ದೇಶ ಭಾಷೆಗಳ ಸವಾಲು
Team Udayavani, Sep 15, 2019, 5:12 AM IST
ಒಂದು ಪ್ರಶ್ನೆಗೆ ಒಂದೇ ಉತ್ತರ ಎಂಬುದು ಸಾಹಿತ್ಯದಲ್ಲಿ ಇರುವುದಿಲ್ಲ. ಭಾಷೆಯ ಮೂಲಕ ಸಾಹಿತ್ಯವು ನಮ್ಮನ್ನು ತತ್ವಶಾಸ್ತ್ರದ ಆಶ್ಚರ್ಯಕರ ಜಗತ್ತಿಗೆ ಕರೆದೊಯ್ಯಬೇಕು. ಆದರೆ, ಮನಸ್ಸನ್ನು ಅರಳಿಸುವ ಭಾಷೆ, ಸಾಹಿತ್ಯ, ತಣ್ತೀಶಾಸ್ತ್ರಗಳು ಇಂದು ಅವನತಿಯ ಹಾದಿಯಲ್ಲಿವೆ !
ಇತ್ತೀಚಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಭಾಷಾ ಅಧ್ಯಯನವನ್ನು ಅನುತ್ಪಾದಕ ಎಂದು ಹೇಳುತ್ತಿವೆ. ಜನರೂ ಅದನ್ನು ನಂಬಿ ಭಾಷಾಕಲಿಕೆಯಿಂದ ದೂರ ಹೊಗುತ್ತಿದ್ದಾರೆ. ಮಕ್ಕಳಿಗೆ ಕೆಲವು ಕೌಶಲ್ಯಗಳನ್ನು ಕಲಿಸಿ, ಅವರಿಗೆ ಉದ್ಯೋಗ ವಕಾಶ ಕಲ್ಪಿಸಿಕೊಡುವುದು ಇಲ್ಲವೇ ವಿದೇಶಗಳಿಗೆ ಕಳಿಸಿಕೊಡುವುದು ಮುಖ್ಯ ಎಂದು ಬಹುತೇಕ ಎಲ್ಲರೂ ನಂಬಿದ್ದಾರೆ. ಸ್ಪರ್ಧಾತ್ಮಕ ಆರ್ಥಿಕತೆಯ ಹಿಂದೆ ಬಿದ್ದಿರುವ ಜನರಿಗೆ ಭಾಷೆ ಮತ್ತು ಸಾಹಿತ್ಯ ಈಗ ಬೇಡವಾಗಿದೆ. ಭಾರತದಲ್ಲಂತೂ ಸಾಹಿತಿಗಳ ಮಾನ ಮರ್ಯಾದೆಯನ್ನು ಬೀದಿಗೆ ತಳ್ಳಲಾಗಿದೆ. ಇಂಥಲ್ಲಿ ಸಹಜವಾಗಿಯೇ ಪ್ರಶ್ನಿಸುವುದನ್ನು ಕಲಿಸುವ, ಇತಿಹಾಸವನ್ನು ಶೋಧಿಸುವ, ರಾಜಕೀಯ ವಿನ್ಯಾಸಗಳನ್ನು ವಿಶ್ಲೇಷಿಸುವ, ಮಾನವೀಯ ಸಂಬಂಧಗಳನ್ನು ಪರಿಶೋಧಿಸುವ ಭಾಷೆ ಮತ್ತು ಸಾಹಿತ್ಯದ ಮಹತ್ವ ಕಡಿಮೆಯಾಗುತ್ತದೆ. ಈ ನಡುವೆ, ಭಾಷೆಗಳ ಕುರಿತು ತಿಳುವಳಿಕೆಗಳನ್ನು ಹೆಚ್ಚಿಸಿ, ಮುಕ್ತಚಿಂತನೆಗೆ ಮತ್ತು ವಿಮರ್ಶೆಗೆ ಪೂರ್ಣ ಅವಕಾಶ ಮಾಡಿಕೊಡುವುದು ಪ್ರಜಾಪ್ರಭುತ್ವವಾದೀ ಸರಕಾರಗಳ ಅತೀ ದೊಡ್ಡ ಜವಾಬ್ದಾರಿ ಎಂಬುದನ್ನು ಸರಕಾರಗಳೇ ಮರೆತಿವೆ. ಜನರ ನೈತಿಕತೆಯನ್ನು ಹೆಚ್ಚಿಸಲು, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು, ಪ್ರಜಾಪ್ರಭುತ್ವದ ಬೇರುಗಳನ್ನು