ಕೇಶಪಾಶ ಪ್ರಸಂಗವು
Team Udayavani, Sep 13, 2019, 5:00 AM IST
ಐದಾರು ವರ್ಷಗಳ ಹಿಂದಿರಬಹುದು. ಅದೇಕೋ ಒಂದು ಸಂಜೆ, ನನ್ನ ಕೇಶವಿನ್ಯಾಸವನ್ನು ಕೊಂಚ ಬದಲಾಯಿಸಿಕೊಳ್ಳೋಣವೆಂದು ಕನ್ನಡಿಯ ಮುಂದೆ ನಿಂತು ಪ್ರಯೋಗಗಳನ್ನು ಮಾಡುತ್ತಿದ್ದೆ. ವಿವಿಧ ಕೋನಗಳಿಂದ ನಿರುಕಿಸುತ್ತಿದ್ದೆ. ಅರೆ ಅದೇನು?! ಬೆಳ್ಳಿಯ ಎಳೆಯೊಂದು ಫಳ್ಳನೆ ಮಿಂಚಿದಂತಾಯಿತು! ಎದೆ ಧಸಕ್ಕೆಂದಿತು. ಕೂದಲು ನೆರೆಯುವಷ್ಟು ವಯಸ್ಸಾಯಿತೇ ನನಗೆ ! ಎಂದು ಕನ್ನಡಿಯಲ್ಲಿ ಮತ್ತೆ ಮತ್ತೆ ಮುಖ ನೋಡಿಕೊಂಡೆ. ಸುಕ್ಕುಗಳು ಎಲ್ಲೂ ಕಾಣಿಸಲಿಲ್ಲ. ತುಸು ಸಮಾಧಾನವಾಯಿತು.
ಆದರೂ ಆ ಬಿಳಿ ಕೂದಲನ್ನು ಕಿತ್ತೂಗೆಯುವಷ್ಟು ರೋಷ ಉಕ್ಕಿ ಬಂತು. ಆದರೆ ಕಿತ್ತರೆ ರಕ್ತಬೀಜಾಸುರನಂತೆ ಮತ್ತಷ್ಟು ಹುಟ್ಟಿಕೊಳ್ಳುತ್ತವೆಯೆಂದು ಎಲ್ಲೋ ಕೇಳಿದ ನೆನಪು. ಹಾಗಾಗಿ, ಅದನ್ನು ಹಾಗೆಯೇ ಇರಗೊಟ್ಟೆ. ಅದನ್ನು ಆದಷ್ಟು ಕರಿಕೂದಲಿನೊಳಗೆ ಕಾಣದಂತೆ ಬಂಧಿಸಿಟ್ಟೆ. ಬಳಿಕ ಕಾಣಿಸಿಕೊಂಡ ಒಂದೊಂದೇ ಬಿಳಿ ಎಳೆಗಳನ್ನು ಹಾಗೆಯೇ ಬಚ್ಚಿಡುವಲ್ಲಿ ಸಫಲಳಾಗಿದ್ದೆ.
ಅದರೀಗ ಬೆಳ್ಳಿ ಬಳಗ ಹೆಚ್ಚಾಗತೊಡಗಿದೆ. ಮರೆಮಾಚಿದಷ್ಟೂ ಜಿದ್ದಿಗೆ ಬಿದ್ದಂತೆ ಎಲ್ಲೆಂದರಲ್ಲಿ ಬಿಳಿಯೆಳೆಗಳು ಇಣುಕತೊಡಗಿವೆ. ಸಾಲದ್ದಕ್ಕೆ, “ಲೇ, ತಲೆಗೆ ಸ್ವಲ್ಪ ಕಪ್ಪು ಹಾಕೋಬಾರದಾ? ನಿನಗೇನಂಥಾ ವಯಸ್ಸಾಗಿದೆ?’ ಎಂಬ ಹಿತೈಷಿಗಳ ಆಗ್ರಹ.
