ಪಾಕ್ ಪ್ರಯತ್ನ ವಿಫಲ
Team Udayavani, Sep 12, 2019, 5:26 AM IST
ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ವಿಚಾರವನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ 42ನೇ ಸಮ್ಮೇಳನದಲ್ಲಿ ಪ್ರಸ್ತಾವಿಸಿ ಭಾರತವನ್ನು ಮಣಿಸುವ ಪಾಕಿಸ್ಥಾನದ ಪ್ರಯತ್ನ ವಿಫಲಗೊಂಡಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ವಕ್ತಾರರೇ ಕಾಶ್ಮೀರ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂಬ ಹೇಳಿಕೆ ನೀಡಿರುವುದರಿಂದ ಭಾರತ ಇನ್ನೊಂದು ದೊಡ್ಡ ಮಟ್ಟದ ರಾಜತಾಂತ್ರಿಕ ಗೆಲುವು ಸಾಧಿಸಿದಂತಾಗಿದೆ.
ಮಾನವ ಹಕ್ಕುಗಳ ಸಮ್ಮೇಳನದಲ್ಲಿ ಭಾರತ ಮತ್ತು ಪಾಕ್ ಪ್ರತಿನಿಧಿಗಳ ನಡುವೆ ಬಿಸಿ ವಾಗ್ಯುದ್ಧವೇ ನಡೆದಿತ್ತು. ಪಾಕಿಸ್ಥಾನದ ಆರೋಪಗಳಿಗೆಲ್ಲ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ವಿಜಯಾ ಸಿಂಗ್ ಠಾಕೂರ್, ಕಾಶ್ಮೀರ ವಿಚಾರದಲ್ಲಿ ನಾವು ಕೈಗೊಂಡಿರುವ ನಿರ್ಧಾರ ಕಾನೂನಾತ್ಮಕವಾದದ್ದು. ಕಾಶ್ಮೀರ ಸಂಪೂರ್ಣವಾಗಿ ಭಾರತದ ಆಂತರಿಕ ವಿಚಾರವಾಗಿದ್ದು, ಸರಕಾರದ ನಿರ್ಧಾರವನ್ನು ಜನರೂ ಸ್ವಾಗತಿಸಿದ್ದಾರೆ. ಭಾರತ ತನ್ನ ಆಂತರಿಕ ವಿಚಾರದಲ್ಲಿ ಅನ್ಯ ದೇಶಗಳ ಹಸ್ತಕ್ಷೇಪವನ್ನು ಸಹಿಸುವುದಿಲ್ಲ ಎಂದು ಖಡಕ್ ಆಗಿಯೇ ಉತ್ತರ ನೀಡಿದ್ದಾರೆ. ಜತೆಗೆ ಪಾಕ್‌ಗೆ ಬೆಂಗಾವಲಾಗಿ ನಿಂತಿರುವ ಚೀನಕ್ಕೂ ಚಳಿ ಬಿಡಿಸಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಸಮುದಾಯದ ಎದುರು ಭಾರತ ತನ್ನ ನಿಲುವನ್ನು ಇನ್ನೊಮ್ಮೆ ಸ್ಪಷ್ಟಪಡಿಸಿದೆ.
ಇದಕ್ಕೆ ಪೂರಕವಾಗಿ ಈಗ ವಿಶ್ವಸಂಸ್ಥೆಯ ಕಾರ್ಯದರ್ಶಿ ಆ್ಯಂಟಾನಿಯೊ ಗುಟೆರೆಸ್ ಅವರ ಹೇಳಿಕೆಯನ್ನು ಅವರ ವಕ್ತಾರ ಬಿಡುಗಡೆಗೊಳಿಸಿದ್ದು, ಇದರಲ್ಲಿ ‘ಕಾಶ್ಮೀರ ಭಾರತ ಮತ್ತು ಪಾಕಿಸ್ಥಾನದ ನಡುವಿನ ದ್ವಿಪಕ್ಷೀಯ ವಿಚಾರವಾಗಿದ್ದು, ಉಭಯ ದೇಶಗಳು ಮಾತುಕತೆಯ ಮೂಲಕ ಅದನ್ನು ಬಗೆಹರಿಸಿಕೊಳ್ಳಬೇಕು’ ಎಂದು ಹೇಳಿ ವಿವಾದವನ್ನು ಅಂತಾರಾಷ್ಟ್ರೀಯ ವೇದಿಕೆಗೆ ಒಯ್ಯುವ ಪಾಕ್ ಪ್ರಯತ್ನಕ್ಕೆ ತಣ್ಣೀರು ಎರಚಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಲಭ್ಯವಿರುವ ಎಲ್ಲ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕಾಶ್ಮೀರ ವಿಚಾರವನ್ನು ಪ್ರಸ್ತಾವಿಸುವುದಾಗಿ ಹೇಳಿದ್ದರು. ಆದರೆ ಅನಂತರ ನಡೆಸಿದ ಮೊದಲ ಪ್ರಯತ್ನದಲ್ಲೇ ಮುಖ ಭಂಗಕ್ಕೀಡಾಗಿದ್ದಾರೆ.