ಬಲಗೊಳಿಸಲು ಮತ್ತುಜೊತೆಗಿರುವ ಜನರ ಯೋಚನಾ ಶಕ್ತಿಯನ್ನು ತೀಕ್ಷ್ಣಗೊಳಿಸಲು ಸರಕಾರಗಳು ಬೌದ್ಧಿಕ ಸಂವಾದಗಳನ್ನು ಪ್ರೋತ್ಸಾಹಿಸುತ್ತಿರಬೇಕು. ಆದರೆ, ವರ್ತಮಾನಕಾಲದಲ್ಲಿ ಸರಕಾರಗಳೇ ಅಂಥ ಪ್ರಕ್ರಿಯೆಗಳಿಗೆ ವಿರೋಧವಾಗಿವೆ. ಸಾಮಾಜಿಕ ಜಾಲತಾಣಗಳೂ ಸೇರಿದಂತೆ, ಮಾಧ್ಯಮಗಳು ಕೂಡಾ ಭಾಷೆಗಳ ಸಾವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇದರ ಒಟ್ಟು ಪರಿಣಾಮವೋ ಎಂಬಂತೆ ಶಿಕ್ಷಣ ಕ್ಷೇತ್ರದಲ್ಲಿ ಈಗ ಭಾಷಾಧ್ಯಯನ ಕಳೆಗುಂದುತ್ತಿದೆ. ಕನ್ನಡದ ಜನಪ್ರತಿನಿಧಿಗಳೇ ಹಿಂದಿಯ ಪರವಾಗಿ ನಿಲ್ಲುತ್ತಿರುವುದನ್ನು ಕಂಡಾಗ ರಾಜಕೀಯವು ಭಾಷೆಯನ್ನು ಹಿಂದಿಕ್ಕಿದ ದುಃಸ್ಥಿತಿಯ ಚಿತ್ರ ಕಣ್ಣ ಮುಂದೆ ಬರುತ್ತದೆ.
ಇದೀಗ ಕೇಂದ್ರ ಸರಕಾರವು ಹೊಸ ಶಿಕ್ಷಣ ನೀತಿಯನ್ನು ಬಿಡುಗಡೆ ಮಾಡಿದೆ. ಈ ನೀತಿಯು ಭಾರತದಲ್ಲಿ ಹಿಂದಿ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳನ್ನು ಇನ್ನಷ್ಟು ಬಲಪಡಿಸಲಿದೆ. ಕನ್ನಡವೂ ಸೇರಿದಂತೆ ಇತರ ಅನೇಕ ದೇಸೀ ಭಾಷೆಗಳನ್ನು ಅದು ಸದ್ಯಕ್ಕೆ ಹಿಂದಕ್ಕೆ ತಳ್ಳಿದೆ. ದೇಸೀ ಭಾಷೆಗಳ ಅಭಿವೃದ್ಧಿಯ ಜವಾಬ್ದಾರಿಯು ರಾಜ್ಯ ಸರಕಾರದ್ದು ಎಂದಷ್ಟೇ ಹೇಳಿ ಅದು ಹಿಂದಿಯನ್ನು ಎಲ್ಲರೂ ಓದುವಂತೆ ಮಾಡಲು ಕ್ರಮ ಕೈಕೊಳ್ಳುತ್ತಿದೆ. ಆದರೆ, ಕರ್ನಾಟಕ ಸರಕಾರವು ಕನ್ನಡವನ್ನು ಪ್ರಾಥಮಿಕ ಹಂತದಲ್ಲಿ ಕಡ್ಡಾಯ ಮಾಡ ಹೊರಟಾಗ ಸುಪ್ರೀಂಕೋರ್ಟ್ ಅದನ್ನು ತಿರಸ್ಕರಿಸಿತು. ಈ ಕುರಿತು ಸಂವಿಧಾನದಲ್ಲಿಯೇ ಬದಲಾವಣೆ ತರಲು ಯಾರೂ ಕೆಲಸ ಮಾಡುತ್ತಿಲ್ಲ. ದೇಸೀಭಾಷೆಗಳ ರಕ್ಷಣೆಗೆ ಅಖೀಲ ಭಾರತ ಮಟ್ಟದಲ್ಲಿ ಬಲಿಷ್ಠವಾದ ವೇದಿಕೆಗಳಿಲ್ಲ. ಈ ನಡುವೆ ರಾಜ್ಯ ಸರಕಾರಗಳು ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಎಲ್ಲೆಡೆಯೂ ತೆರೆಯುತ್ತಿವೆ.
ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಆಳುವ ಶಕ್ತಿಶಾಲೀ ಭಾಷೆಯಾಗಿ ಇಂಗ್ಲಿಷ್ ಹೊರಹೊಮ್ಮಿದೆ. ಇಂಗ್ಲಿಷ್ ಭಾಷೆ ಕಲಿತರೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಜಗತ್ತಿನ ಅನೇಕ ದೇಶಗಳು ಈ ಬೆಳವಣಿಗೆಯನ್ನು ಒಪ್ಪಿಕೊಂಡಿ¨ªಾರೆ. ಸರಿಯೋ ತಪ್ಪೋ ಹೊಸ ತಲೆಮಾರಿನ ಜನರು ಇಂಗ್ಲಿಷನ್ನು ಅನ್ನದ ಭಾಷೆಯಾಗಿ ಗ್ರಹಿಸಿ¨ªಾರೆ. ಇದರಿಂದಾಗುತ್ತಿರುವ ಬಹಳ ದೊಡ್ಡ ಅಪಾಯವೆಂದರೆ, ಜಗತ್ತಿನಾದ್ಯಂತ ಸಜೀವವಾಗಿರುವ ಸಾವಿರಾರು ಸಣ್ಣ ಭಾಷೆಗಳು ಸಾಯುತ್ತಿರುವುದು. ಈ ಬಗ್ಗೆ ಆಯಾ ದೇಶಗಳ ಸರಕಾರಗಳು ಏನೂ ಕ್ರಮ ಕೈಗೊಳ್ಳುತ್ತಿಲ್ಲ. ಅಧಿಕಾರಿಗಳು ಮತ್ತು ಸರಕಾರಗಳು ದೇಶೀ ಭಾಷೆಗಳ ಕುರಿತು ತೋರುತ್ತಿರುವ ನಿರ್ಲಕ್ಷ್ಯವು ಅವುಗಳನ್ನು ಜಗತ್ತಿನಾದ್ಯಂತ ಅವಸಾನದ ಅಂಚಿಗೆ ತಂದು ನಿಲ್ಲಿಸಿವೆ. ಭಾರತದಲ್ಲಿ ಈ ಸಮಸ್ಯೆಇನ್ನೂ ತೀವ್ರತರವಾಗಿದ್ದರೂ, ಕೋಮುವಾದ, ಧರ್ಮ, ಭ್ರಷ್ಟಾಚಾರ, ಜಾತಿ, ರಾಜಕೀಯ, ಮತ್ತಿತರ ವಿಷಯಗಳ ಕುರಿತು ಇಲ್ಲಿ ಚರ್ಚೆ ನಡೆದ ಹಾಗೆ, ಹಿನ್ನಡೆ ಅನುಭವಿಸುತ್ತಿರುವ ಕನ್ನಡದಂಥ ಭಾಷೆಯ ಉಳಿಯುವಿಕೆಯ ಕುರಿತು ಸಂವಾದ ನಡೆಯುತ್ತಿಲ್ಲ.
