ನೋಟ್ ಬುಕ್
Team Udayavani, Sep 13, 2019, 5:00 AM IST
ಸಾಂದರ್ಭಿಕ ಚಿತ್ರ
ಅದೊಂದು ಮಳೆಗಾಲದ ದಿನ. ಜೋರಾಗಿ ಸಿಡಿಲು-ಗುಡುಗಿ ನೊಂದಿಗೆ “ಧೋ’ ಎಂದು ಮಳೆ ಸುರಿಯುತ್ತಿತ್ತು. ಜೊತೆಗೆ ಸಾಲದ್ದಕ್ಕೆ, ಮರಗಳೇ ಧರೆಗುರುಳಿ ಬೀಳುವಂತೆ ಬೀಸುತ್ತಿದ್ದ ಗಾಳಿ. ಮನೆಯಿಂದ ಹೊರಗಡೆ ಕಾಲಿಡಲು ಸಾಧ್ಯವಾಗದಂಥ ಪರಿಸ್ಥಿತಿ ಉಂಟಾಗಿತ್ತು. ಬಯಲಲ್ಲಿ ಮೇಯಲು ಹೊರಟ್ಟಿದ್ದ ದನ-ಕರುಗಳು ಆ ಜೋರಾದ ಮಳೆಗೆ ಹೆದರಿ ನಿಧಾನವಾಗಿ ಮರಗಳ ಅಡಿಯಲ್ಲಿ ಆಶ್ರಯ ಪಡೆಯಲು ಹೊರಟವು. ಇಂತಹ ಸಂದರ್ಭದಲ್ಲಿ ಮನೆಯಲ್ಲೇ ಕುಳಿತು ಟಿ. ವಿ. ನೋಡೋಣವೆಂದರೆ ಕೈಕೊಟ್ಟ ಕರೆಂಟ್. ಟಿ. ವಿ. ವೀಕ್ಷಣೆ ಅಸಾಧ್ಯವಾದಾಗ ಥಟ್ಟನೆ ನೆನಪಾಗುವುದು ಪ್ರಪಂಚವನ್ನೇ ನಮ್ಮ ಮುಷ್ಟಿಯೊಳಗೆ ಹಿಡಿದ ಅನುಭವವನ್ನು ನೀಡುವ ಮೊಬೈಲ…. ವಿದ್ಯುತ್ ಅಭಾವದಿಂದ ಚಾರ್ಜ್ ಆಗದೇ ಉಪಯೋಗಿಸಲು ಅನರ್ಹವಾದ ಮೊಬೈಲ್ ಕೂಡ ಪ್ರಯೋಜನಕ್ಕೆ ಬಾರದಾಯಿತು. ಏಕಾಂಗಿತನ ನೀಡುವ ಹಿಂಸೆಯನ್ನು ತಡೆಯುವುದಾದರೂ ಹೇಗೆ ಅಲ್ಲವೆ? ವಾಚಾಳಿಗಳಾದವರಿಗೆ ಮೌನವಾಗಿ ಕುಳಿತುಕೊಳ್ಳುವುದು ತುಂಬಾ ಕಷ್ಟ. ಏಕಾಂಗಿತನವನ್ನು ದೂರಮಾಡಲು ಏನಾದರೂ ಮಾಡಬೇಕೆನ್ನುತ್ತ ಕೋಣೆಯ ಮೂಲೆಗೆ ಕಣ್ಣು ಹಾಯಿಸಿದಾಗ ಒಪ್ಪ ಓರಣವಾಗಿ ಜೋಡಿಸಿಟ್ಟಿದ್ದ ನನ್ನ ಹೈಸ್ಕೂಲ್ ನೋಟ್ ಪುಸ್ತಕಗಳು ಕಣ್ಣಿಗೆ ಬಿದ್ದವು. ಸ್ವಲ್ಪ ದಿನಗಳ ಹಿಂದೆ ಧೂಳು ಕೊಡವಿದ್ದರಿಂದ ಓದಲು ಯೋಗ್ಯವಾಗಿಯೇ ಇದ್ದವು. ಆ ಪ್ರತಿಯೊಂದು ನೋಟ್ ಪುಸ್ತಕಗಳ ಹಿಂದೆ ಆಯಾ ವಿಷಯಗಳನ್ನು ಕಲಿಸಿದ್ದ ಗುರುಗಳ ಹೆಸರನ್ನು ಪುಸ್ತಕದ ಕೊನೆಯ ಪುಟದಲ್ಲಿ ಬರೆದು ಇಟ್ಟಿದ್ದೆ. ಅದನ್ನು ಓದುತ್ತಲೇ ನಾನು ನನ್ನ ನೆನಪಿನಂಗಳಕ್ಕೆ ಜಾರಿದೆ.
