ಅಂಗದಾನದ ಮಹತ್ವ,ಪ್ರಾಮುಖ್ಯಗಳ ಅರಿವಿರಲಿ ಅಳಿದೂ ಉಳಿವಂಥವರಾಗಿ!
Team Udayavani, Sep 15, 2019, 5:00 AM IST
ಮಹಾಭಾರತದಲ್ಲಿರುವ ಒಂದು ಸಣ್ಣ ಕಥೆ ಉಲ್ಲೇಖಾಹì. ಒಮ್ಮೆ ಕೃಷ್ಣ ಮತ್ತು ಅರ್ಜುನರ ನಡುವೆ ಕರ್ಣನ ದಾನ ಗುಣದ ಬಗ್ಗೆ ಚರ್ಚೆ ಏರ್ಪಟ್ಟಿತ್ತು. ಧರ್ಮರಾಯನು ಧರ್ಮ-ದಾನಗಳಲ್ಲಿ ಕರ್ಣನಿಗೆ ಸರಿಸಮಾನನು ಎಂಬುದು ಅರ್ಜುನನ ವಾದ. ಆದರೆ ಕೃಷ್ಣನಿಗೆ ಕರ್ಣನ ದಾನಶೂರತೆಯ ಬಗ್ಗೆ ಅರಿವಿತ್ತು. ಅಂತೆಯೇ ಅರ್ಜುನನ ಪ್ರಶ್ನೆಗೆ ಉತ್ತರಿಸಲು ಕೃಷ್ಣನು ಅವನನ್ನು ಧರ್ಮರಾಯ- ಕರ್ಣರೆಡೆಗೆ ಕರೆದೊಯ್ದನು. ಮೊದಲು ಧರ್ಮರಾಯನನ್ನು ಎದುರುಗೊಂಡ ಕೃಷ್ಣನು ತನಗೆ ಬಂಗಲೆಯೊಂದನ್ನು ಕಟ್ಟಲು ಗಂಧದ ಕಟ್ಟಿಗೆಗಳ ಆವಶ್ಯಕತೆಯಿದೆಯೆಂದು ತಿಳಿಸಿದನು.
ಧರ್ಮರಾಯನು ತನ್ನ ಸೇವಕರನ್ನು ಕರೆದು ಗಂಧದ ಕಟ್ಟಿಗೆಗಳ ಏರ್ಪಾಟು ಮಾಡಲು ಆದೇಶಿಸಿದನು. ಆದರೆ ಆ ಸಮಯ ಮಳೆಗಾಲವಾದ್ದರಿಂದ ಸೇವಕರಿಗೆ ಒಣ ಗಂಧದ ಕಟ್ಟಿಗೆಗಳು ಲಭ್ಯವಾಗಲಿಲ್ಲ. ಧರ್ಮರಾಯನು ಕೃಷ್ಣನ ಬಳಿ ಈ ವಿಷಯವಾಗಿ ತನ್ನ ಅಸಹಾಯಕತೆಯನ್ನು ತೋಡಿಕೊಂಡನು. ತದನಂತರ ಕೃಷ್ಣಾರ್ಜುನರು ಕರ್ಣನ ಬಳಿ ಇದೇ ಬೇಡಿಕೆಯನ್ನು ಮುಂದಿರಿಸಿದರು. ಮಳೆ ಬಿದ್ದ ಕಾರಣ ಕರ್ಣನಿಗೂ ಒಣ ಗಂಧದ ಕಟ್ಟಿಗೆಯ ಅಭಾವ ಕಾಡಿತು. ಮರುಕ್ಷಣ ಯೋಚಿಸದೆ ಅವನು ತನ್ನ ಮಂಚದ ಕಾಲುಗಳನ್ನು ಕತ್ತರಿಸಿ ಗಂಧದ ಕಟ್ಟಿಗೆಗಳ ಏರ್ಪಾಟು ಮಾಡಿದನು ಆಸ್ಥಾನದಿಂದ ಹೊರ ನಡೆದ ಕೃಷ್ಣನು ಅರ್ಜುನನನ್ನು ಸಂಬೋಧಿಸಿ ಬೇರೊಬ್ಬರ ಹೊಗಳಿಕೆಯನ್ನು ಅಪೇಕ್ಷಿಸದೆ ತನ್ನ ಆತ್ಮಸಂತೃಪ್ತಿಗಾಗಿ ದಾನ ಮಾಡುವ ಕರ್ಣನು ಸರ್ವಶ್ರೇಷ್ಠನು ಎಂದು ಕೊಂಡಾಡಿದನು.