90ರ ದಶಕದಿಂದಲೇ ಪ್ರಾದೇ ಶಿಕ ಭಾಷೆಗಳ ಅವಗಣನೆ
2011ರ ಭಾರತೀಯಜನಗಣತಿಯಲ್ಲಿ 19549 ಮಾತೃಭಾಷೆಗಳನ್ನು ಗುರುತಿಸಲಾಗಿದೆ. ಇಷ್ಟಿದ್ದರೂ ಕೇವಲ 22 ಭಾಷೆಗಳನ್ನು ಸಂವಿಧಾನದ ಎಂಟನೆಯ ಪರಿಚ್ಛೇದಕ್ಕೆ ಸೇರಿಸಿ ಅವುಗಳನ್ನು ಸಬಲೀಕರಣಗೊಳಿಸಲು ಯತ್ನಿಸಲಾಗಿದೆ. ಈಚಿನ ದಿನಗಳಲ್ಲಿ ತುಳು, ಕೊಡವ ಭಾಷೆಗಳೂ ಸೇರಿದಂತೆ, ಇತರ 99 ಭಾಷೆಗಳು ಆ ಪಟ್ಟಿಗೆ ಸೇರಲು ಹೋರಾಟ ನಡೆಸುತ್ತಿವೆ. ಈ ಹೋರಾಟಗಳನ್ನು ಸವಾಲಾಗಿ ಸೀÌಕರಿಸಲು ಸಿದ್ಧವಿಲ್ಲದ ಕೇಂದ್ರ ಸರಕಾರವುಎಂಟನೆಯ ಪರಿಚೇfದದ ಕೆಲವು ಸವಲತ್ತುಗಳನ್ನು ಈಗಾಗಲೇ ಕಡಿತಗೊಳಿಸಲು ಆರಂಭಿಸಿದೆ.
ಭಾಷೆಯ ಸಾವಿನ ಕತೆ ಆರಂಭವಾದದ್ದು ಕಳೆದ ಶತಮಾನದ ತೊಂಬತ್ತರ ದಶಕದಲ್ಲಿ. ಜಾಗತೀಕರಣವು ಜಗತ್ತಿನ ಭಾಷೆಗಳ ವ್ಯಾಕರಣವನ್ನು ಏಕರೂಪಿಯಾಗಿ ಮಾರ್ಪಡಿಸಿತು. ಖಾಸಗೀಕರಣ, ವ್ಯಾಪಾರೀಕರಣ ಹಾಗೂ ಮಾರುಕಟ್ಟೆಯ ನೀತಿಗಳ ಭಾಷೆ ಚಾಲ್ತಿಗೆ ಬಂದಾಗ ಭಾಷೆಯ ಜೊತೆಗಿರುವ ತತ್ವ ಶಾಸ್ತ್ರವೂ , ತರ್ಕಶಾಸ್ತ್ರವೂ ಕಳೆಗುಂದಿತು. ಶಿಕ್ಷಣದ ಅಂತಾರಾಷ್ಟ್ರೀಕರಣ ಇಂದಿನ ತೀವ್ರವಾದ ಪ್ರಕ್ರಿಯೆಗಳಲ್ಲಿ ಒಂದು. ವಿಶ್ವದ ಕುರಿತಾದ ಭಾರತದ ತಿಳುವಳಿಕೆಗಳಿಗಾಗಿ ಹಾಗೂ ಭಾರತದ ಕುರಿತಾಗಿ ವಿಶ್ವದ ತಿಳುವಳಿಕೆಗಾಗಿ ಈ ಅಂತಾರಾಷ್ಟ್ರೀಕರಣ ಪ್ರಕ್ರಿಯೆ ಅಗತ್ಯಎಂದು ಹೊಸ ಶಿಕ್ಷಣ ನೀತಿ ಪ್ರತಿಪಾದಿಸುತ್ತದೆ. ಉನ್ನತ ಶಿಕ್ಷಣದ ಜಾಗತೀಕರಣದ ಪರವಾಗಿ ಯುನೆಸ್ಕೋ ಮತ್ತು ವಿಶ್ವವಿದ್ಯಾಲಯಗಳ ಅಂತಾರಾಷ್ಟ್ರೀಯ ಸಂಸ್ಥೆಯು ಜಂಟಿಯಾಗಿ ಪ್ರಬಲವಾದ ವಾದ ಮಂಡಿಸಿವೆ. ಇದನ್ನು ವಿಶ್ವದಾದ್ಯಂತ ಕಾರ್ಪೊರೇಟ್ ವಲಯ ಬಲವಾಗಿ ಬೆಂಬಲಿಸಿದೆ. ಪರಿಣಾಮವಾಗಿ 21ನೆಯ ಶತಮಾನದ ಎರಡನೆಯ ದಶಕದ ಹೊತ್ತಿಗೆ, ಶಿಕ್ಷಣವು ಕೈಗಾರಿಕೆಯಾಗಿ ಬಿಲಿಯನ್ ಡಾಲರ್‌ಆದಾಯದ ಪ್ರಶ್ನೆಯಾಗಿ ಮಾರ್ಪಟ್ಟಿದೆ. ಅದೀಗ ತಾಳಮದ್ದಳೆಯ, ಮಂಟೇಸ್ವಾಮಿ ಹಾಡಿನ ಭಾಷೆಯಾಗಿ ಉಳಿದಿಲ್ಲ.
ಈ ವಿಷಯದಲ್ಲಿ ಭಾರತ ಹಿಂದೆ ಬಿದ್ದಿಲ್ಲ. ಯುಜಿಸಿಯು ಉಪಸಮಿತಿಯೊಂದು 2007ರಲ್ಲಿ ಮಾಡಿದ ಶಿಫಾರಸುಗಳನ್ನು ಸರಕಾರ ಈಗ ಜಾರಿಗೆ ತರುತ್ತಿದೆ. ಅದರ ಪ್ರಕಾರ ಮುಂದಿನ ಕೆಲವು ವರ್ಷಗಳಲ್ಲಿ ಭಾರತೀಯ ಶಿಕ್ಷಣ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯ. ಈ ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ನಾವು ಪಠ್ಯಕ್ರಮ, ಅಧ್ಯಯನದ ಅವಧಿ ಮತ್ತು ಮೌಲ್ಯಮಾಪನ ವಿಧಾನಗಳಲ್ಲಿ ಸೂಕ್ತವಾದ ಬದಲಾವಣೆಗಳನ್ನು ಮಾಡಿಕೊಳ್ಳಲು ತಯಾರಾಗಬೇಕಾಗಿದೆ.