ಒಬ್ಬೊಬ್ಬರ ಹೆಸರು ಓದುವಾಗಲೂ ಅವರೇ ಕಣ್ಮುಂದೆ ಬಂದು ಹೋದಂತೆ ಭಾಸವಾಗುತ್ತಿತ್ತು. ನನ್ನ ಜೀವನದಲ್ಲಿ ಮರೆಯಲು ಸಾಧ್ಯವಾಗದೇ ಇರುವಂತಹ ಹೆಚ್ಚಿನ ಗುರುಗಳನ್ನು ಕಂಡದ್ದು ನಾನು ನನ್ನ ಹೈಸ್ಕೂಲ್‌ನಲ್ಲಿಯೇ. ಶಿಕ್ಷಕರು ಹಾಗೂ ಗುರುಗಳು ಎನ್ನುವ ಪದಗಳಿಗೆ ತುಂಬಾನೇ ವ್ಯತ್ಯಾಸಗಳಿವೆ ಎಂದು ಅರಿವಾಗತೊಡಗಿದ್ದು ಕೂಡ ಅದೇ ಸಂದರ್ಭದಲ್ಲಿ. “ಗು’ ಎಂದರೆ ಕತ್ತಲು, “ರು ‘ಎಂದರೆ ಬೆಳಕು. ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುವವರೇ ಗುರುಗಳು ಎಂದು ನಮ್ಮ ಕನ್ನಡ ಸರ್ ಯಾವಾಗಲೂ ಹೇಳುತ್ತಿದ್ದರು. ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಗುರುಗಳಾಗುವುದಿಲ್ಲ. ನಮಗೆ ಗೊತ್ತಿರದ ವಿಷಯಗಳನ್ನು ಮನ ಮುಟ್ಟುವಂತೆ ಸರಿಯಾದ ರೀತಿಯಲ್ಲಿ ಹೇಳಿ ಕೊಡುವವರೆಲ್ಲರೂ ಗುರುಗಳೇ. ಉದಾಹರಣೆಗೆ, ಒಬ್ಬ ಹುಡುಗಿ ಒಬ್ಬರ ಮುಖಾಂತರ ಸಂಗೀತಾಭ್ಯಾಸ ಮಾಡುತ್ತಿದ್ದಾಳೆ ಎಂದರೆ, ಅವಳಿಗೆ ಸಂಗೀತದ ಪಾಠಗಳನ್ನು ಹೇಳಿಕೊಟ್ಟವರು ಸಂಗೀತದ ಗುರುಗಳಾಗುತ್ತಾರೆ.
