಬಟ್ಟೆ, ಮಧ್ಯಾಹ್ನ “ಓಣಂ ಸದ್ಯ’. ಓಣಂ ಹಬ್ಬದ ಆಚರಣೆಯಲ್ಲಿ “ಒನ್ನಾಂ ಓಣಂ’ (ಒಂದನೇ ಓಣಂ), “ತಿರುವೋಣಂ’ (ಎರಡನೇ-ನಡು ಓಣಂ), “ಮೂನ್ನಾಂ ಓಣಂ’ (ಮೂರನೇ ಓಣಂ) ಎಂದು ವಿಶೇಷವಾಗಿ ಆಚರಿಸುತ್ತಾರೆ. ದಕ್ಷಿಣ ಕೇರಳದಲ್ಲಿ ನಾಲ್ಕನೇ ಓಣಂವನ್ನು “ಚದಯಂ’ದಿನವೆಂದೂ ಆಚರಿಸಲಾಗುತ್ತದೆ. ವರ್ಕಲ ಶಿವಗಿರಿಯಲ್ಲಿ ವಿಶೇಷ ಉತ್ಸವ ಜರಗುತ್ತದೆ. ಉತ್ತರಾಷಾಡ ನಕ್ಷತ್ರದಂದು ಆರನ್ಮುಳದಲ್ಲಿ ಜರಗುವ ಉತ್ರಟ್ಟಾದಿ ವಳ್ಳಂಕಳಿ (ದೋಣಿ ಸ್ಪರ್ಧೆ)ಯು ವಿಶ್ವ ಪ್ರಸಿದ್ಧವಾಗಿದೆ. ಶ್ರಾವಣ ನಕ್ಷತ್ರದ ವರೆಗೆ 28 ದಿನಗಳ ಕಾಲ ಓಣಂ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ದಿನವನ್ನು ದಕ್ಷಿಣ ಕೇರಳದಲ್ಲಿ “ಇರುಪತ್ತೆಟ್ಟಾಂ ಓಣಂ’ (ಇಪ್ಪತ್ತೆಂಟನೇ ಓಣಂ) ಎಂಬುದಾಗಿ ವಿಶೇಷವಾಗಿ ಆಚರಿಸಲಾಗುತ್ತಿದೆ.
ಮನೆ ಮನೆಯಲ್ಲಿ ಹೂವಿನ ರಂಗೋಲಿ
ಬಲಿ ಚಕ್ರವರ್ತಿವನ್ನು ಸ್ವಾಗತಿಸಲು ಮನೆ ಮನೆಗಳಲ್ಲಿ ಹೂವಿನ ರಂಗೋಲಿ “ಪೂಕಳಂ’ ರಚಿಸಿದರು. ಹೂವಿನ ರಂಗೋಲಿ ಅವರವರ ಆರ್ಥಿಕ ಅನುಕೂಲಕ್ಕೆ ತಕ್ಕಂತೆ ರಂಗೋಲಿಯ ಗಾತ್ರ ಬೆಳೆಯುತ್ತಾ ಹೋಗುತ್ತದೆ. ಹಿಂದೆಲ್ಲ ಮನೆ ಪರಿಸರಗಳಲ್ಲಿ, ಕಾಡುಗಳಲ್ಲಿ ಬೆಳೆಯುವ ಹೂಗಳನ್ನು ಸಂಗ್ರಹಿಸಿ “ಪೂಕಳಂ’ ರಚಿಸಲಾಗುತ್ತಿತ್ತು. ಆದರೆ ಇಂದು ಕೃಷಿಯಾಗಿ ಬೆಳೆದ ಹೂಗಳನ್ನೇ ಬಳಸುತ್ತಾರೆ. ಕರ್ನಾಟಕದಿಂದ ಭಾರೀ ಪ್ರಮಾಣದಲ್ಲಿ ವಿವಿಧ ಬಣ್ಣದ ಹಾಗು ವೈವಿಧ್ಯಮಯ ಹೂಗಳು ಕಾಸರಗೋಡು ಸಹಿತ ಕೇರಳಕ್ಕೆ ಬಂದಿದ್ದು ಉತ್ತಮ ವ್ಯಾಪಾರವೂ ನಡೆಯಿತು. ತಮಿಳುನಾಡಿನಿಂದಲೂ ಹೂಗಳು ಭಾರೀ ಪ್ರಮಾಣದಲ್ಲಿ ಬಂದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.