ಹಿಂದೂ ಪುರಾಣವಲ್ಲದೆ ಇಸ್ಲಾಂ, ಕ್ರೈಸ್ತ, ಸಿಕ್ಖ್, ಬೌದ್ಧ, ಜೈನ, ಪಾರ್ಸಿ ಧರ್ಮಗಳಲ್ಲೂ ದಯೆ ದಾನಗಳ ಕುರಿತು ಬೋಧನೆಗಳಿವೆ. ಸತ್ಯ, ನಿಷ್ಠೆ, ಅನುಕಂಪ, ದಯೆ ಸಾರ್ಥಕ ಜೀವನವನ್ನು ಹೊಂದುವ ವಿವಿಧ ಆಯಾಮಗಳು. ಪ್ರತಿ ವರ್ಷ ಆಗಸ್ಟ್ 13ನ್ನು ವಿಶ್ವ ಅಂಗಾಂಗ ದಾನ ದಿವಸ ಎಂಬುದಾಗಿ ಆಚರಿಸಲಾಗುತ್ತದೆ.
ಭಾರತ ಸರಕಾರ 1994ರಲ್ಲಿ “The human organ transplantation act” ಅನ್ನು ಮಂಡಿಸಿತು. ಅಂಗದಾನದ ಕುರಿತಾದ ಬೇರೆ ಬೇರೆ ಕಾನೂನಾತ್ಮಕ ಮಾಹಿತಿಗಳನ್ನು ಈ ಕಾಯಿದೆ ಹೊಂದಿದೆ. ಅಂಗದಾನದ ಕುರಿತು ನಮ್ಮ ಸಮಾಜದಲ್ಲಿ ಅರಿವು ಮೂಡಿಸುವ ಒಂದು ಮಹತ್ತರವಾದ ಜವಾಬ್ದಾರಿ ಇಂದು ನಮ್ಮ ಮುಂದಿದೆ. ಪ್ರತಿವರ್ಷ ಭಾರತದಲ್ಲಿ ಸುಮಾರು 5 ಲಕ್ಷ ಜನ ಅಂಗಾಂಗ ದೊರೆಯದ ಕಾರಣ ಸಾವನ್ನಪ್ಪುತ್ತಾರೆ. ಸರಿಸುಮಾರು ಎರಡು ಲಕ್ಷ ಜನರಿಗೆ ಲಿವರ್ ಮತ್ತು 1.30 ಲಕ್ಷ ಜನರಿಗೆ ಮೂತ್ರಪಿಂಡ ವೈಫಲ್ಯ ಕಾಡುತ್ತಿದ್ದು, ಅಂಗಾಂಗಗಳ ತುರ್ತು ಆವಶ್ಯಕತೆ ಇದೆ.
ಅಂಗದಾನದಲ್ಲಿ ಎರಡು ವಿಧಗಳಿವೆ. ಮೊದಲನೆಯದು ಲಿವಿಂಗ್ ಡೋನರ್ ಟ್ರಾನ್ಸ್‌ಪ್ಲಾಂಟ್ ಮತ್ತು ಎರಡನೆಯದು ಡಿಸೀಸ್ಡ್ (ಈಛಿcಛಿಚsಛಿಛ) ಡೋನರ್ ಟ್ರಾನ್ಸ್ ಪ್ಲಾಂಟ್. ತನ್ನ ಜೀವಿತಾ ವಧಿಯಲ್ಲಿ ಅಂಗ ಅಥವಾ ಅಂಗದ ಒಂದು ಭಾಗವನ್ನು ಬೇರೊಬ್ಬರಿಗೆ ದಾನವಾಗಿ ನೀಡುವುದು ಲಿವಿಂಗ್ ಡೋನರ್ ಟ್ರಾನ್ಸ್ ಪ್ಲಾಂಟ್. ಮರಣೋತ್ತರ ಅಂಗ ಅಥವಾ ಅಂಗದ ಒಂದು ಭಾಗವನ್ನು ಬೇರೆಯವರಿಗಾಗಿ ದಾನವಾಗಿ ನೀಡುವುದು ಡಿಸೀಸ್ಡ್ (ಈಛಿcಛಿಚsಛಿಛ) ಡೋನರ್ ಟ್ರಾನ್ಸ್ ಪ್ಲಾಂಟ್. ಕರುಳು, ಹೃದಯ, ಶ್ವಾಸಕೋಶ, ಲಿವರ್, ಪ್ಯಾಂಕ್ರಿಯಾಸ್, ಮೂತ್ರಪಿಂಡ ಸೇರಿದಂತೆ ಈ ಅತ್ಯಮೂಲ್ಯ ಅಂಗಾಂಗಗಳನ್ನು ದಾನ ಮಾಡಬಹುದಾಗಿದೆ.