ಮೊನ್ನೆ ಪರಿಚಯಸ್ಥರಲ್ಲಿಗೆ ಹೋಗಿ ಹೊರಡಲನುವಾಗುವಾಗ, ಆ ಮನೆಯ ಬೆಳೆದ ಮಕ್ಕಳು ನಮಸ್ಕರಿಸಿದರು. ಸಂಸ್ಕಾರಕ್ಕೆ ಮೆಚ್ಚಿದೆ. ಆದರೆ ನಡು ಹರೆಯದ ಅವರ ಅಪ್ಪ-ಅಮ್ಮ ಕಾಲಿಗೆ ಬೀಳುವಾಗ ಮಾತ್ರ ಬೆಚ್ಚಿದೆ! ಅಯ್ಯೋ ಇದೇನಿದು? ಒಂದು ಸಲಕ್ಕೆ ಕಕ್ಕಾಬಿಕ್ಕಿಯಾದರೂ, ಮರುಕ್ಷಣವೇ ಇದು ನನ್ನ ಬೆಳ್ಳಿ ಬೆಡಗಿನ ಮಹಿಮೆಯೆಂದು ಅರ್ಥವಾಯಿತು. ಬಹಳ ಪಿಚ್ಚೆನಿತು.
ಇನ್ನು ಬಿಳಿಕೂದಲನ್ನು ಹೀಗೆ ಬಿಡಬಾರದೆಂದು ನಿರ್ಧರಿಸಿದೆ. ಮದ್ದರೆಯುವುದೇ ಪರಿಹಾರವೆಂದು ಮನಗಂಡೆ. ಸರಿ, ತಲೆಗೆ ಮಸಾಲೆ ಅರೆಯುವ ಕಾಯಕ ಮದರಂಗಿ ಕಾರ್ಯಕ್ರಮದೊಂದಿಗೆ ಶುಭಾರಂಭವಾಯಿತು. ಚಹಾ ಪುಡಿಯ ಕಷಾಯದೊಂದಿಗೆ ಮದರಂಗಿ ಮಿಶ್ರ ಮಾಡಿ, ಕಬ್ಬಿಣದ ಬಾಣಲೆಯಲ್ಲಿ ಒಂದು ರಾತ್ರಿಯಿಟ್ಟೆ. ದೋಸೆಯ ಹಿಟ್ಟನ್ನು ಹುದುಗಲಿಡುವಷ್ಟೇ ಶ್ರದ್ಧೆಯಿಂದ ಈ ಮಿಶ್ರಣವನ್ನು ಕಲಸಿಟ್ಟೆ. ಮರುದಿನ ತಲೆಗೆಲ್ಲ ಲೇಪಿಸಿ ತಾಸುಗಟ್ಟಲೆ ಇಡುವ ಕಷ್ಟವನ್ನು ಸಹಿಸಿಕೊಂಡು ಅಭ್ಯಂಜನ ಮಾಡಿದೆ. ನನ್ನ ಕೂದಲಿನ ಮೂಲ ಬಣ್ಣ ಮರಳಿಬಂದಿರಬಹುದೆಂಬ ಖುಷಿಯಿಂದ ಕನ್ನಡಿಯಲ್ಲಿ ನನ್ನನ್ನೇ ನಾನು ನೋಡಿಕೊಂಡೆ. ಬಿಳಿಕೂದಲೆಲ್ಲ ವಿಚಿತ್ರ ಹಳದಿಯಾಗಿತ್ತು! ತಲೆಗೆ ಅಲ್ಲಲ್ಲಿ ಕಿಚ್ಚಿಟ್ಟಂತೆ ಕಂಡಿತು. ನಿರಾಸೆಯಾಯಿತು.
ನನ್ನ ಬಣ್ಣದ ಕೂದಲು ನಮ್ಮ ಬಳಗದ ಬಾಯಿಗಳಿಗೊಂದು ಆಹಾರವಾಯಿತು. ಪುಕ್ಕಟೆ ಸಲಹೆಗಳು ಹರಿದುಬರತೊಡಗಿದವು. ಚಹಾ ಬೇಡ ಕಾಫಿಯ ನೀರಲ್ಲಿ ಕಲಸು; ಲೋಳೆಸರ ಹಾಕು; ಮೆಂತ್ಯ ಹಾಕು… ಕೂದಲು ಸೊಂಪಾಗಿ ಬೆಳೆಯುತ್ತದೆ… ಕೂದಲೇನೋ ಸೊಂಪಾಗಿಯೇ ಬೆಳೆಯಿತು, ಆದರೆ ಅದೇ ಕಪ್ಪು-ಕೆಂಪು.