ಎರಡನೆಯದಾಗಿ, ದೇಶೀಯ ಮತ್ತು ವಿದೇಶೀಯ ವಿದ್ಯಾಲಯಗಳು ಒಟ್ಟಿಗೆ ಕೆಲಸ ಮಾಡುವ ಅವಳಿ ಕಾರ್ಯಕ್ರಮಗಳು ಹಾಗೂ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳನ್ನು ಶಿಕ್ಷಣ ಸಂಸ್ಥೆಗಳು ರೂಪಿಸಬೇಕಾಗಿದೆ. ಇದರ ಭಾಗವಾಗಿಯೇ ದೆಹಲಿಯ ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಈಗಾಗಲೇ ವಿದೇಶೀ ಅಧ್ಯಾಪಕರು ಪಾಠ ಮಾಡುತ್ತಿದ್ದಾರೆ. ಮೂರನೆಯದಾಗಿ, ಅತ್ಯುತ್ತಮ ಶಿಕ್ಷಣದ ರಫ್ತಿಗಾಗಿ ವಿಶೇಷ ವಲಯಗಳನ್ನು ಸ್ಥಾಪಿಸಲಾಗುತ್ತದೆ. ಈ ವಿಶೇಷ ಶಿಕ್ಷಣ ವಲಯಗಳಲ್ಲಿ ಭಾರತೀಯ ಮತ್ತು ವಿದೇಶೀಯ ಶಿಕ್ಷಣ ಸಂಸ್ಥೆಗಳು ಜಂಟಿಯಾಗಿ ಕೆಲಸ ಮಾಡುತ್ತವೆ. ಇಲ್ಲಿನ ಪಠ್ಯಕ್ರಮಗಳನ್ನು ಎರಡೂ ದೇಶಗಳ ಸಂಸ್ಥೆಗಳು ಜಂಟಿಯಾಗಿ ರೂಪಿಸುತ್ತವೆ. ಹಾಗೆಯೇ ಎರಡು ದೇಶಗಳ ಅಧ್ಯಾಪಕರು ಈ ವಲಯಗಳಲ್ಲಿ ಜಂಟಿಯಾಗಿ ಕೆಲಸಮಾಡುತ್ತಾರೆ. ಹೀಗೆ ಅಗುತ್ತಿರುವಾಗ ವಿದ್ಯಾರ್ಥಿಗಳು ಒಂದು ರಾಜ್ಯದ, ಒಂದು ವಿಶ್ವವಿದ್ಯಾಲಯದ, ಅಥವಾ ಒಂದು ದೇಶದ ಗಡಿಗೆ ಸೀಮಿತವಾಗಿ ಉಳಿಯುವುದಿಲ್ಲ.
ಆಗ ಸ್ಥಳೀಯ ಸಾಂಸ್ಕೃತಿಕ ಮತ್ತು ಪ್ರಾದೇಶಿಕ ವಿಶಿಷ್ಟತೆಗಳೆಲ್ಲ ಹಿಂದಕ್ಕೆ ಸರಿದು ವಾಸನೆ ಬಣ್ಣರಹಿತವಾದ ಒಂದು ತಲೆಮಾರು ಸೃಷ್ಟಿಯಾಗುತ್ತದೆ. ಭಾಷಾಅಧ್ಯಾಪಕನ ಹೊಣೆಗಾರಿಕೆ ಇವತ್ತಿನ ಪ್ರವೇಶ ಪರೀಕ್ಷೆಗಳ ರೀತಿಯೂ ಹಾಗಿದೆ. 40 ವರ್ಷಗಳಿಂದ ಭಾಷಾಅಧ್ಯಾಪಕನಾಗಿ ದುಡಿಯುತ್ತಿರುವ ನನ್ನ ಪ್ರಕಾರ, ಜಗತ್ತಿನ ಪರಿಕಲ್ಪನೆಗೆ ಅನುಗುಣವಾಗಿ ವಿದ್ಯಾರ್ಥಿಗಳಲ್ಲಿ ವಿಮಶಾìತ್ಮಕ ಆಲೋಚನೆ ಬರುವಂತೆ ನಾವೆಲ್ಲ ಕೆಲಸ ಮಾಡಬೇಕು, ಭಾಷೆಯ ಮೇಲೆ ಹಿಡಿತ ಬರುವಂತೆ ವಿದ್ಯಾರ್ಥಿಗಳನ್ನು