ಅಂಗಾಂಗ ದಾನದ ಬಗ್ಗೆ ಕೆಲವು ಮಾಹಿತಿಗಳು
– ವಯಸ್ಸು, ಜಾತಿ, ಲಿಂಗ, ಪಂಗಡವೆನ್ನದೆ ಅಂಗಾಂಗ ದಾನ ಮಾಡಲು ಪ್ರತಿಯೊಬ್ಬರೂ ಅರ್ಹರಾಗಿರುತ್ತಾರೆ.
-ಅಂಗಾಂಗ ದಾನದ ಪ್ರಕ್ರಿಯೆಯಿಂದ ಮೃತರ ದೇಹವನ್ನು ವಿರೂಪಗೊಳಿಸಲಾಗುವುದಿಲ್ಲ.
-ಅಂಗಾಂಗ ದಾನದ ಖರ್ಚುವೆಚ್ಚಗಳನ್ನು ಮೃತರ ಕುಟುಂಬ ಭರಿಸುವುದಿಲ್ಲ.
-ಅಂಗಾಂಗ ಪಡೆದ ವ್ಯಕ್ತಿಯ ಪರಿಚಯವನ್ನು ಗುಪ್ತವಾಗಿ ಇಡಲಾಗುವುದು.
ಭಾರತದಲ್ಲಿ ಅಂಗಾಂಗ ದಾನವನ್ನು ಕಾನೂನಾತ್ಮಕವಾಗಿ ನಿರ್ವಹಿಸಲು ಸ್ಟೇಟ್ ನೋಡಲ್ ಏಜೆನ್ಸಿ ರೀಜನಲ್ ಆರ್ಗನ್ ಆ್ಯಂಡ್ ಟಿಶ್ಯೂ ಟ್ರಾನ್ಸ್‌ಪ್ಲಾಂಟೇಶನ್ ಆರ್ಗನೈಸೇಶನ್ ಹಾಗೂ ನ್ಯಾಶನಲ್ ಆರ್ಗನ್ ಆ್ಯಂಡ್ ಟಿಶ್ಯೂ ಟ್ರಾನ್ಸ್ ಪ್ಲಾಂಟೇಶನ್ ಆರ್ಗನೈಸೇಶನ್ ಮುಂತಾದ ಸಂಸ್ಥೆಗಳಿವೆ. ಅಂಗಾಂಗ ಲಭ್ಯ ಇರುವ ಸಮಯದಲ್ಲಿ ಈ ಸಂಘ -ಸಂಸ್ಥೆಗಳು ಕಾರ್ಯಪ್ರವೃತ್ತವಾಗಿ ಕೆಲಸ ನಿರ್ವಹಿಸುತ್ತವೆ.
ಅಂಗದಾನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಾಯಿಸಲು www.organindia.org.wwa.mohanfoundation.org.www.notto.gov.inನಲ್ಲಿ ಸಂಪರ್ಕಿಸಬಹುದಾಗಿದೆ.