ಕರಿಬೇವಿನ ಸೊಪ್ಪನ್ನು ಹಾಕಬೇಕೆನ್ನುವ ಸಲಹೆಯೂ ಬಂತು. ಆದರೆ, ಇದನ್ನು ಜಾರಿಗೊಳಿಸಿದಾಗ ಮಾತ್ರ ನಮ್ಮ ಮನೆಯ ಅಡುಗೆ ಪರಿಮಳವಿಲ್ಲದೇ ಮಂಕಾಗತೊಡಗಿತು. ಅಡುಗೆಗಾಗಿ ತಂದ ಕರಿಬೇವಿನ ಸೊಪ್ಪು, ನನ್ನ ಮೆಹಂದಿ ಮಸಾಲೆಯಲ್ಲಿ ಸೇರತೊಡಗಿತು. ಅವುಗಳ ಪರಿಣಾಮ ಮಾತ್ರ ನಾ ಕಾಣೆ. ನನ್ನ ತಲೆಗೆ ಕೆಂಪನೆಯ ಶಾಲು ಸುತ್ತಿದಂತಿತ್ತು. ಕರಿಬೇವಿನ ಸೊಪ್ಪನ್ನು ಕಪ್ಪನೆ ಹುರಿದು ಹಾಕೆಂದರು. ಊಹೂಂ… ನನ್ನ ಕೂದಲು ಮೊದಲಿನ ಬಣ್ಣ ಪಡೆಯಲೇ ಇಲ್ಲ.
ಫೇಸ್ ಬುಕ್ ಜಾಲಾಡಿಸುತ್ತಿರುವಾಗ ಈ ಬಗ್ಗೆ ಯಾರ್ಯಾರೋ ಹಂಚಿಕೊಂಡ ವಿವರಣೆಗಳು ಅಲ್ಲಲ್ಲಿ ಕಾಣಸಿಗುತ್ತವೆ. ಅವೇ ಮದರಂಗಿ ಸೊಪ್ಪು, ಚಹಾದ ಕಷಾಯ, ಬೀಟ್ರೂಟ್, ನೆಲ್ಲಿಕಾಯಿ ಹುಡಿ ಇತ್ಯಾದಿಗಳನ್ನು ಬಳಸಿ ಹಂತಹಂತವಾಗಿ ವಿವರಿಸುವ ನಾನು ಈ ಮೊದಲೇ ಪ್ರಯೋಗಿಸಿದ ಪರಿಹಾರಗಳು. ಅದರಲ್ಲಿ ನಾನು ಬಳಸದೇ ಬಿಟ್ಟಿದ್ದ ಯಾವುದಾದರೊಂದು ಸಾಮಾನು ಕಂಡಿತೆಂದರೆ, ಕೂಡಲೆ ಮಿಶ್ರಣ ತಯಾರು ಮಾಡಿ ಪ್ರಯೋಗಿಸುತ್ತಿದ್ದೆ, ಕೂದಲು ಕಪ್ಪಾಗುವ ಯುರೇಕಾ ಕ್ಷಣ ಬಂದರೂ ಬರಬಹುದೆನ್ನುವ ಭರವಸೆಯಿಂದ.
ನನ್ನ ತಲೆ ದಿನದಿಂದ ದಿನಕ್ಕೆ ಕೆಂಪೇರತೊಡಗಿದಾಗ, ನನ್ನ ಬಳಗದವರು ಅವರವರು ಉಪಯೋಗಿಸುವ ಹತ್ತಾರು ಬ್ರಾಂಡುಗಳ ಹೆಸರನ್ನು ಹೇಳತೊಡಗಿದರು. “ಎಷ್ಟು ವರ್ಷಗಳಿಂದ ಉಪಯೋಗಿಸ್ತಾ ಇದ್ದೇನೆ, ನೋಡು,’ ಎಂದು ತಮ್ಮ ಕಾಡಿಗೆ ಕಪ್ಪಿನ ಕೇಶರಾಶಿಯ ಸಾಕ್ಷಿಯಾಗಿ ಹೇಳುತ್ತಿದ್ದರು. ಆದರೆ, ನನಗೆ ಮಾರುಕಟ್ಟೆಯಲ್ಲಿ ಸಿಗುವ ಬಣ್ಣಗಳೆಂದರೆ ಕೊಂಚ ಭಯ. ಅವುಗಳೊಳಗಿರುವ ರಾಸಾಯನಿಕಗಳು ನನಗೆ ಒಗ್ಗಿಲ್ಲವೆಂದರೆ, ಏನಾದರೂ ವ್ಯತಿರಿಕ್ತ ಪರಿಣಾಮವಾದರೆ ಎಂಬ ಆತಂಕ. ಕೆಲವೊಮ್ಮೆ ಉಪಯೋಗಿಸಿದ್ದೂ ಇದೆ. ಆದರೆ, ಅವುಗಳನ್ನು ದೀರ್ಘಕಾಲ ಬಳಸಲು ಮನಸ್ಸಾಗುತ್ತಿಲ್ಲ.