ರೂಪಿಸಬೇಕು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಸಾಹಿತ್ಯದ ಪಠ್ಯಗಳನ್ನು, ವಿಮರ್ಶಾತ್ಮಕ ಮತ್ತು ಕ್ರಿಯಾತ್ಮಕ ರೀತಿಯಲ್ಲಿ ರೂಪಿಸುವ ಜವಾಬ್ದಾರಿ ಭಾಷಾಅಧ್ಯಾಪಕನದು. ಆದ್ದರಿಂದ, ಒಬ್ಬ ವಿದ್ಯಾರ್ಥಿಯಾಗಿ ಶಿವರಾಮ ಕಾರಂತರನ್ನು ಓದುವುದೆಂದರೆ, ಕಾರಂತರ ಮೂಲ ಕೃತಿಗಳನ್ನು ಓದುವುದು, ಅವುಗಳ ಬಗ್ಗೆ ಚರ್ಚಿಸುವುದು, ವಿಚಾರ ವಿಮರ್ಶೆ ಮಾಡುವುದು, ಮತ್ತು ಕೊನೆಯಲ್ಲಿ ಅವರ ಬಗ್ಗೆ ವಿಸ್ತಾರವಾಗಿ ಒಂದು ಪ್ರಬಂಧವನ್ನು ಬರೆಯುವುದು. ಇದು ವಿದ್ಯಾರ್ಥಿಯ ಪ್ರಶ್ನಿಸುವ ಸಾಮರ್ಥ್ಯವನ್ನು ಹೆಚ್ಚಿಸಿ, ಅಲೋಚನೆಗೆ ಅವಕಾಶ ಮಾಡಿಕೊಡುತ್ತದೆ. ಪ್ರತಿಕ್ರಿಯೆ ಮತ್ತು ಸಮರ್ಥನೆಯ ಆನಂತರ ತರ್ಕಬದ್ಧವಾದ ಲೇಖನವೊಂದನ್ನು ರಚಿಸಲು ವಿದ್ಯಾರ್ಥಿಗೆ ಸಾಧ್ಯವಾಗಬೇಕು.
ಆದರೆ, ಇವತ್ತಿನ ಪ್ರವೇಶ ಪರೀಕ್ಷೆಗಳು ಪಠ್ಯಪುಸ್ತಕ ಮಾದರಿಯಲ್ಲಿ ಇಲ್ಲ. ಬದಲಾಗಿ ಕೇವಲ ಯಾಂತ್ರಿಕವಾಗಿವೆ. ಸಾಹಿತ್ಯಕೃತಿಯ ಓದುವ ಖುಷಿಯನ್ನೆ ಇಂದಿನ ಪರೀಕ್ಷೆಗಳು ಕಸಿದುಕೊಂಡಿವೆ. ಪರೀಕ್ಷೆ ಎಂದರೆ ಆಲೋಚಿಸುವ, ಖುಷಿಕೊಡುವ, ಓದಿನ ಸಂಭ್ರಮವಾಗಬೇಕೇ ವಿನಾ ಲೆಕ್ಕ ತೂಗುವ ತಕ್ಕಡಿಯಾಗಬಾರದು.
ಇವತ್ತು ತಾಂತ್ರಿಕತೆಯೇ ದೇವರು. ಹಾಗಾಗಿ, ತಾಂತ್ರಿಕತೆಯನ್ನು ಆಧರಿಸಿ ಆನ್ ಲೈನ್‌ಪರೀಕ್ಷೆಗಳು ನಡೆಯುತ್ತದೆ. ಇವು ಗಣಿತದ ನಿಖರತೆಯನ್ನು ಬಯಸುತ್ತವೆ. ಸರಿ ಅಥವಾ ತಪ್ಪು ಎಂದಷ್ಟೇ ಗುರುತಿಸುವ ಪ್ರಶ್ನೆಗಳು ಮತ್ತು ಬಹುಆಯ್ಕೆ ಮಾದರಿಯ ಪ್ರಶ್ನೆಗಳಿಂದ ವಿದ್ಯಾರ್ಥಿಯ ಸಾಮರ್ಥ್ಯವನ್ನು ಅಳೆಯುವ ವಿಧಾನಕ್ಕೆ ಈಗ ಮಾನ್ಯತೆ ದೊರೆಯುತ್ತಿದೆ. ಇದಕ್ಕೆ ಒಳ್ಳೆಯ ಪುಸ್ತಕ ಓದುವ ಅಗತ್ಯವಿಲ್ಲ, ಬರವಣಿಗೆಯನ್ನು ರೂಢಿಸಿಕೊಳ್ಳುವ ಅಗತ್ಯವೂ ಇಲ್ಲ. ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾ ದಂಬರಿಯಲ್ಲಿ ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ ಎಂದು ಯಾಕೆ ಬರೆದರು ಎಂದು ವಿಚಾರ ಮಾಡುವ ಅಗತ್ಯವೇ ಇಲ್ಲ. ತತ್ವಶಾಸ್ತ್ರದ ಒಗಟುಗಳನ್ನು ಹಿಡಿದು ಸಮಯ ವ್ಯರ್ಥ ಮಾಡುವುದೂ ಬೇಕಿಲ್ಲ. ಮಾಸ್ತಿ ವೆಂಕಟೇಶ ಅಯ್ಯಂಗಾರರ ಮೊಸರಿನ ಮಂಗಮ್ಮಯಾವ ವರ್ಷ ಪ್ರಕಟವಾಯಿತು? ಮಲ್ಲಿಗೆಯ ಕವಿ ಯಾರು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರಕೊಡಲು ಮಕ್ಕಳು ತಯಾರಾದರೆ ಸಾಕು. ಇದರ ಬದಲು ಮಾಸ್ತಿಯವರ ಕತೆಗಳು ಹೊಸ ರೂಪ ಪಡೆದು ಯಶವಂತಚಿತ್ತಾಲರಲ್ಲಿ ಮತ್ತೆ ಕಾಣಿಸಿಕೊಂಡವೆ? ಶಿವರಾಮ ಕಾರಂತರ ಕಾದಂಬರಿಗಳೇ ಆಧುನಿಕ ಕಾದಂಬರಿಗಳ ಎಲ್ಲ ಪ್ರಕಾರಗಳಿಗೆ ಮುನ್ನುಡಿ ಬರೆದುವೆ? ಅಂಬೇಡ್ಕರ್‌ಎತ್ತಿದ ಜಾತಿಯ ಪ್ರಶ್ನೆಗಳನ್ನು ಕನ್ನಡ ದಲಿತ ಸಾಹಿತ್ಯ ಸರಳಗೊಳಿಸಿತೆ?ಎಂಬಿತ್ಯಾದಿ ವಿಚಾರಗಳ ಬಗ್ಗೆ ಯೋಚಿಸಲೇ ಬೇಕಿಲ್ಲ. ಏಕೆಂದರೆ, ಅದು ಪರೀಕ್ಷೆಗೆ ಬರುವುದಿಲ್ಲ. ಇದು ತತ್ವಶಾಸ್ತ್ರದ ಸಾವು, ಭಾಷೆಯ ಸಾವು, ಪ್ರತಿಕ್ರಿಯೆಗಳ ಸಾವು.
ಸಾಹಿತ್ಯದ ವಿದ್ಯಾರ್ಥಿಯಾಗಿ, ತಾಳಮದ್ದಳೆಯ ಅಭಿಮಾನಿಯಾಗಿ ನಾನು ತಾತ್ವಿಕ ಅರಾಜಕತೆಯನ್ನು ಇಷ್ಟ ಪಡುತ್ತೇನೆ. ಚರ್ಚೆ ಮಾಡುವುದನ್ನು ಮೆಚ್ಚಿಕೊಳ್ಳುತ್ತೇನೆ. ಒಂದು ಪ್ರಶ್ನೆಗೆ ಒಂದೇ ಉತ್ತರ ಎಂಬುದು ಸಾಹಿತ್ಯದಲ್ಲಿ ಇರುವುದಿಲ್ಲ. ಭಾಷೆಯು ನಮ್ಮನ್ನು ತತ್ವಶಾಸ್ತ್ರದ ಆಶ್ಚರ್ಯಕರ ಜಗತ್ತಿಗೆ ಕರೆದೊಯ್ಯಬೇಕು. ಅಲ್ಲಿ ಸರಿತಪ್ಪಿನ ಪ್ರಶ್ನೆಯೇ ಇಲ್ಲ.
ಪುರುಷೋತ್ತಮ ಬಿಳಿಮಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.