1954ರ ಡಿಸೆಂಬರ್ 23ರಂದು ಅಮೆರಿಕದಲ್ಲಿ ಮೊದಲ ಅಂಗದಾನ ನಡೆಯಿತು. ಹೆರಿಕ್ ಎಂಬಾತ ತನ್ನ ಸಹೋದರ ರಿಚರ್ಡ್‌ನಿಗೆ ತನ್ನ ಮೂತ್ರ ಪಿಂಡವನ್ನು ದಾನ ಮಾಡಿದನು ಈ ತನಕ ಶ್ವಾಸಕೋಶ, ಹೃದಯ, ಲಿವರ್, ಪ್ಯಾಂಕ್ರಿಯಾಸ್, ಕರುಳು ಸೇರಿದಂತೆ ಲಕ್ಷಾಂತರ ಅಂಗದಾನಗಳು ನಡೆದಿವೆ.
ಬ್ರೈನ್ ಡೆತ್
ಅಪಘಾತ, ಪಾರ್ಶ್ವವಾಯು, ಹೃದಯಸ್ತಂಭನ ಮುಂತಾದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಲ್ಲಿ ಉಸಿರಾಟ ಮತ್ತು ಹೃದಯ ಸಂಬಂಧಿತ ಮೆದುಳಿನ ಕೆಲಸಗಳು ಶಾಶ್ವತವಾಗಿ ನಿಂತು ಹೋಗುವುದಕ್ಕೆ ಬ್ರೈನ್ ಡೆತ್ ಎಂದು ಕರೆಯುತ್ತೇವೆ. ಹ್ಯೂಮನ್ ಆರ್ಗನ್ ಟ್ರಾನ್ಸ್‌ಪ್ಲಾಂಟೇಶನ್ ಆ್ಯಕ್ಟ್ ಅನ್ವಯ ಬ್ರೈನ್ ಡೆತ್ ಅನ್ನು ದೃಢಪಡಿಸಲು ನಿಷ್ಣಾತ ತಜ್ಞರ ವೈದ್ಯಕೀಯ ಪರೀಕ್ಷೆಯ ಆವಶ್ಯಕತೆ ಇರುತ್ತದೆ. ಈ ಸಂದರ್ಭದಲ್ಲಿ ರೋಗಿಯ ಶುಶ್ರೂಷೆ ತೀವ್ರ ನಿಗಾ ಘಟಕದಲ್ಲಿ ನಡೆಯುತ್ತದೆ. ಬ್ರೈನ್ ಡೆತ್ ಖಚಿತವಾದ ಆನಂತರ ರೋಗಿಯ ಸಂಬಂಧಿಕರಿಗೆ ಅಂಗಾಂಗ ದಾನದ ಬಗ್ಗೆ ವಿವರಿಸಲಾಗುತ್ತದೆ.
ಭಾರತದಲ್ಲಿ ಅಂಗಾಂಗ ದಾನದ
ಕುರಿತಾದ ಅಡಚಣೆಗಳು
1. ಸಾಮಾಜಿಕ ಅರಿವು
2. ಹತ್ತಿರ ಮತ್ತು ಪ್ರಿಯರಾದವರನ್ನು ಕಳೆದುಕೊಂಡ ಸಮಯದಲ್ಲಿ ಅಂಗಾಂಗ ದಾನದ ಬಗ್ಗೆ ಉತ್ತೇಜಿಸಲು ಮತ್ತು ಪ್ರೇರೇಪಿಸಲು ವೈಫಲ್ಯ.
ಈ ಎರಡು ವಿಷಯಗಳ ಬಗ್ಗೆ ಗಮನ ಹರಿಸಿ ಅಡಚಣೆಗಳನ್ನು ನಿವಾರಿಸುವ ಕ್ರಮ ತೆಗೆದುಕೊಂಡಲ್ಲಿ ಮುಂಬರುವ ವರ್ಷಗಳಲ್ಲಿ ಭಾರತದಲ್ಲಿ ಅಂಗಾಂಗ ದಾನದ ಪ್ರಕ್ರಿಯೆಯಲ್ಲಿ ಹೆಚ್ಚಿನ ಪ್ರಗತಿ ಕಾಣಬಹುದಾಗಿದೆ.
-ಡಾ| ಸುನಿಲ್ ಆರ್. ,
ಸಹಾಯಕ ಪ್ರಾಧ್ಯಾಪಕ,
ತೀವ್ರ ನಿಗಾ ಘಟಕ,
ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.