ಹುಂ… ಕೊನೆಗೂ, ಈ ಕಪ್ಪು-ಬಿಳುಪಿನ ಜಿದ್ದಾಜಿದ್ದಿಯಲ್ಲಿ ಸೋಲೊಪ್ಪಿಕೊಂಡಿದ್ದೇನೆ. ಆದರೆ ಒಂದಂತೂ ನಿಜ. ಬಿಳಿಕೂದಲಿರಲಿ ಅಥವಾ ಬಿಳಿಕೂದಲಿಲ್ಲದಿರಲಿ, ನನ್ನೊಳಗಿನ ಉತ್ಸಾಹ, ಚೈತನ್ಯ ಮಾತ್ರ ಅದೇ. ಒಂದಿನಿತೂ ಕುಂದಿಲ್ಲ. ಯಾಕೋ ನನ್ನ ಕೂದಲಿನಂತೆ ನನ್ನ ಅಲೋಚನೆಗಳೂ ಮಾಗತೊಡಗಿವೆ ಎಂದು ಈಗೀಗ ಅನಿಸತೊಡಗಿದೆ. Graceful ageing. ಏನಂತೀರ?
ಸಾಣೂರು ಇಂದಿರಾ ಆಚಾರ್ಯ
ಹೆಣ್ಣಿನ ಅಂದವನ್ನು ಅಳೆಯುವ ಮಾನದಂಡಗಳಲ್ಲಿ ತಲೆಕೂದಲೂ ಒಂದು. ದಟ್ಟ ಕಪ್ಪು ಕೂದಲು ಹೆಣ್ಣಿನ ಸೌಂದರ್ಯವನ್ನು ಹೆಚ್ಚಿಸುತ್ತದೆ ಎಂಬುದನ್ನು ಮೊದಲಿನಿಂದಲೂ ನಂಬಿಕೊಂಡು ಬಂದಿರುತ್ತೇವೆ. ವಯಸ್ಸಾದಂತೆ ಕೂದಲು ಬೆಳ್ಳಗಾಗುವುದು ಸಹಜವಾದ ಒಂದು ಪ್ರಕ್ರಿಯೆ. ಆದರೆ, ತಲೆಯಲ್ಲಿ ಬೆಳ್ಳಿ ಕೂದಲು ಮೂಡುವಾಗ ಪ್ರತಿಯೊಬ್ಬ ಮಹಿಳೆಯೂ ಆತಂಕಿತಳಾಗುತ್ತಾಳೆ. ಕಪ್ಪಗಿದ್ದ ಕೂದಲಿನಲ್ಲಿ ಅಲ್ಲೊಂದು ಇಲ್ಲೊಂದು ಬಿಳಿ ಕೂದಲು ಮೂಡಿತೆಂದರೆ ಸಹಜವಾಗಿಯೇ ಅವಳ ಮನಸ್ಸಿನಲ್ಲಿ ಭಯ ಆವರಿಸಿಬಿಡುತ್ತದೆ.
ಈಗಿನ ತಲೆಮಾರಿನ ಕೆಲವು ಮಹಿಳೆಯರು ಬಿಳಿ ಕೂದಲನ್ನು ಡೈ ಮಾಡದೆ ಹಾಗೇ ಬಿಳಿ ಕೂದಲನ್ನೇ ಹೊಂದುವುದನ್ನು ಇಷ್ಟಪಡುತ್ತಿದ್ದಾರೆ ಮತ್ತು ಕೂದಲು ಬೆಳ್ಳಗಾಗುವುದನ್ನು ಹಾಗೇ ಸಹಜವೆನ್ನುವ ರೀತಿಯಲ್ಲಿ ಒಪ್ಪಿಕೊಳ್ಳುತ್ತಿದ್ದಾರೆ. ಬಿಳಿ ಕೂದಲು ಇಂದಿನ ಫ್ಯಾಷನ್ ಟ್ರೆಂಡ್ ಆಗಿರುವುದು ಮಾತ್ರವಲ್ಲದೆ, ಫ್ಯಾಷನ್ ಜಗತ್ತು ಕೂಡ ಬಿಳಿ ಕೂದಲನ್ನು ಟ್ರೆಂಡ್ ಆಗಿಸಿಕೊಂಡಿದೆ.