ನನ್ನ ಪ್ರಕಾರ ಎಲ್ಲ ಶಿಕ್ಷಕರು ಗುರುಗಳಾಗಲು ಸಾಧ್ಯವೇ ಇಲ್ಲ. ಕಾಟಾಚಾರಕ್ಕೆ ವಿದ್ಯಾಭ್ಯಾಸ ಮಾಡಲು ಬರುವ ವಿದ್ಯಾರ್ಥಿಗಳನ್ನು ನಾವು ಹೇಗೆ ಕಾಲೇಜಿನಲ್ಲಿ ಕಾಣುತ್ತೇವೆಯೋ ಅದೇ ರೀತಿ ಅಧ್ಯಾಪನ ವೃತ್ತಿ ಇಷ್ಟವಿಲ್ಲದೆ ಶಿಕ್ಷಕರಾಗಿ ದುಡಿಯುವವರನ್ನು ನಾವು ಕಾಣಬಹುದು. ಅಂತಹ ಶಿಕ್ಷಕರು ವಿದ್ಯಾರ್ಥಿಪಾತ್ರರಾಗಿ ಉಳಿಯುವುದು ತುಂಬಾ ಕಡಿಮೆ. ಕೆಲವೇ ಕೆಲವು ಶಿಕ್ಷಕರು ಮಾತ್ರ ವಿದ್ಯಾರ್ಥಿಗಳಿಗೆ ಗುರುಗಳಾಗುತ್ತಾರೆ. ನಾನು ನನ್ನ ಹೈಸ್ಕೂಲ್ ಜೀವನದಲ್ಲಿ ಉತ್ತಮ ಗುರುಗಳನ್ನು ಕಂಡಿದ್ದೇನೆ ಎನ್ನಲು ಬಹಳ ಸಂತೋಷವಾಗುತ್ತದೆ. ಪೋಷಕರನ್ನು ತೊರೆದು ದೂರದ ವಸತಿ ಶಾಲೆಗೆ ಹೋಗಿ ವಿದ್ಯಾಭ್ಯಾಸ ಶುರುಮಾಡಿದ ಸಂದರ್ಭದಲ್ಲಿ ಪಠ್ಯಪುಸ್ತಕದಲ್ಲಿರುವ ಪಾಠಗಳೊಂದಿಗೆ ಶಿಸ್ತು, ಸಂಯಮ, ಆತ್ಮವಿಶ್ವಾಸ, ನೈತಿಕ ಮೌಲ್ಯಗಳೆಂಬ ಜೀವನದ ಪಾಠಗಳನ್ನು ಹೇಳಿ ಕೊಟ್ಟ ಗುರುಗಳನ್ನು ಮರೆಯಲು ಸಾಧ್ಯವಿಲ್ಲ. ಸುಭದ್ರ ಭವಿಷ್ಯಕ್ಕೆ ಸುಂದರ ಅಡಿಪಾಯವನ್ನು ಹಾಕಿಕೊಟ್ಟ ಗುರುಗಳು ಎಂದೆಂದಿಗೂ ಮನದಲ್ಲಿ ಮನೆಮಾಡಿ ನಿಂತಿರುತ್ತಾರೆ. ಆರೋಗ್ಯ ಹದಗೆಟ್ಟಾಗ ತಂದೆ-ತಾಯಿಯ ಸ್ಥಾನದಲ್ಲಿ ನಿಂತು ಆರೈಕೆ ಮಾಡಿದ ಗುರುಗಳನ್ನು ಎಷ್ಟು ಹೊಗಳಿದರೂ ಕಡಿಮೆಯೇ ಎಂದು ಯೋಚಿಸುತ್ತಿದ್ದಾಗ ಹಳೆಯ ನೆನಪುಗಳು ಕಣ್ಣುಗಳನ್ನು ತೇವಗೊಳಿಸಿದವು. ಅಷ್ಟರಲ್ಲಿ ಯಾರೋ ಬಾಗಿಲು ಬಡಿಯುತ್ತಿರುವ ಸದ್ದು ಕೇಳಿಸಿತು. ಒಮ್ಮೆಲೇ ನೆನಪಿನಂಗಳದಲ್ಲಿ ವಿಹರಿಸುತ್ತಿದ್ದ ನಾನು ವಾಸ್ತವಕ್ಕೆ ಬಂದೆ. ಜೋರಾಗಿ ಸುರಿಯುತ್ತಿದ್ದ ಮಳೆ ಸಂಪೂರ್ಣವಾಗಿ ನಿಂತಿತು. ಹೊರಗಡೆ ಹೋಗಿದ್ದ ಅಮ್ಮ ಮನೆಗೆ ವಾಪಸ್ ಬಂದಿದ್ದರು.
ಕಲ್ಪನಾ ಕೆ.
ಪ್ರಥಮ ಎಂ.ಎಸ್ಸಿ ,
ಎಸ್.ಡಿ. ಎಂ.ಕಾಲೇಜು, ಉಜಿರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Golden Jubilee: ಕನ್ನಡವೇ ಅಧಿಕಾರಿಗಳ ಹೃದಯದ ಭಾಷೆ ಆಗಲಿ
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
Golden Jubilee: ಪುಸ್ತಕ ಪ್ರಕಾಶನ: ಕೃಷಿಯೇ ಆಗಿರಲಿ, ಉದ್ಯಮವಾಗದಿರಲಿ
Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ
ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ
MUST WATCH
ಹೊಸ ಸೇರ್ಪಡೆ
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.