ಕಲ್ಯಾಣ ಕರ್ನಾಟಕ ನಾಮಕರಣ ರಾಜ್ಯ ಸರ್ಕಾರ ಅವಿವೇಕಿತನದ ಕೆಲಸ
Team Udayavani, Sep 13, 2019, 11:42 AM IST
ಕೊಪ್ಪಳ : ಹೈದ್ರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ್ದು ರಾಜ್ಯ ಸರ್ಕಾರ ಅವಿವೇಕಿತನದ ಕೆಲಸ. ಇದಕ್ಕೆ ಸಾಂವಿಧಾನಿಕ ಮಾನ್ಯತೆ ಇಲ್ಲ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು, ಹೆಸರು ಮರು ನಾಮಕರಣ ಮಾಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಅಧಿಕಾರ ಇಲ್ಲ. ಹೆಸರು ಮರು ನಾಮಕರಣ ಮಾಡಬೇಕೆಂದರೆ ಸಂಸತ್ತಿನಲ್ಲಿ ಅನುಮೋದನೆ ಆಗಬೇಕು. ಸಂವಿಧಾನದಲ್ಲಿ ಇದಕ್ಕೆ ತಿದ್ದುಪಡಿ ಆಗಬೇಕು. ಮುಖ್ಯಮಂತ್ರಿಗಳು ಮಾಡಿದ ಆದೇಶ ಕಸದ ಬುಟ್ಟಿ ಸೇರಲು ಮಾತ್ರ ಲಾಯಕ್ಎಂದು ಕಿಡಿಕಾರಿದರು.
ಸಿಎಂ ಆದೇಶಕ್ಕೆ ಯಾವುದೇ ಮಾನ್ಯತೆ ಇಲ್ಲ. ನಮ್ಮ ಭಾಗಕ್ಕೆ ಹೈದರಾಬಾದ್ ಕರ್ನಾಟಕ ಪ್ರದೇಶ ಎನ್ನುವ ಕಾರಣಕ್ಕೆ 371(ಜೇ) ಮೀಸಲಾತಿ ದೊರೆತಿದೆ. ಈ ಕಲ್ಯಾಣ ಕರ್ನಾಟಕ ನಾಮಕರಣ ಆದೇಶವನ್ನು ಕೋರ್ಟಿನಲ್ಲಿ ಪ್ರಶ್ನೆ ಮಾಡಿದರೆ ಮೀಸಲಾತಿಗೆ ದೊಡ್ಡ ಅಪಾಯವಿದೆ. ಹೆಸರು ಮರು ನಾಮಕರಣವು ಮೀಸಲಾತಿಗೆ ಕುತ್ತು ತರಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕ ವಿಮೋಚನೆ ಎಂದರೆ ಬಸವಾದಿ ಶರಣರಿಗೆ ಮಾಡಿದ ಅಪಮಾನ. ರಾಜ್ಯ ಸರ್ಕಾರ ಅವಿವೇಕತನದಿಂದ ಈ ಆದೇಶ ಮಾಡಿದೆ. ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಮಾಡುವುದು ಏಕೆ ? ಹೈಕ ನಿಜಾಮರ ಆಳ್ವಿಕೆಯಿಂದ ನಾವು ವಿಮೋಚನೆಯಾಗಿದ್ದು ಎಂದರ್ಥ ಆ ವಿಮೋಚನಾ ನೆನಪಿಗಾಗಿ ಹೈಕ ವಿಮೋಚನಾ ದಿನ ಆಚರಣೆ ಮಾಡುತ್ತೇವೆ. ಅದನ್ನು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ್ದಾರೆ. ಮುಂದಿನ ಪೀಳಿಗೆ ಹೈದ್ರಾಬಾದ್ ಕರ್ನಾಟಕ ಎನ್ನುವುದೇ ಮರೆತು ಹೋಗಲಿದೆ. ಬಿಜೆಪಿ ಇತಿಹಾಸ ತಿರುಚುವ ಕೆಲಸ ಮಾಡಿದೆ. ಅಧಿಕಾರಿಗಳಿಗೆ, ಬಿಜೆಪಿಯವರಿಗೆ ಇದರ ಪರಿಜ್ಞಾನ ಇಲ್ಲ. ಸರ್ಕಾರ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ ಆದೇಶ ಮಾಡಿದ್ದೂ ತಪ್ಪಾಗಿದೆ. ಸರ್ಕಾರ ಕೂಡಲೇ ಈ ಆದೇಶ ಹಿಂಪಡೆಯಲಿ ಎಂದು ಬಸವರಾಜ ರಾಯರೆಡ್ಡಿ ಆಗ್ರಹಿಸಿದರು.
ರಾಜ್ಯ ಸರ್ಕಾರ ಹೈದರಾಬಾದ್ ಕರ್ನಾಟಕ ಭಾಗವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಹೈಕ ಭಾಗಕ್ಕೆ ದನಗಳ ಕಾಯುವ ಮಂತ್ರಿ ಸ್ಥಾನ ನೀಡಿದೆ ಎಂದು ವ್ಯಂಗ್ಯವಾಡಿದರು. ಹೈಕ ಭಾಗದಲ್ಲಿ 41 ವಿಧಾನಸಭಾ ಕ್ಷೇತ್ರವಿದೆ. ಅಂತಹ ಕ್ಷೇತ್ರಕ್ಕೆ ಒಬ್ಬ ಮಂತ್ರಿ ನೀಡಿದೆ. ರಾಜ್ಯದಲ್ಲಿ ಡಿಸಿಎಂ ಸ್ಥಾನಕ್ಕೆ ಸಂವಿಧಾನಿಕ ಮಾನ್ಯತೆ ಇಲ್ಲ. ಸ್ಥಾನಮಾನಕ್ಕಾಗಿ ಒಂದು ಡಿಸಿಎಂ ಸ್ಥಾನ ನೀಡಿದ್ದರೆ ಒಕೆ. ಆದರೆ ಮೂರು ಡಿಸಿಎಂ ಮಾಡಿದ್ದು ಸರಿಯಲ್ಲ ಎಂದರು.
ಡಿ.ಕೆ ಶಿವಕುಮಾರ ಬಂಧನ ವಿಚಾರದಲ್ಲಿ ರಾಜಕೀಯ ಮಾಡಲಾಗಿದೆ. ಅವರ ಪರ ಒಕ್ಕಲಿಗರು ಪ್ರತಿಭಟನೆ ಮಾಡಿದ್ದಾರೆ. ಅಭಿಮಾನಕ್ಕಾಗಿ ಪ್ರತಿಭಟನೆ ಮಾಡಿದ್ದಾರೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.