.
.
ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಬಿಳಿ ಕೂದಲೆಂದರೆ ಮೊದಲಿನಿಂದಲೂ ಮುಖ ಸಿಂಡರಿಸುತ್ತಿದ್ದ ಸುಮಾರು ಏಳು ಮಿಲಿಯನ್‌ಗಿಂತಲೂ ಹೆಚ್ಚಿನ ಸಂಖ್ಯೆಯ ಮಹಿಳೆಯರು ತಮ್ಮ ಕೂದಲು ಬೆಳ್ಳಗಾಗುತ್ತಿದ್ದಂತೆ ಡೈ ಬಳಸುತ್ತಿದ್ದರು. “ಕೂದಲು ಬೇಗನೆ ಬೆಳ್ಳಗಾಗಲು ಏನು ಕಾರಣ?’- ಎಂಬ ವಿಚಾರವನ್ನು ಕಂಡುಹಿಡಿಯಲು “ಜಾನ್ ಫ್ರೆಡಾ ಹೇರ್‌ಕೇರ್ ಫೌಂಡೇಶನ್’ ಒಂದು ಸಮೀಕ್ಷೆಯನ್ನೂ ನಡೆಸಿದೆ.
ಈ ಸಮೀಕ್ಷೆಯ ಪ್ರಕಾರ ಸುಮಾರು 32 ಶೇ. ಕ್ಕಿಂತಲೂ ಹೆಚ್ಚಿನ ಮಹಿಳೆಯರು, “30 ವರ್ಷ ವಯೋಮಿತಿಯಲ್ಲೇ ಬಿಳಿ ಕೂದಲನ್ನು ಹೊಂದುತ್ತಿದ್ದೇವೆ’ ಎಂದೂ, ಶೇ. 20ಕ್ಕಿಂತೂ ಹೆಚ್ಚು ಮಹಿಳೆಯರು, “ನಮಗೆ 20 ವರ್ಷಗಳು ಆಗುತ್ತಲೇ ತಲೆಯಲ್ಲಿ ಬಿಳಿ ಕೂದಲು ಕಾಣಿಸಿಕೊಳ್ಳುತ್ತಿವೆ’ ಎಂದು ದೂರಿಕೊಂಡಿದ್ದಾರೆ. ಈ ಪರಿಯಲ್ಲಿ ಕೂದಲು ನೆರೆಯಲು ಒತ್ತಡ ಜೀವನಶೈಲಿಯೇ ಕಾರಣ ಎಂಬುದನ್ನೂ ಸಮೀಕ್ಷೆ ಆಕ್ಷೇಪಿಸಿದೆ.
ಮಾಡೆಲ್ ಆಗಿರುವ ಎಲೈನಾ ದುಗಾಸ್ ಹೇಳುತ್ತಾರೆ, “”ಮೊದಲೆಲ್ಲ ಬಿಳಿಕೂದಲು ಎಂದರೆ ವಯಸ್ಸಾಗುವಿಕೆಯ ಲಕ್ಷಣವಾಗಿತ್ತು. ಆದರೆ, ಈಗ ಹೆಚ್ಚಿನ ಸಂಖ್ಯೆಯ ಮಹಿಳೆಯರಲ್ಲಿ ಸಣ್ಣ ವಯಸ್ಸಲ್ಲೇ ಬಿಳಿಕೂದಲು ಕಾಣಿಸಿಕೊಳ್ಳುತ್ತಿದೆ. ನಾನು ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ” ಎಂದು ಹೇಳುತ್ತಾರೆ.
.
.
ಕ್ಯಾಥರಿನ್ ಹೇವಾರ್ಡ್ ಫ್ಯಾಷನ್ ರೈಡೆಕ್ಟರ್ ಹಾಗೂ ಫ್ಯಾಷನ್ ಜಗತ್ತಿನಲ್ಲಿ ಚೆಂದದ ಕೂದಲಿಗೆ ಖ್ಯಾತರಾದವರು. ಅವರ ಸ್ಟೈಲ್ ಐಕಾನ್ ಎಂದರೆ ಬಿಳಿ ಕೂದಲಿನ ಐಎಮ್‌ಎಫ್ ಕ್ರಿಸ್ಟೀನ್ ಲಗಾರ್ಡೆ. ಹೇವಾರ್ಡ್ ಹೇಳುತ್ತಾಳೆ, “”ನನಗೆ 19ನೆಯ ವಯಸ್ಸಿಗೇ ಬಿಳಿ ಕೂದಲು ಆಗಿದೆ ಮತ್ತು ನನ್ನ ಅಜ್ಜನವರೂ 20ನೆಯ ವಯಸ್ಸಿಗೇ ಪೂರ್ತಿ ಬಿಳಿ ಕೂದಲನ್ನು ಹೊಂದಿದ್ದರು. ಇದು ನಮ್ಮಲ್ಲಿ ವಂಶಪಾರಂಪರ್ಯವಾಗಿ ಬಂದದ್ದು”.