ಕಾಶ್ಮೀರ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸಬೇಕೆಂಬ ಪಾಕ್ ಬೇಡಿಕೆಗೂ ವಿಶ್ವಸಂಸ್ಥೆಯಲ್ಲಿ ಬೆಲೆ ಸಿಕ್ಕಿಲ್ಲ. ಮಾನವ ಹಕ್ಕುಗಳ ರಕ್ಷಣೆಯ ವಿಚಾರದಲ್ಲಿ ಅತಿ ಕೆಳಗಿನ ಸ್ಥಾನದಲ್ಲಿರುವ ತನಗೆ ಇನ್ನೊಂದು ದೇಶದ ಮಾನವ ಹಕ್ಕುಗಳ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಕೇಳಿಕೊಳ್ಳಬೇಕಾದ ಅಗತ್ಯ ಪಾಕ್‌ಗಿದೆ. ಮಾನವ ಹಕ್ಕುಗಳ ಸಂರಕ್ಷಣೆಯ ವಿಚಾರದಲ್ಲಿ ಭಾರತಕ್ಕೆ ಯಾರೂ ಪಾಠ ಮಾಡಬೇಕಾದ ಅಗತ್ಯವಿಲ್ಲ ಇದಕ್ಕೆ ಅನ್ಯರ ಹಸ್ತಕ್ಷೇಪದ ಅಗತ್ಯವೂ ಇಲ್ಲ.
ನಮ್ಮಲ್ಲಿ ನಡೆಯುವ ತೀವ್ರವಾದ ರಾಜಕೀಯ ಚರ್ಚೆಗಳು, ಮುಕ್ತ ಮತ್ತು ಸ್ವತಂತ್ರ ಮಾಧ್ಯಮ, ಬಲಿಷ್ಠ ನಾಗರಿಕ ಸಮಾಜ ಮತ್ತು ಇವೆಲ್ಲವುಗಳಿಗಿಂತ ಮೇಲಿರುವ ಸ್ವತಂತ್ರ ನ್ಯಾಯಾಂಗ ಮಾನವ ಹಕ್ಕುಗಳನ್ನು ಜೀವಂತವಾಗಿರಿಸಿವೆ. ಪಾಕಿಸ್ಥಾನದಲ್ಲಿ ಇದ್ಯಾವುದೂ ಇಲ್ಲ ಎನ್ನುವುದು ಇಡೀ ಜಗತ್ತಿಗೆ ಗೊತ್ತಿದೆ. ನಮ್ಮಲ್ಲಿ ಏನೇ ನಿರ್ಧಾರ ಕೈಗೊಂಡರೂ ಅಂತಿಮವಾಗಿ ಅದು ಸ್ವತಂತ್ರ ನ್ಯಾಯಾಲಯದ ಅಗ್ನಿಪರೀಕ್ಷೆಯಲ್ಲಿ ತೇರ್ಗಡೆಯಾಗಲೇಬೇಕು. ಇದೀಗ 370 ವಿಧಿ ರದ್ದು ಪ್ರಕರಣವೂ ಕೋರ್ಟಿನ ಮೆಟ್ಟಿಲೇರಿದ್ದು, ನ್ಯಾಯಾ ಲಯ ನೀಡುವ ತೀರ್ಪನ್ನು ಉಲ್ಲಂಘಿಸುವ ಅಧಿಕಾರ ಕೇಂದ್ರಕ್ಕೂ ಇಲ್ಲ.
ಹೀಗಾಗಿ ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಪಾಕಿಸ್ಥಾನ ಆರೋಪಿಸುತ್ತಿರುವುದೇ ಹಾಸ್ಯಾಸ್ಪದ. ಆದರೆ ಬೇಸರದ ವಿಚಾರ ಏನೆಂದರೆ ಪಾಕಿಸ್ಥಾನದ ಇಂಥ ಅಸಂಬದ್ಧ ಆರೋಪಗಳಿಗೆ ಭಾರತದಲ್ಲಿರುವ ಕೆಲವರೇ ಕುಮ್ಮಕ್ಕು ನೀಡುತ್ತಿರುವುದು. ವಿಶ್ವಸಂಸ್ಥೆಗೆ ದೂರು ಸಲ್ಲಿಸುವಾಗಲೂ ಪಾಕಿಸ್ಥಾನ ಕಾಂಗೆ‌್ರಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯ ಕಾಶ್ಮೀರದಲ್ಲಿ ಜನರ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗಿದೆ ಎಂಬ ಹೇಳಿಕೆಯನ್ನು ಬಳಸಿಕೊಂಡಿದೆ. ಕನಿಷ್ಠ ಸೂಕ್ಷ್ಮ ಸಂದರ್ಭಗಳಲ್ಲಾದರೂ ರಾಜಕೀಯ ನಾಯಕರು ಟೀಕೆ ಟಿಪ್ಪಣಿಗಳನ್ನು ಮಾಡುವಾಗ ವಿವೇಚನೆಯನ್ನು ಬಳಸಿಕೊಳ್ಳುವ ಅಗತ್ಯವಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.