.
.
ಫ್ಯಾಷನ್ ಶೋ ಮಾಡೆಲ್ ಪ್ರಾಂಕ್ಲಿನ್ ಫ್ಯಾಷನ್ ಉಡುಗೆಗಳ ಶೋದಲ್ಲಿ ಕೆಲಸ ಮಾಡುವವರು. ಅವರು ಹೇಳುತ್ತಾರೆ, “”ನಾನು ಶೋದಲ್ಲಿ ಕಾಣಿಸಿಕೊಳ್ಳುವಾಗಲೇ ನನ್ನ ತಲೆಯಲ್ಲಿ ಬಿಳಿಕೂದಲು ಕಾಣಿಸಿಕೊಳ್ಳಲಾರಂಭಿಸಿತು. 34 ವರ್ಷದಲ್ಲೇ ಮುಂಗೂದಲು ಬಿಳಿಯಾಯಿತು. ನನಗದು ಇಷ್ಟವಾದರೂ ಶೋನಲ್ಲಿನ ಎಲ್ಲರಿಗೂ ನಾನು ಬಿಳಿಕೂದಲಿನಲ್ಲಿ ಕಾಣಿಸಿಕೊಳ್ಳುವುದು ಒಪ್ಪಿಗೆಯಾಗಲಿಲ್ಲ. ನಾನು ನನ್ನ ಕೂದಲನ್ನು ಡೈ ಮಾಡದಿದ್ದರೆ ಶೋದಿಂದ ನನ್ನನ್ನು ಹೊರಗಿಡಲಾಗುವುದು ಎಂದು ಸಹದ್ಯೋಗಿಯೊಬ್ಬರಿಂದ ಫೋನ್‌ಮಾಡಿಯೂ ಹೇಳಿಸಿದರು. ಆದರೂ ನಾನು ಡೈಮಾಡಲು ಒಪ್ಪಲಿಲ್ಲ” ಎನ್ನುತ್ತಾರೆ.
ಅವರು ಹೇಳುತ್ತಾರೆ, “”ನಮ್ಮ ಸಂಸ್ಕೃತಿ ವಯಸ್ಸಾಗುವಿಕೆಗೆ ಭಯಪಡುತ್ತಿದೆ. ವಿಶೇಷವಾಗಿ ವಯಸ್ಸಾಗುವ ಮಹಿಳೆಯರಲ್ಲಿ ನಾನು ಹೇಳುವುದೆಂದರೆ, ವಯಸ್ಸಾಗುವಿಕೆಯಿಂದ ನೋವುಪಡುವ ಬದಲು ಅದನ್ನು ಒಪ್ಪಿಕೊಳ್ಳಬೇಕು. ನಾನು ಆ ರೀತಿಯಲ್ಲೇ ಆಲೋಚನೆ ಮಾಡುವ ಮೂಲಕ ಬಿಳಿ ಕೂದಲನ್ನು ಆಯ್ಕೆಮಾಡಿಕೊಂಡವಳು”.
ಸ್ವಾತಿ ಎನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನುಡಿ ನಮನ: ಸಾಮಾಜಿಕ ಚಿಂತಕ, ಎಲ್ಲರ ಮನಗೆದ್ದ ಶ್ರೇಷ್ಠ ಪ್ರಾಧ್ಯಾಪಕ ಪ್ರೊ.ಅಸ್ಸಾದಿ
India- China border: ಭಾರತದ ಗಡಿಯಲ್ಲಿ ಚೀನ ದುಸ್ಸಾಹಸ !
Unique Achiever: ಗಡಿನಾಡಿನ ಅನನ್ಯ ಸಾಧಕ ಪ್ರೊ| ಪಿ. ಶ್ರೀಕೃಷ ಭಟ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Story Of Generations: ಪೀಳಿಗೆಗಳ ವೃತ್ತಾಂತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.